ಗುತ್ತಿಗೆದಾರರ ಪಾಲಿನ ಸ್ವರ್ಗವಾದ ಎತ್ತಿನಹೊಳೆ ಯೋಜನೆ !
ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಎತ್ತಿನಹೊಳೆ ಯೋಜನೆಯಲ್ಲಿ ಜನೋಪಯೋಗಿ ಕೆಲಸವಾಗುತ್ತಿದೆ ಅಂದುಕೊಂಡರೂ ಈ ಮೂಲಕ ಪರಿಸರ ನಾಶಕ್ಕೆ ಕೈಹಾಕಿದ್ದು ಯಾಕೆ ಎಂದು ಜನರು, ಪರಿಸರ ತಜ್ಞರು ಆಕ್ರೋಶಭರಿತರಾಗಿ ಪ್ರಶ್ನಿಸುತ್ತಿದ್ದಾರೆ. ಕಾರಣ, ಇದುವರೆಗೂ ೩,೦೦೦ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ. ಇನ್ನೂ ೨,೩೦೦ಕ್ಕೂ ಹೆಚ್ಚು ಮರಗಳು ಜೀವ ಕಳೆದುಕೊಳ್ಳಲಿವೆ. ಇದಕ್ಕೆ ಪೂರಕವಾಗಿ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರುವುದು ಕೂಡ ಈ ಯೋಜನೆಯೆಡೆಗಿನ ನಿರ್ಲಕ್ಷವನ್ನು ತೋರಿಸುತ್ತದೆ.
ತಮ್ಮ ಕಷ್ಟಗಳನ್ನು ತೊಡೆದು ಸಾಮಾಜಿಕ ಬದುಕಿಗೆ ಒಂದಿಷ್ಟು ಅನುಕೂಲ ಮಾಡಿಕೊಡುತ್ತಾರೆಂಬ ಭರವಸೆಯೊಂದಿಗೆ ಜನರು ತಮ್ಮ ಪ್ರತಿನಿಧಿಯನ್ನು ಚುನಾಯಿಸುತ್ತಾರೆ. ಹೀಗೆ ಚುನಾಯಿತರಾದವರು ಜನರ ಸಮಸ್ಯೆಗಳನ್ನು ಕಡಿಮೆ ಮಾಡಬೇಕೇ ಹೊರತು, ಇರುವ ಸಂಪನ್ಮೂಲಗಳನ್ನು ನಾಶ ಮಾಡುವಂಥ ಮತ್ತು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುವಂಥ ಕೆಲಸ ಮಾಡಬಾರದು; ಇದು ಜನಸೇವೆಗೆಂದು ದೊಡ್ಡ ಹುದ್ದೆಗೆ ಸೇರುವ ಅಧಿಕಾರಿ ಗಳಿಗೂ ಅನ್ವಯಿಸುವ ಮಾತು.
ಹೀಗೆನ್ನಲು ಒಂದು ಕಾರಣವಿದೆ. ಇದಕ್ಕೆ ಅತ್ಯಂತ ಸೂಕ್ತ ಉದಾಹರಣೆ- ರಾಜ್ಯದ ಪ್ರತಿಷ್ಠಿತ ಎತ್ತಿನಹೊಳೆ ನೀರಾವರಿ ಯೋಜನೆ. ಆಳುವವರಿಗೆ ಸಾಮಾಜಿಕ ಜವಾಬ್ದಾರಿಯ ಜತೆಗೆ ಪರಿಸರ ಪ್ರಜ್ಞೆ, ನಿಸರ್ಗದ ಮೇಲಿನ ಕಾಳಜಿಯೂ ಇರಬೇಕಲ್ಲವೇ? ಸಸ್ಯಸಂಕುಲವನ್ನು ನೆಟ್ಟು ಬೆಳೆಸದೆ, ಸಾಲು ಮರದ ತಿಮ್ಮಕ್ಕನಂಥವರನ್ನು ಹುಡುಕಿ ಅವರಿಗೆ ಪ್ರಶಸ್ತಿ ಕೊಟ್ಟು, ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದೇ ಈಗ ಕೆಲವರ ಬಹುದೊಡ್ಡ ಸಾಧನೆಯಾಗಿಬಿಟ್ಟಿದೆ. ಸಕಲ ಜೀವರಾಶಿಗೂ ಜೀವವಾಯು ಕೊಟ್ಟು ಪೋಷಿಸುವ ಮರಗಳನ್ನು/ಕಾಡುಗಳನ್ನು ಕಡಿಯುವ ಹಾಗೂ ಪರಿಸರ ಮತ್ತು ಜಲಚಕ್ರವನ್ನು ಅರಿಯದೇ, ಜನರ ದುಡ್ಡಿನಲ್ಲಿ ಲಾಭಾಂಶಗಳನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸುವ ಸರಕಾರಗಳಿಗೆ ಜನರೇ ಉತ್ತರಿಸಬೇಕಿದೆ.
ನಾನಿಲ್ಲಿ ಆ ಪಕ್ಷ ಈ ಪಕ್ಷ ಎನ್ನುತ್ತ ಸರಕಾರಗಳ ಸರಿ-ತಪ್ಪುಗಳ ಬಗ್ಗೆ ಹೇಳುತ್ತಿಲ್ಲ; ಅವರವರು ಮಾಡಿದ ವಿಚಾರಗಳನ್ನು ನಿಮ್ಮ ಮುಂದೆ ಇಡಬಯಸು ತ್ತಿದ್ದೇನೆ. ಕರ್ನಾಟಕದ ಕರಾವಳಿಯ ಪ್ರಮುಖ ಜೀವನದಿ ನೇತ್ರಾವತಿ. ಚಿಕ್ಕಮಗಳೂರು ಜಿಲ್ಲೆಯ ಕುದುರೇ ಮುಖದಲ್ಲಿನ ಬಂಗ್ರವಳಿಗೆ ಕಣಿವೆ, ಏಳನೀರು ಎಂಬಲ್ಲಿ ಪ್ರಾರಂಭಗೊಂಡು ಪಶ್ಚಿಮಾಭಿಮುಖವಾಗಿ ಸಾಗುತ್ತ, ಸುಮಾರು ೧೬೦ ಕಿ.ಮೀ. ಹರಿದು ಮಂಗಳೂರಿನ ಪಡುಬಿದ್ರಿಯಲ್ಲಿ ಅರಬ್ಬಿ ಸಮುದ್ರ ವನ್ನು ಸೇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಇದೇ ನದಿಯ ನೀರನ್ನು ಬಳಸಲಾಗುತ್ತದೆ. ಜತೆಗೆ, ಇಲ್ಲಿಯ ಜನರ ಮತ್ತೊಂದು ಪ್ರಮುಖ ಉದ್ಯೋಗವಾದ ಮೀನು ಕೃಷಿಗೂ ಇದೇ ಆಸರೆ.
ನೀರಾವರಿ ತಜ್ಞ ದಿವಂಗತ ಡಾ.ಜಿ.ಎಸ್. ಪರಮಶಿವಯ್ಯ ಅವರ ವರದಿ ಆಧರಿಸಿ ಶುರು ಮಾಡಿದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಆರಂಭದಿಂದಲೂ ಒಂದಲ್ಲಾ ಒಂದು ಆತಂಕ ಎದುರಾಗಿದೆ. ೨೦೧೪ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿ, ಇನ್ನು ಕೆಲವೇ ವರ್ಷಗಳಲ್ಲಿ ಪಶ್ಚಿಮ ಘಟ್ಟದಿಂದ ಕೋಲಾರಕ್ಕೆ ನೀರು ಹರಿಯುತ್ತದೆ ಎಂದು ಹೇಳಿ ಒಂದು ದಶಕ ಕಳೆದರೂ ಒಂದು ಹನಿ ನೀರೂ ಫಲಾನುಭವಿಗಳಿಗೆ ಸಿಕ್ಕಿಲ್ಲ.
ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲು ಸೀಮೆಯ ಕಡೆಗೆ ಹರಿಸುವ ಯೋಜನೆಯಿದು.ಎತ್ತಿನ ಹೊಳೆಯಲ್ಲಿ ೨, ಕಾಡುಮನೆ ಹಳ್ಳದ ಮೇಲೆ ೨, ಕರಿಹಳ್ಳದ ಮೇಲೆ ೧, ಹೊಂಗಡ ಹಳ್ಳದ ಮೇಲೆ ೧ ಮತ್ತು ಅದರ ಉಪನದಿಗಳಲ್ಲಿ ೨ ಸೇರಿದಂತೆ ಈಯೋಜನೆಯು ೮ ಸಣ್ಣ ಅಣೆಕಟ್ಟುಗಳ ನಿರ್ಮಾಣ ವನ್ನು ಒಳಗೊಂಡಿದೆ. ಈ ಶೇಖರಣಾ ಅಣೆಕಟ್ಟುಗಳಿಂದ ನೀರನ್ನು ೩ ವಿತರಣಾ ಕೋಣೆಗಳಿಗೆ ಪಂಪ್ಮಾಡಿ, ಈ ಚೇಂಬರ್‌ಗಳಿಂದ ಸಕಲೇಶಪುರ ಸಮೀಪದ ಹರವನಹಳ್ಳಿ ಜಲಾಶಯಕ್ಕೆ ಮತ್ತೆ ನೀರು ಎತ್ತಲಾಗುತ್ತದೆ. ಇಲ್ಲಿಂದ ತುಮಕೂರು ಕಡೆಗೆ ನೀರುಕೆಳಮುಖವಾಗಿ ಹರಿಯುತ್ತ ದೇವರಾಯನದುರ್ಗದ ಬಳಿ ನೀರಿನ ಸಂಗ್ರಹಕ್ಕಾಗಿ ನಿರ್ಮಿಸಲಾಗಿರುವ ಜಲಾಶಯವನ್ನು ಸೇರುತ್ತದೆ.
ಇಲ್ಲಿಂದ ನಂದಿ ದುರ್ಗದ ನದಿಗಳ ಮೂಲಕ ನೀರನ್ನು ಹರಿಸಲಾಗುತ್ತದೆ. ವಾರ್ಷಿಕ ಸರಾಸರಿಯಾಗಿ ನೇತ್ರಾವತಿಯಲ್ಲಿ ೫೪೮ ಟಿಎಂಸಿ ಹಾಗೂ ಕುಮಾರಧಾರಾದಲ್ಲಿ ೨೨೦ ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನಹೊಳೆಗೆ ಬಳಕೆಯಾಗುತ್ತಿರುವುದು ೨೪.೦೧ ಟಿಎಂಸಿ ಮಾತ್ರ. ಅಂದರೆ ೭೬೮ ಟಿಎಂಸಿ ಅಡಿ ಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ ೧,೨ಹಾಗೂ ಎತ್ತಿನ ಹೊಳೆಯ ೨ ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ.
ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ ೩೪.೨೬ ಟಿಎಂಸಿ ಅಡಿ ನೀರಿನ ಪೈಕಿ ೨೪.೦೧ ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ. ಹೊಳೆಗಳ ಹರಿವಿನ ಮಧ್ಯೆ ಕಿರುಕಟ್ಟೆ ಕಟ್ಟಿ ಸುಮಾರು ೯೪೦ ಅಡಿ ಎತ್ತರಕ್ಕೆ ಪಂಪ್ ಮಾಡಿ ನೀರು ಹರಿಸಲಾಗುತ್ತದೆ. ಸಕಲೇಶಪುರ ತಾಲೂಕಿನಿಂದ ಕೋಲಾರದಶ್ರೀನಿವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನುಷ್ಠಾನವಾಗ ಬೇಕು. ೨೬೦ ಕಿ.ಮೀ. ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲೂಕು ಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ ಯಾಗಿದೆ. ಇದುಸರಕಾರದ ಯೋಜನಾ ಲೆಕ್ಕಾಚಾರ!
ಯೋಜನೆಯ ಲೆಕ್ಕಚಾರವೇನೋ ಕೇಳಲು, ಓದಲು ಚಂದ ಅನಿಸುತ್ತದೆ. ಆದರೆ ವಾಸ್ತವದಲ್ಲಿ, ಪರ್ವತದ ತುದಿಯ ಮೇಲಿಂದ ಸಣ್ಣಗೆ ಝರಿಯಾಗಿಹರಿಯುವ ನದಿ ಕನಿಷ್ಠ ೭೦-೮೦ ಕಿಮೀ.ಗಳಷ್ಟು ದೂರ ಹೋದಾಗ ಸ್ವಲ್ಪ ಹಿರಿದಾಗುತ್ತ ನದಿಯಾಗಿ ಮತ್ತೂ ಮುಂದಕ್ಕೆ ಹರಿದಂತೆಲ್ಲ ದೊಡ್ಡ ನದಿಯಾಗಿ, ಮುಂದೆ ಸಮುದ್ರ ಸೇರುತ್ತದೆ. ಇದು ವಾಸ್ತವ. ಆದರಿಲ್ಲಿ, ಸಣ್ಣದಾಗಿ ಶುರುವಾಗುವ ತೊರೆಯಂಥ ಜಾಗದಲ್ಲೇ ಯೋಜನೆ ಆರಂಭಿಸಿರುವು ದರಿಂದ ಇದು ಮುಂದೆ ಬಹುದೊಡ್ಡ ಅಪಾಯಕ್ಕೆ ಎಡೆಮಾಡಿ ಕೊಡಬಹುದು. ಕೆಲ ಕಿ.ಮೀ.ಗಳ ದೂರಕ್ಕೆ ಸಮಗ್ರ ಅಧ್ಯಯನ ನಡೆಸಿ ಈ ಯೋಜನೆ ಮಾಡಿದ್ದರೆ ಚಿಂತೆಯಿರಲಿಲ್ಲ ಎಂಬುದು ತಜ್ಞರ ಅಭಿಪ್ರಾಯ.
ವಿವಾದಿತ ಎತ್ತಿನಹೊಳೆ ಯೋಜನೆ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆ (IISಅ) ಸೇರಿದಂತೆ ತಜ್ಞರು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನುಆಧರಿಸಿ ಪರಿಷ್ಕೃತ ವರದಿ ನೀಡಿದ್ದು, ಎತ್ತಿನ ಹೊಳೆ ಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ ೯.೫೫ ಟಿಎಂಸಿ ಮಾತ್ರ ಎಂದು ದೃಢೀಕರಿಸಿದ್ದಾರೆ. ವರದಿ ಯಲ್ಲಿ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ೯.೫೫ ಟಿಎಂಸಿ ಇದ್ದು, ಅದರಲ್ಲಿ ೫.೮೪ ಟಿಎಂಸಿ ಸ್ಥಳೀಯ ಅವಶ್ಯಕತೆಗಳನ್ನು ಪೂರೈಸಲಿ ಕ್ಕಾಗಿಯೇ ಬೇಕಾಗುತ್ತದೆ ಎಂದು ವಿಜ್ಞಾನಿಗಳು ಪುನರುಚ್ಚರಿಸಿದ್ದಾರೆ. ರಿಮೋಟ್ ಸೆನ್ಸಿಂಗ್ ಮತ್ತು ಜಲವಿಜ್ಞಾನದ ದತ್ತಾಂಶಗಳನ್ನು ಆಧರಿಸಿ ಖುದ್ದು ಸ್ಥಳ ಪರಿಶೀಲನೆ ನಡೆಸಿದ ಭಾರತೀಯ ಹವಾಮಾನ ಇಲಾಖೆ, ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಮಳೆ ಪ್ರಮಾಣ, ತಾಪಮಾನ, ಭೂಮಿಯ ಬಳಕೆ ಮತ್ತಿತರ ಅಂಶಗಳನ್ನು ಅಧ್ಯಯನ ಮಾಡಿ, ಅದರಂತೆ ಎತ್ತಿನಹೊಳೆ ಜಲಾನಯನ ಪ್ರದೇಶದ ಒಟ್ಟಾರೆ ವ್ಯಾಪ್ತಿಯ ಪೈಕಿ ಶೇ.೪೫.೦೮ರಷ್ಟು ಪರಿಸರ ಅರಣ್ಯ, ಶೇ.೨೯.೦೫ ಕೃಷಿ, ಶೇ.೨೪.೦೬ ಹುಲ್ಲುಗಾವಲು ಪ್ರದೇಶವಾಗಿದೆ.
ಅಲ್ಲಿ ಬೀಳುವ ವಾರ್ಷಿಕ ಮಳೆ ೩೦೦೦-೫೦೦೦ ಮಿ.ಮೀ. ಆಗಿದ್ದು, ೫.೮೪ ಟಿಎಂಸಿ ನೀರು ಕೃಷಿ, ತೋಟಗಾರಿಕೆ, ಜಾನುವಾರು ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೆ, ಉಳಿದ ೨ ಟಿಎಂಸಿ ಜಲಚರಗಳಿಗೆ ಮೀಸಲಾಗಿದೆ ಎಂದು ೧೪ ಪುಟಗಳ ತನ್ನ ವರದಿಯಲ್ಲಿ ತಿಳಿಸಿದೆ. ಆಯಿತು, ಜನೋಪಯೋಗಿ ನೀರಿನ ಕೆಲಸವಾಗುತ್ತಿದೆ ಅಂದುಕೊಂಡರೂ ಈ ಮೂಲಕ ಪರಿಸರ ನಾಶಕ್ಕೆ ಕೈಹಾಕಿದ್ದು ಯಾಕೆ ಎಂದು ಜನರು, ಪರಿಸರ ತಜ್ಞರು ಆಕ್ರೋಶಭರಿತರಾಗಿ ಪ್ರಶ್ನಿಸುತ್ತಿದ್ದಾರೆ.
ಕಾರಣ, ಇದುವರೆಗೂ ೩,೦೦೦ಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ. ಇನ್ನೂ ೨,೩೦೦ಕ್ಕೂ ಹೆಚ್ಚು ಮರಗಳು ಜೀವ ಕಳೆದುಕೊಳ್ಳಲಿವೆ. ಒಟ್ಟಾರೆ ೧೪ ಹೆಕ್ಟೇರ್ ಅರಣ್ಯಭೂಮಿಯನ್ನು ಈ ಯೋಜನೆಗೆ ಉಪ ಯೋಗಿಸುತ್ತಿದ್ದು, ಇದಕ್ಕೆ ಪೂರಕವಾಗಿ ಸಸಿ ನೆಡುವ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿ ಕೊಳ್ಳದಿ ರುವುದು ಕೂಡ ಈ ಯೋಜನೆಯೆಡೆಗಿನ ನಿರ್ಲಕ್ಷ ವನ್ನು ತೋರಿಸುತ್ತದೆ.
ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಸಾವಿರಾರು ಮರ ಗಳನ್ನು ಕಡಿಯುವುದರಿಂದ ಪರಿಸರ ಅಸಮ ತೋಲನಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ಇದುವಿಶ್ವದಲ್ಲೇ ಅಪರೂಪದ ಸಸ್ಯ ಮತ್ತು ವನ್ಯ ಜೀವಿ ಗಳಿರುವ ದಟ್ಟ ಅರಣ್ಯಪ್ರದೇಶವಾಗಿದೆ. ಈ ಯೋಜನೆಯ ಆಯ್ಕೆ ಮತ್ತು ತಿರುವು ಅರಬ್ಬಿಸಮುದ್ರಕ್ಕೆ ಹರಿಯುವ ನೀರನ್ನು ಕಡಿಮೆ ಮಾಡುತ್ತದೆ ಮತ್ತು ಇದು ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಎಂದು ಪರಿಗಣಿಸಲಾದ ನೇತ್ರಾವತಿ ನದಿಯಲವಣಾಂಶವನ್ನು ಹೆಚ್ಚಿಸಬಹುದು ಎಂಬಿತ್ಯಾದಿ ಅಂಶಗಳನ್ನು ಮುಂದಿಟ್ಟುಕೊಂಡು, ಪರಿಸರ ಕಾರ್ಯಕರ್ತರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಬಾಗಿಲು ತಟ್ಟಿದರು. ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು, ಪಶ್ಚಿಮಘಟ್ಟದ ವಿಚಾರವಾಗಿ ಕೇಂದ್ರ ಸರಕಾರವುಮೃದುಧೋರಣೆ ತಳೆಯುತ್ತಿರುವುದು ಸರಿಯಲ್ಲ. ಈ ಕುರಿತು ಸರಕಾರಕ್ಕೆ ಜವಾಬ್ದಾರಿಯೇ ಇದ್ದಂತಿಲ್ಲ ಎಂದಿತು.
ಯೋಜನೆಗಾಗಿ ಒಟ್ಟು ೧೩.೯೦ ಹೆಕ್ಟೇರ್ ಅರಣ್ಯ ಭೂಮಿ ಉಪಯೋಗಿಸುತ್ತಿದ್ದು, ೪,೯೯೫ ಮರಗಳನ್ನು ಕಡಿಯುವ ಅಗತ್ಯವಿದೆ ಎಂದು ರಾಜ್ಯ ಸರಕಾರತಿಳಿಸುತ್ತಿದ್ದಂತೆಯೇ, ‘ಯೋಜನೆಗಾಗಿ ಈಗಾಗಲೇ ಒಟ್ಟು ೨,೭೦೦ ಮರ ಕಡಿಯಲಾಗಿದೆ; ಅದಕ್ಕೆ ಬದಲಾಗಿ ಸಸಿ ನೆಡುವ ಕುರಿತು ಯೋಚಿಸಲಾಗಿದೆಯೇ?’ ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಕೀಲರು, ಪಶ್ಚಿಮಘಟ್ಟದಲ್ಲಿನ ಜೀವವೈವಿಧ್ಯಕ್ಕೆ ಸಾಕಷ್ಟು ಧಕ್ಕೆ ಉಂಟಾಗಲಿದ್ದು, ಈ ಯೋಜನೆ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು. ಈ ಮೂಲಕ, ಈ ಪ್ರಕರಣ ಇನ್ನೂ ಎನ್‌ಜಿಟಿಯಲ್ಲಿ ಇತ್ಯರ್ಥವಾಗಬೇಕಿದೆ.
ಇಂಥ ಯೋಜನೆಗೆ, ಆರಂಭಿಕ ಅನುದಾನ ೧೨,೯೧೨ ಕೋಟಿಯಷ್ಟಿದ್ದು, ನಂತರದಲ್ಲಿ ೨೫,೦೦೦ ಕೋಟಿ ತಲುಪಿತು. ಈ ಮೂಲಕ ಬಲಾಢ್ಯ ಗುತ್ತಿಗೆದಾರರ ಪೋಷಣೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಬಹಿರಂಗವಾಗಿಯೇ ಕೇಳಿಬರುತ್ತಿದೆ. ಈ ಕುರಿತಂತೆ, ಪರಿಸರವಾದಿಗಳು ಈ ಕಾಮಗಾರಿಯಲ್ಲಿಬಂದಿರುವ ಸುಮಾರು ೨ ಮಿಲಿಯನ್ ಟನ್‌ಗಳಷ್ಟು ಕಲ್ಲು-ಮಣ್ಣಿನ ರಾಶಿಯನ್ನು ಹರಿಯುವ ನದಿಗೆ ಮತ್ತು ಸುರಿಯುವ ಮಳೆಯಲ್ಲಿ ಹರಿದು ಹೋಗುವಂತೆ ಹೇಗೆ ಬೇಕೋ ಹಾಗೆ ಬಿಸಾಡಿದ್ದಾರೆಂದು ಬಹಳ ಗಂಭೀರ ಆರೋಪ ಮಾಡಿದ್ದು ಜತೆಗೆ ಈ ಕುರಿತು ಪ್ರಶ್ನಿಸಿದವರನ್ನು ಮಟ್ಟಹಾಕುವ ಯತ್ನಗಳೂನಡೆದಿವೆ ಎಂದು ಪತ್ರಿಕೆಗಳಲ್ಲಿ ವರದಿಗಳಾಗಿವೆ.
ಇಂಥ ಕಾಮಗಾರಿಗಳಲ್ಲಿ ಬರುವ ಮಣ್ಣು ಮತ್ತು ಕಲ್ಲುಬಂಡೆಗಳನ್ನು ಒಂದು ಸೂಕ್ತ ಪ್ರದೇಶದಲ್ಲಿ ಸುರಿಯುತ್ತ ಅದನ್ನು ಬೆಟ್ಟಗುಡ್ಡದಂತೆ ವ್ಯವಸ್ಥಿತ ವಾಗಿ ನಿರ್ವಹಣೆ ಮಾಡಿ ಅದಕ್ಕೆ ಗಿಡಮರ, ಸಸ್ಯಗಳನ್ನು ನೆಡುವ ಪ್ರಕ್ರಿಯೆಯನ್ನು ವಿದೇಶದಲ್ಲಿ ‘ಮಕ್ ಬ್ಯಾಂಕ್’ ಎನ್ನುತ್ತಾರೆ. ದೇಶದ ಹಲವೆಡೆ ಇದನ್ನುಮಾಡಲಾಗಿದೆ ಕೂಡ. ಇದರೊಟ್ಟಿಗೆ ದೊಡ್ಡ ದೊಡ್ಡ ಕಬ್ಬಿಣದ ಪೈಪುಗಳನ್ನು ಸುಮ್ಮನೆ ಮಣ್ಣನ್ನು ಅಗೆದು ಅದರಲ್ಲಿ ಜೋಡಿಸುತ್ತ ಹೋಗಿದ್ದಾರೆ. ಈ ಪೈಪುಗಳು ಮಣ್ಣು, ಮಳೆ ಮತ್ತು ತೇವಾಂಶದೊಂದಿಗೆ ತುಕ್ಕು ಹಿಡಿದು ಯಾವಾಗ ಬೇಕಾದರೂ ಅವಘಡ ಉಂಟಾಗಬಹುದು. ಜತೆಗೆ, ಕೇವಲ ಹೊರಬದಿಗೆ ಮಾಡುವಂಥ ತೇಪೆ ವೆಲ್ಡಿಂಗ್ ಮಾಡಿದ್ದು ಕೂಡ ಕರ್ತವ್ಯಲೋಪ ಎಂಬುದು ಹೋರಾಟಗಾರರ ಅಭಿಪ್ರಾಯವಾಗಿದೆ. ಇದರಲ್ಲಿ, ಮತ್ತೂ ಒಂದು ಅಪರಾಧವೆಂದರೆ, ನೀರಿನ ಹರಿಯುವಿಕೆಯ ಒತ್ತಡ ವನ್ನು (ಒಂದು ಪ್ರಮಾಣದ ನೀರು ಎತ್ತರಕ್ಕೆ ಏರಿ ಹರಿಯುವಾಗ ಎಷ್ಟು ಒತ್ತಡವು ಪೈಪುಗಳ-ಯಂತ್ರಗಳ ಮೇಲೆ ಉಂಟಾಗುತ್ತದೆ ಎಂಬುದು) ವೈಜ್ಞಾನಿಕವಾಗಿ ಅಳೆಯದಿರುವುದು.
ದಶಕಗಳ ಕಾಲ ಉಳಿಯಬೇಕಾದ ಯೋಜನೆ ಯನ್ನು ತರಾತುರಿಯಲ್ಲಿ ಮಾಡಿರುವ ಕಾರಣವಾದರೂ ಏನು? ಎಂದು ಪ್ರಶ್ನಿಸುತ್ತ, ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಪರಿಸರವಾದಿ ಗಳು ಮತ್ತೆ ಕೋರ್ಟ್ ಮೆಟ್ಟಿಲೇರುವ ಯತ್ನದಲ್ಲಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಇದು ಒಂದು ಕಥೆಯಾದರೆ, ಭೂಸ್ವಾಧೀನವಿಲ್ಲದೇ ಟೆಂಡರ್ ಕರೆದಿರುವುದು ಇನ್ನೊಂದು ವ್ಯಥೆ! ಈ ಯೋಜನೆಗೆ ಬೇಕಾಗಿರುವುದು ೧೨,೬೦೦ ಎಕರೆಜಾಗ. ಆದರೆ, ಸ್ವಾಧೀನಪಡಿಸಿಕೊಂಡಿದ್ದು ೩೩೦ ಎಕರೆ ಗಳಷ್ಟು ಮಾತ್ರ! ಇದರೊಟ್ಟಿಗೆ, ಭೂಮಿಯ ಪರಿಹಾರದ ಮೊತ್ತ ಎಷ್ಟು ಎಂಬುದು ನಿಷ್ಕರ್ಷೆಯಾಗಿಲ್ಲ.
ಇದಕ್ಕೆ ಅಂತ ಯಾವ ನಿಧಿಯೂ ಬಿಡುಗಡೆಯಾಗಿಲ್ಲ. ವರ್ಷ ಕಳೆದಂತೆ, ಪರಿಹಾರದ ಮೊತ್ತ, ಕಾಮಗಾರಿಯ ವೆಚ್ಚದ ಬಿಲ್ ಇತರೆ ಬಡ್ಡಿ ದುಪ್ಪಟ್ಟಾ ಗುತ್ತಲೇ ಇದೆ. ಯೋಜನೆಯ ಹನಿನೀರೂ ಮುಂದೆ ಚಲಿಸಿಲ್ಲ. ಡಿಪಿಆರ್ ಸಿದ್ಧಪಡಿಸುವ ಪುಣ್ಯಾತ್ಮನನ್ನು ಸದಾ ನೆನಪಿಟ್ಟುಕೊಳ್ಳಬೇಕು. ಈ ಒಂದು ಇಡೀ ಯೋಜನೆಗೆ ಬೇಕಾಗುವ ವಿದ್ಯುತ್ ಖರ್ಚಿನ ಯಾವ ವಿವರವನ್ನೂ ಪರಿಗಣಿಸಿಲ್ಲ. ವಿದ್ಯುತ್ ಇಲ್ಲದೇ ಈ ಯೋಜನೆಯಲ್ಲಿ ಸಂಗ್ರಹವಾಗುವ ನೀರನ್ನು ಸುಮಾರು ೯೫೦ ಅಡಿಗಳಷ್ಟು ಮೇಲಕ್ಕೆ ಪಂಪ್ ಮಾಡಲು ಹೇಗೆ ಸಾಧ್ಯ ಎಂಬುದನ್ನು ಈ ಪುಣ್ಯಾತ್ಮರೇ ಹೇಳಬೇಕು. ಇದೆಲ್ಲದರ ನಡುವೆ,ತೊರೆಗಳಿಂದ ನೀರನ್ನು ಮೇಲೆತ್ತಲು ೮ ವೈರ್‌ಗಳನ್ನು ನಿರ್ಮಿಸುವ ಪ್ರದೇಶವು ಆನೆ -ಮಾನವ ಸಂಘರ್ಷ ಪ್ರದೇಶಗಳನ್ನು ಒಳಗೊಂಡಿರುವ ಪರಿಸರ ಸೂಕ್ಷ್ಮ ಪ್ರದೇಶಗಳಾಗಿವೆ ಎಂದು ಸ್ಥಳೀಯರ ವಿರೋಧ ಕೂಡ ಆಗಿದೆ. ಹೀಗೆ, ಒಟ್ಟಾರೆಯಾಗಿ ಯಾವೊಂದು ಪೂರ್ವಸಿದ್ಧತೆಯಿಲ್ಲದೆ, ಜನೋಪಯೋಗಿ ಯಲ್ಲದ, ಅಪಾರ ಹಣ ಮತ್ತು ಶ್ರಮ ಬಳಸಿ ದೀರ್ಘಕಾಲ ಬಳಕೆಗೆ ಬರದಂಥ ಬಲವಂತದ ಯೋಜನೆ ಅಗತ್ಯ ವಿತ್ತೇ ಎಂಬುದು ನಾಡಿನ ಪ್ರಾಜ್ಞರ ಪ್ರಶ್ನೆ.