ಸಮಾನ ವೇತನ ಏಕಿಲ್ಲ?
ಅಭಿಮತ
ಪ್ರಕಾಶ್ ಹೆಗಡೆ, ಬೆಂಗಳೂರು
ಮಹಿಳಾ ಕ್ರೀಡಾಪಟುಗಳಿಗೆ ಪುರುಷರಿಗೆ ಸಿಗುವುದಕ್ಕಿಂತ ಕಡಿಮೆ ಸಂಭಾವನೆ ಸಿಗುವುದೆಂಬುದು ಸಾಮಾನ್ಯ ಜ್ಞಾನ. ಈ ಕುರಿತು ವಿಶ್ಲೇಷಣೆಯ ಅಗತ್ಯ ವಿದೆ. ಕ್ರಿಕೆಟ್ ಆಟವನ್ನೇ ಪರಿಗಣಿಸಿದರೆ, ಬಿಸಿಸಿಐ ಪ್ರತಿವರ್ಷವೂ ಕ್ರೀಡಾಪಟುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಇದರ ಅನುಸಾರ ವರ್ಷಕ್ಕೆ ಇಂತಿಷ್ಟು ಮೊತ್ತದ ಜತೆಗೆ, ಪ್ರತಿ ಟೆಸ್ಟ್/ಏಕದಿನ ಪಂದ್ಯ/ಟಿ-ಟ್ವೆಂಟಿಗೆ ನಿಕ್ಕಿಯಾದ ಮೊಬಲಗು ನೀಡುವ ಉಲ್ಲೇಖವಿರುತ್ತದೆ. ಪುರುಷರ ಟೆಸ್ಟ್ ಮ್ಯಾಚ್‌ಗೆ ೧೫ ಲಕ್ಷ, ಏಕದಿನ ಪಂದ್ಯಕ್ಕೆ ೬ ಲಕ್ಷ ಮತ್ತು ಟಿ-ಟ್ವೆಂಟಿಗೆ ೩ ಲಕ್ಷ ಸಂಭಾವನೆ ನಿಗದಿಯಾಗಿದ್ದು, ಮಹಿಳೆಯರ ಸಂಭಾವನೆಯೂ ಈಗ ಪುರುಷರಿಗೆ ನೀಡುವಷ್ಟೇ ಇದೆ.
ಆದರೆ ವರ್ಷದ ಮೊಬಲಗಿನಲ್ಲಿ  ಪುರುಷರ ಮತ್ತು ಮಹಿಳೆಯರ ಸಂಭಾವನೆಯಲ್ಲಿ ಬಹಳ ವ್ಯತ್ಯಾಸವಿದೆ. ಐಪಿಎಲ್ ವಿಜೇತರ ತಂಡದ ಸಂಭಾವನೆ ಯಲ್ಲೂ ಬಹಳ ಅಂತರವಿದೆ. ಕೆಲವೊಂದು ಅಂಶಗಳನ್ನು ವಿಶ್ಲೇಷಿಸಿದರೆ ಏಕೀ ತಾರತಮ್ಯ ಎಂಬುದಕ್ಕೆ ತಾರ್ಕಿಕ ಸಮಜಾಯಿಷಿ ಸಿಗುತ್ತದೆ. ಮಹಿಳಾ ಐಪಿಎಲ್ ಕೇವಲ ೩ ವಾರಗಳ ಕಾಲ ನಡೆಯುತ್ತದೆ. ಆದರೆ ಪುರುಷರ ಪಂದ್ಯಾವಳಿಯು ೨ ತಿಂಗಳ ಕಾಲ ನಡೆಯುತ್ತದೆ. ಒಂದು ಸೀಸನ್‌ನಲ್ಲಿ ಪುರುಷರು ಮಹಿಳೆಯರಿಗಿಂತ ಬಹಳಷ್ಟು ಹೆಚ್ಚು ಪಂದ್ಯಗಳನ್ನು ಆಡುತ್ತಾರೆ. ಪ್ರತಿ ಪಂದ್ಯವನ್ನು ವೀಕ್ಷಿಸುವವರ ಸಂಖ್ಯೆಯಿಂದಾಗಿ ಪುರುಷರ ಮತ್ತು ಮಹಿಳೆಯರ ಪಂದ್ಯಗಳ ಹಣಗಳಿಕೆಯ ಅರ್ಥಶಾಸ್ತ್ರವು ಸಂಪೂರ್ಣ ವಿಭಿನ್ನವಾಗಿದೆ.
ಅಂಕಿ-ಅಂಶಗಳ ಪ್ರಕಾರ, ಮಹಿಳಾ ಪಂದ್ಯಾವಳಿ/ಪಂದ್ಯಗಳು ಸಾಕಷ್ಟು ಇಲ್ಲ; ಪುರುಷರ ಲೀಗ್‌ಗಳು ಮಾಡುವಂಥ ಹಣವನ್ನು, ಮಹಿಳೆಯರ ಇಡೀ ಪಂದ್ಯಾವಳಿ ಸೇರಿಸಿದರೂ ಗಳಿಸುವುದಿಲ್ಲ. ಮಹಿಳಾ ಕ್ರೀಡಾಪಟುಗಳು ಹೆಚ್ಚು ಕಣ್ಣುಗಳನ್ನು ಅಥವಾ ಪ್ರಾಯೋಜಕರನ್ನು ಸೆಳೆಯುವುದಿಲ್ಲ. ಹೀಗಾಗಿ ಸ್ವಾಭಾವಿಕವಾಗಿ ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚು ವೇತನ ಸಿಗುವುದಿಲ್ಲ. ಪ್ರಾಚೀನ ಗ್ರೀಸ್‌ನಲ್ಲಿನ ಕ್ರೀಡಾ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, ಓಟ ಮತ್ತು ಕುಸ್ತಿಗಳು ಗಂಭೀರ ಅಥ್ಲೆಟಿಕ್ ಇವೆಂಟುಗಳಾಗಿ ಹೊರಹೊಮ್ಮಿದ್ದು ಅರಿವಾಗುತ್ತದೆ.
ನಿಸ್ಸಂದೇಹವಾಗಿ ಅವನ್ನು ಪುರುಷರ ಶಕ್ತಿ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿತ್ತು. ಇವುಗಳಲ್ಲಿ ಮಹಿಳೆಯರು ಭಾಗವಹಿಸಲು ಅವಕಾಶವಿರಲಿಲ್ಲ, ಅವರು ಕೇವಲ ನೋಡುಗರಾಗಿದ್ದರು. ವೇಗ, ಗಾತ್ರ ಮತ್ತು ಶಕ್ತಿಯು ಕ್ರೀಡೆಯ ಸಾರವೆಂದು ಸಾಬೀತಾಗಿದೆ. ಹೀಗೆ ಕಲ್ಪಿಸಿಕೊಳ್ಳ ಲಾಗದ ‘ಕ್ರೀಡೆ’ಯಲ್ಲಿ ಮಹಿಳೆಯರು ಸ್ವಾಭಾವಿಕವಾಗಿ ಕೆಳಮಟ್ಟದಲ್ಲಿದ್ದಾರೆ. ಆದರೆ ಮಹಿಳೆಯರು ಐತಿಹಾಸಿಕವಾಗಿ ಪ್ರಬಲ ಲಿಂಗವಾಗಿದ್ದರೆ, ನಮ್ಮ ಕ್ರೀಡೆಯ ಪರಿಕಲ್ಪನೆಯು ವಿಭಿನ್ನವಾಗಿ ವಿಕಸನಗೊಳ್ಳುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ.
ವೀಕ್ಷಕರ ಬಗ್ಗೆ ಮಾತನಾಡುವುದಾದರೆ, ಅವರು ಪುರುಷರ ಆಟವನ್ನು ನೋಡಬಯಸುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ‘-ರ್ಮುಲಾ ಒನ್’ನಲ್ಲಿನ ಹ್ಯಾಮಿಲ್ಟನ್ ರ ವಾಹನ ಚಾಲನೆಯ ಚಾಕಚಕ್ಯತೆಯ ರೋಮಾಂಚನ, ಬ್ಯಾಸ್ಕೆಟ್‌ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್‌ನಿಂದ ‘ವಿಂಡ್ ಮಿಲ್ ಡಂಕ್’ ಅಥವಾ ಎಂ.ಎಸ್. ಧೋನಿಯವರ ‘ಹೆಲಿಕಾಪ್ಟರ್ ಸಿಕ್ಸರ್’ಗಳನ್ನು ವೀಕ್ಷಕರು ನೋಡಬಯಸುತ್ತಾರೆ. ಇಂಥ ರೋಮಾಂಚನಗಳು ಮಹಿಳೆಯರ  ಆಟಗಳಲ್ಲಿ ಕಾಣಸಿಗುವುದು ವಿರಳ ಎಂಬುದೊಂದು ಗ್ರಹಿಕೆಯಿದೆ. ಆದರೆ ಕಾಲ ಬದಲಾಗುತ್ತಿದೆ. ಹೆಚ್ಚೆಚ್ಚು ಕ್ರೀಡಾಭಿಮಾನಿಗಳು, ವಿಶೇಷವಾಗಿವೀಕ್ಷಕಿಯರು ಮಹಿಳೆಯರ ಕ್ರೀಡಾವೀಕ್ಷಣೆಗೆ ಆಸಕ್ತಿ ತೋರುತ್ತಿದ್ದಾರೆ.
೨೦೧೮ರಲ್ಲಿ, ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯವು, ಪುರುಷರ ಫೈನಲ್‌ಗಿಂತ ೧.೦೪ ಮಿಲಿಯನ್ ಹೆಚ್ಚು ವೀಕ್ಷಕರನ್ನು ಹೊಂದಿತ್ತು. ಹಾಗೆಯೇ ವಿಂಬಲ್ಡನ್ ಕೂಡ. ಶುಭಸುದ್ದಿಯೆಂದರೆ, ಇಂಥ ತಾರತಮ್ಯವನ್ನು ಸರಿದೂಗಿಸಲು ಆಯಾ ಕ್ರೀಡಾಸಂಘಗಳು ಶ್ರಮಿಸುತ್ತಿವೆ. ಲಾನ್ ಟೆನಿಸ್‌ನ ೪ ಗ್ರ್ಯಾಂಡ್ ಸ್ಲಾಮ್‌ಗಳಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಸಂಭಾವನೆ ನೀಡಿ ಈ ತಾರತಮ್ಯವನ್ನು ಹಲವು ವರ್ಷಗಳಿಂದೀಚೆಗೆ ಟೆನಿಸ್ ಅಸೋಸಿಯೇಷನ್‌ನವರು ತೆಗೆದುಹಾಕಿದ್ದಾರೆ. ಅಂತೆಯೇ ಬಿಸಿಸಿಐ ಕೂಡ ಇದೇ ದಿಕ್ಕಿನಲ್ಲಿ ಹೆಜ್ಜೆಹಾಕಿದೆ. ಅಮೆರಿಕದ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್, ಪುರುಷರ ಸರ್ಕ್ಯೂಟ್‌ನಿಂದಾಗುವ ಲಾಭದಿಂದ ಮಹಿಳಾ ಲೀಗ್‌ನಲ್ಲಾಗುವ ನಷ್ಟ ಭರಿಸಲು ಧನಸಹಾಯ ನೀಡುತ್ತಿದೆ.
ಮಹಿಳಾ ಕ್ರೀಡೆಗಳು/ಪಂದ್ಯಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಮಾಧ್ಯಮಗಳು ಸ್ವಲ್ಪ ಹೆಚ್ಚು ಸಹಕಾರ ನೀಡಿದರೆ ಬಹುಶಃ ಈ ವಲಯವು ಹೆಚ್ಚು ಗಮನ ಸೆಳೆಯುತ್ತದೆ; ಪೂರಕವಾಗಿ ಪ್ರಾಯೋಜಕರೂ ಹೆಚ್ಚು ಹಣ ಹೂಡುವ ಸಾಧ್ಯತೆಯಿದೆ. ಎಲ್ಲರಿಗೂ ಒಂದೇ ರೀತಿ ವೇತನ ನೀಡುವಂತೆ ಸಂಘಟಕ ರನ್ನು ಕೇಳುವುದರಲ್ಲಿ ಅರ್ಥವಿಲ್ಲವಾದರೂ, ಜನರು ಮಹಿಳಾ ಕ್ರೀಡೆಗಳಿಗೆ ಹೆಚ್ಚು ಉತ್ತೇಜನ ದೊರೆಯುವಂತಾಗುವುದನ್ನು ಆಶಿಸಬೇಕು. ವೇತನ ತಾರತಮ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಇಂಥ ಥೋರಣೆಯು ಕೊಂಚ ಮಟ್ಟಿಗೆ ನೆರವಾಗಬಲ್ಲದು.
(ಲೇಖಕರು ಹವ್ಯಾಸಿ ಬರಹಗಾರರು)