ಭ್ರಷ್ಟಾಚಾರಕ್ಕೆ ಬಲಿಯಾದ ಕಾಲೇಶ್ವರಂ ನೀರಾವರಿ ಯೋಜನೆ
ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಒಂಬತ್ತನೇ ಶತಮಾನದ ‘ಕವಿರಾಜಮಾರ್ಗ’ ಕೃತಿಯಲ್ಲಿ ‘ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್’ ಎಂದು ಉಲ್ಲೇಖಿಸ ಲಾಗಿದೆ. ಆ ಕಾಲದಲ್ಲಿ ಕನ್ನಡ ನಾಡಿನ ಹರಹು ಕಾವೇರಿ ನದಿಯಿಂದ ಗೋದಾವರಿವರೆಗೆ ಇತ್ತು ಎಂಬುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ. ಇಂಥ ಗೋದಾವರಿ ನದಿಯು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರದ ಬಳಿ ಹುಟ್ಟುತ್ತದೆ ಹಾಗೂ ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯಂ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.
ಇದು ಅದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ತೆಲಂಗಾಣವನ್ನು ಪ್ರವೇಶಿಸುತ್ತದೆ. ಗೋದಾವರಿ ತೀರದಲ್ಲಿರುವ ಬಸರಾ ಕ್ಷೇತ್ರದಲ್ಲಿ ಭಾರತದ ಎರಡನೇ ಸುಪ್ರಸಿದ್ಧ ಸರಸ್ವತಿ ದೇವಸ್ಥಾನವಿದೆ (ಮೊದಲನೆಯದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ). ನಂತರ ಗೋದಾವರಿಯು ಆಂಧ್ರಪ್ರದೇಶದ ಮೂಲಕ ಧರ್ಮಪುರಿಯ ಹತ್ತಿರ ಹಾದುಹೋಗುತ್ತದೆ. ಅನೇಕ ಪುರಾತನ ದೇಗುಲಗಳಿರುವ ಯಾತ್ರಾಸ್ಥಳವಾಗಿರುವ ಧರ್ಮಪುರಿಯಲ್ಲಿ ಗೋದಾವರಿ ನದಿಯಲ್ಲಿ ಕೈಗೊಳ್ಳುವ ಸ್ನಾನಕ್ಕೆ ಆಧ್ಯಾತ್ಮಿಕ/ಧಾರ್ಮಿಕ ಮಹತ್ವವಿದೆ.
ಭಾರತದ ಎರಡನೇ ಗಂಗೆ ಎಂದೇ ಕರೆಯಲ್ಪಡುವ ಗೋದಾವರಿ ನದಿಯು ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ ಹಾಯ್ದು ಸಮುದ್ರ ಸೇರುವವರೆಗೆ ಒಟ್ಟು ೧,೪೬೫ ಕಿ.ಮೀ. ಅಂತರವನ್ನು ಕ್ರಮಿಸುತ್ತದೆ. ಇಷ್ಟಿದ್ದರೂ, ಸಾಲಬಾಧೆ, ಒಣಗಿ ಬಿರುಕುಬಿಟ್ಟ ಕೃಷಿಭೂಮಿಗಳಿಂದಾಗಿ ಈ ಭಾಗದಲ್ಲಿ ರೈತರ ಆತ್ಮಹತ್ಯೆಗಳು ಸಾಮಾನ್ಯವಾಗಿದ್ದವು ಎಂಬುದು ಇಲ್ಲಿನ ವರದಿ ಹಾಗೂ ಸ್ಥಳೀಯರಿಂದ ಹೊಮ್ಮುವ ಅಭಿಪ್ರಾಯ.
ಗೋದಾವರಿಯು ಸಮುದ್ರ ಮಟ್ಟದಿಂದ ಸುಮಾರು ೧೦೦ ಮೀ.ನಷ್ಟು ಎತ್ತರದಲ್ಲಿದೆ; ತೆಲಂಗಾಣ ಪ್ರದೇಶವು ಸಮುದ್ರ ಮಟ್ಟದಿಂದ ಸುಮಾರು ೩೦೦ ರಿಂದ ೬೫೦ ಮೀ.ನಷ್ಟು ಎತ್ತರವಿರುವುದರಿಂದ ಈ ನದಿಯ ಉಪಯೋಗ ಮತ್ತು ಕೃಷಿ ಪ್ರಯೋಜನ ಬಹಳ ಕಡಿಮೆಯಿತ್ತು. ಇದನ್ನು ಮನಗಂಡ ಅಲ್ಲಿನ ಕೆ.ಚಂದ್ರಶೇಖರ್‌ರಾವ್ (ಕೆಸಿಆರ್) ಸರಕಾರವು, ‘ಕಾಲೇಶ್ವರಂ ಮಲ್ಟಿ ಸ್ಟೇಜ್ ಲಿಫ್ಟ್ ಇರಿಗೇಷನ್ ಪ್ರಾಜೆಕ್ಟ್’ ಎಂಬ ಜಗತ್ತಿನ ಅತ್ಯಂತ ಬೃಹತ್ತಾದ ಕೃಷಿ ಮತ್ತು ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು ೨೦೧೬ರಲ್ಲಿ ನಿರ್ಧರಿಸಿತು.
‘ಎಂಜಿನಿಯರಿಂಗ್ ಮಾರ್ವೆಲ್’ ಎಂದೇ ಕರೆಸಿಕೊಂಡ ಈ ಯೋಜನೆಯು ಸುಮಾರು ೧,೮೩೨ ಕಿ.ಮೀ.ನಷ್ಟು ನೀರು ಹರಿವು ದಾರಿ, ೧,೫೩೧ ಕಿ.ಮೀ.ನಷ್ಟುಗ್ರಾವಿಟಿ ಕೆನಾಲ್, ೨೦೩ ಕಿ.ಮೀ.ನಷ್ಟು ಸುರಂಗ ಮಾರ್ಗಗಳ ಜತೆಗೆ ೨೦ ಲಿ-ಗಳು, ೨೨ ಪಂಪ್ ಹೌಸ್ ಗಳು, ೨೪೦ ಟಿಎಂಸಿ ಗಾತ್ರದ ೨೨ ಕೃತಕ ಕೆರೆಗಳನಿರ್ಮಾಣವನ್ನು ಹೊಂದಿದೆ; ಈ ಪೈಕಿ ಮಲ್ಲಣ್ಣ ಕೆರೆಯು(ಮಲ್ಲಣ್ಣ ಸಾಗರ) ೫೦ ಟಿಎಂಸಿಯಷ್ಟು ನೀರು ಸಂಗ್ರಹವಾಗುವಂಥ, ಭಾರತದಲ್ಲಿನ ಅತಿ ದೊಡ್ಡ ಕೃತಕ ಕೆರೆಯಾಗಿದೆ.
೨೦೧೬ರಲ್ಲಿ ಪ್ರಾರಂಭವಾದ ಈ ಯೋಜನೆಯು, ೪,೦೦೦ ಎಂಜಿನಿಯರ್‌ಗಳು, ೨೫,೦೦೦ ಕಾರ್ಮಿಕರು ವಿವಿಧ ಪಾಳಿಗಳಲ್ಲಿ ದಿನದ ೨೪ ಗಂಟೆಯೂ ಕೆಲಸ ಮಾಡಿದ್ದರ -ಲವಾಗಿ ದಾಖಲೆ ಅವಽಯಲ್ಲಿ (೨೦೧೯) ಪೂರ್ಣಗೊಂಡಿತು ಕೂಡ. ಈ ಯೋಜನೆಯು ೮೨ ಪಂಪಿಂಗ್ ಯುನಿಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತ ೭,೧೫೨ ಮೆಗಾವ್ಯಾಟ್ ಶಕ್ತಿಯ ಮೂಲಕ ಪ್ರತಿದಿನ ೩ ಟಿಎಂಸಿ ನೀರನ್ನು ಪಂಪ್ ಮಾಡುವ ಕಾರ್ಯಶಕ್ತಿ ಹೊಂದಿದೆ. ಅತಿ ಬೃಹತ್ತಾದ, ಶಕ್ತಿಶಾಲಿಯಾದ ಯಂತ್ರ ಗಳನ್ನು ಇಲ್ಲಿ ಅಳವಡಿಸಲಾಗಿದೆ. ೨೨ ಪಂಪಿಂಗ್ ಕೇಂದ್ರಗಳನ್ನು ಒಳಗೊಂಡ ಈ ಯೋಜನೆಯಲ್ಲಿ ಅತಿಮುಖ್ಯ ವಾದ ೪ ಪಂಪ್‌ಹೌಸ್‌ಗಳಿಗೆ ಲಕ್ಷ್ಮೀ, ಪಾರ್ವತಿ, ಸರಸ್ವತಿ ಮತ್ತು ಗಾಯತ್ರಿ ಎಂದು ನಾಮಕರಣ ಮಾಡಲಾಗಿದೆ.
ವಿಶ್ವದಲ್ಲೇ ದೊಡ್ಡದು ಎಂಬ ಹೆಗ್ಗಳಿಕೆಯಿರುವ ಪಂಪ್ ಹೌಸ್ ಮತ್ತು ಅಂಡರ್‌ಗ್ರೌಂಡ್ ಪಂಪಿಂಗ್ ಸ್ಟೇಷನ್ ಗಳನ್ನು ಲಕ್ಷ್ಮೀಪುರದಲ್ಲಿ ನಿರ್ಮಿಸ ಲಾಗಿದ್ದು, ಇವು ೪೭೦ ಅಡಿ ಆಳ, ೩೨೭ ಮೀ. ಉದ್ದ, ೨೫ ಮೀ. ಅಗಲ ಮತ್ತು ೬೫ ಮೀ. ಎತ್ತರವನ್ನು ಹೊಂದಿವೆ. ಇದರಲ್ಲಿನ ೧೩೯ ಮೆಗಾವ್ಯಾಟ್ ಎಂಜಿನ್ ೩೦೦೦ ಕ್ಯುಸೆಕ್ ನೀರನ್ನು ೧೧೦ ಮೀ.ನಷ್ಟು ಎತ್ತರಕ್ಕೆ ಚಿಮ್ಮಿಸಬಲ್ಲಷ್ಟು ಶಕ್ತಿಶಾಲಿಯಾಗಿದೆ. ‘ಸೂಪರ್‌ವೈಸರಿ ಕಂಟ್ರೋಲ್ ಆಂಡ್ ಡಾಟಾಅಕ್ವಿಸಿಷನ್’ (ಎಸ್‌ಸಿಎಡಿಎ) ಎಂಬ ಪೂರ್ಣಪ್ರಮಾಣದ ಡಿಜಿಟಲ್ ತಂತ್ರಜ್ಞಾನ ಆಧರಿತ ನಿರ್ವಹಣಾ ವ್ಯವಸ್ಥೆಯನ್ನೂ ಇಲ್ಲಿ ಅಳವಡಿಸಿದ್ದು, ಎಂಥ ಕಠಿಣ ವಿದ್ಯುತ್ ವ್ಯತ್ಯಯದ ಸಂದರ್ಭದಲ್ಲೂ ಇದು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
ಒಂದು ಕೋಟಿ ಎಕರೆಯಷ್ಟು ಜಮೀನಿಗೆ ನೀರನ್ನು ಒದಗಿಸುವಂತೆ ಯೋಜನೆಯನ್ನು ರೂಪಿಸಲಾಗಿದ್ದರೂ, ಪ್ರಸ್ತುತ ಈ ಒಂದು ಯೋಜನೆಯು ೪೫ ಲಕ್ಷ ಎಕರೆ ಕೃಷಿಭೂಮಿಗೆ, ವರ್ಷಪೂರ್ತಿ ಎರಡು ಬೆಳೆಗಳನ್ನು ಬೆಳೆಯಲು ನೀರು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಿಷ್ಟೇ ಅಲ್ಲದೆ, ರಾಜ್ಯದ ಶೇ.೭೦ರಷ್ಟು ಭಾಗಕ್ಕೆ ಕುಡಿಯುವ ನೀರು ಹಾಗೂ ಕಾರ್ಖಾನೆಗಳಿಗೆ ಅವಶ್ಯ ಬಳಕೆಯ ನೀರು ಸರಬರಾಜು ಮಾಡುತ್ತದೆ. ಈ ಮೂಲಕ, ೧೭೦ ಟಿಎಂಸಿನೀರನ್ನು ಕೃಷಿಗೆ, ೩೦ ಟಿಎಂಸಿ ನೀರನ್ನು ಮೇಡಿಗಡ್ಡ ಬ್ಯಾರೇಜ್ ಮೂಲಕವಾಗಿ ಹೈದರಾಬಾದ್ ಮುನಿಸಿಪಲ್ ವಾಟರ್‌ಗೆ ಮತ್ತು ೧೬ ಟಿಎಂಸಿ ನೀರನ್ನು ಇತರೆ ಕಾರ್ಖಾನೆಗಳ ವಾಣಿಜ್ಯ ಬಳಕೆಗೆ ಇದರಿಂದ ಬಳಸಲಾಗುತ್ತದೆ ಎಂದು ಅಂದಾಜಿಸಲಾಗಿದೆ.
ಇಂಥದೊಂದು ಮಹತ್ವದ ಯೋಜನೆ ಇದ್ದಕ್ಕಿದ್ದಂತೆ ಭ್ರಷ್ಟಾಚಾರದಲ್ಲಿ ಮುಳುಗಿ ತೇಲಿತು. ಏಕೆಂದರೆ, ಆರಂಭದಲ್ಲಿ ೮೦,೦೦೦ ಕೋಟಿಯಷ್ಟಿದ್ದ ಈ ಯೋಜನೆಯ ಗಾತ್ರವು ೧ ಲಕ್ಷ ಕೋಟಿ ಗಾತ್ರದ ಪ್ರಾಜೆಕ್ಟ್ ಆಗಿ ಹಿಗ್ಗುತ್ತಾ ಹೋಯಿತು. ಇದು ರಾಜ್ಯ ಮತ್ತು ದೇಶಾದ್ಯಂತ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಆಹಾರವಾಗುತ್ತ ಹೋಯಿತು. ಸಹಜವಾಗಿಯೇ ವಿಪಕ್ಷಗಳು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅಂದಿನ ಮುಖ್ಯಮಂತ್ರಿ ಯನ್ನು ಹಣಿಯಲು ನಿಂತವು. ಇದು ಕೆಸಿಆರ್ ಅವರ ಇಡೀ ಕುಟುಂಬವನ್ನು ಈ ಭ್ರಷ್ಟಾಚಾರ ಕೂಪದೊಂದಿಗೆ ತಳುಕುಹಾಕಿದ ಯೋಜನೆಯಾಗಿಯೂಪ್ರಚಾರ ಪಡೆದುಕೊಂಡಿತು.
ಇಷ್ಟರೊಳಗೆ, ಕಾಲೇಶ್ವರಂನ ೬ ಪ್ರಮುಖ ಸೇತುವೆ ಸಹಿತ ಆಧಾರಸ್ತಂಭಗಳು ಕಳಪೆ ಗುಣಮಟ್ಟದ ಕಾರಣದಿಂದಾಗಿ ಕುಸಿದು ನೀರಿನಲ್ಲಿ ಮುಳುಗಿ ಹೋದವು. ಇದು ಇನ್ನಷ್ಟು ದೊಡ್ಡ ಸುದ್ದಿ ಮಾಡಿತು. ವಿರೋಧಿಗಳು ಇದನ್ನು ಭಾರತದ ಅತಿದೊಡ್ಡ ಹಗರಣ ಎಂದು ಕರೆದರು, ಮಾಧ್ಯಮಗಳು ಮಿಂಚಿನ ವೇಗದಲ್ಲಿ ಸುದ್ದಿಯನ್ನು ಬಿತ್ತರಿಸಿದವು ಕೂಡ. ಇದರ ಮೊದಲ ಹಂತದ ಲಕ್ಷ್ಮೀ ಬ್ಯಾರೇಜ್ ಕಾಮಗಾರಿಯು ೨೦೧೯ರ ಜೂನ್‌ನಲ್ಲಿ ಆರಂಭ ವಾಯಿತು. ಮೇಡಿಗಡ್ಡ, ಅನ್ನಾರಂ ಮತ್ತು ಸುಂಡಿಲ್ಲಾ ಹಳ್ಳಿಗಳ ಸಮೀಪ ಈ ಯೋಜನೆಯ ೩ ಪ್ರಮುಖ ಬ್ಯಾರೇಜ್‌ಗಳನ್ನು ನಿರ್ಮಿಸಲು ರೂಪುರೇಷೆ ಸಿದ್ಧವಾಯಿತು. ಸರಕಾರಿ ದಾಖಲೆಯ ಪ್ರಕಾರ, ಈ ಯೋಜನೆಯ ಮುಖಾಂತರ ಹೈದರಾಬಾದ್, ಸಿಕಂದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ೩೦ ಟಿಎಂಸಿ, ಗ್ರಾಮೀಣ ಭಾಗಕ್ಕೆ ೧೦ ಟಿಎಂಸಿ ಕುಡಿಯುವ ನೀರು ಮತ್ತು ವಾಣಿಜ್ಯ ಬಳಕೆಗೆ ೧೬ ಟಿಎಂಸಿ ನೀರನ್ನು ಒದಗಿಸಲಾಗುತ್ತಿದೆ.
ಎಲ್ಲಾ ಅಂದುಕೊಂಡಂತೆ ನಡೆಯುತ್ತಿತ್ತು. ಮೇಡಿಗಡ್ಡದ (ಲಕ್ಷ್ಮೀ ಬ್ಯಾರೇಜ್) ಪ್ರಮುಖ ಭಾಗವು ನದಿಯಲ್ಲಿ ಮುಳುಗುವ ಮೂಲಕ ಅತ್ಯಂತ ಕಳಪೆ ಕಾಮಗಾರಿ ಜಗತ್ತಿಗೆ ಅನಾವರಣವಾಯಿತು. ಇಲ್ಲಿಂದಲೇ ಶುರುವಾಯಿತು ಪರಸ್ಪರ ಕೆಸರೆರಚಾಟ. ವಾಸ್ತವವಾಗಿ, ದೇಶದಲ್ಲಿ ಯಾವುದೇ ಒಂದು ದೊಡ್ಡ ಯೋಜನೆಯನ್ನು ಆರಂಭಿಸಬೇಕೆಂದರೆ ಕೇಂದ್ರದ ಮತ್ತು ಅದಕ್ಕೆ ಸಂಬಂಧಿಸಿದ ಇಲಾಖೆಯ ಜತೆಗೆ ತಜ್ಞರ ಅನುಮತಿ ಪಡೆಯಬೇಕಾದುದು ಸಹಜವೇ. ಇದರ ಮಧ್ಯೆ ಕೇಂದ್ರದ ‘ನ್ಯಾಷನಲ್ ಡ್ಯಾಮ್ ಸೇಫ್ಟಿ ಅಥಾರಿಟಿ’ ಎಂಬ ಪ್ರಾಧಿಕಾರವು ‘ಕಟ್ಟುನಿಟ್ಟಾದ ಗುಣಮಟ್ಟದ ಕೊರತೆ’ ಎಂಬ ಉಲ್ಲೇಖದೊಡನೆ ಕಳಪೆ ಕಾಮಗಾರಿಯ ವಿಚಾರಕ್ಕೆ ತೆಲಂಗಾಣ ಸರಕಾರಕ್ಕೆ ಬಿಸಿ ಮುಟ್ಟಿಸಿತು; ಯೋಜನೆಯ ನಕಾಶೆ ಮತ್ತು ವಿನ್ಯಾಸದಲ್ಲಿನ ವ್ಯತ್ಯಾಸವೇ ಇದಕ್ಕೆಲ್ಲ ಕಾರಣವಾಗಿದ್ದು ಇದೊಂದು ವಿಫಲ ಯೋಜನೆಯಾಗಿದೆ ಎಂದು ಕಪಾಳಮೋಕ್ಷ ಮಾಡಿತು.
ಏಕೆಂದರೆ, ಪಿಯರ್ಸ್‌ನಂಥ ನಿರ್ಮಾಣಗಳು ಅಣೆಕಟ್ಟು ಕಟ್ಟಿದ ಮೇಲೆ ಕನಿಷ್ಠವೆಂದರೂ ೫೦-೬೦ ವರ್ಷಗಳಷ್ಟು ಬಾಳಿಕೆ ಬರುವಂಥವು. ಇದಾದ ಬಳಿಕ ೨ನೇ ಹಂತದ ಅನ್ನಾರಂ ಬ್ಯಾರೇಜ್‌ನಲ್ಲಿ ಕೂಡ ಈ ಪ್ರಾಽಕಾರವು ಸ್ತರ ಮಟ್ಟದಲ್ಲಿ ನೀರಿನ ಸೀಪೇಜ್ ನಂಥ ಬಿರುಕುಗಳನ್ನು ಪತ್ತೆಹಚ್ಚಿತು. ನಂತರ ತನ್ನ ವರದಿ ಯಲ್ಲಿ, ‘ಈ ಯೋಜನೆಯು ಬಹಳ ವರ್ಷ ಬಾಳಿಕೆ ಬರುವಂಥ ಗುಣಮಟ್ಟದಲ್ಲಿ ನಿರ್ಮಾಣಗೊಂಡಿಲ್ಲ; ಯಾವಾಗ ಬೇಕಾದರೂ ಅವಘಡ ಸಂಭವಿಸಬಹುದು’ ಎಂದು ಹೇಳಿತು. ಹಾಗೆ ನೋಡಿದರೆ, ಈ ಯೋಜನೆಗೆ ಅವಶ್ಯವಿರುವ ವಿವಿಧ ಕ್ಲಿಯರೆನ್ಸ್‌ಗಳನ್ನು ಕೇಂದ್ರದ ಪ್ರಾಧಿಕಾರಗಳು ನೀಡಿ ದ್ದವು ಕೂಡ. ಇದರೊಟ್ಟಿಗೆ ಮಹಾರಾಷ್ಟ್ರದ ಬಿಜೆಪಿ ಸರಕಾರದೊಂದಿಗೆ ನೀರಾವರಿ ಹಂಚಿಕೆ ಕುರಿತಂತೆ ಒಪ್ಪಂದಗಳನ್ನೂ ಮಾಡಿಕೊಂಡಿತ್ತು ಕೆಸಿಆರ್ ಸರಕಾರ. ಯಾವೆಲ್ಲಾ ಪ್ರಾಧಿಕಾರ/ಇಲಾಖೆ/ ಸಂಸ್ಥೆಗಳು ಅನುಮತಿ ನೀಡಿದ್ದವೋ, ಅವೇ ನಂತರದಲ್ಲಿ ‘ಯೋಜನೆಯ ನಿರ್ಮಾಣ ಗುಣಮಟ್ಟದ ಹೊಣೆ ರಾಜ್ಯ ಸರಕಾರದ್ದೇ’ ಎಂದು ಹೇಳಿಕೊಂಡವು.
ಜಾಗತಿಕ ಗುಣ ಮಟ್ಟದಲ್ಲಿ ನಿರ್ಮಾಣ ಮಾಡಲು ಎಲ್‌ಟಿಯು ಸಂಸ್ಥೆ ಈ ಯೋಜನೆಯ ಹೊಣೆ ಹೊತ್ತಿತ್ತು; ಅದು ಕೂಡ ರಾಜ್ಯ ಸರಕಾರ ಕೊಟ್ಟ ಪ್ಲಾನ್ ಪ್ರಕಾರ ನಾವು ಕಾರ್ಯನಿರ್ವ ಹಿಸಿದ್ದೇವೆ ಎಂದು ಹೇಳಿಕೊಂಡಿತು. ಕರೀಂನಗರ ಜಿಲ್ಲೆಯ ಮೇಡಿಗಡ್ಡದ ಬಳಿ ಪ್ರಮುಖ ೬ ಸ್ತಂಭಗಳು ಕುಸಿದು ಬಿದ್ದಿದ್ದ ರಿಂದ ಇದರಲ್ಲಿ ಬಹುದೊಡ್ಡ ಸ್ಕ್ಯಾಮ್ ಆಗಿದೆ ಎಂದು ವರದಿಯಾಗತೊಡಗಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದನ್ನು ಕಾಂಗ್ರೆಸ್ ತನ್ನ ಅಸವಾಗಿಸಿಕೊಂಡು, ‘ಕಾಲೇಶ್ವರಂ ಯೋಜನೆಯು ಕೆಸಿಆರ್ ಕುಟುಂಬದ ಎಟಿಎಂ ಆಗಿದೆ; ಅದು ಕೋಟಿ ಕೋಟಿ ಕೊಳ್ಳೆ ಹೊಡೆದಿದೆ’ ಎಂದು ಪ್ರಚಾರ ಕೈಗೊಂಡು ಚುನಾವಣೆಯಲ್ಲಿ ಗೆದ್ದು ಅಧಿಕಾರವನ್ನೂ ಹಿಡಿಯಿತೆನ್ನಿ.
ಮೇಡಿಗಡ್ಡ ಬ್ಯಾರೇಜ್ ೩,೬೬೨ ಕೋಟಿ ರುಪಾಯಿ, ಅನ್ನಾರಂ ಬ್ಯಾರೇಜ್ ೨,೧೯೫ ಕೋಟಿ ರು. ಮತ್ತು ಸುಂಡಿಲ್ಲ ಬ್ಯಾರೇಜ್ ೧,೮೧೧ ಕೋಟಿ ರು. ವೆಚ್ಚ ದಲ್ಲಿ ನಿರ್ಮಾಣವಾಗಿವೆ. ಈ ಒಂದು ಯೋಜನೆಯಲ್ಲಿ ನಡೆದ ಪಿಯರ್ಸ್ ಕುಸಿತದಿಂದಾಗಿ ಮೇಡಿಗಡ್ಡ ಯೋಜನೆ ಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.ಅನ್ನಾರಂ ಮತ್ತು ಸುಂಡಿಲ್ಲಾದ ಬ್ಯಾರೇಜುಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಪ್ರಸ್ತುತ, ರಾಜ್ಯ ಸರಕಾರದ ಸಚಿವಾಲಯ, ಅನ್ನಾರಂ ಕೂಡ ಸುಂಡಿಲ್ಲಾದವರೆಗೆ ನೀರನ್ನು ಲಿಫ್ಟ್ ಮಾಡುತ್ತಿಲ್ಲವೆಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನುಳಿದಂತೆ ಐಐಟಿ ಹೈದರಾಬಾದ್ ಸಹಯೋಗದೊಂದಿಗೆ ಇದನ್ನು ಸರಿಪಡಿಸಿ ಮತ್ತೆ ಕಾರ್ಯ ನಿರ್ವಹಿಸುವಂತೆ ಮಾಡಲು ಹೆಚ್ಚುವರಿಯಾಗಿ ೨೫,೨೦೦ ಕೋಟಿಯಷ್ಟು ಹಣದ ಅವಶ್ಯಕತೆ ಇದೆಯೆಂದು, ಜತೆಗೆ ವಿದ್ಯುತ್ ಇತ್ಯಾದಿ ವಾರ್ಷಿಕ ವೆಚ್ಚವಾಗಿ ೧೦,೦೦೦ ಕೋಟಿ ಬೇಕಾಗುತ್ತದೆಂದೂ ಅಂದಾಜಿಸಲಾಗಿದೆ. ವಿಶ್ವದಲ್ಲೇ ಬಹುದೊಡ್ಡ ನೀರಾವರಿ ಯೋಜನೆಯಾಗಿ, ವಿಶ್ವದ ಪ್ರಮುಖ ಮಾನವ ನಿರ್ಮಿತ ಸ್ಥಳಗಳಲ್ಲಿ ಒಂದಾಗಿ ಗುರುತಿಸಿ ಕೊಳ್ಳುವ ಎಲ್ಲ ಸಾಧ್ಯತೆಗಳಿತ್ತು ಈ ಯೋಜನೆಗೆ. ಆದರೆ ಮಹತ್ವಾಕಾಂಕ್ಷಿ ಯೋಜನೆಯೊಂದು ಹೇಗೆ ರಾಜಕಾರಣಿಗಳ, ರಾಜಕೀಯ ಆಟಗಳ ನಡುವೆ ಸಿಕ್ಕು ನರಳಿ ಸತ್ತುಹೋಗುತ್ತದೆ, ಭ್ರಷ್ಟಾಚಾರಕ್ಕೆ ಬಲಿಯಾಗುತ್ತದೆ ಮತ್ತು ಜನರ ದುಡ್ಡು, ಆಡಳಿತ ಯಂತ್ರದ ಸಮಯ, ಪರಿಶ್ರಮ ಹೇಗೆ ನೀರಲ್ಲಿ ಹುಣಿಸೇಹಣ್ಣು ತೊಳೆದಂತಾಗುತ್ತದೆ ಎಂಬುದಕ್ಕೆ ಕಾಲೇಶ್ವರಂ ಏತ ನೀರಾವರಿ ಯೋಜನೆ ಜ್ವಲಂತಸಾಕ್ಷಿ.