ವಿಭಜನೆಯ ಮಾತು ಬೇಕಿತ್ತಾ?
ಪ್ರಕಾಶ ಪಥ
ಪ್ರಕಾಶ್ ಶೇಷರಾಘವಾಚಾರ್‌
‘ಹದಿನೈದನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ; ನಾವು ಪಾವತಿಸುವ ೧೦೦ ರು. ತೆರಿಗೆಯಲ್ಲಿ ನಮಗೆ ವಾಪಸ್ ಬರುವುದು ೧೨ರಿಂದ ೧೩ ರು. ಮಾತ್ರ. ಇದರಿಂದ ರಾಜ್ಯಕ್ಕೆ ಕಳೆದ ೪ ವರ್ಷದಲ್ಲಿ ೧,೮೭,೦೦೦ ಕೋಟಿ ನಷ್ಟವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ ಹಾಗೂ ಸಂಘರ್ಷದ ಕಹಳೆ ಮೊಳಗಿಸಿದ್ದಾರೆ.
ಇದಕ್ಕುತ್ತರವಾಗಿ ಬಿಜೆಪಿ ನಾಯಕರು, ‘ರಾಜ್ಯಕ್ಕೆ ೧೪ನೇ ಹಣಕಾಸು ಆಯೋಗವು ಶೇ.೩೨ರಷ್ಟು ಪಾಲು ನಿಗದಿಪಡಿಸಿತ್ತು; ಆದರೆ ೧೫ನೇ ಆಯೋಗವು ಶೇ.೪೨ರಷ್ಟು ಪಾಲು ನಿಗದಿಪಡಿಸಿದೆ. ಯುಪಿಎ ಅವಽಯಲ್ಲಿ ರಾಜ್ಯಕ್ಕೆ ಬಂದ ಅನುದಾನ ೧,೪೨,೫೭೪ ಕೋಟಿ ರು.ಆದರೆ, ಎನ್‌ಡಿಎ ಅವಧಿಯಲ್ಲಿ ಬಂದ ಅನುದಾನ ೪,೯೪,೨೮೪ ಕೋಟಿ ರುಪಾಯಿ. ಯುಪಿಎ ಅವಽಗೆ ಹೋಲಿಸಿದಾಗ ಹೆಚ್ಚು ಬಂದಿದೆ’ ಎಂಬ ಅಂಕಿ-ಅಂಶ ನೀಡಿದ್ದಾರೆ. ಈ ವಿವರಣೆಯಬಗ್ಗೆ ಸ್ಪಷ್ಟನೆ ನೀಡುವ ಬದಲಿಗೆ ಸಿದ್ದರಾಮಯ್ಯನವರು, ‘೧೫ನೇ ಹಣ ಕಾಸು ಆಯೋಗದ ಶಿ-ರಸಿನಿಂದ ರಾಜ್ಯಕ್ಕೆ ೪೫,೦೦೦ ಕೋಟಿ ನಷ್ಟ ವಾಗಿದೆ’ ಎಂದು ‘ಎಕ್ಸ್’ ಖಾತೆಯಲ್ಲಿ ಬರೆದು, ಕೇಂದ್ರದ ಅಂಗಳಕ್ಕೇ ಮತ್ತೆ ಚೆಂಡೆಸೆದಿದ್ದಾರೆ.
ಹಣಕಾಸು ಹಂಚಿಕೆ ಸಂಕೀರ್ಣ ವಿಷಯ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಈ ಹಗ್ಗಜಗ್ಗಾಟದಲ್ಲಿ ವಸ್ತುಸ್ಥಿತಿಯೇನೆಂದು ಜನ ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ. ಬಿಜೆಪಿಯ ಐಟಿ ಸೆಲ್‌ನ ರಾಷ್ಟ್ರೀಯ ಸಂಚಾಲಕ ಅಮಿತ್ ಮಾಳವೀಯರು, ದಕ್ಷಿಣ ಭಾರತದ ರಾಜ್ಯಗಳಿಗೆ ತೆರಿಗೆ ಪಾಲು ಕಡಿಮೆಯಾಗಲು ೨೦೧೩ರಲ್ಲಿ ನೇಮಕವಾಗಿದ್ದ ರಘುರಾಂ ರಾಜನ್ ಅಧ್ಯಕ್ಷತೆಯ ಸಮಿತಿಯು ರಾಜ್ಯಗಳ ಸಂಯೋಜಿತ ಅಭಿವೃದ್ಧಿ ಸೂಚ್ಯಂಕಕ್ಕೆ ಸಂಬಂಧಿಸಿ ಕರ್ನಾಟಕದ ಪಾಲನ್ನು ಶೇ.೪.೧೩ರಿಂದ ೩.೭೩ಕ್ಕೆ ಇಳಿಸಬೇಕೆಂದು ನೀಡಿದ ವರದಿಯನ್ನು ಹಣಕಾಸು ಆಯೋಗ ಜಾರಿಗೊಳಿಸಿದ್ದೇ ಕಾರಣ.
ಹೀಗಾಗಿ ಕರ್ನಾಟಕದ ಪಾಲು ಕಡಿಮೆಯಾಗಿದೆ ಎಂದು ದಾಖಲೆ ಸಮೇತ ತಿಳಿಸಿದ್ದಾರೆ. ರಘುರಾಂ ಸಮಿತಿ ಶಿಫಾರಸು ಮಾಡಿದ ವೇಳೆ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯನವರು ಇದರ ವಿರುದ್ಧ ಸೊಲ್ಲೆತ್ತುವುದಿಲ್ಲ. ೨೦೧೩ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ; ಹೀಗಾಗಿ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಅದನ್ನು ಸರಿಪಡಿ ಸಲು ಮನವಿ ಮಾಡದೆ ಸಿದ್ದ ರಾಮಯ್ಯ ಮೌನಕ್ಕೆ ಶರಣಾದರು. ಹೀಗಾಗಿ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲಿನಲ್ಲಿ ಕಡಿತವಾಯಿತು.
೧೫ನೇ ಹಣಕಾಸು ಆಯೋಗವು ರಾಜ್ಯದ ಪಾಲು ಕಡಿತಗೊಳಿಸಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಿರುವುದನ್ನು ನಿರಾಕರಿಸಲಾ ಗದು. ಆದರೆ ಆ ಅನ್ಯಾಯಕ್ಕೆ ಮುನ್ನುಡಿ ಬರೆದಾಗ ಕಾಂಗ್ರೆಸ್ ನಾಯಕರು ತೋರಿದ ನಿರ್ಲಕ್ಷ್ಯವನ್ನು ಪ್ರಶ್ನಿಸಲೇಬೇಕಾಗುತ್ತದೆ. ೨೦೨೩ರಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ೫೦,೦೦೦ ಕೋಟಿ ರು. ವೆಚ್ಚವಾಗುವ ಐದು ‘ಗ್ಯಾರಂಟಿ’ ಗಳನ್ನು ಚುನಾವಣಾ ಪ್ರಚಾರದ ವೇಳೆ ಮತ ದಾರರಿಗೆ ಘೋಷಿಸಿತು. ಈ ಆಶ್ವಾಸನೆಗಳನ್ನು ಪೂರೈಸಲು ಸಂಪ ನ್ಮೂಲ ಕ್ರೋಡೀಕರಣ ಸವಾಲಾಗಿದೆ. ೫ ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ರಾಜ್ಯ ಸರಕಾರಕ್ಕೆ ಆರ್ಥಿಕ ಹೊರೆಯಾಗಿರು ವುದನ್ನು ನಿರಾಕರಿಸಲಾಗದು. ನಿರಂತರ ಅನುದಾನ ಒದಗಿಸಬೇಕಿರುವುದರಿಂದ ಎಲ್ಲ ಮೂಲಗಳಿಂದ ಸಂಪನ್ಮೂಲ ಕ್ರೋಡೀಕರಣ ಅತ್ಯಗತ್ಯವಾಗಿದೆ.
ಜತೆಗೆ, ಹಿಂದಿನ ಕಾಮಗಾರಿಗಳ ಬಾಕಿ ಹಣ, ಸ್ಥಗಿತಗೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ಮತ್ತು ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಲೇಬೇಕಿರು ವುದರಿಂದ ಸಿಎಂ ಒತ್ತಡದಿಂದ ಬಳಲಿದಂತೆ ಕಾಣುತ್ತಾರೆ. ಕಳೆದ ಅಧಿಕಾರಾವಧಿಯಲ್ಲಿ ಗ್ಯಾರಂಟಿಗಳಿರಲಿಲ್ಲವಾದ್ದರಿಂದ ಅನು ದಾನದ ಕೊರತೆಯ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಸವಾಲು ಅವರೆದುರಿದೆ. ಹೀಗಾಗಿ, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂದು ವಿವಾದ ಸೃಷ್ಟಿಸಿ ಬಿಜೆಪಿ ಯನ್ನು ಇಕ್ಕಟ್ಟಿಗೆ ಸಿಕ್ಕಿಸುವ, ಮೋದಿಯವರ ಜನಪ್ರಿಯತೆ ಕುಗ್ಗಿಸುವ ತಂತ್ರಗಾರಿಕೆಗೆ ಮೊರೆ ಹೋಗಿದ್ದಾರೆ. ತನ್ಮೂಲಕ, ಮೋದಿ ಸರಕಾರವು ರಾಜ್ಯದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ.
ಹೀಗೆ ಒಂದೇ ಕಲ್ಲಿಗೆ ಎರಡು ಹಣ್ಣು ಉದುರಿಸುವ, ತನ್ಮೂಲಕ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ತಂತ್ರಗಾರಿಕೆ ಸಿದ್ದರಾಮಯ್ಯನ ವರದು. ಸಂಸದ ಡಿ.ಕೆ. ಸುರೇಶ್‌ರವರು ಕೇಂದ್ರ ಬಜೆಟ್ ಮಂಡನೆಯ ದಿನ ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತ ನಾಡುತ್ತಾ, ‘ಅನುದಾನ ನೀಡುವಲ್ಲಿನ ಕೇಂದ್ರದ ಅನ್ಯಾಯ ಮುಂದುವರಿದರೆ ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟ್ರವಾಗಲು ಯೋಚಿಸಬೇಕಾಗುತ್ತದೆ’ ಎಂಬ ದೇಶ ಒಡೆಯುವ ಹೇಳಿಕೆಯಿತ್ತರು.ವಿಪರ್ಯಾಸವೆಂದರೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಅನೇಕ ರಾಜರ ಆಳ್ವಿಕೆಯಲ್ಲಿದ್ದ ಸಂಸ್ಥಾನಗಳನ್ನು ವಿಲೀನಗೊಳಿಸಿ ರೂಪಿಸಿದ ಸಮಗ್ರ ಭಾರತದ ನಿರ್ಮಾಪಕ ತಾನು ಎಂದೇ ಪದೇಪದೆ ಹೇಳಿ ಕೊಳ್ಳುವ ಕಾಂಗ್ರೆಸ್‌ನ ನಾಯಕರಿಂದಲೇ ಇಂಥ ಹೇಳಿಕೆ ಹೊಮ್ಮುತ್ತಿದೆ.
‘ದೇಶ ಒಡೆಯುವ ಮಾತನ್ನು ಸಹಿಸುವುದಿಲ್ಲ’ ಎಂದು ರಾಜ್ಯ ಸಭೆಯಲ್ಲಿ ಅಬ್ಬರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯವರು, ಒಡಕು ಮಾತಾ ಡಿದ್ದಕ್ಕೆ ಎಚ್ಚರಿಕೆ ನೀಡದೆ ಪರೋಕ್ಷವಾಗಿ ಸುರೇಶರ ಹೇಳಿಕೆಯನ್ನು ಬೆಂಬಲಿಸುತ್ತಾರೆ. ‘ಭಾರತ್ ಜೋಡೋ ನ್ಯಾಯಯಾತ್ರೆ’ ಕೈಗೊಂಡಿ ರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ತಮ್ಮ ಪಕ್ಷದವರೇ ಆಡುತ್ತಿರುವ ‘ದೇಶ್ ತೋಡೋ’ ಮಾತು ಆಕ್ಷೇಪಾರ್ಹ ಎನಿಸುವುದಿಲ್ಲ. ಒಂದು ಕಾಲಕ್ಕೆಗಾಂಧಿ, ನೆಹರು, ಪಟೇಲರ ನಾಯಕತ್ವವಿದ್ದ ಕಾಂಗ್ರೆಸ್ ತನ್ನ ರಾಷ್ಟ್ರೀಯ ಏಕತೆ, ಸಮಗ್ರತೆಯ ಸಿದ್ಧಾಂತಕ್ಕೆ ತಿಲಾಂಜಲಿಯಿತ್ತು ದೇಶ ಒಡೆಯುವ ಸಿದ್ಧಾಂತವನ್ನಪ್ಪಿರುವುದು ವಿಷಾದನೀಯ.
ಹಣಕಾಸು ಆಯೋಗದ ಮೂಲಕ ರಾಜ್ಯಗಳಿಗೆ ತೆರಿಗೆ ಪಾಲು ನಿರ್ಧರಿಸುವ ಪದ್ಧತಿ ಶುರುವಾಗಿದ್ದು ೧೯೫೧ರಲ್ಲಿ; ರಾಷ್ಟ್ರಪತಿಗಳ ಆದೇಶದ ಮೇರೆಗೆ ಸಂವಿಧಾನದ ೨೮೦ನೇ ವಿಽಯಲ್ಲಿ ಇದು ರೂಪುಗೊಂಡಿತು. ಅಂದಿನಿಂದ ಈ ಆಯೋಗವು ಕೇಂದ್ರ-ರಾಜ್ಯಗಳ ನಡುವಿನ ತೆರಿಗೆ ಪಾಲನ್ನು ನಿಗದಿಪಡಿಸು ತ್ತಿದೆ. ಈ ಕಾರಣಕ್ಕಾಗಿಯೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು, ‘ತೆರಿಗೆ ಪಾಲು ನಿಗದಿಮಾಡುವ ಅಧಿಕಾರ ಹಣಕಾಸು ಆಯೋಗದ ವ್ಯಾಪ್ತಿಗೆ ಬರುತ್ತದೆ; ಇದರಲ್ಲಿ ಕೇಂದ್ರದ ಪಾತ್ರವಿಲ್ಲ’ ಎಂದು ಲೋಕಸಭೆಯಲ್ಲಿ ತಿಳಿಸಿದ್ದು.
ದೀರ್ಘಕಾಲ ದೇಶವನ್ನಾಳಿರುವ ಕಾಂಗ್ರೆಸ್‌ಗೆ ಇದು ತಿಳಿಯದ್ದೇನಲ್ಲ. ಇಷ್ಟಾಗಿಯೂ ಅದು ರಾಜಕೀಯ ಪ್ರೇರಿತವಾಗಿ, ‘ಮೋದಿ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ’ ಎಂಬ ಅಪಪ್ರಚಾರದಲ್ಲಿ ನಿರತವಾಗಿದೆ. ರಾಜ್ಯದಲ್ಲಿ ಸರಕಾರದ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಎಲ್ಲೆಡೆ ನಡೆಯು ತ್ತಿರುವ ಸಮಯದಲ್ಲೇ ಸಿದ್ದರಾಮಯ್ಯ ಸರಕಾರವು ಸಂವಿಧಾನಕ್ಕೆ ವಿರುದ್ಧವಾಗಿ, ಜನರ ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿರುವುದು ವಿಪರ್ಯಾಸ. ‘೧೫ನೇ ಹಣಕಾಸು ಆಯೋಗ ರಾಜ್ಯಕ್ಕೆ ೫,೪೯೫ ಕೋಟಿ ರು. ವಿಶೇಷ ಅನುದಾನ ನೀಡಲು ಶಿ-ರಸು ಮಾಡಿತ್ತು; ಆದರೆ ಕೇಂದ್ರ ಅದನ್ನು ನೀಡುತ್ತಿಲ್ಲ’ ಎಂಬುದು ಮತ್ತೊಂದು ಆಪಾದನೆ. ಆದರೆ ನಿರ್ಮಲಾ ಸೀತಾರಾಮನ್‌ರವರು, ಈ ವಿಶೇಷ ಅನುದಾನವು ಆಯೋಗದ ಶಿ-ರಸಿನ ಭಾಗವೇ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನುದಾನಕ್ಕಾಗಿ ರಾಜ್ಯವು ಆಗ್ರಹಿಸುವುದು ನ್ಯಾಯಸಮ್ಮತವೇ; ಆದರೆ ಸುಖಾಸುಮ್ಮನೆ ಕೇಂದ್ರದ ಮೇಲೆ ಗೂಬೆ ಕೂರಿಸಲು, ಭಾಷೆ ಮತ್ತು ಪ್ರತ್ಯೇಕತೆಯ ಹೆಸರಲ್ಲಿ ವಿಷಬೀಜ ಬಿತ್ತುವ ಕಾಂಗ್ರೆಸಿಗರ ಹುನ್ನಾರ ದೇಶಹಿತಕ್ಕೆ ವಿರುದ್ಧವಾಗಿದೆ. ಕಳೆದ ೭೫ ವರ್ಷದಿಂದ ಉಸಿರೆತ್ತದೆ, ಈಗ ಮೋದಿಯವರನ್ನು  ರಿಯಾಗಿಸಿ ಅನುದಾನದ ರಾಜಕೀಯ ದಾಳವನ್ನು ಉರುಳಿಸುತ್ತಿರುವುದು ರಾಜಕೀಯ ಪ್ರೇರಿತವಷ್ಟೇ. ೧೬ನೇ ಹಣಕಾಸು ಆಯೋಗದ ರಚನೆಯಾಗಿದೆ.ರಾಜ್ಯ ಸರಕಾರವು ನಮಗೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಹಣದ ಪಾಲಿಗೆ ಸಮರ್ಥವಾಗಿ ಅಹವಾಲು ಮಂಡಿಸಿ, ಈಗಾಗಿರುವ ನ್ಯೂನತೆಯನ್ನು ಸರಿಪಡಿಸಿಕೊಳ್ಳುವುದು ಸೂಕ್ತ. ರಾಜಕೀಯವನ್ನು ಬದಿಗಿಟ್ಟು ರಾಜ್ಯದ ಹಿತ ಕಾಪಾಡುವುದು ಆದ್ಯತೆಯಾಗಲಿ.
(ಲೇಖಕರು ಬಿಜೆಪಿಯ ಮಾಜಿ ಮಾಧ್ಯಮ ಸಂಚಾಲಕರು)