ಕನಿಷ್ಠ ಬೆಂಬಲ ಬೆಲೆಯ ಸತ್ಯಾಸತ್ಯತೆ ಅರಿಯೋಣ
ವೀಕೆಂಡ್ ವಿತ್ ಮೋಹನ್
@.
ಭಾರತವು ಸ್ವಾತಂತ್ರ್ಯಪೂರ್ವದಿಂದಲೂ ಕೃಷಿ ಆದಾಯದ ಮೇಲೆ ನಿಂತಿರುವ ರಾಷ್ಟ್ರ; ದೇಶ ಸ್ವತಂತ್ರಗೊಂಡ ನಂತರವೂ, ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಕೃಷಿಯನ್ನು ಮುಂದಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದವು. ಭಾರತದಲ್ಲಿ ಬಹಳ ದಿನಗಳಿಂದ ಕೇಳಿ ಬರುತ್ತಿರುವ ರೈತರ ಆದಾಯದ ಮೂಲಸಮಸ್ಯೆ ಸಣ್ಣ ಕೃಷಿಭೂಮಿ. ದೇಶದ ಶೇ.೭೧ರಷ್ಟು ರೈತರ ಬಳಿ ೨ ಎಕರೆಗಿಂತಲೂ ಕಡಿಮೆ ಕೃಷಿಭೂಮಿ ಇದೆ.
ಅವಿಭಕ್ತ ಕುಟುಂಬದಲ್ಲಿ ಜನಿಸಿದವರು, ತಮ್ಮ ಪೂರ್ವಜರು ಸಂಪಾದಿಸಿದ ಭೂಮಿಯನ್ನು ಅಣ್ಣ-ತಮ್ಮ, ಅಕ್ಕ-ತಂಗಿಯರ ಜತೆ ಹಂಚಿಕೊಂಡ ಪರಿಣಾಮ, ಸಣ್ಣ ಕೃಷಿಭೂಮಿ ಹೊಂದಿದವರ ಸಂಖ್ಯೆ ಏರಿದೆ. ಇದರ ಪರಿಣಾಮವಾಗಿ ಕೃಷಿ ಉತ್ಪನ್ನಗಳಿಗಾಗಿನ ವೆಚ್ಚವು ಅತಿಯಾಗಿ ರೈತನಿಗೆ ಹೊರೆ ಯಾಗಿ ಪರಿಣಮಿಸುತ್ತಿದೆ. ಉದಾಹರಣೆಗೆ, ೧೦ ಎಕರೆ ಜಮೀನನ್ನು ೫ ಜನ ಹಂಚಿಕೊಂಡಿದ್ದರೆ, ೫ ಕೊಳವೆಬಾವಿಯ ಅವಶ್ಯಕತೆ ಇರುತ್ತದೆ. ಇದರಿಂದ ಭೂಮಿಯ ಅಂತರ್ಜಲ ಮಟ್ಟವು ಕುಸಿಯುತ್ತದೆ ಮತ್ತು ರೈತನ ಖರ್ಚು ಹೆಚ್ಚಾಗುತ್ತದೆ. ಆದರೆ ೧೦ ಎಕರೆಯು ಒಬ್ಬರ ಬಳಿಯೇ ಇದ್ದರೆ ಒಂದು ಕೊಳವೆಬಾವಿಯಷ್ಟೇ ಸಾಕಾಗುತ್ತಿತ್ತು. ಜತೆಗೆ ಕೃಷಿ ಸಂಬಂಧಿತ ಖರ್ಚಿನಲ್ಲೂ ಉಳಿತಾಯವಾಗುತ್ತಿತ್ತು.
ಇಸ್ರೇಲ್ ದೇಶವು ಮರುಭೂಮಿಯನ್ನು ಜಗತ್ತಿನ ನಂ.೧ ಕೃಷಿ ತಂತ್ರಜ್ಞಾನದ ದೇಶವನ್ನಾಗಿಸಿದ್ದರ ಹಿಂದಿರುವುದು ಸಾಮೂಹಿಕ ಕೃಷಿಕ್ರಾಂತಿ. ಸಣ್ಣ ಸಣ್ಣ ಭೂಮಿಯನ್ನು ಒಗ್ಗೂಡಿಸಿ ದೊಡ್ಡ ಮಟ್ಟದಲ್ಲಿ ಸಾಮೂಹಿಕ ಕೃಷಿ ಮಾಡಿದ್ದರ ಪರಿಣಾಮ ಅಲ್ಲಿ ಖರ್ಚೂ ತಗ್ಗಿತು, ರೈತರ ಆದಾಯವೂ ಹೆಚ್ಚಿತು.ಮೂಲತಃ ಬಹುಸಂಸ್ಕೃತಿಯ ದೇಶವಾಗಿರುವ ಭಾರತವು ನೂರಾರು ಜಾತಿಗಳಲ್ಲಿ ಹರಿದು ಹಂಚಿಹೋಗಿದೆ. ಇಲ್ಲಿ ಇಸ್ರೇಲ್‌ನಂತೆ ಕೃಷಿಭೂಮಿಯನ್ನು ಒಗ್ಗೂಡಿಸಿ ದೊಡ್ಡಮಟ್ಟದ ಸಾಮೂಹಿಕ ಕೃಷಿ ನಡೆಸುವುದು ಸುಲಭವಲ್ಲ. ಕೃಷಿ ಎಂದಾಕ್ಷಣ ನಮ್ಮಲ್ಲಿ ನೆನಪಾಗುವುದು ಡಾ.ಸ್ವಾಮಿನಾಥನ್. ನೂತನ ಭತ್ತದ ತಳಿಯನ್ನು ಪರಿಚಯಿಸಿ, ಭಾರತವನ್ನು ಜಗತ್ತಿನ ಭತ್ತದ ಕಣಜ ವಾಗಿಸಿದ ಕೀರ್ತಿ ಅವರಿಗೆ ಸಲ್ಲಬೇಕು.
ರೈತರ ಸಮಸ್ಯೆ ಬಗೆ ಹರಿಸಲು ಸ್ವಾಮಿನಾಥನ್ ಆಯೋಗವು ಹಲವಾರು ಶಿಫಾರಸುಗಳನ್ನು ಮಾಡಿತ್ತು; ರೈತರಿಗೆ ಅವರ ಖರ್ಚುವೆಚ್ಚದ ಮೇಲೆಶೇ.೫೦ರಷ್ಟು ಲಾಭ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಘೋಷಿಸು ವುದು ಅದರಲ್ಲಿ ಮುಖ್ಯವಾಗಿತ್ತು. ಜತೆಗೆ, ಬೆಳೆಯ ಇಳುವರಿ ಹೆಚ್ಚಿಸಲು ಅವಶ್ಯವಿರುವ ಹಲವು ಅಂಶಗಳನ್ನು ವರದಿಯಲ್ಲಿ ಸ್ವಾಮಿನಾಥನ್ ಉಲ್ಲೇಖಿಸಿದ್ದರು. ರೈತರ ಸಾಲಮನ್ನಾದಿಂದ ಸಮಸ್ಯೆಗಳು ಬಗೆಹರಿಯುತ್ತವೆ ಎಂಬುದಾಗಿದ್ದರೆ, ಕಳೆದ ೭೫ ವರ್ಷಗಳಲ್ಲಿ ಸರಕಾರಗಳು ಸಾಲಮನ್ನಾ ಮಾಡಿದ ಮೇಲೂ ರೈತರ ಹೋರಾಟಗಳು ನಿಂತಿಲ್ಲ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದರು.
ಕನಿಷ್ಠ ಬೆಂಬಲ ಬೆಲೆಯ ಏರಿಕೆಯ ಜತೆಗೆ, ರೈತರ ಕೃಷಿ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಧನಸಹಾಯ, ರಸಗೊಬ್ಬರದ ಮೇಲಿನ ಸಬ್ಸಿಡಿ, ಗುಣಮಟ್ಟದ ಬೀಜಗಳ ಮಾರಾಟ, ಸಾಗಣೆ ವೆಚ್ಚ ತಗ್ಗಿಸುವ ಕಿಸಾನ್ ರೈಲುಗಳು, ಶೂನ್ಯಬಡ್ಡಿಯ ಸಾಲದ ಯೋಜನೆಗಳನ್ನು ಜಾರಿಗೆ ತಂದರು. ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತಾಗಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ರದ್ದುಗೊಳಿಸಿ, ಮಧ್ಯವರ್ತಿಗಳ ಹಾವಳಿಯನ್ನು ನಿಲ್ಲಿಸಿದ್ದರು.
ಆದರೆ ದೆಹಲಿಯಲ್ಲಿ ಭಾರತೀಯ ಕಿಸಾನ್ ಮೋರ್ಚಾ ೨ ವರ್ಷಗಳ ಹಿಂದೆ ನಡೆಸಿದ ಪ್ರತಿಭಟನೆಯ ಫಲವಾಗಿ ಮೋದಿಯವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೊಮ್ಮೆ ಅವೇ ಸಂಘಟನೆಗಳ ರೈತರು ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿ ಹೊಸ ಬೇಡಿಕೆಗಳೊಂದಿಗೆ ರಸ್ತೆಗಿಳಿದಿದ್ದಾರೆ. ಕೋಟ್ಯಂತರ ರು. ಬೆಲೆಬಾಳುವ ವಿದೇಶಿ ಕಾರುಗಳನ್ನು ಹೊಂದಿರುವ ಈ ರೈತರು, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಹೀಗೆ ಕಾನೂನುಬದ್ಧಗೊಳಿಸಿದರೆ ಸರಕಾರಕ್ಕೆ ಖರೀದಿಸಲು ಹಣಎಲ್ಲಿಂದ ಬರಬೇಕು? ಈ ವರ್ಷದಲ್ಲಿ ಕೇಂದ್ರ ಸರಕಾರದ ಒಟ್ಟಾರೆ ಆಯವ್ಯಯದ ಮೊತ್ತ ೪೫ ಲಕ್ಷ ಕೋಟಿ ತಲುಪಿದೆ; ೨೦೧೯-೨೦ರ ಅಂಕಿ-ಅಂಶದ ಪ್ರಕಾರ, ರೈತರ ಆಗ್ರಹದಂತೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಿ ಖರೀದಿಸಿದರೆ ಅದರ ಮಾರುಕಟ್ಟೆಯ ಮೌಲ್ಯ ೪೦ ಲಕ್ಷ ಕೋಟಿ ತಲುಪಲಿದೆ.
೪೫ ಲಕ್ಷ ಕೋಟಿ ಆಯವ್ಯಯದಲ್ಲಿ ೪೦ ಲಕ್ಷ ಕೋಟಿ ಯಷ್ಟು ಹಣವನ್ನು ರೈತರ ಬೆಳೆ ಖರೀದಿಸಲು ಸರಕಾರ ಬಳಸಿದರೆ, ಉಳಿದ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಿಂದ ಹಣ ತರುವುದು? ಈಗಾಗಲೇ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಸುತ್ತಿರುವ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೌಲ್ಯ ೧೦ ಲಕ್ಷ ಕೋಟಿಗೆ ತಲುಪಿದೆ. ಹೆಚ್ಚಿನ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಡಿ ತಂದಷ್ಟೂ ರೈತರು ದೇಶಾದ್ಯಂತ ಅದೇ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆಗ ಉಳಿದ ಬೆಳೆಗಳ ಉತ್ಪಾದನೆ ಕಡಿಮೆಯಾಗುತ್ತದೆ ಮತ್ತು ಉಳಿದ ಉತ್ಪನ್ನಗಳ ಬೆಲೆಯೇರುತ್ತದೆ.
ಹೂವು ಬೆಳೆಯುವವರು, ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತದೆಯೆಂದು ಹೂವು ಬೆಳೆಯುವುದನ್ನು ನಿಲ್ಲಿಸುತ್ತಾರೆ. ಪರಿಣಾಮ ಹೂವಿನ ಬೆಲೆಯಲ್ಲಿ ಏರಿಕೆಯಾಗುತ್ತದೆ. ರೈತರು ಬೆಳೆ ಬೆಳೆಯುತ್ತಿರುವ ಭೌಗೋಳಿಕ ಪ್ರದೇಶವೇ ಬದಲಾಗ ಬಹುದು. ಒಂದು ಕಾಲದಲ್ಲಿ ಮಲೆನಾಡು ಮತ್ತು ಮಧ್ಯಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಅಡಕೆಯನ್ನು ಬೆಳೆಯ ಲಾಗುತ್ತಿತ್ತು. ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಕೆಯಾಗುತ್ತಿದ್ದಂತೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರೈತರು ಅಡಕೆ ಬೆಳೆಯುತ್ತಿದ್ದಾರೆ.
ಕೆಲವು ವರ್ಷಗಳಲ್ಲಿ ಅಡಕೆ ಉತ್ಪಾದನೆ ಏರಿಕೆಯಾದಂತೆ ಮಾರುಕಟ್ಟೆಯಲ್ಲಿ ಅದರ ಬೆಲೆ ಪಾತಾಳಕ್ಕಿಳಿಯುತ್ತದೆ. ೨೦೧೭ರಲ್ಲಿ, ಡಾ. ಸ್ವಾಮಿನಾಥನ್ ಅವರು, ತಮ್ಮ ವರದಿ ಯಲ್ಲಿ ನೀಡಿದ ಹಲವು ಅಂಶಗಳನ್ನು ಮೋದಿ ಅನುಷ್ಠಾನಕ್ಕೆ ತಂದಿದ್ದಾರೆಂದು ಟ್ವೀಟ್ ಮಾಡಿದ್ದರು. ಕೋಲಾರ ಮಾವಿನಹಣ್ಣುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಕಿಸಾನ್ ರೈಲುಗಳ ಮೂಲಕ ಕಳುಹಿಸಲಾಗುತ್ತಿದೆ. ರೈತರ ಸಾಗಣೆ ವೆಚ್ಚ ಕಡಿಮೆ ಮಾಡಲೆಂದು ರೈಲುಗಳ ಸಂಪರ್ಕಜಾಲವನ್ನು ಉತ್ತಮ ಗೊಳಿಸಲಾಗಿದೆ.
ದೆಹಲಿಯಲ್ಲಿ ಪ್ರತಿಭಟಿಸುತ್ತಿರುವವರ ಬೇಡಿಕೆಗಳು ಕೇವಲ ಕೃಷಿಗೆ ಸಂಬಂಧಿಸಿದ್ದಲ್ಲ; ಕೇಂದ್ರವು ರದ್ದುಗೊಳಿಸಿದ್ದ ಹಳೆ ಪಿಂಚಣಿ ಯೋಜನೆಯನ್ನು ಮತ್ತೊಮ್ಮೆ ಜಾರಿಮಾಡಬೇಕಂತೆ, ಕಾರ್ಮಿಕರ ಕನಿಷ್ಠ ವೇತನವನ್ನು ೨೬,೦೦೦ ರು.ಗೆ ಏರಿಸಬೇಕಂತೆ. ರೈತರ ಹೋರಾಟಕ್ಕೂ ಸರಕಾರಿ ನೌಕರರ ಪಿಂಚಣಿಗೂ ಎಲ್ಲಿಯ ಸಂಬಂಧ? ಕಾರ್ಮಿಕರ ಕನಿಷ್ಠ ವೇತನದ ಬಗ್ಗೆ ಕಾರ್ಮಿಕ ಸಂಘಟನೆಗಳು ದನಿಯೆತ್ತಬೇಕು. ಕೇಂದ್ರವು ಪ್ರತಿಭಟನೆಕಾರರನ್ನುಪ್ರತಿಬಾರಿ ಮಾತುಕತೆಗೆ ಕರೆದಾಗಲೂ ನೂತನ ಬೇಡಿಕೆಗಳು ಬರುತ್ತಲೇ ಇವೆ.
ಸರಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀ ಕರಣವನ್ನು ನಿಲ್ಲಿಸಲು ಆಗ್ರಹಿಸಲಾಗಿದೆ. ಸಂವಿಧಾನದ ಮೂಲ ಭೂತ ಹಕ್ಕುಗಳಲ್ಲಿ ನೌಕರಿ ಮಾಡುವುದನ್ನು ಸೇರಿಸಬೇಕಂತೆ. ರೈತರ ಪಂಪ್‌ಸೆಟ್‌ಗಳಿಗೆ ಅಳವಡಿಸಿರುವ ಸ್ಮಾರ್ಟ್ ಮೀಟರ್ ಅನ್ನು ನಿಷೇಽಸ ಬೇಕಂತೆ. ದೆಹಲಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿ ರುವವರಲ್ಲಿ ಪಂಜಾಬ್ ಮತ್ತು ಹರಿಯಾಣದವರು ಶೇ.೯೦ರಷ್ಟಿದ್ದಾರೆ. ಪಂಜಾಬಿನ ಬಹುತೇಕ ರೈತರು ಸಣ್ಣ ಜಮೀನಿನ ಹಿಡುವಳಿದಾರರಲ್ಲ, ಅವರೆಲ್ಲರೂ ನೂರಾರು ಎಕರೆಯಲ್ಲಿ ಭತ್ತ ಬೆಳೆಯು ತ್ತಿರುವವರು. ಒಂದು ಕಾಲಕ್ಕೆ ಭಾರತೀಯರ ಹಸಿವು ನೀಗಲು ಭತ್ತದ ಬೆಳೆಯನ್ನು ಹೆಚ್ಚು ಪ್ರಚಾರಮಾಡಲಾಗಿತ್ತು. ಆದರೆ ಕಾಲ ಕಳೆದಂತೆ ಅಲ್ಲಿನ ರೈತರು ‘ಮೊನೊ ಬತ್ತದ ಬೆಳೆ’ ಬೆಳೆದು ಅಂತರ್ಜಲ ಮಟ್ಟ ಕುಸಿಯುವಂತೆ ಮಾಡಿದ್ದಾರೆ.
ಈಗ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿಸಿದರೆ, ಭತ್ತದ ಉತ್ಪಾ ದನೆ ಮತ್ತಷ್ಟು ಹೆಚ್ಚಾಗಿ ಅಂರ್ತಜಲ ಮಟ್ಟ ಮತ್ತಷ್ಟು ಕುಸಿ ಯಲಿದೆ. ಈಗಾಗಲೇ ದೇಶಾದ್ಯಂತ ಅನ್ನ ತಿನ್ನುವವರ ಸಂಖ್ಯೆ ೨ ಪಟ್ಟು ಹೆಚಾಗಿದ್ದು, ಭಾರತವು ‘ಮಧುಮೇಹದ ರಾಜಧಾನಿ’ ಯಾಗಿದೆ. ಸಿರಿಧಾನ್ಯಗಳ ಕೃಷಿ ದೊಟ್ಟಮಟ್ಟದಲ್ಲಿ ಕುಸಿದು ಜನರ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರಿದೆ.
ದೇಶವೊಂದನ್ನು ನಡೆಸುವಾಗ ಸರ್ವರ ಒಳಿತೂ ಮುಖ್ಯವಾಗುತ್ತದೆ, ಎಲ್ಲಾ ವರ್ಗದ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಒಂದು ವರ್ಗಕ್ಕೆ ಆಗುವ ಉಪಯೋಗದಿಂದ ಮತ್ತೊಂದು ವರ್ಗಕ್ಕೆ ದುಷ್ಪರಿಣಾಮವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಕೇವಲ ಕ್ರಿಯಾಶೀಲತೆ ಇದ್ದರೆ ಸಾಲದು, ಸಾಮಾನ್ಯ ಜ್ಞಾನವೂ ಬೇಕು. ಪಂಜಾಬ್-ಹರಿಯಾಣದಲ್ಲಿ ಶೇ.೯೦ರಷ್ಟು ಭತ್ತವನ್ನು ಬೆಳೆಯುತ್ತಾರೆ, ಆದರೆ ಅವರಿಗೆ ಅನ್ನ ತಿನ್ನುವ ಅಭ್ಯಾಸ ಮಾತ್ರ ಕಡಿಮೆ. ಆದರೆ ಅಲ್ಲಿ ಅದೇ ಬೆಳೆಯನ್ನು ಹೆಚ್ಚೆಚ್ಚು ಬೆಳೆದು ಅಂತರ್ಜಲಕ್ಕೆ ಹಾನಿಮಾಡಲಾಗುತ್ತಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಹೂವು-ಹಣ್ಣು-ತರಕಾರಿಗಳನ್ನು ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆದು ನೀರನ್ನೂ ಸಂರಕ್ಷಿಸಿ ಹೆಚ್ಚು ಲಾಭ ಪಡೆದು ನೆಮ್ಮದಿಯಾಗಿದ್ದಾರೆ.
ಇದೇ ಮಾದರಿಯನ್ನು ಪಂಜಾಬ್-ಹರಿಯಾಣದ ರೈತರೂ ಅನುಸರಿಸಬೇಕಿದೆ. ಹಳೇ ಮೈಸೂರು ಭಾಗದಲ್ಲಿ ರೈತರು ನೇರವಾಗಿ ಏಜೆಂಟರಿಗೆ ಮಾರುವ ಪದ್ಧತಿ ಹೊಸದೇನಲ್ಲ. ಬಿತ್ತನೆ ಶುರುವಾಗುವ ಮೊದಲೇ ಹಣ್ಣು- ತರಕಾರಿಗಳಿಗೆ ಎಕರೆ ಲೆಕ್ಕದಲ್ಲಿ ಅವರು ಮುಂಗಡ ನೀಡಿ, ಬೆಳೆ ಬಂದ ನಂತರಬಾಕಿಹಣ ನೀಡಿ, ಕಟಾ ವನ್ನು ತಾವೇ ಮಾಡಿಸುವ ಪದ್ಧತಿ ಹತ್ತಾರು ವರ್ಷ ಗಳಿಂದ ಚಾಲ್ತಿ ಯಲ್ಲಿದೆ. ಕೋವಿಡ್ ವೇಳೆ ಕೃಷಿ ಮಾರುಕಟ್ಟೆಗಳು ಸ್ತಬ್ಧ ಗೊಂಡಿದ್ದಾಗ, ರೈತರು ಬೆಂಗಳೂರಿನ ಹಲವು ಉದ್ಯಾನ ಗಳ ಮುಂದೆ ತಮ್ಮ ಬೆಳೆಯನ್ನು ಗಾಡಿಗಳಲ್ಲಿ ತಂದು ಗ್ರಾಹಕರಿಗೆ ನೇರವಾಗಿ ಮಾರುವುದು ಸಾಮಾನ್ಯವಾಗಿತ್ತು; ಹೀಗೆ ಮಾರಿ ಭಾರಿ ಲಾಭ ಗಳಿಸಿದವರು ಸಾಕಷ್ಟಿದ್ದಾರೆ.
ಆದರೆ ರೈತರ ದಾರಿ ತಪ್ಪಿಸಲು ಅದಾನಿ ಮತ್ತು ಅಂಬಾನಿಯನ್ನು ಮಧ್ಯೆ ತಂದು ರಾಜಕಾರಣ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ೫ ದಶಕಗಳ ಹಿಂದಿನಿಂದಲೂ ಟಾಟಾ ಸಮೂಹ ಸಂಸ್ಥೆಗಳು ಕೃಷಿಯಲ್ಲಿ ತೊಡಗಿವೆ. ಸಣ್ಣ ಪುಟ್ಟ ಕಾರ್ಪೊರೇಟ್ ಸಂಸ್ಥೆಗಳು ಹತ್ತಾರು ವರ್ಷಗಳಿಂದ ಕೃಷಿ ಚಟು ವಟಿಕೆಯಲ್ಲಿ ತೊಡಗಿವೆ. ಐಟಿಸಿ ಸಂಸ್ಥೆಯು ರೈತರಿಂದ ನೇರವಾಗಿ ಭತ್ತ ಖರೀದಿಸಿ ಗೋಧಿಹಿಟ್ಟನ್ನು ಉತ್ಪಾದಿಸುತ್ತಿದೆ. ರೈತರಿಂದ ಮೆಣಸಿನಕಾಯಿ ಖರೀದಿಸಿ ಪುಡಿಮಾಡಿ ಮಾರುತ್ತಿರುವ ಎಂಟಿಆರ್ ಸಂಸ್ಥೆ ೩೦ ವರ್ಷಗಳಿಂದ ಅಸ್ತಿತ್ವದಲ್ಲಿದೆ. ನೀಲ್‌ಗಿರೀಸ್ ಸಂಸ್ಥೆ ಸುಮಾರು ೫೦ ವರ್ಷಗಳಿಂದಹೈನುಗಾರರಿಂದ ಹಾಲು ಖರೀದಿಸಿ ಗ್ರಾಹಕರಿಗೆ ಪೂರೈಸುತ್ತಿದೆ.
ಸಣ್ಣ ಕಂಪನಿಗಳು ಸ್ವತಃ ರೈತರಿಗೆ ಬಿತ್ತನೆಗೆ ಮುಂಗಡ ಹಣ ನೀಡಿ, ಫಸಲು ಬಂದ ನಂತರ ಖರೀದಿಸುತ್ತಿವೆ. ಇಷ್ಟಾದರೂ, ಕೇವಲ ಮೋದಿ ಅಧಿಕಾರಕ್ಕೆ ಬಂದ ನಂತರವಷ್ಟೇ ಈ ಖರೀದಿ ನಡೆಯುತ್ತಿದೆ ಯೆಂಬ ಸುಳ್ಳನ್ನು ಹಬ್ಬಿಸಿ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ.