ಪಾಕಿಸ್ತಾನದಲ್ಲಿ ಸಿಂಹಗರ್ಜನೆ ಇನ್ನೂ ಬಾಕಿಯಿದೆ !
ಸಂಗತ
ಡಾ.ವಿಜಯ್ ದರಡಾ
ಸೇನಾಪಡೆ ಮತ್ತು ಐಎಸ್‌ಐನ ಪ್ರಶ್ನಾರ್ಹ ಚಟುವಟಿಕೆಗಳ ಹೊರತಾಗಿಯೂ ನವಾಜ್ ಷರೀಫ್ ಗೆ ಪಾಕಿಸ್ತಾನದ ಇತ್ತೀಚಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಲಭಿಸಿಲ್ಲ. ಪಕ್ಷವನ್ನೇ ನಿಷೇಧಿಸಿದ ಮೇಲೂ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿ ಅತಿದೊಡ್ಡ ‘ಪಕ್ಷ’ವಾಗಿ ಹೊರಹೊಮ್ಮಿದ್ದಾರೆ. ಆದರೆ ಸರಕಾರ ರಚಿಸಲು ಬೇಕಾದಷ್ಟು ಸಂಖ್ಯಾಬಲ ಅವರ ಬಳಿ ಇಲ್ಲ.
ಇಂಥ ಉದಾಹರಣೆ ನಾನು ಜಗತ್ತಿನಲ್ಲೇ ನೋಡಿಲ್ಲ. ಜಾಗತಿಕ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಭ್ಯರ್ಥಿಯೊಬ್ಬ ತಾನು ಚುನಾವಣೆಯಲ್ಲಿ ಗೆದ್ದ ಮೇಲೆ ತನ್ನನ್ನು ಗೆಲ್ಲಿಸಲು ಮತದಾನದ ಪ್ರಕ್ರಿಯೆಯಲ್ಲಿ ವಂಚನೆ ಎಸಗಲಾಗಿದೆ ಎಂದು ಹೇಳಿ ಸೀಟು ತ್ಯಾಗ ಮಾಡಿದ್ದನ್ನು ನೀವು ಎಲ್ಲಾದರೂ ಕೇಳಿದ್ದೀರಾ?ನಾನಂತೂ ಕೇಳಿಲ್ಲ. ಆದರೆ ಇಂಥದ್ದೊಂದು ಅಸಾಮಾನ್ಯ ಹಾಗೂ ಅದ್ಭುತ ಬೆಳವಣಿಗೆ ಪಾಕಿಸ್ತಾನದಲ್ಲಿ ನಡೆದಿದೆ.
ಪಾಕಿಸ್ತಾನದ ಚುನಾವಣಾ ಆಯೋಗವು ಜಮಿಯತ್-ಎ-ಇಸ್ಲಾಮಿ ನಾಯಕ ಹಫೀಜ್ ನಯೀಮ್ ಉರ್ ರೆಹಮಾನ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿತ್ತು. ಆದರೆ ಬಳಿಕ ಈ ಜಯ ಚುನಾವಣಾ ಅಕ್ರಮದಿಂದ ಆಗಿದೆ ಎಂದು ಪ್ರಕಟಿಸಿತು. ಅದಕ್ಕೂ ಮುನ್ನ ಸ್ವತಃ ರೆಹಮಾನ್ ಅವರೇ ತಮಗೆ೨೬,೦೦೦ ಮತಗಳು ಮಾತ್ರ ಬಂದಿವೆ, ಆದರೆ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ -ಎ-ಇನ್ಸಾಫ್ ಪಕ್ಷದಿಂದ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸೈಫ್ ಬಾರಿ ೩೧,೦೦೦ ಮತ ಗಳಿಸಿದ್ದಾರೆ ಎಂದು ಹೇಳಿದ್ದರು.
ಆಘಾತಕಾರಿ ಸಂಗತಿಯೆಂದರೆ, ಚುನಾವಣಾ ಅಕ್ರಮದಿಂದಾಗಿ ಸೈಫ್ ಬಾರಿಯವರು ಸೋತಿದ್ದಾರೆಂದೂ, ರೆಹಮಾನ್ ಗೆದ್ದಿದ್ದಾರೆಂದೂ ಫಲಿತಾಂಶ ಬಂದಿತ್ತು. ಸೈಫ್ ಬಾರಿ ಕೇವಲ ೧೧,೦೦೦ ಮತ ಗಳಿಸಿದ್ದಾರೆಂದು ಚುನಾವಣಾ ಆಯೋಗ ಹೇಳಿತ್ತು. ಇದನ್ನೆಲ್ಲ ನೋಡಿ ಬೇಸತ್ತ, ಸ್ವತಃ ಚುನಾವಣಾ ಆಯೋಗ ದಿಂದಲೇ ವಿಜಯಿ ಎಂದು ಘೋಷಿಸಲ್ಪಟ್ಟ ರೆಹಮಾನ್ ಅವರು ತಮಗೆ ಇಂಥ ಗೆಲುವು ಬೇಕಾಗಿಯೇ ಇಲ್ಲ ಎಂದು ಬಹಿರಂಗವಾಗಿ ತಿರಸ್ಕರಿಸಿದರು. ಆದರೂ ಮಜಾ ನೋಡಿ. ರೆಹಮಾನ್ ಮಾಡಿದ ಆರೋಪವನ್ನು ಪಾಕಿಸ್ತಾನದ ಚುನಾವಣಾ ಆಯೋಗ ತಿರಸ್ಕರಿಸಿತು. ಆದರೆ ಅವರು ಮಾಡಿದ ಆರೋಪಗಳು ಪಾಕಿಸ್ತಾನದಾದ್ಯಂತ ದೊಡ್ಡ ಚರ್ಚೆ ಹುಟ್ಟುಹಾಕಿದವು.
ಜನರು ರೊಚ್ಚಿಗೆದ್ದರು. ಐಎಸ್‌ಐ ಮತ್ತು ಸೇನಾ ಪಡೆಯಿಂದ ನಿಯಂತ್ರಿಸಲ್ಪಡುವ ಪಾಕಿಸ್ತಾನದ ಚುನಾವಣಾ ಆಯೋಗವು ಇಂಥ ಸಾಕಷ್ಟು ಅಕ್ರಮಗಳನ್ನು ರಾಜಾರೋಷ ವಾಗಿ ಮಾಡುತ್ತಿದೆ ಎಂದು ಹಾದಿಬೀದಿಯಲ್ಲಿ, ಟಿವಿ ಚಾನಲ್ಲುಗಳಲ್ಲಿ ಚರ್ಚೆಗಳು ನಡೆದವು! ಹೀಗೆ ಚುನಾವಣಾ ಅಕ್ರಮಗಳನ್ನು ನಡೆಸಿದ್ದರೂ ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷ ದಿಂದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಗರಿಷ್ಠ ಸ್ಥಾನಗಳನ್ನು ಪಡೆದಿದ್ದರು. ತನ್ಮೂಲಕ, ಬೋನಿನಲ್ಲಿ ಕೂಡಿಹಾಕಿದ್ದರೂ ಇಮ್ರಾನ್ ಖಾನ್ ಎಂಬ ಸಿಂಹದ ಗರ್ಜನೆ ಇನ್ನೂ ಪಾಕಿಸ್ತಾನದ ಮೂಲೆಮೂಲೆಗಳಲ್ಲಿ ಅನುರಣಿಸಲಿದೆ ಎಂಬುದರ ಸುಳಿವು ನೀಡಿದ್ದರು.
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸದ್ಯ ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ಅವರ ರಾಜಕೀಯ ಪಕ್ಷ ಪಿಟಿಐ ಮಾನ್ಯತೆ ಕಳೆದುಕೊಂಡಿದೆ.ಇಮ್ರಾನ್ ಖಾನ್ ನನಗೆ ಬಹಳ ಚೆನ್ನಾಗಿ ಗೊತ್ತು. ಅವರ ಸ್ವಭಾವ ಹಾಗೂ ಕಾರ್ಯಶೈಲಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರು ಕ್ರಿಕೆಟ್ ಆಟಗಾರನಾಗಿದ್ದಾಗಲೇ ಮೊದಲ ಬಾರಿ ಭೇಟಿಯಾಗಿದ್ದೆ. ನಂತರ ರಾಜಕೀಯಕ್ಕೆ ಸೇರಿದ ಮೇಲೂ ಸಾಕಷ್ಟು ಬಾರಿ ಅವರ ಜತೆ ಮಾತುಕತೆ ನಡೆಸಿದ್ದೇನೆ.ಪಾಕಿಸ್ತಾನವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಬೇಕು ಎಂಬ ಅದಮ್ಯ ತುಡಿತವೇ ಅವರು ರಾಜಕೀಯಕ್ಕೆ ಬರುವಂತೆ ಮಾಡಿತ್ತು. ಇಲ್ಲವಾದರೆ ವೈಯಕ್ತಿಕವಾಗಿ ಆತ ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದವರು.
ಖಾಸಗಿ ಬದುಕಿ ನಲ್ಲಿ ಸಾಕಷ್ಟು ಶ್ರೀಮಂತಿಕೆ, ಪ್ರಭಾವ ಹಾಗೂ ಖ್ಯಾತಿಯನ್ನು ಹೊಂದಿದ್ದ ವ್ಯಕ್ತಿ. ಹೀಗಾಗಿ ರಾಜಕೀಯಕ್ಕೆ ಬಂದು ಹಣ ಅಥವಾ ಹೆಸರು ಮಾಡಬೇಕೆಂಬ ದರ್ದು ಅವರಿಗಿರಲಿಲ್ಲ. ಆದರೆ, ಭಾರತದಲ್ಲಿ ೨೦೧೪ರಲ್ಲಿ ಯುವಕರು, ಉದ್ದಿಮೆಗಳು ಹಾಗೂ ಜನಸಾಮಾನ್ಯರು ನರೇಂದ್ರ ಮೋದಿ ಯವರ ಪರ ನಿಂತು ಚುನಾವಣೆಯಲ್ಲಿ ಹೇಗೆ ಬಹುದೊಡ್ಡ ಅಲೆ ಎಬ್ಬಿಸಿದ್ದರೋ ಹಾಗೆಯೇ ೨೦೧೮ರ ಲೋಕಸಭೆ ಚುನಾವಣೆಯಲ್ಲಿ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪರ ದೊಡ್ಡದೊಂದು ಅಲೆಯೆದ್ದಿತ್ತು. ವಿಶೇಷವಾಗಿ ದೇಶದ ಯುವಕರೆಲ್ಲ ಇಮ್ರಾನ್ ಪರ ನಿಂತಿದ್ದರು.
ಕ್ಯಾನ್ಸರ್ ಹಾಗೂ ಇನ್ನಿತರ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಇಮ್ರಾನ್ ಖಾನ್ ತಮ್ಮ ತಾಯಿಯ ನೆನಪಿನಲ್ಲಿ ಸ್ವಂತ ಹಣದಲ್ಲಿ ಪಾಕಿಸ್ತಾನ ದಲ್ಲೊಂದು ಬೃಹತ್ ಹಾಗೂ ಅತ್ಯಾಧುನಿಕವಾದ ಆಸ್ಪತ್ರೆ ಕಟ್ಟಿಸಿದ್ದರು. ಅದರ ಜತೆಗೆ ಸಾಕಷ್ಟು ಶಾಲೆ ಮತ್ತು ಕಾಲೇಜುಗಳನ್ನು ಕಟ್ಟಿಸಿದ್ದರು. ಮುಂದೆ ಪಾಕಿಸ್ತಾನದ ಯುವಕರಿಗೆ ಜಗತ್ತಿನಾದ್ಯಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಒಳ್ಳೆಯ ತರಬೇತಿ ಕೊಡಿಸುವುದಕ್ಕಾಗಿ ಎಲ್ಲಾ ಕಡೆ ಕೌಶಲಾಭಿವೃದ್ಧಿಕೇಂದ್ರಗಳನ್ನು ನಿರ್ಮಿಸುವವರಿದ್ದರು. ಇದಕ್ಕೆಲ್ಲ ಅವರು ಭಾರತದ ನೆರವು ಬಯಸಿದ್ದರು. ಅದು ಅವರ ಬೆಂಬಲಿಗರಲ್ಲೇ ಅಚ್ಚರಿ ಮೂಡಿಸಿತ್ತು.
ಪಾಕಿಸ್ತಾನದ ಶತ್ರುದೇಶವಾದ ಭಾರತದ ಜತೆಗೇ ಅವರು ಕೈಜೋಡಿಸಲು ಹೊರಟಿದ್ದಾರಲ್ಲ ಎಂದು ಎಲ್ಲರೂ ಹುಬ್ಬೇರಿಸಿದ್ದರು. ಭಾರತದ ಬಗ್ಗೆ ಅವರ ರಾಜಕೀಯ ನಿಲುವು ನಿಜವಾಗಿಯೂ ಏನು ಎಂಬುದು ಇಂದಿಗೂ ಪಾಕಿಸ್ತಾನೀಯರಿಗೆ ಅರ್ಥವಾಗಿಲ್ಲ!
ಅದು ಬಿಡಿ. ೨೦೧೮ರ ಚುನಾವಣೆಗೂ ಮುನ್ನ ಇಮ್ರಾನ್ ಖಾನ್ ಪರ ರಾಜಕೀಯ ಅಲೆ ಜೋರಾಗಿತ್ತು. ಮೊದಲಿಗೆ, ಎಂದಿನಂತೆ, ಇಮ್ರಾನ್ ಖಾನ್ ಕೂಡ ತಮ್ಮ ಕೈಗೊಂಬೆಯಾಗುತ್ತಾರೆ ಎಂದು ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐ ಹಾಗೂ ಸೇನಾಪಡೆಗಳು ಎಣಿಸಿದ್ದವು. ಆದರೆ ಇಮ್ರಾನ್ ಖಾನ್‌ರ ಖ್ಯಾತಿ ಅದನ್ನು ಮೀರಿ ಬೆಳೆಯಿತು. ಹೀಗಾಗಿ ಐಎಸ್‌ಐ ಮತ್ತು ಸೇನಾಪಡೆಗಳು ಸಿಟ್ಟಾದವು. ಚುನಾವಣೆಯಲ್ಲಿ ಗೆದ್ದು ಸರಕಾರ ರಚಿಸಿದ ಮೇಲೆ ಇಮ್ರಾನ್ ಖಾನ್ ಅಮೆರಿಕದ ಜತೆಗೆ ಸಮಾನ ಸಂಬಂಧ ಬಯಸಿದರು. ಆಗ ಅವರ ಮೇಲೆ ಪ್ರಭಾವ ಬೀರಲು ಚೀನಾ ಪ್ರಯತ್ನಿಸಿತು.
ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯವರು ಇಮ್ರಾನ್ ಖಾನ್ ಚೀನಾದ ಜತೆ ಕೈಜೋಡಿಸಬೇಕೆಂದು ಬಯಸಿದರು. ಆದರೆ ಇಮ್ರಾನ್ ನಿರಾಕರಿಸಿದರು. ಪರಿಣಾಮ, ಅವರನ್ನು ಕೆಳಗಿಳಿಸಿ ಜೈಲಿಗೆ ತಳ್ಳಲು ಸಂಚು ತಯಾರಾಯಿತು. ಅವರನ್ನು ಪದಚ್ಯುತ ಗೊಳಿಸಲು ಪರಮ ಶತ್ರುಗಳಾದ ನವಾಜ್ ಷರೀಫ್  ಮತ್ತು ಬಿಲಾವಲ್ ಭುಟ್ಟೋ ಒಂದಾದರು. ನವಾಜ್ ಷರೀಫ್ ಅವರ ತಮ್ಮ ಶಹಬಾಜ್ ಷರೀಫ್ ಪ್ರಧಾನಿಯಾದರು. ಅದಕ್ಕೂ ಮೊದಲೇ ಸಾಕಷ್ಟು ಪ್ರಕರಣಗಳಲ್ಲಿ ಅಪರಾಧಿಯಾಗಿ ನವಾಜ್ ಷರೀಫ್ ಜೈಲಿಗೆ ಹೋಗಿದ್ದರು. ಆದರೂ ಸಾಕಷ್ಟು ಕಸರತ್ತು ಮಾಡಿ ಅವುಗಳಿಂದ ಖುಲಾಸೆಯಾಗಿ ಹೊರಬಂದಿದ್ದರು.
೨೦೨೨ರಲ್ಲಿ ಅದೇ ರೀತಿ ಇಮ್ರಾನ್ ಖಾನ್ ಜೈಲಿಗೆ ಹೋಗಿ ಪ್ರತಿಷ್ಠಾಪನೆಯಾದರು! ಈ ಬಾರಿಯ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಮ್ರಾನ್ ಖಾನ್‌ಗೆ ೩೧ ವರ್ಷಗಳ ಜೈಲುಶಿಕ್ಷೆ ವಿಽಸಲಾಯಿತು. ಆದರೆ ಅವರು ಸಿಡಿದೇಳುತ್ತಾರೆಂಬ ಭೀತಿ ಸೇನಾಪಡೆ ಹಾಗೂ ಐಎಸ್‌ಐಗೆ ಇತ್ತು. ಆದ್ದರಿಂದಲೇ ಅವರ ರಾಜಕೀಯ ಪಕ್ಷವಾದ ಪಿಟಿಐ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ನಿಷೇಧ ಹೇರಲಾಯಿತು. ಅವರ ಚುನಾವಣಾ ಚಿಹ್ನೆಯಾದ ಕ್ರಿಕೆಟ್ ಬ್ಯಾಟ್ ಕೂಡ ಜಪ್ತಿ ಮಾಡಲಾಯಿತು. ಇಮ್ರಾನ್ ಖಾನ್ ಅಪರಾಧ ಮಾಡಿದ್ದಾರೆಂದೇ ಇಟ್ಟುಕೊಳ್ಳೋಣ. ಅದಕ್ಕೆ ಶಿಕ್ಷೆಯಾಗಿ ಅವರ ರಾಜಕೀಯ ಪಕ್ಷವನ್ನು ಹೇಗೆ ನಿಷೇಧಿಸಲು ಸಾಧ್ಯ? ಆದರೆ ಐಎಸ್‌ಐ ಮತ್ತು ಸೇನಾಪಡೆ ಈ ಕೆಲಸವನ್ನೂ ಮಾಡಿದವು.
ಏಕೆಂದರೆ ಇಮ್ರಾನ್ ಖಾನ್ ತಮ್ಮ ರಾಜಕೀಯದ ಅವಧಿಯಲ್ಲಿ ಪಾಕಿಸ್ತಾನದ ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಸರ್ವಾಧಿಕಾರಿಗಳಿಗೆ ಇಂಥ ಬೆಳವಣಿಗೆಗಳು ಭಯ ಹುಟ್ಟಿಸುತ್ತವೆ. ಅವರ ಭಯಕ್ಕೆ ಇಮ್ರಾನ್ ಖಾನ್ ಸಂತ್ರಸ್ತರಾಗಬೇಕಾಯಿತು. ಆದರೆ ಇಮ್ರಾನ್ ಖಾನ್ ಸುಲಭಕ್ಕೆ ಸೋಲು ಒಪ್ಪಿಕೊಳ್ಳುವ ವರಲ್ಲ. ಕ್ರಿಕೆಟಿಗನಾಗಿದ್ದಾಗಿನಿಂದಲೂ ಅವರು ಎದುರಾಳಿಗೆ ತೀಕ್ಷ್ಣ ಸ್ಪರ್ಧೆಯೊಡ್ಡುವುದಕ್ಕೆ ಪ್ರಸಿದ್ಧರು. ಮೈದಾನದಲ್ಲಿ ಅವರು ಮಾರಕ ದಾಳಿಯ ಬೌಲರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದರು. ವಿಕೆಟ್ ಕೀಳುವವರೆಗೆ ಅಥವಾ ಬಾಲನ್ನು ಬೌಂಡರಿಯ ಆಚೆ ಅಟ್ಟುವವರೆಗೆ ಅವರು ಸುಮ್ಮನೆ ಕುಳಿತವರೇ ಅಲ್ಲ. ಅದೇ ಮಾರಣಾಂತಿಕ ಆಟದ ಶೈಲಿ ಅವರ ರಾಜಕೀಯ ಜೀವನದಲ್ಲೂ ಕಾಣಿಸುತ್ತದೆ.
ತಮ್ಮನ್ನು ಜೈಲಿಗೆ ಹಾಕುವುದಕ್ಕಿಂತ ಹಾಗೂ ತಮ್ಮ ರಾಜಕೀಯ ಪಕ್ಷವನ್ನು ನಿಷೇಧಿಸುವುದಕ್ಕಿಂತ ಮೊದಲೇ ಅವರಿಗೆ ಈ ಚುನಾವಣೆಗೂ ಮುನ್ನ ಏನೇನು ಆಗುವುದಿದೆ ಎಂಬುದು ಗೊತ್ತಿದ್ದಂತಿತ್ತು. ಹೀಗಾಗಿಯೇ ಅವರು ಒಳಗೊಳಗೇ ಎಲ್ಲಾ ಸಿದ್ಧತೆ ಮಾಡಿ ಕೊಳ್ಳುತ್ತಿದ್ದರು. ತಮ್ಮ ಪಕ್ಷವನ್ನು ಚುನಾವಣಾ ಆಯೋಗ ನಿಷೇಧಿಸುತ್ತಿದ್ದಂತೆ ಬೆಂಬಲಿಗರಿಗೆ ಈ ಬಾರಿ ನಾವು ಸ್ವತಂತ್ರರಾಗಿ ಸ್ಪರ್ಧಿಸಬೇಕು ಎಂದು ಸೂಚನೆ ನೀಡಿದರು. ಹೀಗಾಗಿ ಅವರಅಭ್ಯರ್ಥಿಗಳೆಲ್ಲ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ ದರು. ನಂತರ ಅವರು ಚುನಾವಣಾ ಪ್ರಚಾರಕ್ಕೆ ಹೋಗುವುದನ್ನು ಕೂಡ ತಡೆಯುವ ಪ್ರಯತ್ನಗಳು ನಡೆದವು. ಸಾಕಷ್ಟು ಅಡೆತಡೆಗಳು ಎದುರಾದವು. ಆದರೆ ಪಾಕಿಸ್ತಾನದ ಯುವಕರು ಇಮ್ರಾನ್ ಖಾನ್ ಪರ ನಿಂತರು. ಅವರನ್ನೇ ಮತ್ತೆ ಅಧಿಕಾರಕ್ಕೆ ತರಲು ಯುವಕರು ಸಂಕಲ್ಪ ಮಾಡಿದ್ದರು. ಹೀಗಾಗಿಯೇ, ಇಮ್ರಾನ್ ಖಾನ್‌ರ ಅಭ್ಯರ್ಥಿಗಳನ್ನು ಸೋಲಿಸಲು ಸಾಕಷ್ಟು ಚುನಾವಣಾ ಅಕ್ರಮಗಳು ನಡೆದ ಮೇಲೂ ಇಡೀ ಪಾಕಿಸ್ತಾನ ಅಚ್ಚರಿಪಡುವ ಫಲಿತಾಂಶ ಬಂದಿತು. ೨೬೫ ಸದಸ್ಯ ಬಲದ ರಾಷ್ಟ್ರೀಯ ಸಂಸತ್ತಿನಲ್ಲಿ ಪಿಟಿಐ ಪಕ್ಷದ ಬೆಂಬಲಿತ ಅಭ್ಯರ್ಥಿ ಗಳು ೯೩ ಮಂದಿ ಗೆದ್ದಿದ್ದರು. ಆದರೆ ವಾಸ್ತವದಲ್ಲಿ ನಾವು ಇದಕ್ಕಿಂತ ಸಾಕಷ್ಟು ಹೆಚ್ಚು ಸ್ಥಾನ ಗೆದ್ದಿದ್ದೇವೆಂದು ಇಮ್ರಾನ್ಖಾನ್ ಹೇಳುತ್ತಾರೆ.
ನವಾಜ್ ಷರೀಫ್ ಅವರ ಪಿಎಂಎಲ್ (ಎನ್) ಪಕ್ಷ ಕೇವಲ ೭೫ ಸೀಟು ಗೆದ್ದಿತು. ಬಿಲಾವಲ್ ಭುಟ್ಟೋ ಅವರ ಪಿಪಿಪಿ ಕೇವಲ ೫೪ ಸೀಟು ಗೆದ್ದಿತು. ಮಹಿಳೆಯರು ಮತ್ತು ಮುಸ್ಲಿಮೇತರರಿಗೆಂದು ಮೀಸಲಿಟ್ಟಿರುವ ೭೦ ಸೀಟು ಗಳು ಇಮ್ರಾನ್ ಖಾನ್‌ಗೆ ಸಿಗುವುದಿಲ್ಲ. ಹೀಗಾಗಿ ಅವರು ಅಧಿಕಾರಕ್ಕೆ ಬರುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ವಾಗಿದೆ. ಆದರೆ ಚುನಾವಣೆಯಲ್ಲಿ ಅವರು ಪಾಕಿಸ್ತಾನ ದಾದ್ಯಂತ ಪ್ರಜಾಪ್ರಭುತ್ವದ ಬಗ್ಗೆ ಮೂಡಿಸಿದ ಜಾಗೃತಿ ಬಹಳ ದೊಡ್ಡದು. ಹೀಗಾಗಿ ಅವರ ಪರವಾಗಿ ದೇಶದ ಎಲ್ಲೆಡೆ ದೊಡ್ಡ ದೊಡ್ಡ ಸಮಾವೇಶಗಳು, ಜಾಥಾಗಳು ಹಾಗೂ ರ‍್ಯಾಲಿಗಳು ನಡೆಯುತ್ತಿವೆ. ಇಮ್ರಾನ್ ಖಾನ್ ಮತ್ತೆ ಪ್ರಧಾನಿಯಾಗ ಬೇಕೆಂದು ಪಾಕಿಸ್ತಾನದ ಜನರು ಬಯಸುತ್ತಿದ್ದಾರೆ. ಆದರೆ ನಮ್ಮ ನೆರೆದೇಶದ ಸೋದರ ಸೋದರಿಯರ ಅದೃಷ್ಟ ಚೆನ್ನಾಗಿಲ್ಲ. ಈ ಫಲಿತಾಂಶವನ್ನಿಟ್ಟುಕೊಂಡು ಅವರು ಇಮ್ರಾನ್ ಖಾನ್‌ರನ್ನು ಮತ್ತೆ ಕುರ್ಚಿ ಮೇಲೆ ಕೂರಿಸಲು ಸಾಧ್ಯವಿಲ್ಲ.
ಪಾಕಿಸ್ತಾನೀಯರು ಅಭಿವೃದ್ಧಿಯ ಹಾದಿಯಲ್ಲಿ ನಡೆಯಲು ಇನ್ನೆಷ್ಟು ವರ್ಷ ಬೇಕೋ ಯಾರಿಗೆ ಗೊತ್ತು! ಅಲ್ಲಿನ ಜನರನ್ನು ದೇವರೇ ಕಾಪಾಡಲಿ!
(ಲೇಖಕರು ಹಿರಿಯ ಪತ್ರಕರ್ತರು)