ರಾಷ್ಟ್ರಪ್ರಜ್ಞೆಯನ್ನು ಬಡಿದೆಬ್ಬಿಸಿದ ರಾಮಮಂದಿರ
ಸನಾತನ ಸೌರಭ
ಬೈಂದೂರು ಚಂದ್ರಶೇಖರ ನಾವಡ
ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಪ್ರತ್ಯಕ್ಷವಾಗಿ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಕಣ್ತುಂಬಿಕೊಂಡವರ ಕೊರಳುಬ್ಬಿ ಬಂತು. ರಾಮಾಯಣಗಳಲ್ಲಿ ಅನೇಕ ಪ್ರಕಾರ ಗಳಿರಬಹುದು, ಪಾಠಾಂತರಗಳಿರಬಹುದು; ಆದರೆ ನಮ್ಮೆಲ್ಲರ ಆದರ್ಶಪುರುಷ ರಾಮನೇ. ರಾಮನೆಂದರೆ ಸತ್ಯ, ಧರ್ಮ, ನ್ಯಾಯ, ಆದರ್ಶ, ತ್ಯಾಗಗಳ ಪ್ರತಿರೂಪ ಎಂಬ ಭಾವನೆ ನಮ್ಮಲ್ಲಿ ದಟ್ಟವಾಗಿ ಬೇರೂರಿದೆ.
ಯಾರು ಒಪ್ಪಲಿ ಬಿಡಲಿ, ಸನಾತನ ಸಂಸ್ಕೃತಿ ಈ ದೇಶದ ಅಸ್ಮಿತೆ. ಅದು ಭಾರತೀಯರ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಬದುಕಿನಲ್ಲಿ ಅನಾದಿಕಾಲ ದಿಂದಲೂ ಹಾಸು ಹೊಕ್ಕಾಗಿದೆ. ಸಾಹಿತ್ಯ, ಶಿಕ್ಷಣ ಕ್ಷೇತ್ರದ ಜತೆಗೂ ಇದು ಗಾಢವಾದ ಸಂಬಂಧವನ್ನು ಹೊಂದಿದೆ. ಸನಾತನ ಪರಂಪರೆಯು ಸಹಸ್ರಾರು ವರ್ಷ ಗಳಿಂದ ಭಾರತೀಯರ ನೈತಿಕ ಬದುಕಿಗೆ ಸ್ಪೂರ್ತಿಯ ನೆಲೆಯಾಗಿ, ಸಮೃದ್ಧ ಮತ್ತು ಶಾಂತಿಯುತ ಬದುಕಿಗೆ ಚೇತನ ವಾಗಿ, ಅನವರತ ನಮ್ಮ ಜನಮಾನಸದಲ್ಲಿ ಬೇರೂರಿದೆ.
ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳು ಸನಾತನ ಧರ್ಮದ ವೈವಿಧ್ಯಮಯ ಅಂಶಗಳು ಮತ್ತು ಆಯಾಮಗಳಿಂದ ಸಮೃದ್ಧವಾಗಿವೆ. ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ, ಸ್ವಾತಂತ್ರ್ಯಾನಂತರದಲ್ಲಿ ನಾವು ಅನುಸರಿಸಿದ ರಾಜಕೀಯ ವ್ಯವಸ್ಥೆಯಲ್ಲಿ ದೇಶದ ಬಹುಸಂಖ್ಯಾತರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಮೂಲೆಗೆ ಸೇರಿಸುವಂಥ ಬೆಳವಣಿಗೆಗಳಾದವು. ಇಂಥ ಕ್ರಮಗಳಿಂದಾಗಿ ದೇಶದ ಅಂತಃಸತ್ವವೇ ಕುಂಠಿತವಾಗುತ್ತಾ ಬಂತು. ನಮ್ಮ ಒಂದಿಷ್ಟು ರಾಜಕಾರಣಿಗಳು ನಿರ್ದಿಷ್ಟ ಸಮುದಾಯದವರ ವೋಟುಗಳನ್ನು ದಕ್ಕಿಸಿಕೊಳ್ಳುವುದಕ್ಕಾಗಿ ನಮ್ಮದು ಎನ್ನಲಾದ ಎಲ್ಲ ಬಾಬತ್ತುಗಳನ್ನೂ ಹೀಯಾಳಿಸುವ ಹಾಗೂತನ್ಮೂಲಕ ಮತ್ತಾರನ್ನೋ ಖುಷಿಪಡಿಸುವ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿದಿದ್ದರು. ಸನಾತನತೆಯನ್ನು ವಿರೋಧಿಸುವ, ನಮ್ಮ ಧಾರ್ಮಿಕ ರೀತಿ-ರಿವಾಜುಗಳನ್ನು ಹಳಿಯುವ, ಅಭಿವ್ಯಕ್ತಿ ಸ್ವಾತಂತ್ರ್ಯದ ಹಣೆಪಟ್ಟಿಯಡಿ ಭಾರತೀಯರ ಧಾರ್ಮಿಕ ಗ್ರಂಥಗಳ ಕುರಿತಾಗಿ ಕೇವಲವಾಗಿ ಮಾತನಾಡುವ ಇಲ್ಲವೇ ಲೇವಡಿಯಾಡುವ ವರ್ತನೆಗೂ ಕೆಲವರು ಮುಂದಾಗಿದ್ದಿದೆ.
ಹೀಗೆ ತಮ್ಮ ಜೀವನಕ್ರಮವನ್ನು ಮತ್ತು ಪದ್ಧತಿಯನ್ನು ಯದ್ವಾತದ್ವಾ ಟೀಕಿಸುವುದನ್ನು, ಅದರಿಂದಾಗುವ ಅವಮಾನವನ್ನು ಭಾರತೀಯರು ನುಂಗಿಕೊಂಡೇ ಬರುತ್ತಿದ್ದರು ಹಾಗೂ ಶಾಂತಿ-ಸಂಯಮದಿಂದ ಅದನ್ನು ಸಹಿಸಿಕೊಂಡಿದ್ದರು. ಬದುಕಿನಲ್ಲಿ ಕಷ್ಟ, ನೋವು, ಹತಾಶೆ ಎದುರಾದಾಗಲೆಲ್ಲಾ, ಅಪಮಾನ ವಾದಾಗಲೆಲ್ಲಾ ‘ರಾಮಾ…’ ಎಂದು ದೀನರಾಗಿ ಕರೆಯುವುದು ಭಾರತೀಯರ ವಾಡಿಕೆ. ನಾವು ಎದ್ದರೂ, ಬಿದ್ದರೂ, ಕುಳಿತರೂ, ನಿಂತರೂ ರಾಮನಾಮವನ್ನು ಜಪಿಸುತ್ತದೆ ನಮ್ಮ ಮನ. ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ’ ಎಂದು ಪ್ರಭು ಶ್ರೀರಾಮಚಂದ್ರನಿಂದ ಶಾಂತಿ, ನೆಮ್ಮದಿ, ಸಮೃದ್ಧಿಯನ್ನು ನಿರೀಕ್ಷಿಸುವುದು ನಮ್ಮೆಲ್ಲರ ಜಾಯಮಾನ.
ರಾಮಮಂತ್ರದಿಂದ ಸಕಲ ಪಾಪವೂ ಪರಿಹಾರವಾಗುವುದು, ಜೀವನ ಪಾವನವಾಗುವುದು ಎಂಬ ನಂಬಿಕೆ ಜನಸಾಮಾನ್ಯರದ್ದು. ಹೀಗೆ ಸಹಸ್ರಾರುವರ್ಷಗಳಿಂದ, ಪೀಳಿಗೆಯಿಂದ ಪೀಳಿಗೆಗೆ ಆ ಕರುಣಾ ಮೂರ್ತಿಯ ಕೃಪಾಶೀರ್ವಾದಗಳು ಜನಜೀವನದ ಮೇಲೆ ನಿರಂತರವಾಗಿ ಪ್ರವಹಿಸುತ್ತಲೇ ಇವೆ. ಭಾರತೀಯರ ಪಾಲಿಗೆ ಆದರ್ಶ ಪುರುಷನಾಗಿದ್ದಾನೆ ಶ್ರೀರಾಮ. ರಾಮ ನೆಂದರೆ ಸತ್ಯ, ಧರ್ಮ, ನ್ಯಾಯ, ಆದರ್ಶ, ತ್ಯಾಗಗಳ ಪ್ರತಿರೂಪ ಎಂಬ ಭಾವನೆ ನಮ್ಮಲ್ಲಿ ದಟ್ಟವಾಗಿ ಬೇರೂರಿದೆ.
ನಮ್ಮ ಜನರ ಭಾವನೆ ಸೌಮ್ಯವಾಗಿರಬಹುದು. ಹೀಯಾಳಿಸುವವರನ್ನು ಅತ್ಯುಗ್ರವಾಗಿ ವಿರೋಧಿಸುವಷ್ಟು ಇಲ್ಲವೇ ಹಿಂಸಿಸುವಷ್ಟು ಅದು ತೀವ್ರವಾಗಿಲ್ಲದಿರ ಬಹುದು. ನಮ್ಮವರು ಭಾವನೆಗಳನ್ನು ಹಿಂಸ್ರವಿಧಾನದಲ್ಲಿ ವ್ಯಕ್ತಪಡಿಸುತ್ತಿಲ್ಲದಿರಬಹುದು; ಆದರೆ ಭಾರತೀಯ ಸಮಾಜದಲ್ಲಿ ಬೇರೂರಿರುವ ನಂಬಿಕೆ ಅದೆಷ್ಟು ಅಚಲವಾಗಿದೆಯೆಂದರೆ, ಸಹಸ್ರಾರು ವರ್ಷಗಳಿಂದ ಖಡ್ಗದ ಬಲದಿಂದ ನಡೆದ ತುಳಿತವನ್ನು ಸಹಿಸಿಕೊಂಡೂ ಸನಾತನತೆಯು ಇಂದಿಗೂ ಜೀವಂತವಾಗಿದೆ. ಜಾತಿ, ಭಾಷೆ, ಪಂಥಗಳಿಂದ ಒಡೆ ಯುವ ಹುನ್ನಾರದ ಕುಠರಾಘಾತವನ್ನು ಸಹಿಸಿಕೊಂಡು, ತನ್ನ ಅಸ್ಮಿತೆಯನ್ನು ಕಾಪಾಡಿಕೊಂಡಿರುವ ಸನಾತನ ಸಂಸ್ಕೃತಿಯು ಆಕ್ರಮಣಕಾರಿಗಳ ಅತಿರೇಕಗಳನ್ನೆಲ್ಲಾ ಸಹಿಸಿಕೊಂಡು ತಲೆಯೆತ್ತಿ ನಿಂತಿದೆ.
ಕೆಲವರು ಸನಾತನ ಧರ್ಮವನ್ನು ಕ್ಯಾನ್ಸರ್ ಎಂದು ಕರೆದರು, ಶ್ರೀರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಹೀಗಳೆದರು. ಭೋರ್ಗರೆವ ಸಮುದ್ರವನ್ನು ಅಡ್ಡಹಾಯುವಂತೆ ಸೇತುವೆ ಕಟ್ಟಲು ಆತನೇನು ಎಂಜಿನಿಯರಿಂಗ್ ಕಾಲೇಜಿ ನಲ್ಲಿ ವ್ಯಾಸಂಗ ಮಾಡಿದ್ದನೇ? ಎಂದೂ ಮಹಾನುಭಾವ ರಾಜಕಾರಣಿಯೊಬ್ಬರು ಪ್ರಶ್ನಿಸಿದರು. ಇಷ್ಟಾಗಿಯೂ ಸನಾತನಿಗಳು ಕೂಗಾಡಲಿಲ್ಲ, ಧೃತಿಗೆಡಲಿಲ್ಲ. ಈ ಟೀಕಾಕಾರರು ಅಷ್ಟಕ್ಕೇ ಸುಮ್ಮನಾಗದೆ, ಶ್ರೀರಾಮನ ಹೆಸರಿನಲ್ಲಿ ವ್ರತಾಚರಣೆ ಮಾಡುವವರನ್ನು ಉದ್ದೇಶಿಸಿ,‘ನಿಮ್ಮ ರಾಮ ಹೆಂಡ ಕುಡಿದು ಮಾಂಸ ತಿನ್ನುತ್ತಿದ್ದ’ ಎಂದು ವ್ಯಂಗ್ಯ ವಾಡಿದರು. ಮರದ ಮರೆಯಲ್ಲಿ ನಿಂತು ಯುದ್ಧ ಮಾಡಿದ ಹೇಡಿ ಎಂದೂ ಜರೆದರು. ರಾವಣ ನನ್ನು ವೈಭವೀಕರಿಸಿ ರಾಮನನ್ನು ನಿಂದಿಸುವ ದುಸ್ಸಾಹಸ ವನ್ನೂ ಮಾಡಿದರು.
ಆದರೂ ರಾಮಭಕ್ತರು ವಿಚಲಿತ ರಾಗಲಿಲ್ಲ, ಬದಲಿಗೆ ‘ಹೀಗೆ ಹಗುರವಾಗಿ ಮಾತನಾಡುವವರು ಶ್ರೀರಾಮನ ಆದರ್ಶವನ್ನು ಅರಿಯದ ಮೂಢರು’ ಎಂದು ಅರಿತು ಕ್ಷಮಿಸಿದರು. ಏಕೆಂದರೆ ಮೂರ್ಖರ ಮತ್ತು ಮೂಢರ ಮೇಲೆ ಕಲ್ಲು ಎಸೆಯದಿರುವುದು ನಮ್ಮ ಉದಾತ್ತ ಸಂಸ್ಕೃತಿ. ಶ್ರೀರಾಮ ಹುಟ್ಟಿ ಬೆಳೆದ ನೆಲದಲ್ಲಿ ಆತನಿಗಾಗಿ ಒಂದು ಮಂದಿರ ಇರಬೇಕೆಂದು ಅಪೇಕ್ಷಿಸಿದ ಸನಾತನಿಗಳು, ಆ ಸುದಿನಕ್ಕಾಗಿ ನೂರಾರು ವರ್ಷಗಳಿಂದ ಕಾದು ಕುಳಿತರು. ಆದರೆ ಗದ್ದುಗೆಯ ಮೇಲೆ ದಶಕಗಳಿಂದ ಗಟ್ಟಿಯಾಗಿ ಕುಳಿತವರು ಜನರ ನಾಡಿಮಿಡಿತದ ಅರಿವಿಲ್ಲದೆ (ಅಥವಾ ಹಾಗೆ ನಟಿಸಿಯೋ!) ಈ ಬಯಕೆಗೆ ಬಗೆಬಗೆಯ ವಿಘ್ನ ಗಳನ್ನು ತಂದಿಟ್ಟರು. ಕೊನೆಗೊಮ್ಮೆ ನ್ಯಾಯಾಲಯವೇ ಪರಿಹಾರ ಸೂಚಿಸಿದಾಗ, ಹತಾಶೆಯ ಕಟ್ಟೆಯೊಡೆದಂತೆ ವರ್ತಿಸಿದರು.
ಇದೀಗ ರಾಮಮಂದಿರದ ನಿರ್ಮಾಣ ವಾದ ಮೇಲೂ ಇಲ್ಲದ ಉಪದ್ವ್ಯಾಪ ಮಾಡಿದರು. ಮಂದಿರ ಅಪೂರ್ಣವಾಗಿದೆ ಎಂದು ಜರೆದರು. ಸಬೂಬುಗಳ ಮೇಲೆ ಸಬೂಬು ಹೇಳುತ್ತಾ ಬಂದರು. ವದಂತಿಗಳನ್ನು ವ್ಯವಸ್ಥಿತವಾಗಿ ಹರಡಿದರು. ‘ಇದು ರಾಜಕೀಯ ಪಕ್ಷ ವೊಂದರ ಕಾರ್ಯಕ್ರಮವಾ?’ ಎಂದು ಗೇಲಿ ಮಾಡುತ್ತಾತೆಗಳತೊಡಗಿದರು. ಇದ್ಯಾವುದಕ್ಕೂ ಶ್ರದ್ಧಾವಂತ ಹಿಂದೂ ಗಳು ಕಿವಿಗೊಡದಿದ್ದಾಗ, ‘ನಾವೂ ರಾಮ ಭಕ್ತರೇ’ ಎಂದರು. ಸಾಲದೆಂಬಂತೆ, ‘ರಾಮನನ್ನು ದರ್ಶಿ ಸಲುಅಯೋಧ್ಯೆಗೇ ಹೋಗಬೇಕಾ?’ ಎಂದು ಕುಂಟು ನೆಪ ಗಳನ್ನು ಮುಂದು ಮಾಡತೊಡಗಿದರು.
ಆದರೆ ರಾಮನಲ್ಲಿ ಜನರು ಇಟ್ಟಿದ್ದ ಶ್ರದ್ಧಾಭಕ್ತಿ, ನಂಬಿಕೆ ಗಳು ಅಚಲವಾಗಿದ್ದವು. ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಭವ್ಯ ಕಾರ್ಯಕ್ರಮದ ವೈಭವಅಯೋಧ್ಯೆಗಷ್ಟೇ ಸೀಮಿತವಾಗಲಿಲ್ಲ. ದೇಶಕ್ಕೆ ದೇಶವೇ ಸಂಭ್ರಮಿಸಿತು. ಭರತ ಖಂಡದ ಮೂಲೆಮೂಲೆಗಳಲ್ಲಿನ ಶ್ರದ್ಧಾವಂತ ಜನರು ಜಾತಿ, ಮತ, ಸಂಪ್ರದಾಯದ ಸಂಕುಚಿತ ಮನೋಭಾವದಿಂದ ಹೊರಬಂದು ಖುಷಿ ಪಟ್ಟರು. ಅವರೆಲ್ಲಾ ಸಂಭ್ರಮಿಸಿದ ಪರಿಯು ರಾಷ್ಟ್ರೀಯ ಏಕತೆಯ ಸೂತ್ರದಂತೆ ಗೋಚರಿಸಿತು. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಾಷಾ ವೈವಿಧ್ಯವಿದ್ದರೂ, ವಿಭಿನ್ನ ಸಂಸ್ಕೃತಿಗಳು ಮನೆಮಾಡಿದ್ದರೂ ಅದರ ನಡುವೆಯೂ ‘ಪ್ರಭು ಶ್ರೀರಾಮಭಕ್ತಿ ಅಚಲ’ ಎಂಬುದು ಸಾಬೀತಾಯಿತು.
ಜನರನ್ನು ‘ಆರ್ಯ’ ಮತ್ತು ‘ದ್ರಾವಿಡ’ ಎಂಬ ಹಣೆಪಟ್ಟಿ ಯಡಿ ಒಡೆಯುವ ಹುನ್ನಾರಕ್ಕೂ ಬೆಲೆಕೊಡದೆ, ತಮಿಳುನಾಡು ಸಹಿತ ದಕ್ಷಿಣ ಭಾರತದಲ್ಲೂ ರಾಮ ಭಕ್ತರು ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ದೇಶದೆಲ್ಲೆಡೆ ಪೂಜೆ ಮತ್ತು ದಾಸೋಹ ನಡೆದವು. ಒಟ್ಟಾರೆ ಹೇಳುವುದಾದರೆ, ಬೀದಿಬೀದಿಯಲ್ಲೂ ಮನೆಮನೆಯಲ್ಲೂ ಹಬ್ಬದ ಸಂಭ್ರಮ ಕಂಡುಬಂದಿತು!
ರಾಷ್ಟ್ರವಾಸಿಗಳು ಹೀಗೆ ಭಕ್ತಿಸಾಗರದಲ್ಲಿ ಮಿಂದೆದ್ದ ಪರಿಣಾಮ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಚಂದ್ರನು ಸಹಸ್ರಾರು ವರ್ಷಗಳಿಂದ ನಮ್ಮೆಲ್ಲರ ಆದರ್ಶ ಪುರುಷನಾಗಿದ್ದಾನೆ ಮತ್ತು ಜನಮಾನಸದಲ್ಲಿ ಆತನ ಸ್ಥಾನ ಮಹೋನ್ನತವಾಗಿದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಯಿತು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೂ ಗುಜರಾತಿನಿಂದ ಅಸ್ಸಾಂವರೆಗೆ ಸಂಪೂರ್ಣ ದೇಶವು ಕೇಸರಿಮಯವಾಗಿದ್ದು, ಶ್ರೀರಾಮಮಯ ವಾಗಿದ್ದೇ ಇದಕ್ಕೆ ಸಾಕ್ಷಿ. ದೇಶವಾಸಿಗಳನ್ನು ಏಕಸೂತ್ರದಲ್ಲಿ ಪೋಣಿಸಬಲ್ಲ ದಿವ್ಯಪುರುಷನಾಗಿ ಪ್ರಭು ಶ್ರೀರಾಮಚಂದ್ರ ಕಂಗೊಳಿಸಿದ.
ಸ್ವಾತಂತ್ರ್ಯಪೂರ್ವದಲ್ಲಿ, ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ದೇಶದ ಜನತೆಯಲ್ಲಿ ಪರಕೀಯ ಪ್ರಭುತ್ವವನ್ನು ಹೊರಹಾಕುವ ಸಂಕಲ್ಪದ ಫಲವಾಗಿ ಏಕತೆ ಉದಿಸಿತ್ತು; ಆದರೆ ಸ್ವಾತಂತ್ರ್ಯಾನಂತರದಲ್ಲಿ ತಮ್ಮನ್ನು ಆಳುವವರ ಅಧಿಕಾರ ದಾಹದ ಕುಟಿಲತೆಗಳ ಕಾರಣದಿಂದಾಗಿ ರಾಷ್ಟ್ರ ವಾಸಿಗಳು ನಿರಾಸೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದರು. ಹೀಗಾಗಿ, ‘ನಮ್ಮ ಸಮೃದ್ಧ ಪರಂಪರೆಯು ಅಭಿಮಾನ ಶೂನ್ಯತೆಯತ್ತ ಸಾಗುತ್ತಿದೆಯೇ?’ ಎಂಬ ಹತಾಶ ಭಾವವು ಆಗಾಗ ಇಣುಕುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇಂಥ ಹೊತ್ತಿನಲ್ಲಿ ಪ್ರಭು ಶ್ರೀರಾಮಚಂದ್ರ ದೇಶವಾಸಿಗಳಲ್ಲಿ ಹೊಸ ಚೈತನ್ಯವನ್ನೇ ತುಂಬಿಬಿಟ್ಟ; ಎಲ್ಲರ ಆರಾಧ್ಯದೈವವಾಗಿ ಮನೆಮನೆಗಳಲ್ಲೂ ನಿಂತಿರುವ ಈತ ಭಾರತೀಯರ ಬದುಕಿಗೆ ಹೊಸ ಸೂರ್ತಿಯನ್ನೇ ಎರೆದುಬಿಟ್ಟ.
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಪ್ರತ್ಯಕ್ಷವಾಗಿ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಕಣ್ತುಂಬಿ ಕೊಂಡ ವರ ಕೊರಳುಬ್ಬಿ ಬಂತು. ರಾಮಾಯಣಗಳಲ್ಲಿ ಅನೇಕ ಪ್ರಕಾರಗಳಿರಬಹುದು, ಪಾಠಾಂತರಗಳಿರ ಬಹುದು; ಆದರೆ ನಮ್ಮೆಲ್ಲರ ಆದರ್ಶಪುರುಷ, ಮರ್ಯಾದಾ ಪುರು ಷೋತ್ತಮ ಒಬ್ಬನೇ. ಅವನೇ ಶ್ರೀರಾಮಚಂದ್ರ. ಈಥ ಅಯೋಧ್ಯೆ ವಾಸಿಗಳಿಗೆ ಮಾತ್ರವಲ್ಲದೆ ಕನ್ನಡಿಗರಿಗೂ, ಮರಾಠಿಗರಿಗೂ, ಬಂಗಾಳಿಗಳಿಗೂ ಪೂಜ್ಯ. ‘ಶ್ರೀರಾಮ ನಿಗೆ ಅಲ್ಲದವರು, ಯಾರಿಗೂ ಅಲ್ಲದವರು’ ಎಂಬ ಸ್ಪಷ್ಟ ಸಂದೇಶವನ್ನು ಜನರು ಈಗಾಗಲೇ ಸಂಬಂಧಪಟ್ಟವರಿಗೆಕೊಟ್ಟಾಗಿದೆ; ಇಷ್ಟಾಗಿಯೂ ಅದನ್ನು ಅರ್ಥ ಮಾಡಿಕೊಳ್ಳದೆ ಜನರ ಭಾವನೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರು ಒಂದೋ ಮೂರ್ಖರು ಅಥವಾ ನಿರ್ಲಕ್ಷಿಸಲುಯೋಗ್ಯರು. ಅಷ್ಟೇ!
(ಲೇಖಕರು ಮಾಜಿ ಸೈನಿಕರು)