ಕೇಂದ್ರದ ಪರಮಾಧಿಕಾರ: ಸಂವಿಧಾನ ಹೇಳುವುದೇನು ?
ಚರ್ಚಾ ವೇದಿಕೆ
ಡಾ.ಸುಧಾಕರ ಹೊಸಳ್ಳಿ
ಕೇಂದ್ರದ ಪರಮಾಧಿಕಾರಯುಕ್ತ ಅಧಿಕಾರ ಚಲಾವಣೆಯೂ ಸಂವಿಧಾನಬದ್ಧವಾಗಿಯೇ ಇರಬೇಕೆಂಬ ನಿಯಮವಿದೆಯಾದರೂ, ರಾಜ್ಯಗಳ ಮೇಲೆ ಅದು ಹೊಂದಿರುವ ದತ್ತವಾದ ಅಧಿಕಾರವನ್ನು ಶಿಥಿಲಗೊಳಿಸಲು ಸಾಂವಿಧಾನಿಕವಾಗಿ ರಾಜ್ಯಗಳಿಗೆ ಅಧಿಕಾರವಿರುವುದಿಲ್ಲ. ರಾಜ್ಯಗಳಿಗೆ ಪರಮಾಧಿ ಕಾರ ಎಂಬುದನ್ನು ಸಂವಿಧಾನ ಕಲ್ಪಿಸಿಲ್ಲ.
ಕರ್ನಾಟಕ ಸರಕಾರವು ತೆರಿಗೆ ತಾರತಮ್ಯದ ಕುರಿತು ಫೆ.೭ರಂದು ದೆಹಲಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದೇ ರೀತಿ ಈಚೆಗೆಕರ್ನಾಟಕದ ಸಂಸದರೊಬ್ಬರು, ಬಜೆಟ್‌ನಲ್ಲಿನ ತಾರತಮ್ಯದ ಕಾರಣ ಮುಂದಿಟ್ಟು ಪ್ರತ್ಯೇಕ ರಾಷ್ಟ್ರದ ಬೇಡಿಕೆಯಿಟ್ಟಿದ್ದು ಬಹುಚರ್ಚಿತ ವಿಷಯ. ಈ ನೆಲೆಯಲ್ಲಿ ಕೇಂದ್ರ-ರಾಜ್ಯದ ಸಾಂವಿಧಾನಿಕ ಸಂಬಂಧಗಳು ಮರು ಚರ್ಚೆಗೆ ಒಳಪಟ್ಟಿವೆ. ಇಂಥ ಉದ್ವಿಗ್ನ ಸ್ಥಿತಿಯಲ್ಲಿ ಸಾಂವಿಧಾನಿಕ ಅವಕಾಶಗಳನ್ನು ಕಾನೂನಿನ ಕಣ್ಣಿನಿಂದ ಅವಲೋಕಿಸುವ, ತರ್ಕಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ರಾಜಕೀಯ ದೃಷ್ಟಿಕೋನವನ್ನು ಹೊರತುಪಡಿಸಿ, ಸಂವಿಧಾನದ ಆಶಯಗಳನ್ನು, ಸಂವಿಧಾನದ ರಚನಾಕಾರರ ಅಭಿಮತವನ್ನು ಹಾಗೂ ಸಾಂವಿ ಧಾನಿಕ ನಿಯಮ ವನ್ನು ಪರಿಶೀಲಿಸಿದರೆ ಕೇಂದ್ರದ ಅಽಕಾರವು ಸಂವಿಧಾನದ ಮೂಲ ರಚನೆಯಲ್ಲಿದೆ. ಸಂವಿಧಾನವು ತನ್ನ ಪರಮಾಧಿಕಾರದ ಅಡಿಯಲ್ಲಿ ಕೇಂದ್ರಕ್ಕೆ ಕೊಟ್ಟಿರುವ ಉಚ್ಚ- ಅಧಿಕಾರವು ಸಂವಿಧಾನದ ಮೂಲರಚನೆ ಅಡಿಯಲ್ಲಿ ಬರುವುದರಿಂದ, ಯಾವುದೇ ಸಂದರ್ಭದಲ್ಲೂ ಇದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲವೆಂದು ೧೯೭೩ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರಕಾರ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾ ಲಯ ತೀರ್ಪು ನೀಡಿದೆ.
ವಾಸ್ತವವಾಗಿ, ಸಂವಿಧಾನ ರಚನಾಕಾರರು ಹಾಗೂ ಸಂವಿಧಾನಶಿಲ್ಪಿ ಅಂಬೇಡ್ಕರರು ಸಂವಿಧಾನ ರಚನೆಯ ಸಂದರ್ಭದಲ್ಲಿ, ‘ಈಗಷ್ಟೇ ತೊಲಗಿರುವ ಪಾರತಂತ್ರ್ಯವನ್ನು ಭಾರತವು ಇನ್ನೆಂದೂ ಮತ್ತೆ ಅನುಭವಿಸಬಾರದೆಂದರೆ, ಈ ದೇಶಕ್ಕೆ ಬಲಿಷ್ಠ ಕೇಂದ್ರ ಸರಕಾರದ ಪದ್ಧತಿಯನ್ನು ಜಾರಿಗೆ ತರಬೇಕು’ ಎಂದು ವಿಸ್ತೃತವಾಗಿ, ವಿಶ್ಲೇಷಣಾತ್ಮಕವಾಗಿ, ತಾಂತ್ರಿಕವಾಗಿ ಚರ್ಚಿಸಿ ಪರಮಾಧಿಕಾರವನ್ನು ಕೇಂದ್ರಕ್ಕೆ ಒಪ್ಪಿಸಿ, ಸಂವಿಧಾನದ ಆದ್ಯ ಭಾಗವನ್ನಾಗಿಸುತ್ತಾರೆ.
ಸುಮಾರು ೫೪೦ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ವಿಘಟಿತವಾಗಿದ್ದ ಪೂರ್ಣಭಾರತವನ್ನು ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಒಟ್ಟುಗೂಡಿಸ ಲಾಗಿದೆ. ರಾಜ್ಯಗಳು ಸಂವಿಧಾನದ ಅಡಿಯಲ್ಲಿ, ಕೇಂದ್ರದ ಪ್ರಭುತ್ವ ಅಥವಾ ಮುಂದಾಳತ್ವದಲ್ಲಿ ಒಟ್ಟುಗೂಡಿವೆ. ಈ ಒಳಿತುಗಳು ಮುಂದುವರಿಯಲು, ಪ್ರಬಲ ಕೇಂದ್ರ ಸರಕಾರದ ಅಗತ್ಯತೆ ಇದ್ದೇ ಇದೆ ಎಂದು ಅಂಬೇಡ್ಕರರು ಸಂವಿಧಾನ ರಚನಾಸಭೆಯಲ್ಲಿ ಸವಿವರವಾಗಿ ಪ್ರತಿಪಾದಿಸಿದ್ದರು. ಸಂವಿಧಾನ ರಚನಾ ಕಾರ್ಯದಲ್ಲಿ ಮಾತಾಡಲು ಅವಕಾಶ ಸಿಕ್ಕಿದಾಗ ಅಂಬೇಡ್ಕರರು ತೀವ್ರ ಪ್ರಾಮುಖ್ಯ ಕೊಟ್ಟು ಪ್ರಸ್ತಾಪ ಮಾಡಿದ ವಿಷಯ ‘ಬಲಿಷ್ಠ ಕೇಂದ್ರ ಸರಕಾರದ ಅಗತ್ಯತೆ’. ಈ ಕುರಿತು ಅವರು ಮಾತು ಮುಂದುವರಿಸಿ ವ್ಯಕ್ತಪಡಿಸಿದ ಅಭಿಪ್ರಾಯಸರಣಿ ಹೀಗಿದೆ:
ನೆಹರುರವರು ಮಂಡಿಸಿದ ಗಣರಾಜ್ಯ ನಿರ್ಣಯವನ್ನು ವಿಮರ್ಶಿಸುತ್ತಾ, ಮಂಡನೆಯಾಗಿರುವ ಈ ನಿರ್ಣಯದಲ್ಲಿ ಒಂದು ಕಡೆ ಕೇಂದ್ರಕ್ಕೂ, ಇನ್ನೊಂದು ಕಡೆ ಪ್ರಾಂತ್ಯಗಳಿಗೂ ನಡುವೆ ಒಂದು ಮಧ್ಯಂತರ ರಚನೆ ಕಾಣುತ್ತದೆ. ಸಂಪುಟದ ನಿಯೋಗದ ಹೇಳಿಕೆಯ ಬೆಳಕಿನಲ್ಲಿ ಈ ಕಂಡಿಕೆಯನ್ನು ಓದಿದಾಗ ಅಥವಾ ವಾರ್ಧಾ ಅಧಿವೇಶನದಲ್ಲಿ ಅಂಗೀಕರಿಸಿದ ನಿರ್ಣಯದ ಬೆಳಕಿನಲ್ಲಿ ಗುರುತಿಸಿದಾಗ, ಗುಂಪುಗೂಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವು ಇಲ್ಲದಿರುವುದಕ್ಕೆ ನನಗೆ ಅಪಾರವಾದ ಆಶ್ಚರ್ಯವಾಯಿತೆಂದು ಒಪ್ಪಿಕೊಳ್ಳಲೇಬೇಕು.
ನಾನು ವೈಯಕ್ತಿಕವಾಗಿ ಹೇಳುವುದಾದರೆ, ಬಲಿಷ್ಠ ಸಂಯುಕ್ತ ಕೇಂದ್ರ ಸರಕಾರವನ್ನು ಇಷ್ಟಪಡುತ್ತೇನೆ. ೧೯೩೫ರ ಭಾರತ ಸರಕಾರ ಕಾಯ್ದೆಯಲ್ಲಿ ಸೃಜಿಸಿದ ಕೇಂದ್ರ ಸರಕಾರಕ್ಕಿಂತ ಹೆಚ್ಚು ಬಲಶಾಲಿಯಾದ ಕೇಂದ್ರ ಸರಕಾರದ ಅಗತ್ಯತೆಯನ್ನು ಪ್ರತಿಪಾದಿಸುತ್ತೇನೆ. ೧೮ ನವೆಂಬರ್ ೧೯೪೯ರಂದು ಸಂವಿಧಾನ ರಚನಾ ಸಭೆ ಸದಸ್ಯರಾದ ಗೋಕುಲ್ ದೌಲತ್ ರಾಮ್ ಭಟ್ ಮಾತನಾಡುತ್ತಾ, ‘ಎಲ್ಲಾ ಅಧಿಕಾರಗಳನ್ನು ಕೇಂದ್ರಕ್ಕೆ ಒಪ್ಪಿಸಲಾಗಿದೆಯೆಂದು ಅನೇಕ ಸ್ನೇಹಿತರು ಹೇಳಿದ್ದಾರೆ. ಆದಾಗ್ಯೂ, ಪ್ರಚಲಿತ ಸನ್ನಿವೇಶಗಳು ಹೇಗಿವೆಯೆಂದರೆ, ಎಲ್ಲಾ ಅಧಿಕಾರಗಳನ್ನು ಕಡೆಯ ಪಕ್ಷ ೧೦ ಅಥವಾ ೧೫ ವರ್ಷ ಗಳ ಕಾಲ ಕೇಂದ್ರಕ್ಕೆ ವಹಿಸಿಕೊಡದಿದ್ದಲ್ಲಿ ರಚನಾತ್ಮಕ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಿರುವುದಿಲ್ಲ ಎಂದು ನಂಬಿದ್ದೇನೆ.
ನಾವು ಯಾವುದನ್ನು ಮರುನಿರ್ಮಾಣ ಮಾಡಬೇಕೆಂದಿದ್ದೇವೆಯೋ ಅದು ಕೇಂದ್ರದ ಸಾಮಾನ್ಯ ನಿಯಂತ್ರಣ ಮತ್ತು ನಿರ್ದೇಶನದಲ್ಲಿ ಇದ್ದರೆ ಮಾತ್ರ ಮುಂದುವರಿಸಿಕೊಂಡು ಹೋಗಬಹುದು, ಇದು ಚಾರಿತ್ರಿಕ ಅಗತ್ಯತೆಯಾಗಿದೆ’ ಎಂದಿದ್ದರು. ಅಂಬೇಡ್ಕರರು ಬಲಿಷ್ಠ ಕೇಂದ್ರ ಸರಕಾರದ ಪ್ರತಿಪಾದನೆ ಯನ್ನು ಮಾಡಿ, ಸಂವಿಧಾನ ರಚನಾ ಸಭೆಯಲ್ಲಿ ಬಹುಮತ ಹೊಂದಿರುವವರು ಬಲಿಷ್ಠ ಕೇಂದ್ರ ಸರಕಾರದ ನಿಯಮಗಳನ್ನು ಸಡಿಲಗೊಳಿಸುತ್ತಿದ್ದಾರೆ, ಇದು ಭವಿಷ್ಯದ ಭಾರತಕ್ಕೆ ಅಪಾಯ ತರಲಿದೆ ಎಂದು ಸದನದಲ್ಲೇ ಗಂಭೀರ ಆರೋಪ ಮಾಡಿದ್ದರು. ಜತೆಗೆ ಸಂಯುಕ್ತ ಮಾದರಿಯ ಸರಕಾರದ ಅಳವಡಿಕೆ ಚರ್ಚೆಯ ಅವಧಿಯಲ್ಲಿ, ಅಮೆರಿಕದ ವಿಪರೀತ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ತಿರಸ್ಕರಿಸುತ್ತಾ, ಅದರ ದೋಷಗಳನ್ನು ಸದನದ ಮುಂದೆಬಿಚ್ಚಿಟ್ಟು, ಅದರ ಬದಲಾಗಿ ಕೆನಡಾ ಮಾದರಿಯ ಅರೆ ಸಂಯುಕ್ತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಅನುಮೋದಿಸಿದ್ದರು.
ಈ ಕಾರಣಕ್ಕಾಗಿಯೇ ಕೇಂದ್ರ ಪಟ್ಟಿ (೯೭ ವಿಷಯಗಳು), ರಾಜ್ಯ ಪಟ್ಟಿ (೬೧ ವಿಷಯಗಳು), ಸಮವರ್ತಿ ಪಟ್ಟಿ (೫೨ ವಿಷಯಗಳು), ನಂತರ ಉಳಿಕೆವಿಷಯಗಳ ಮೇಲೆ ಕೇಂದ್ರಕ್ಕೆ ಅಧಿಕಾರವನ್ನು ನೀಡಲಾಗಿದೆ. ಇದರೊಟ್ಟಿಗೆ ಒಂದೇ ವಿಷಯದ ಮೇಲೆ ಕೇಂದ್ರ ಮತ್ತು ರಾಜ್ಯಗಳೆರಡೂ ಕಾನೂನು ಮಾಡಿದರೆ, ಕೇಂದ್ರದ ಕಾನೂನು ಅಂತಿಮ ಎಂಬ ವಿಧಿಯನ್ನು ಸೇರ್ಪಡೆ ಮಾಡಿದ್ದರು. ಕೇಂದ್ರ ಸರಕಾರವು ೩೬೫ನೇ ವಿಧಿ ಅನ್ವಯ ರಾಜ್ಯಗಳಿಗೆ ನೀಡುವ ಯಾವುದೇ ಸಾಂವಿಧಾನಿಕ ನಿರ್ದೇಶನವನ್ನು ತಿರಸ್ಕರಿಸುವ ಅವಕಾಶ ರಾಜ್ಯಗಳಿಗೆ ಇರುವುದಿಲ್ಲ. ಇದರೊ ಟ್ಟಿಗೆ ಸಂವಿಧಾನ ರಚನಾಸಭೆಯಲ್ಲಿ ಸಂವಿಧಾನದ ಮೂರನೇ ವಿಧಿಯ ಅನುಮೋದನೆ ಸಂದರ್ಭ ೧೯೪೯ರ ವರ್ಷದ ಅಕ್ಟೋಬರ್ -ನವೆಂಬರ್‌ನ ವಿವಿಧ ದಿನಗಳಂದು ಕೇಂದ್ರ ಸರಕಾರಕ್ಕೆ, ರಾಜ್ಯಗಳ ಗಡಿಗಳ ಮರುಸೃಷ್ಟಿ, ರಾಜ್ಯಗಳ ವಿಭಜನೆ, ಕೇಂದ್ರಾಡಳಿತ ಪ್ರದೇಶಗಳ ಸ್ಥಾಪನೆಯ ಅಧಿಕಾರವನ್ನು ಜೋಡಿಸಿ, ಸಾಂವಿಧಾನಿಕ ನಿಯಮಗಳನ್ನು ಮಾಡಲಾಗಿದೆ.
ಭಾರತದ ಸರ್ವೋಚ್ಚ ನ್ಯಾಯಾಲಯವು ‘ಅದಾನಿ ಪವರ್ ಲಿಮಿಟೆಡ್ ವರ್ಸಸ್ ಗುಜರಾತ್ ಎಲೆಕ್ಟ್ರಿಸಿಟಿ ಪ್ರಕರಣ, ೨೦೧೧’, ‘ಬೋರ್ಡ್ ಆ- ಟ್ರೇಡರ್ಸ್ವರ್ಸಸ್ ಚೆನ್ನೈ ಕಂಟೇನರ್ಸ್ ಪ್ರಕರಣ, ೨೦೧೪’ ಮುಂತಾದ ಪ್ರಕರಣಗಳಲ್ಲಿ ಕೇಂದ್ರದ ಮೂರನೇ ವಿಧಿಯ ಅಧಿಕಾರ ವ್ಯಾಪ್ತಿಯನ್ನು ಎತ್ತಿ ಹಿಡಿದಿದೆ.೩೭೦ (ಅ) ಉಪವಿಧಿಯಲ್ಲಿ ಸಂವಿಧಾನದಲ್ಲಿ ಏನೇ ನಿಯಮಗಳಿದ್ದರೂ, ರಾಷ್ಟ್ರಪತಿಯವರ ಅನುಮೋದನೆಯೊಂದಿಗೆ ಕಾಶ್ಮೀರಕ್ಕಿರುವ ವಿಶೇಷ ಸವಲತ್ತನ್ನು ರಾಷ್ಟ್ರಪತಿಗಳ ಆದೇಶದ ಮೂಲಕ ಹಿಂಪಡೆಯಬೇಕೆಂಬ ನಿಯಮವನ್ನು ಅಂಬೇಡ್ಕರರೇ ಅನುಮೋದನೆ ಮಾಡಿದ್ದು ಕೇಂದ್ರದ ಸರ್ವೋಚ್ಚ ಅಧಿಕಾರಕ್ಕೆ ಹಿಡಿದ ಕೈಗನ್ನಡಿ.
ಅದರಂತೆ, ೨೦೧೯ರಲ್ಲಿ ಕಾಶ್ಮೀರಕ್ಕೆ ವಿಶೇಷ ಸವಲತ್ತು ಇತ್ತಿದ್ದ ೩೭೦ನೇ ವಿಧಿ ಮತ್ತು ೩೫ (ಎ) ವಿಽಯನ್ನು ಕೇಂದ್ರ ರದ್ದು ಗೊಳಿಸಲು ಸಾಧ್ಯವಾಯಿತು. ಈ  ಉಪಕ್ರಮದ ನಡೆಯ ವಿರುದ್ಧ ನ್ಯಾಯಾಲಯದ ದಾವೆಗಳನ್ನು ೨೦೨೩ರಲ್ಲಿ ವಜಾಗೊಳಿಸಿ, ಸರ್ವೋಚ್ಚ ನ್ಯಾಯಾಲಯವು ಕೇಂದ್ರದ ಅಧಿಕಾರ ಒಪ್ಪಿದ್ದನ್ನು ಗಮನಿಸಬಹುದು. ಭಾರತದಲ್ಲಿ ಕೇಂದ್ರ ಸರಕಾರಕ್ಕೆ ಮಾತ್ರ ಪರಮಾಧಿಕಾರವಿದ್ದು, ವಿದೇಶಾಂಗ ನೀತಿ, ರಕ್ಷಣೆ, ಸೈನ್ಯ, ವಾಯು ಸಂಬಂಧಿತ ನಿರ್ಧಾರಗಳ ಕಾನೂನು ಮಾಡಲು ಕೇಂದ್ರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತುರ್ತುಪರಿಸ್ಥಿತಿ ಮತ್ತು ವಿಶೇಷ ಸಂದರ್ಭಗಳಲ್ಲಿ ಸಂವಿಧಾನದ ೨೪೯ನೇವಿಧಿಯನ್ವಯ ರಾಜ್ಯಸಭೆಯು ರಾಜ್ಯಪಟ್ಟಿಗಳಲ್ಲಿರುವ ಯಾವುದೇ ವಿಷಯಗಳ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ಮಾಡಲು ಶಿಫಾರಸು ಮಾಡುವ ಅಧಿಕಾರವನ್ನು ಅಂಬೇಡ್ಕರ್ ಅವರೇ ಕೇಂದ್ರಕ್ಕೆ ನೀಡಿದ್ದಾರೆ.
ಜತೆಗೆ ಕೇಂದ್ರ ತನ್ನ ಸಾಂವಿಧಾನಿಕ ಅಧಿಕಾರಗಳನ್ನು ಚಲಾಯಿಸಲು ವಿಶೇಷ ಅವಕಾಶವನ್ನು ಹೊಂದಿದ್ದರೂ, ತನಗಿಷ್ಟ ಬಂದಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಸಂವಿಧಾನ ಅವಕಾಶ ನೀಡಿಲ್ಲ. ೧೨೪ನೇ ವಿಧಿಯ ಐದನೇ ಉಪವಿಧಿಯನ್ವಯ, ನ್ಯಾಯಿಕ ಸ್ವಾತಂತ್ರ್ಯ ಹಾಗೂ ಸಂವಿಧಾನದ ನಾಲ್ಕನೇ ಭಾಗದ ಐದನೇ ಅಧ್ಯಾಯದಲ್ಲಿ ಸಂವಿಧಾನದ ಮರುವ್ಯಾಖ್ಯಾನ ಮತ್ತು ರಕ್ಷಣೆಯ ಹೊಣೆಯನ್ನು ನ್ಯಾಯಾಂಗಕ್ಕೆ ನೀಡಲಾ ಗಿದೆ.
೧೯೭೩ರ ಕೇಶವಾನಂದ ಭಾರತಿ ವರ್ಸಸ್ ಕೇರಳ ಸರಕಾರ ಪ್ರಕರಣದಲ್ಲಿ ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುವ ಎಲ್ಲಾ ಕಾಯ್ದೆಗಳನ್ನು ಅಸಿಂಧು ಗೊಳಿಸುವ ತನ್ನ ಅಧಿಕಾರ ವನ್ನು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಕೇಂದ್ರದ ಪರಮಾಧಿಕಾರಯುಕ್ತ ಅಧಿಕಾರ ಚಲಾವಣೆಯೂ ಸಂವಿ ಧಾನಬದ್ಧವಾಗಿಯೇ ಇರಬೇಕೆಂಬ ನಿಯಮವಿದೆಯಾದರೂ, ರಾಜ್ಯಗಳ ಮೇಲೆ ಅದು ಹೊಂದಿರುವ ದತ್ತವಾದ ಅಧಿಕಾರವನ್ನು ಶಿಥಿಲಗೊಳಿಸಲುಸಾಂವಿಧಾನಿಕವಾಗಿ ರಾಜ್ಯಗಳಿಗೆ ಯಾವುದೇ ಅಧಿಕಾರ ವಿರುವುದಿಲ್ಲ.
ಎನ್.ವಿ.ಗಾಡ್ಗೀಳ್, ಬಿ.ಜಿ. ಖೇರ್, ಪ್ರಭು ದಯಾಳ್ ಹಿಮಂತ್ ಸಿಂಗ್, ಎಚ್.ವಿ. ಪಾಟಸ್ಕರ್, ಬಿ.ಎ. ಮಾಂಡ್ಲೋಯಿ, ಖಂಡುಬಾಯಿ ಕೆ.ದೇಸಾಯಿ, ಪಂಡಿತ್ ಠಾಕೂರ್‌ದಾಸ್ ಭಾರ್ಗವ ಮುಂತಾದವರು ಕೇಂದ್ರದ ಪ್ರಭುತ್ವವನ್ನು ಮಾನ್ಯ ಮಾಡಿದ್ದರು. ಒಟ್ಟಾರೆ, ರಾಜ್ಯ ಸರಕಾರಗಳು ಕೇಂದ್ರದ ಅಧೀನದಲ್ಲೇ ಕಾರ್ಯನಿರ್ವಹಿಸಬೇಕಿದ್ದು, ಯಾವುದೇ ಕಾರಣ ನೀಡಿಯೂ ಒಕ್ಕೂಟ ವ್ಯವಸ್ಥೆಯಿಂದ ಹೊರಬರಲು ಸಂವಿಧಾನದಲ್ಲಿ ಅವಕಾಶವೇ ಇಲ್ಲ. ರಾಜ್ಯಗಳಿಗೆ ಪರಮಾಧಿಕಾರ ಎಂಬುದನ್ನು ಸಂವಿಧಾನ ಕಲ್ಪಿಸಿಲ್ಲ.
(ಆಧಾರ: ‘ಭಾರತ ಸಂವಿಧಾನ ರಚನಾಸಭೆಯ ಚರ್ಚೆಗಳು’ ಸಂಪುಟ ೧ ಮತ್ತು ೮)(ಲೇಖಕರು ಸಂವಿಧಾನತಜ್ಞರು)