ವಾಸ್ತವದ ಅನಾವರಣ
ಪ್ರತಿಸ್ಪಂದನ
ಶಂಕರನಾರಾಯಣ ಭಟ್
‘ಜಗತ್ತು ಬದಲಾಗುವುದು ಅನಿವಾರ್ಯವಾದಾಗ ಮಾತ್ರ’ ಎಂಬ ಅಂಕಣ ಬರಹವು (ವಿಶ್ವವಾಣಿ ಫೆ.೧೪) ವಾಸ್ತವದ ಅನಾವರಣ ಮಾಡಿಸಿದಂತಿತ್ತು. ಬದಲಾಗಲೇಬೇಕಾದ ಅನಿವಾರ್ಯ ಸಂದರ್ಭವು ನಮ್ಮ ಬದುಕಿನಲ್ಲೂ ಹಲವೊಮ್ಮೆ ಒದಗುತ್ತದೆ. ಇಲ್ಲಿ ಹಠಕ್ಕೆ ಅಷ್ಟು ಮಹತ್ವ ಇರಲಾರದು. ಒಂದೊಮ್ಮೆ ಆ ರೀತಿ ಹಠ ಹಿಡಿದು ಕುಳಿತರೆ ಜೀವನವೇ ದುಸ್ತರವಾಗುವ ಸಾಧ್ಯತೆಗಳೂ ಇವೆ. ಹಿಂದೆಲ್ಲ ಅದೆಷ್ಟೋ ನಿಯಮ, ಸಂಪ್ರದಾಯ, ಕಟ್ಟು ನಿಟ್ಟುಗಳು ಇರುತ್ತಿದ್ದವು ಹಾಗೂ ಅವೆಲ್ಲ ಅಷ್ಟೊಂದು ವಿಶೇಷ ಅಂತಲೂ ಅನಿಸುತ್ತಿರಲಿಲ್ಲ.
ಕಾರಣ ಅವು ಅನಿವಾರ್ಯವಾ ಗಿರಲಿಲ್ಲ. ಲೇಖಕರು ನೀಡಿದ ಬ್ರಾಹ್ಮಣ ಸಮುದಾಯದವರ ಮದುವೆಯ ನಿದರ್ಶನವೇ ಇದಕ್ಕೆ ಜೀವಂತ ಸಾಕ್ಷಿ. ಹಿಂದೆಲ್ಲ ಬ್ರಾಹ್ಮಣರು, ಬ್ರಾಹ್ಮಣೇತರರ ಜತೆ ವಿವಾಹ ಸಂಬಂಧವನ್ನು ಬೆಳೆಸುತ್ತಲೇ ಇರಲಿಲ್ಲ. ಅದರ ಅವಶ್ಯಕತೆಯೂ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ, ವಾತಾವರಣ ಭಿನ್ನವಾಗಿದೆ. ಸಾಮಾಜಿಕ ಕಟ್ಟುನಿಟ್ಟುಗಳು ಸಡಿಲವಾಗುತ್ತಿವೆ. ಇದಕ್ಕಿರುವ ಕಾರಣ ಸರಳ- ಬದಲಾಗಲೇಬೇಕಾದ ಅನಿವಾರ್ಯತೆ. ಹಾಗಾಗದಿದ್ದರೆ ಬದುಕುವುದೇ ಸಾಧ್ಯವಿಲ್ಲ ಎಂಬಲ್ಲಿಗೆ ಬಂದಾಗ, ಬೇಕೋ ಬೇಡವೋ ಸಮಯವು ಬದಲಾವಣೆಗೆ ನಮ್ಮನ್ನು ತಳ್ಳುತ್ತದೆ.
ದೇಶದಲ್ಲಿ ಸರಕಾರಿ ವ್ಯವಹಾರ/ಯೋಜನೆಗಳಲ್ಲಿ ಸೋರಿಕೆ ಮಿತಿಮೀರಿದಾಗ ಬಂದೊದಗಿದ ಅನಿವಾರ್ಯತೆಯೇ ಡಿಜಿಟಲ್ ವ್ಯವಸ್ಥೆ. ಹಿಂದೆಲ್ಲ ಯೋಜನೆಯ ಫಲಾನುಭವಿಗಳಿಗೆ ತಲುಪಬೇಕಾದ ಮೊತ್ತವು ಮಧ್ಯದಲ್ಲೇ ಸೋರಿಹೋಗಿ, ಕೊನೆಯಲ್ಲಿ ಅರ್ಧದಷ್ಟೂ ಉಳಿಯುತ್ತಿರಲಿಲ್ಲ. ಇದನ್ನು ಸರಿಪಡಿಸಲು ಸಂಕಲ್ಪಿಸಿದಾಗ ಹೊರಹೊಮ್ಮಿದ್ದೇ ‘ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್’ ಎಂಬ ಮಾರ್ಗೋಪಾಯ. ಮತ್ತೊಂದೆಡೆ, ಬೀದಿಬದಿಯ ವ್ಯಾಪಾರಿ ಗಳೂ ಯುಪಿಐ ಕ್ಯುಆರ್ ಕೋಡ್ ಬಳಸುತ್ತ ತಮ್ಮ ವ್ಯವಹಾರಗಳನ್ನು ಸಲೀಸಾಗಿ ನಡೆಸಿಕೊಂಡು ಬರುತ್ತಿರುವುದು, ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಸಕಾಲಕ್ಕೆ ಸೂಕ್ತ ಸಾಲ ಪಡೆಯುತ್ತ ತಮ್ಮ ವಹಿವಾಟು ವೃದ್ಧಿಸಿಕೊಳ್ಳುತ್ತಿರುವುದು ಇದೇ ಅನಿವಾರ್ಯದ ಪರಿಣಾಮವೇ.
ಇನ್ನು ವಾಹನಗಳಿಗೆ ‘ಫಾಸ್ಟ್ ಟ್ಯಾಗ್’ ಅಳವಡಿಸಿದ್ದಂತೂ ಎಷ್ಟೊಂದು ಉಪಯುಕ್ತವಾಗಿದೆ ಎಂದರೆ, ವಾಹನ ಮಾಲೀಕರು ಯಾವುದೇ ಗೊಂದಲ ಕ್ಕೀಡಾಗುವ ಪ್ರಮೇಯವೇ ಬರುತ್ತಿಲ್ಲ. ಎಲ್ಲವೂ ನಿಯಮದಂತೆ, ಪೂರ್ವನಿರ್ಧಾರದಂತೆ ನಡೆಯುತ್ತಲೇ ಇರುತ್ತವೆ. ಮಾತೂ ಇಲ್ಲ, ಕತೆಯೂ ಇಲ್ಲ. ಮೊದಲಾಗಿದ್ದರೆ ಪ್ರತಿ ಟೋಲ್‌ಗಳಲ್ಲಿ ಮಾತಿನ ಚಕಮಕಿ, ಹೊಡೆದಾಟ, ಬಡಿದಾಟವಿರುತ್ತಿದ್ದವು, ಮನಸ್ಸಿಗೆ ಬಂದಂತೆ ದೋಚುವುದೇ ಪರಿಪಾಠ ವಾಗಿತ್ತು.
ಬದಲಾವಣೆಗೆ ಅನಿವಾರ್ಯತೆ ಮುಖ್ಯ ಎಂಬುದು ‘ಸ್ವಚ್ಛ ಭಾರತ ಅಭಿಯಾನ’ದಲ್ಲಿ ಮಾತ್ರ ಇನ್ನೂ ಗೋಚರಿಸುತ್ತಿಲ್ಲ ಎಂಬುದೂ ನಿಜ. ಇದಕ್ಕೆ ಕಾರಣ ನಮ್ಮ ಜನರ ಮಾನಸಿಕತೆ. ಇದನ್ನು ಬದಲಾಯಿಸಬೇಕೆಂದರೆ ಕಠಿಣ ಕಾನೂನಿನ ಅವಶ್ಯಕತೆ ಇದ್ದಂತೆ ಕಾಣುತ್ತಿದೆ. ‘ಜಾಣನಿಗೆ ಮಾತಿನ ಪೆಟ್ಟು, ಕೋಣ ನಿಗೆ ದೊಣ್ಣೆಯ ಪೆಟ್ಟು’ ಎಂಬಂತೆ, ಕೇವಲ ಮಾತಿನಿಂದ ಸರಿಹೋಗದ್ದನ್ನು ನಿಷ್ಠುರವಾದ ಕಾನೂನಿನ ಮೂಲಕ ಸರಿಪಡಿಸುವ ಅನಿವಾರ್ಯ ಬಂದೊ ದಗಿದೆ. ನಮ್ಮಲ್ಲಿ ವಾಹನ ಚಾಲನೆ, ಪಾರ್ಕಿಂಗ್ ಪದ್ಧತಿಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಲೇಬೇಕಿದೆ. ಕಂಡಕಂಡಲ್ಲಿ ವಾಹನ ನಿಲ್ಲಿಸುವುದು, ಎಡ-ಬಲ ಎನ್ನದೇ ಬೇಕಾದಂತೆ ವಾಹನ ಓಡಿಸುವುದು, ‘ನೋ-ಪಾರ್ಕಿಂಗ್’ ಬೋರ್ಡ್ ಹತ್ತಿರವೇ ಗಾಡಿ ನಿಲ್ಲಿಸುವುದು, ಸಿಗ್ನಲ್ ಇರದಿದ್ದರೂ ವಾಹನ ಓಡಿಸಿಬಿಡುವುದು ಇವೆಲ್ಲ ಇಂದೂ ನಡೆದೇ ಇವೆ. ಇವನ್ನು ತಡೆಯಲು ಕಠಿಣ ಕಾನೂನಿನ ಅನಿವಾರ್ಯವಿದೆ.
ಇಂಥ ಕಟ್ಟುಪಾಡನ್ನು ರಾಜಕೀಯ ಕ್ಷೇತ್ರಕ್ಕೂ ಅಳವಡಿಸಬೇಕಾಗಿದೆ. ಬೇಕು ಬೇಕಾದಾಗ ಯಾವುದೋ ನೆಪವೊಡ್ಡಿ ಪಕ್ಷಾಂತರ ಮಾಡುವುದು ನಮ್ಮಲ್ಲಿ ಪಿಡುಗಾಗಿಬಿಟ್ಟಿದೆ; ‘ರಾಜಕೀಯ ಧುರೀಣರು ಎಲ್ಲ ಕಾನೂನುಗಳನ್ನೂ ಮೀರಿದವರು’ ಎಂಬ ಚಿತ್ತಸ್ಥಿತಿಗೆ ಲಗಾಮು ಹಾಕಬೇಕಿದೆ. ಇಂದು ನಾವು ಕಾಣು ತ್ತಿರುವ ಬಹುತೇಕ ಬದಲಾವಣೆಗಳೆಲ್ಲ ಅನಿವಾರ್ಯತೆಗಳಿಂದಲೇ ಬಂದವುಗಳೇ ಹೊರತು ಸಹಜ ಪ್ರಕ್ರಿಯೆಗಳಲ್ಲ. ಪ್ರಕೃತಿಯಲ್ಲಿ ಆಗುವ ಹಲವು ಬದಲಾವಣೆಗಳು ಹೆಚ್ಚಾಗಿ ಸಹಜವಾಗಿಯೇ ಇರುತ್ತವೆ; ಇಲ್ಲಿ ಅನಿವಾರ್ಯತೆ ಎಂಬುದಕ್ಕೆ ಆಸ್ಪದವೂ ಇರದು. ಆಯಾ ಕಾಲದಲ್ಲಿ ಆಯಾ ಘಟನೆಗಳು ನಡೆಯುತ್ತಲೇ ಇರುತ್ತವೆ; ಅವು ಹಾಗೆಯೇ ಇರಬೇಕಾದ್ದು. ಅವನ್ನು ಬದಲಾಯಿಸುವ ಅನಿವಾರ್ಯತೆ ಇದ್ದರೂ, ಹಾಗೆ ಮಾಡಲು ಸಾಧ್ಯವೇ ಇಲ್ಲ.
ಈಗಂತೂ ಯಾವಾಗ ಬೇಸಗೆ, ಯಾವಾಗ ಚಳಿಗಾಲ, ಇನ್ಯಾವಾಗ ಮಳೆಗಾಲ ಅಂತ ನಿರ್ದಿಷ್ಟವಾಗಿ ಹೇಳಲೂ ಬಾರದಂತಾಗಿದೆ. ಇದು ಪ್ರಕೃತಿಯಲ್ಲಿ ಆದ ಅಥವಾ ಆಗುತ್ತಿರುವ ಅನಿವಾರ್ಯತೆ ಎಂಬುದು ತಿಳಿದಿದ್ದರೂ, ಅವನ್ನು ಬದಲಾಯಿಸಲಾಗದು. ಅವೆಲ್ಲವನ್ನೂ ಬಂದಹಾಗೆ ಸ್ವೀಕರಿಸುವುದೇ ಅನಿವಾರ್ಯ!
(ಲೇಖಕರು ಹವ್ಯಾಸಿ ಬರಹಗಾರರು)