ನಮಗೆ ಪ್ರೇಮಿಗಳ ದಿನಾಚರಣೆ ಬೇಕಾ ?
ವಿಚಾರ ವೇದಿಕೆ
ಬಸವರಾಜ ಶಿವಪ್ಪ ಗಿರಗಾಂವಿ
ಭಾರತೀಯ ಸಂಸ್ಕೃತಿಯನ್ನು ಮರೆತು, ತುಂಡುಡುಗೆಯುಟ್ಟು ಪ್ರವಾಸಕ್ಕೋ ಪಾರ್ಕುಗಳಿಗೋ ಹೋಗಿ, ತಡರಾತ್ರಿಯವರೆಗೆ ಸಹ್ಯವಲ್ಲದ ವರ್ತನೆಯಲ್ಲಿತೊಡಗಿಸಿಕೊಂಡು, ಅನಾರೋಗ್ಯಕರ ಆಹಾರವುಂಟು ಪ್ರೇಮಿಗಳ ದಿನವನ್ನು ಆಚರಿಸಿದರೆ, ಅದು ಭಾರತದ ಮಣ್ಣಿನಲ್ಲಿ ನಡೆಯುವ ಒಂದು ದುರಂತವಾಗುತ್ತದೆ.
ಕ್ರಿ.ಶ.೨೭೦, ಫೆಬ್ರವರಿ ೧೪ರಂದು ವ್ಯಾಲೆಂಟೈನ್ ಎಂಬ ಸಂತರು ನಿಧನರಾದ ದಿನವನ್ನು ಪ್ರತಿವರ್ಷ ‘ವ್ಯಾಲೆಂಟೈನ್ಸ್ ಡೇ’ ಅಂದರೆ ‘ಪ್ರೇಮಿಗಳ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ವ್ಯಾಲೆಂಟೈನ್‌ರವರು ಸಂತರಾಗಿದ್ದರೂ ಪ್ರೇಮಿಗಳನ್ನು ಒಗ್ಗೂಡಿಸಲು ಜೀವವನ್ನೇ ತ್ಯಾಗ ಮಾಡಿದರು. ಆ ಕಾಲಘಟ್ಟದಲ್ಲಿ ರೋಮ್ ಸಾಮ್ರಾಜ್ಯವನ್ನು, ಸರ್ವಾಧಿಕಾರಿಯಾಗಿದ್ದ ಎರಡನೆಯ ಕ್ಯಾಡಿಯಸ್ ಎಂಬ ರಾಜನು ಆಳುತ್ತಿದ್ದನು. ಯುದ್ಧಗಳ ಸಂದರ್ಭದಲ್ಲಿ ಈತನು ಆಸ್ಥಾನದಲ್ಲಿದ್ದ ಸೈನಿಕರಿಗೆ ಮದುವೆಯಾಗಲು ಬಿಡುತ್ತಿರಲಿಲ್ಲ.
ಕಾರಣ ಸೈನಿಕರು ಮದುವೆಯಾದರೆ ಸಂಸಾರದ ಜಂಜಾಟದಲ್ಲಿ ಮುಳುಗಿ ಸಾಮ್ರಾಜ್ಯಕ್ಕೆ ಸೋಲಾಗುತ್ತದೆ ಎಂಬ ಆತಂಕ. ಆದರೆ ಇಂಥ ರಾಜಾಜ್ಞೆ ಗಳನ್ನು ತಿರಸ್ಕರಿಸಿ ವ್ಯಾಲೆಂಟೈನ್ ಸಂತರು ಸೈನಿಕರಿಗೆ ಹಾಗೂ ಪ್ರೇಮಿಗಳಿಗೆ ಮನಸೋ ಇಚ್ಛೆಯಂತೆ ಗುಟ್ಟಾಗಿ ಮದುವೆ ಮಾಡಿಸುತ್ತಿದ್ದರು. ಈ ವಿಷಯವು ರಾಜನಿಗೆ ತಿಳಿಯುತ್ತದೆ ಮತ್ತು ವ್ಯಾಲೆಂಟೈನ್ ಸಂತರನ್ನು ಫೆಬ್ರವರಿ ೧೪ರಂದು ಸೆರೆಮನೆಗೆ ತಳ್ಳಲಾಗುತ್ತದೆ. ಆಗ ವ್ಯಾಲೆಂಟೈನ್ ಸಂತರು ರಾಜನ ಅಮಾನವೀಯ ಶಿಕ್ಷೆಗೆ ಹೆದರಿ ಸೆರೆಮನೆಯಲ್ಲಿಯೆ ಸಾವಿಗೀಡಾಗುತ್ತಾರೆ. ಹೀಗೆ ಪ್ರೇಮಗುರುವಾಗಿದ್ದ ಸಂತ ವ್ಯಾಲೆಂಟೈನ್‌ರ ಮರಣದ ದಿನ ವನ್ನು ರೋಮ್ ಫಾದರ್‌ಗಳು ಅಂದಿನಿಂದ ವ್ಯಾಲೆಂಟೈನ್ ದಿನ ಎಂಬುದಾಗಿ ಆಚರಿಸುತ್ತಿದ್ದಾರೆ.
ರೋಮ್ ಇತಿಹಾಸ ಏನೇ ಇರಲಿ, ಭಾರತದ ಪುಣ್ಯಭೂಮಿಯು ಪ್ರತಿಯೊಬ್ಬರನ್ನೂ ನೈತಿಕತೆಯ ನೆಲೆಗಟ್ಟಿನಲ್ಲಿ ಪ್ರೀತಿಸುವ ನೆಲವಾಗಿದೆ. ಭಾರತದಲ್ಲಿ ಪ್ರೇಮಿಗಳೆಂದರೆ ಕೇವಲ ಒಬ್ಬರನ್ನೊಬ್ಬರು ಮದುವೆಯಾಗುವವರು ಎಂಬರ್ಥ ಕಲ್ಪಿಸುವುದಿಲ್ಲ. ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಗಂಡ, ಹೆಂಡತಿ, ಬಂಧು, ಬಳಗ, ನೆರೆ-ಹೊರೆ ಎಂಬ ಸಕಲ ಆಯಾಮಗಳಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಮಾನವೀಯ ಮೌಲ್ಯದಲ್ಲಿ ಪ್ರೀತಿಸುತ್ತಿರುತ್ತಾರೆ. ವಿಶ್ವದಯಾವುದೇ ದೇಶದಲ್ಲಿರದ, ಎಲ್ಲರನ್ನೂ ಅಪ್ಪಿಕೊಳ್ಳುವ ಸಂಸ್ಕೃತಿಯು ಭಾರತದಲ್ಲಿ ಮಾತ್ರ ತುಂಬಿ ತುಳುಕುತ್ತಿದೆ.
ಇದುವೇ ವಿಶ್ವಪ್ರೇಮವಾಗಿದೆ. ಮದರ್ ತೆರೆಸಾ, ಕಿಟೆಲ್ ರಂಥ ಹಲವಾರು ವಿದೇಶಿಗರನ್ನು ಕೇವಲ ಪ್ರೀತಿಸುವುದಷ್ಟೇ ಅಲ್ಲದೆ ಅವರೆಲ್ಲರೂ ಮೂಲತಃ ಭಾರತದ ಸಂಜಾತರು ಎನ್ನುವಷ್ಟರ ಮಟ್ಟಿಗೆ ಭಾರತದ ಜನತೆಯು ಅವರಲ್ಲಿ ಪ್ರೇಮತ್ವವನ್ನು ಸೃಷ್ಟಿಸಿತ್ತು. ಇಂಥ ಅಸಾಧಾರಣ ಗುಣವನ್ನು ಹೊಂದಿ ರುವ ಭಾರತದ ಮಣ್ಣಿನಲ್ಲಿ ಪ್ರೇಮಿಗಳ ದಿನಾಚರಣೆಯ ಅವಶ್ಯಕತೆಯಿತ್ತೆ? ಎನ್ನುವುದು ಬಹುಮುಖ್ಯ ಪ್ರಶ್ನೆಯಾಗಿದೆ.
ತುಂಡುಡುಗೆಯುಟ್ಟು ಪ್ರವಾಸಕ್ಕೆ ಮತ್ತು ಪಾರ್ಕ್‌ಗಳಿಗೆ ಹೋಗಿ, ಭಾರತೀಯ ಸಂಸ್ಕೃತಿಯನ್ನು ಮರೆತು, ತಡರಾತ್ರಿಯವರೆಗೆ ಸಹ್ಯವಲ್ಲದ ವರ್ತನೆಯಲ್ಲಿ ತೊಡಗಿಸಿಕೊಂಡು, ಅನಾರೋಗ್ಯಕರ ಆಹಾರವನ್ನುಂಡು ಈ ದಿನವನ್ನು ಆಚರಿಸಿದರೆ, ಇದು ಭಾರತದ ಮಣ್ಣಿನಲ್ಲಿ ನಡೆಯುವ ಒಂದು ಮಹಾದುರಂತ ವೆಂದು ವ್ಯಾಖ್ಯಾನಿಸಬೇಕಾಗುತ್ತದೆ. ಹದಿಹರೆಯದವರು ಕೇವಲ ಪ್ರೇಮ ನಿವೇದನೆಗಾಗಿ ಈ ದಿನದ ಆಚರಣೆಯಲ್ಲಿ ತೊಡಗಿಸಿಕೊಳ್ಳುವುದು ಭಾರತಕ್ಕೆಶೋಭೆಯಲ್ಲ. ದೇಶಪ್ರೇಮ ಮತ್ತು ಮೌಲ್ಯಯುತ ಮಾನವ ಸಂಬಂಧಗಳೊಂದಿಗೆ ಸಕಲ ಜೀವಿಗಳಲ್ಲಿಯೂ ಪ್ರೀತಿಯನ್ನು ಸಾಕಾರಗೊಳಿಸಲು ಒತ್ತು ನೀಡುವುದು ಪ್ರೇಮಿಗಳ ದಿನದ ಗುಣಾತ್ಮಕ ನಿಲುವಾಗಬೇಕು. ಶ್ರೀಮಂತಿಕೆಯ ದರ್ಪದಲ್ಲಿ ನೀರಿನಂತೆ ದುಡ್ಡನ್ನು ಚೆಲ್ಲದೆ, ಅದೇ ದುಡ್ಡಿನಿಂದ ಬಡವರ ಮತ್ತು ಹಸಿದವರ ಬದುಕಿಗೆ ಬೆಳಕಾದರೆ ಅದುವೇ ಉತ್ಕೃಷ್ಟವಾದ ಪ್ರೇಮಿಗಳ ದಿನವಾಗುತ್ತದೆ.
ಇಂಥ ಮೌಲ್ಯಯುತ ಆಚರಣೆಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ನಡೆಯುತ್ತಿರಬೇಕು. ಹೀಗೆ ಮಾಡಲು ಭಾರತದಲ್ಲಿ ಮಾತ್ರಸಾಧ್ಯವಿದೆ ಎನ್ನುವುದು ವಿಶೇಷ. ನಾವು ದಿನನಿತ್ಯ ನೈತಿಕತೆಯ ಪರಮಾವಽಯಲ್ಲಿ ಕೆಲಸ ನಿರ್ವಹಿಸುತ್ತ ಅಂಥ ಕೆಲಸವನ್ನು ಮನಸಾರೆ ಪ್ರೀತಿಸಬೇಕು. ಆರೋಗ್ಯದ ರಕ್ಷಣೆಗಾಗಿ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಸಬೇಕು. ಮತ್ತೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂಥ ಕಾರ್ಯವನ್ನು ನಿರ್ವಹಿಸ ದಿರುವುದೇ ಬದುಕಿನಲ್ಲಿಯ ಪ್ರೇಮದ ಮೌಲ್ಯವಾಗಿದೆ. ಜೀವನದಲ್ಲಿ ಬರುವ ವೈರಿಗಳು ಮತ್ತು ಕಷ್ಟಗಳು ಮಾರ್ಗದರ್ಶಕರಾಗಬೇಕು.
ಅವುಗಳನ್ನು ಪ್ರೀತಿಸಿ ಬದುಕುವುದೇ ಉತ್ತಮ ಕಲೆಯಾಗಿದೆ. ಪ್ರೀತಿ ಮತ್ತು ಪ್ರೇಮವನ್ನು ಗಳಿಸುವ, ಬೆಳೆಸುವ ಮತ್ತು ಉಳಿಸುವ ನೈಜಕಲೆಯು ಪ್ರತಿ ಯೊಬ್ಬರಲ್ಲಿರಬೇಕು. ಹಿಂದೆ ನಮ್ಮ ಪೂರ್ವಜರು ಹೊಟ್ಟೆಯಲ್ಲಿ ಸದಾ ಹಸಿವಿದ್ದರೂ ಮುಖದಲ್ಲಿಯ ನಗುವೆಂಬ ಆಭರಣದೊಂದಿಗೆ ಮನದಲ್ಲಿಯ ನೈತಿಕತೆಯ ನೈಜತೆಯಿಂದ ಸರ್ವರನ್ನೂ ಭರಪೂರ ಪ್ರೀತಿಸುವ ಮನೋಭಾವವನ್ನು ಹೊಂದಿದ್ದರು. ಅಂತೆಯೇ ಅವರು ನೂರಾರು ವರ್ಷಗಳ ಕಾಲ ಯಾವುದೇ ಅನಾರೋಗ್ಯವಿಲ್ಲದೆ ಹಾಗೂ ವೈರಿಗಳಿಲ್ಲದೆ ಬದುಕಿದ್ದರು.
ಇಂದಿನ ಒಂದು ಕ್ಷಣಿಕ ಸುಖದ ವಾಂಛೆಯು ನೂರಾರು ವೈರಿಗಳನ್ನು ಸೃಷ್ಟಿಸುತ್ತಿದೆ; ಇದು ತೊಲಗಬೇಕು. ಪ್ರೇಮವೆಂಬುದು ಅಂತರಾಳದಿಂದ ಸಹಜ ವಾಗಿ ಹುಟ್ಟುತ್ತಲಿರುತ್ತದೆ. ತಾತ್ಕಾಲಿಕ, ಕೃತಕ ಮತ್ತು ಕ್ಷಣಿಕ ಪ್ರೀತಿಯು ಪ್ರೇಮವಾಗದೆ ಸ್ವಾರ್ಥದ ಬದುಕೆನಿಸಿಕೊಳ್ಳುತ್ತದೆ. ಇಂದು ಬಹುತೇಕರು ಕೃತಕ ಪ್ರೀತಿಯಲ್ಲಿ ಸಿಲುಕಿ ನರಕಯಾತನೆ ಅನುಭವಿಸುತ್ತಿ.ದ್ದಾರೆ. ಇದು ಸರಿಯಲ್ಲ. ಹಲವು ಅವಕಾಶಗಳ ಮಜಲುಗಳನ್ನು ಹೊಂದಿದ ವಿಶ್ವವನ್ನೇ ಪ್ರೀತಿಸ ಬೇಕು. ಇತ್ತಿತ್ತಲಾಗಿ ಈ ಪ್ರೇಮಿಗಳ ದಿನವೆಂಬ ವಿದೇಶಿ ಆಚರಣೆಯ ಸೊಬಗು ಭಾರತದಲ್ಲಿ ಕರಾಳತೆಯನ್ನು ಪ್ರದರ್ಶಿಸುತ್ತಿರುವುದು ದುರದೃಷ್ಟಕರ. ಇದನ್ನು ಗಮನಿಸುತ್ತಿರುವ ವಿದೇಶಿಗರು ಭಾರತದ ಗತವೈಭವದ ಗತ್ತನ್ನು ನಿರ್ಲಕ್ಷಿಸುತ್ತಿದ್ದಾರೆ.
ಆದ್ದರಿಂದ ಇದು ಭಾರತದ ಮಣ್ಣಿಗೆ ವಿರುದ್ಧವಾದ ಪ್ರೇಮಿಗಳ ದಿನವಾಗದೆ, ಭಾರತದ ಸಂಸ್ಕೃತಿಯಲ್ಲಿರುವ ಹಿರಿಮೆಯನ್ನು ವಿಶ್ವದೆಲ್ಲೆಡೆ ಪಸರಿಸುವ ದೇಶಪ್ರೇಮಿಗಳ ದಿನವೆಂದು ಆಚರಿಸುವಂತಾಗಬೇಕು. ಇದು ಸಹೃದಯಿ ಭಾರತೀಯರ ಒಡಲಾಳದ ಬಯಕೆಯಾಗಿದೆ.
(ಲೇಖಕರು ಕೃಷಿ ತಜ್ಞರು ಹಾಗೂ ಸಹಾಯಕ ಮಹಾಪ್ರಬಂಧಕರು)