ಪಕ್ಷಾಂತರಿಗಳಿಂದ ವರ್ಚಸ್ಸು ಕುಸಿಯುವುದೇ ?
ವಿಶ್ಲೇಷಣೆ
ರಮಾನಂದ ಶರ್ಮಾ
ಕಳೆದ ವರ್ಷದ ಜುಲೈ ೨೩ರಂದು ಬಿಜೆಪಿಯೇತರ ರಾಜಕೀಯ ಪಕ್ಷಗಳು ಒಗ್ಗೂಡಿ ‘ಇಂಡಿಯ’ ಹೆಸರಿನಲ್ಲಿ ಮೈತ್ರಿಕೂಟವೊಂದನ್ನು ಹುಟ್ಟುಹಾಕಿದಾಗಮತ್ತು ಅದರ ಆರಂಭಿಕ ಚಟುವಟಿಕೆ, ಸಂಚಲನ, ಉತ್ಸಾಹಗಳನ್ನು ನೋಡಿದಾಗ, ಪ್ರಜಾಪ್ರಭುತ್ವದ ಯಶಸ್ಸಿಗೆ ಅವಶ್ಯ ವಿರುವ ಪ್ರಬಲವಾದ ವಿಪಕ್ಷ ಒಕ್ಕೂಟವೊಂದು ಮೈದಳೆಯುತ್ತಿದೆ ಎಂಬ ಅಭಿಪ್ರಾಯ ರಾಜಕೀಯ ಪಡಸಾಲೆಗಳಲ್ಲಿ ಕೇಳಿ ಬಂದಿತ್ತು.
ಮೋದಿಯವರ ಅಧಿಕಾರಾವಧಿಗೆ ‘ಬ್ರೇಕ್’ ಬೀಳಲಿದೆಯೇ ಎಂಬ ಭಾವನೆಯೂ ಕೆಲವರಲ್ಲಿ ಮೂಡಿದ್ದುಂಟು. ಮಾಧ್ಯಮಗಳಲ್ಲಿ ಇದರ ಬಗ್ಗೆ ಸಾಕಷ್ಟು ಚರ್ಚೆಯೂ ಆಯಿತು. ‘ಅಂತೂ ಇಂತೂ ಇವರಿಗೆ ಕೆಟ್ಟಮೇಲೆ ಬುದ್ಧಿಬಂತು; ಎಂದೋ ಆಗಬೇಕಾಗಿದ್ದು ಈಗ ಆಗುತ್ತಿದೆ’ ಎಂದು ಪ್ರಜ್ಞಾವಂತರು ಉದ್ಗರಿಸಿ ಸಂತಸ ವ್ಯಕ್ತಪಡಿಸಿದರು. ದೇಶದಲ್ಲಿ ಪ್ರಜಾಪ್ರಭುತ್ವವು ಅದರ ಮೂಲ ಆಶಯದಂತೆ ಕಾರ್ಯನಿರ್ವಹಿಸಬಹುದು ಎಂಬ ಹೊಸ ವಿಶ್ವಾಸ ಮೊಳೆಯ ತೊಡಗಿತು. ದೇಶವನ್ನು ‘ವಿಪಕ್ಷ-ಮುಕ್ತ’ ಮಾಡುವ ಸಾಹಸಕ್ಕೆ ತೆರೆಬೀಳಬಹುದು ಎಂಬ ಮಾತು ಕೇಳಿ ಬಂತು. ಮುಂದಿನ ದಿನಗಳಲ್ಲಿ ದೇಶವು ಬಹು ಅಪೇಕ್ಷಿತ ದ್ವಿಪಕ್ಷೀಯ ಪ್ರಜಾಪ್ರಭುತ್ವ ವ್ಯವಸ್ಥೆಯತ್ತ ಚಲಿಸಬಹುದು ಎಂದು ಹಲವರು ಕನಸು ಕಟ್ಟಿದರು.
ಈ ಯತ್ನಕ್ಕೆ ಶ್ರೀಕಾರ ಹಾಕಿ ನವಮಾಸಗಳು ತುಂಬಿವೆ. ಆದರೆ ಆರಂಭದ ದಿನಗಳಲ್ಲಿ ಕಾಣುತ್ತಿದ್ದ ಭರವಸೆ, ಉತ್ಸಾಹ ದಿನಗಳೆದಂತೆ ಬಡವಾಗುತ್ತಿವೆ. ಅಪಸ್ವರ ಹೆಚ್ಚುತ್ತಿದೆ. ಮೈತ್ರಿಕೂಟದಿಂದ ದಿನಕ್ಕೊಂದು ಪಕ್ಷ ಕಳಚಿಕೊಳ್ಳುತ್ತಿದೆ. ಈ ಮೈತ್ರಿಕೂಟಕ್ಕೆ ‘ಇಂಡಿಯ’ ಎಂದು ಹೆಸರಿಟ್ಟ ಅರವಿಂದ ಕೇಜ್ರಿವಾಲರು ತಮ್ಮ ಆಮ್ ಆದ್ಮಿ ಪಕ್ಷವನ್ನು ಮೈತ್ರಿಕೂಟದಿಂದ ಸಾವಕಾಶವಾಗಿ ಜಾರಿಸಿಕೊಳ್ಳುತ್ತಿದ್ದಾರೆ. ವಾಸ್ತವದಲ್ಲಿ ಈ ಮೈತ್ರಿಕೂಟದ ಅಲುಗಾಟ ಶುರುವಾಗಿದ್ದು ಮಲ್ಲಿಕಾರ್ಜುನ ಖರ್ಗೆಯವರನ್ನು ಅದರ ಅಧ್ಯಕ್ಷರಾಗಿ ಹೆಸರಿಸಿದಾಗಲೇ. ಆಗ ಪರೋಕ್ಷವಾಗಿ ಅಸಹನೆ ತೋರಿದ್ದ ನಿತೀಶ್ ಕುಮಾರರು,ಅಕಸ್ಮಾತ್ ‘ಇಂಡಿಯ’ ಒಕ್ಕೂಟ ಗದ್ದುಗೆಯೇರಿದರೆ ಖರ್ಗೆ ಯವರಿಗೆ ಪ್ರಧಾನಿ ಹುದ್ದೆ ಹೋಗಬಹುದು ಎಂದು ಊಹಿಸಿ ದರೇನೋ?! ನಿತೀಶ್ ಮಹಾ ಶಯರು ಈ ಹುದ್ದೆಯ ಮೇಲೆ ಕಣ್ಣಿಟ್ಟಿರುವುದು ಜಗಜ್ಜಾಹೀರು.
ರಾಜಕೀಯ ತಂತ್ರಗಾರಿಕೆ ಯಲ್ಲಿ ಹಳೆಯ ಹುಲಿಯಾದ ನಿತೀಶ್, ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾದ ನಂತರದ ರಾಜಕೀಯಬೆಳವಣಿಗೆಯನ್ನು ಮತ್ತು ಮತದಾರರ ಒಲವನ್ನು ಸೂಕ್ಷ್ಮ ವಾಗಿ ಗಮನಿಸಿ, ಗಾಳಿಬಂದಾಗ ತೂರಿಕೋ ಎನ್ನುವಂತೆ ‘ಇಂಡಿಯ’ ಮೈತ್ರಿಕೂಟಕ್ಕೆ ಕೈ ಕೊಟ್ಟು ಎನ್‌ಡಿಎ ಪಾಳಯಕ್ಕೆ ಸೇರಿಕೊಂಡಿದ್ದಾರೆ. ವಿಸ್ತೃತ ಲೆಕ್ಕಾಚಾರದ ನಂತರ ಅವರು ತಮ್ಮ ದಾಳವನ್ನು ಉರುಳಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಅಲೆಯ ಮೇಲೆ ರೂಪುಗೊಂಡು ದೆಹಲು ಮತ್ತು ಪಂಜಾಬ್‌ನಲ್ಲಿ ಅಧಿಕಾರ ಹಿಡಿದ ಆಮ್ ಆದ್ಮಿ ಪಕ್ಷವು ದಶಕಗಳ ನಂತರವೂ ಈ ರಾಜ್ಯಗಳಿಂದಾಚೆ ಪದಾರ್ಪಣ ಮಾಡಲು ಸಾಧ್ಯವಾಗಿಲ್ಲ. ಅದರೂ ಅದು ತನ್ನ ಶಕ್ತಿ ಮತ್ತು ಪ್ರಭಾವ ಮೀರಿ ಸೀಟು ಹಂಚಿಕೆಯಲ್ಲಿ ಪಾಲು ಕೇಳುತ್ತಿದೆ. ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ವಿರುದ್ಧ ದಶಕಗಳ ಕಾಲ ಹೋರಾಡಿ ಗದ್ದುಗೆ ಹಿಡಿದ ಮಮತಾ ಬ್ಯಾನರ್ಜಿ ಅವುಗಳೊಂದಿಗೆ ಕೈ ಜೋಡಿಸುವುದು ಅಸಂಭವ.
ಕಾಂಗ್ರೆಸ್ ಕೇರಳದಲ್ಲಿ ಕಮ್ಯುನಿಸ್ಟ್ ವಿರೋಧಿ ಬಣದಲ್ಲಿದ್ದು, ಪಶ್ಚಿಮ ಬಂಗಾಳದಲ್ಲಿ ಅವರೊಡನೆ ಕೈ ಜೋಡಿಸಲು ಸಾಧ್ಯವೇ? ಬಂಗಾಳ ತನ್ನ ಮೈದಾನ ವಾಗಿದ್ದು ತಾವೊಬ್ಬರೇ ಅಲ್ಲಿ ಅಡಬೇಕು ಎನ್ನುವುದು ಮಮತಾ ಬ್ಯಾನರ್ಜಿಯವರ ದೃಢ ನಿಲುವು. ಆ ನಿಲುವಿನಿಂದ ಅವರು ಸ್ವಲ್ಪವೂ ಸರಿಯುವ ಸಾಧ್ಯತೆ ಕಾಣುವುದಿಲ್ಲ. ಉತ್ತರ ಪ್ರದೇಶ ಮೂಲದ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳಕ್ಕೆ ಪಕ್ಷಾಂತರ ಮತ್ತು ನಿಷ್ಠೆ ಬದಲಾವಣೆ ಹೊಸದಲ್ಲ. ಅದು ಮುಂದಿನ ಲೆಕ್ಕಾಚಾರದೊಂದಿಗೆ ೨ ಲೋಕಸಭಾ ಸೀಟುಗಳ ಹೊಂದಾಣಿಕೆ ಕೇಳಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಅಯೋಧ್ಯಾ ಸುನಾಮಿಯ ಲಾಭ ಪಡೆಯಲು ಮುನ್ನುಗ್ಗಿದೆ. ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಸಾಕಷ್ಟು ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದು, ಕೊನೆಗೊಮ್ಮೆ ‘ಇಂಡಿಯ’ ಮೈತ್ರಿಕೂಟಕ್ಕೆ ಗುಡ್ ಬೈ ಹೇಳುವುದನ್ನು ಅಲ್ಲಗಳೆಯಲಾಗದು.
ಈ ಮೈತ್ರಿಕೂಟಕ್ಕೆ ಸ್ವಲ್ಪ ಮಟ್ಟಿಗೆ ಅಸರೆಯಾಗಬಹುದಾಗಿದ್ದ ಶರದ್ ಪವಾರರ ಎನ್‌ಸಿಪಿ ಹೋಳಾಗಿದ್ದು ತನ್ನ ಅಸ್ತಿತ್ವಕ್ಕೇ ಹೋರಾಡಬೇಕಾಗಿದೆ.ಅದೇ ಪರಿಸ್ಥಿತಿ ಶಿವಸೇನೆಯಲ್ಲೂ ಇದೆ. ಜನರು ಈ ಎರಡು ಪ್ರಾದೇಶಿಕ ಪಕ್ಷಗಳ ನಿಲುವು, ಕಾರ್ಯಚಟುವಟಿಕೆಗಳಿಂದ ಭ್ರಮನಿರಸನಗೊಂಡಿದ್ದಾರೆ ಎನ್ನಲಾಗುತ್ತದೆ. ತಮಿಳುನಾಡಿನಲ್ಲಿ ‘ಇಂಡಿಯ’ ಒಕ್ಕೂಟ ಎನ್ನುವುದು ಹೆಸರಿಗಷ್ಟೇ; ಅಲ್ಲಿ ಡಿಎಂಕೆ ಪಕ್ಷದ್ದೇ ಮೇಲುಗೈ. ಮೊದಲ ಸಭೆಯಲ್ಲಿಯೇ ಭಾಷಾ ವಿಷಯದಲ್ಲಿ ಗೊಂದಲ ಮತ್ತು ವಿವಾದವಾಗಿದ್ದು, ಮೈತ್ರಿಕೂಟದ ಹಿಂದಿ ಪ್ರದೇಶಗಳ ಪಕ್ಷಗಳೊಡನೆ ಡಿಎಂಕೆಯ ಹೊಂದಾಣಿಕೆ ಅಸಾಧ್ಯದಮಾತು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಸ್ವಲ್ಪ ಬಲವಿರುವ ಉತ್ತರದ ಒಂದೆರಡು ರಾಜ್ಯಗಳಲ್ಲಿ ಮಾತ್ರ ‘ಇಂಡಿಯ’ ಸದ್ದು ಕೇಳುತ್ತಿದ್ದು, ಅಖಿಲ ಭಾರತ ಮಟ್ಟದ ಪ್ರಭಾವ ಹೊಂದಿರುವ ಮೋದಿ ಮತ್ತು ಬಿಜೆಪಿಗೆ ಅದು ಸರಿಸಾಟಿಯಾಗುವುದು ದುಸ್ತರ ಎನ್ನುತ್ತಾರೆ ರಾಜಕೀಯ ತಜ್ಞರು.
ಆರಂಭದಲ್ಲಿ ಸದ್ದು ಮಾಡಿದ ಮೈತ್ರಿಕೂಟದ ೨೬ ಪಕ್ಷಗಳಲ್ಲಿ ಕೆಲವು ಸ್ವತಂತ್ರವಾಗಿ ಸ್ಪರ್ಧಿಸ ಹೊರಟಿದ್ದು, ಅಂತಿಮವಾಗಿ ಕೂಟದಲ್ಲಿ ಎಷ್ಟು ಪಕ್ಷಗಳು ಉಳಿಯಬಹುದು ಎನ್ನುವುದು ತಿಳಿಯದು. ‘ಇಂಡಿಯ’ ಮೈತ್ರಿಕೂಟವೆಂಬ ನೌಕೆಯ ನಾವಿಕನಾಗಿರುವ ಕಾಂಗ್ರೆಸ್‌ನ ಬುಡವೇ ಅಲುಗಾಡುತ್ತಿದೆ. ಬೆಂಕಿ ಬಿದ್ದ ಕಟ್ಟಡದಿಂದ ಹೊರ ಹಾರುವಂತೆ ಪ್ರಭಾವಿ ನಾಯಕರು ಒಬ್ಬೊಬ್ಬರಾಗಿ ಪಕ್ಷವನ್ನು ಬಿಡುತ್ತಿದ್ದಾರೆ, ಮೋದಿ ನಾಯಕತ್ವಕ್ಕೆ ಒಲಿದು ಬಿಜೆಪಿಯನ್ನು ಸೇರುತ್ತಿದ್ದಾರೆ. ಮುಂಬೈನ ಪ್ರಭಾವಿ ಕಾಂಗ್ರೆಸಿಗ ಮುರಳಿ ದೆವೋರಾ ಪುತ್ರ ಮಿಲಿಂದ ದೆವೋರಾ, ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಒಂದೆರಡುಉದಾಹರಣೆಗಳು.
ಲಾಲ್ ಬಹಾದುರ್ ಶಾಸ್ತ್ರಿಯವರ ಮೊಮ್ಮಗನೂ ಇದೇ ಹಾದಿ ಹಿಡಿದಿದ್ದಾರೆ. ಸಂಸತ್ ಚುನಾವಣೆಗೆ ನಾಮಪತ್ರ ಸಲ್ಲಿಸುವ ಹೊತ್ತಿಗೆ ಅದೆಷ್ಟು ಜನರು‘ಇಂಡಿಯ’ ಮೈತ್ರಿಕೂಟದಿಂದ ಹೊರಬರುತ್ತಾರೋ ತಿಳಿಯದು. ಹೀಗೆ, ಪ್ರಭಾವಿ ನಾಯಕತ್ವದ ಕೊರತೆ, ಜನತೆ ಒಪ್ಪುವಂಥ ಯಾವುದೇ ಅಜೆಂಡಾ ಇರದಿರುವುದು, ಅಳತೆ ಮೀರಿದ ಸೆಕ್ಯುಲರ್ ಮಂತ್ರಪಠನೆ, ಬಿಜೆಪಿ ಮತ್ತು ಮೋದಿಯವರನ್ನು ಸದಾ ಟೀಕಿಸುವುದು, ವಿರೋಧಿಸುವುದು ‘ಇಂಡಿಯ’ ಮೈತ್ರಿಕೂಟ ಜನಮಾನಸದಲ್ಲಿ ಇಳಿಯದಂತೆ ಮಾಡಿವೆ ಎನ್ನುವ ವಿಶ್ಲೇಷಕರ ಆಭಿಪ್ರಾಯದಲ್ಲಿ ಅರ್ಥ ವಿಲ್ಲದಿಲ್ಲ.
‘ಇಂಡಿಯ’ ಮೈತ್ರಿಕೂಟ ಕ್ಷೀಣಿಸುವುದು ಮತ್ತು ಅದರ ಲಾಭ ಎನ್‌ಡಿಎಗೆ ಅಗುವುದು ಸಾಮಾನ್ಯ ರಾಜಕೀಯ ಪ್ರಕ್ರಿಯೆ. ಬಿಜೆಪಿ ಪಾಲಿಗೆ ಇದು ಹೆಮ್ಮೆಯ ವಿಷಯ ಮತ್ತು ಒಂದು ದೇಶ, ಒಂದು ಪಕ್ಷ ನಿಟ್ಟಿನಲ್ಲಿ ದಾಪುಗಾಲು ಎನ್ನಬಹುದು. ಅದರೆ, ಹಿನ್ನೆಲೆಯನ್ನು ಗಮನಿಸದೆ, ಕುಲ ಗೋತ್ರಗಳನ್ನು ಲೆಕ್ಕಿಸದೆ ಕೇವಲ ಚುನಾವಣೆಯನ್ನು ಗೆಲ್ಲುವ ಏಕಮೇವ ಉದ್ದೇಶದಿಂದ, ಬಾಗಿಲು ಬಡಿದವರನ್ನೆಲ್ಲಾ ಹೀಗೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಮುಂದಿನ ದಿನದಲ್ಲಿ ಪಕ್ಷಕ್ಕೆ ಭಾರಿ ದುಬಾರಿಯಾಗಬಹುದು. ಪಕ್ಷದ ಮೂಲತತ್ವ, ಅದರ್ಶ ಮತ್ತು ನೀತಿ ನಿಯಮಗಳು ವಲಸಿಗರ ಆಗಮನದಿಂದಾಗಿ ತಮ್ಮ ತನವನ್ನು ಕಳೆದುಕೊಳ್ಳುವ ಅತಂಕ ಗೋಚರಿಸುತ್ತಿದೆ.
(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)