ಕ್ರೀಡಾಳುಗಳಿಗೆ ಸೇನೆಯಲ್ಲಿದೆ ಭವಿಷ್ಯ
ಯುವಶಕ್ತಿ
ಬೈಂದೂರು ಚಂದ್ರಶೇಖರ ನಾವಡ
ದೇಶದ ಕ್ರೀಡಾಸಾಧನೆಯಲ್ಲಿ ನಮ್ಮ ಸೇನೆಯ ಕೊಡುಗೆ ದೊಡ್ಡದು. ಸೇನೆಯ ಕ್ರೀಡಾಳುಗಳು ದೇಶವನ್ನು ಕಾಯುವುದರ ಜತೆಗೆ ಕ್ರೀಡೆ ಯಲ್ಲೂ ತಾವುಮುಂಚೂಣಿಯಲ್ಲಿರುವುದನ್ನು ಸಾಬೀತುಪಡಿಸಿದ್ದಾರೆ. ಯುವಪೀಳಿಗೆಯು ಕ್ರೀಡೆಗಳತ್ತ ಗಮನಹರಿಸಲು ಈ ಸಾಧನೆ ಉತ್ತೇಜಕವಾಗಬಲ್ಲದು.
ವಿಶ್ವ ಸಮುದಾಯದಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಭಾರತದ ಕನಸು ನನಸಾಗಬೇಕಾದರೆ, ಆರ್ಥಿಕವಾಗಿ ಮತ್ತು ಸೇನಾಶಕ್ತಿಯಲ್ಲಿ ಬಲಾಢ್ಯ ವೆನಿಸುವು ದರ ಜತೆಯಲ್ಲಿ ದೇಶವು ಕ್ರೀಡೆಗಳಲ್ಲೂ ಉತ್ತಮ ಸಾಧನೆ ಮೆರೆಯಬೇಕಿದೆ. ಚೀನಾದಲ್ಲಿ ನಡೆದ ೨೦೨೩ರ ಏಷ್ಯನ್ ಗೇಮ್ಸ್‌ನಲ್ಲಿ ೧೦೭ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕ್ರೀಡಾಪಟುಗಳು ಹೊಸ ದಾಖಲೆ ನಿರ್ಮಿಸಿದ್ದಾರೆ.
ಹಿಂದೆಲ್ಲಾ ಪದಕ ಪಟ್ಟಿಯಲ್ಲಿ ಕೊನೆಯಲ್ಲೆಲ್ಲೋ ಕಾಣಿಸಿಕೊಳ್ಳುತ್ತಿದ್ದ ಭಾರತದ ಹೆಸರು ಇದೀಗ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿರುವುದು ಭಾರತೀಯ ರಿಗೆಲ್ಲ ಹೆಮ್ಮೆಯ ಸಂಗತಿ. ಇದರ ಹಿಂದೆ ಸರಕಾರದ ದೂರದೃಷ್ಟಿ ಮತ್ತು ಪ್ರಬಲ ಇಚ್ಛಾಶಕ್ತಿ ನಿರ್ಣಾಯಕ ಪಾತ್ರ ವಹಿಸಿವೆ ಎನ್ನ ಬೇಕಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಮಾಣಿಕತೆ ಮತ್ತು ಕ್ರೀಡಾಳುಗಳಿಗೆ ಸಿಗುತ್ತಿರುವ ಪ್ರೋತ್ಸಾಹದಿಂದಾಗಿ, ನಿಧಾನವಾಗಿ ಯಾದರೂ ಸರಿ ಭಾರತದ ಸಾಧನೆಯು ವಿವಿಧ ಪಂದ್ಯಾಟ ಗಳಲ್ಲಿ ಊರ್ಧ್ವಮುಖಿಯಾಗಿದೆ. ೨೦೩೬ರ ಒಲಿಂಪಿಕ್ಸ್ ಅನ್ನು ಭಾರತದಲ್ಲಿ ನಡೆಸುವುದಕ್ಕೆ ಬಿಡ್ ಪಡೆದುಕೊಳ್ಳಲು ಕೇಂದ್ರ ಸರಕಾರ ಉತ್ಸುಕವಾಗಿದೆ.
ಇತ್ತೀಚಿನ ವರ್ಷಗಳ ದೇಶದ ಈ ಅಪೂರ್ವ ಕ್ರೀಡಾಸಾಧನೆ ಯಲ್ಲಿ ಭಾರತೀಯ ಸೇನೆಯ ಕೊಡುಗೆ ದೊಡ್ಡದು. ಸೇನೆಯ ಕ್ರೀಡಾಳುಗಳು ಪ್ರಶಂಸೆಗೆ ಪಾತ್ರರಾಗಿದ್ದಾರೆ ಹಾಗೂ ದೇಶವನ್ನು ಕಾಯುವುದರ ಜತೆಜತೆಗೆ ಕ್ರೀಡಾಸಾಧನೆಯಲ್ಲೂ ತಾವು ಅಂಗ್ರಪಂಕ್ತಿಯಲ್ಲಿರುವ ಸಂದೇಶವನ್ನು ನೀಡಿದ್ದಾರೆ.ಯುವಪೀಳಿಗೆಯು ಕ್ರೀಡೆಗಳತ್ತ ಗಮನವನ್ನು ಕೇಂದ್ರೀಕರಿಸಲು ಈ ಸಾಧನೆ ಉತ್ತೇಜಕವಾಗಬಲ್ಲದು. ಹಾಗೊಂದು ಆಶಾಭಾವನೆ ಇದೀಗ ದೇಶದಲ್ಲಿ ಮೂಡಿದೆ. ೨೦೨೦ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ರಜಪುತಾನ ರೈಫಲ್ಸ್‌ನ ಸುಬೇದಾರ್ನೀರಜ್ ಚೋಪ್ರಾ ಅವರು, ೨೦೨೩ರಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕ್ರೀಡಾಳುಗಳಿಗೆ ಪ್ರೇರಣೆ ನೀಡಿದ್ದಾರೆ.
ಮತ್ತೊಂದೆಡೆ ಶೂಟಿಂಗ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸುಬೇದಾರ್ ಅವಿನಾಶ್ ಸಬಳೆಯವರು ಭಾರತದ ಖುಷಿಯನ್ನು ಇಮ್ಮಡಿಗೊಳಿಸಿದರು. ೨೦೦೬ರಲ್ಲಿ ೧೪, ೨೦೧೦ರಲ್ಲಿ ೧೨ ಮತ್ತು ೨೦೧೮ರಲ್ಲಿ ೧೩ ಪದಕ ಗೆದ್ದಿದ್ದ ಭಾರತೀಯ ಸೇನೆಯು ಈ ಬಾರಿ ೨೦ ಪದಕಗಳನ್ನು (೩ ಚಿನ್ನ, ೭ ಬೆಳ್ಳಿ ಮತ್ತು ೧೦ ಕಂಚು) ಬಾಚಿಕೊಳ್ಳುವ ಮೂಲಕ ಹೊಸ ಇತಿಹಾಸವನ್ನು ಬರೆದಿದೆ. ಇನ್ನಷ್ಟು ಪ್ರತಿಭೆಗಳು ಮುಂಚೂಣಿಗೆ ಬರುವಲ್ಲಿ ಈ ದಾಖಲೆಯು ಉತ್ತೇಜಿಸುವುದರಲ್ಲಿ ಸಂಶಯವಿಲ್ಲ.
ಧೈರ್ಯ-ಸ್ಥೈರ್ಯ-ಶೌರ್ಯ, ತ್ಯಾಗ-ಬಲಿದಾನ, ಶಿಸ್ತು, ರಾಷ್ಟ್ರಪ್ರೇಮಕ್ಕೆ ಹೆಸರಾಗಿರುವ ಭಾರತೀಯ ಸೇನೆಯು ರಾಷ್ಟ್ರಶಕ್ತಿಯ ಪ್ರಮುಖ ಸ್ತಂಭವಾಗಿದೆ. ಶತ್ರುಗಳಿಂದ ದೇಶದ ಗಡಿಯನ್ನು ರಕ್ಷಿಸುವುದರ ಜತೆಯಲ್ಲಿ ಅದು ದೇಶದ ಹಿರಿಮೆ-ಗರಿಮೆಯನ್ನು ಎತ್ತಿಹಿಡಿಯಲು ನಾನಾ ವಿಧದಲ್ಲಿ ಶ್ರಮಿಸುತ್ತಿದೆ. ಯುವಜನತೆಯಲ್ಲಿ ಕ್ರೀಡಾಪ್ರೇಮವನ್ನು ಹೆಚ್ಚಿಸಲು ಅನೇಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಮ್ಮ ಸೇನೆ ತೊಡಗಿಸಿಕೊಂಡಿದೆ. ತನ್ನ ಕ್ರೀಡಾಳುಗಳಿಗೆ ತರಬೇತಿ ನೀಡಲು ೨೦೨೧ರಿಂದ ವಿದೇಶಿ ಕೋಚ್‌ಗಳನ್ನು ನೇಮಿಸಿಕೊಂಡಿದೆ ಹಾಗೂ ಕ್ರೀಡಾಳುಗಳಿಗೆಸೂಕ್ತ ಮೂಲಸೌಕರ್ಯ ಒದಗಿಸಲು ಕಟಿಬದ್ಧವಾಗಿದೆ.
೧೪೦ ಕೋಟಿಯನ್ನೂ ದಾಟಿದ ಜನಸಂಖ್ಯೆಯಿರುವ ಭಾರತದಲ್ಲಿ ಪ್ರತಿಭೆಗೆ ಖಂಡಿತವಾಗಿಯೂ ಬರವಿಲ್ಲ; ಉತ್ಸಾಹಿ ಯುವ ಕ್ರೀಡಾಳುಗಳಗೆ ಸೂಕ್ತ ತರಬೇತಿ ಮತ್ತು ಮೂಲ ಸೌಕರ್ಯ ದೊರೆತರೆ, ಕ್ರೀಡೆಗಳಲ್ಲಿ ದೇಶದ ಸಾಧನೆ ಇನ್ನಷ್ಟು ಉತ್ತಮವಾಗಲಿದೆ. ಕುಟುಂಬವನ್ನು ಪೋಷಿಸಬೇಕಾದ ಅನಿವಾರ್ಯತೆಯಲ್ಲಿ ಗ್ರಾಮೀಣ ಪ್ರದೇಶದ ಬಡ-ಪ್ರತಿಭಾವಂತ ಆಟಗಾರರು ತಮ್ಮ ಕ್ರೀಡಾಸಕ್ತಿಯನ್ನು ತ್ಯಜಿಸಿ ಉದ್ಯೋಗಬೇಟೆಗೆ ಮುಂದಾಗ ಬೇಕಾಗುತ್ತದೆ; ಸರಿ ಯಾದ ಆದಾಯದ ಮೂಲವಿಲ್ಲದೆ ಎಷ್ಟೋ ಪ್ರತಿಭೆಗಳು ಕಮರುತ್ತವೆ.
ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಅಧಿಕಾರಿ ಮತ್ತು ನಾನ್-ಕಮಿಷನ್ಡ್ ಹುದ್ದೆಗಳಲ್ಲಿ ಶೇ.೨ರಷ್ಟು ಹುದ್ದೆಗಳನ್ನು ‘ಸ್ಪೋರ್ಟ್ಸ್ ಕೋಟಾ’ಗೆ ಮೀಸಲಿಡಲಾಗುತ್ತದೆ. ಯುವ ಕ್ರೀಡಾಳುಗಳು ತಮ್ಮ ಪ್ರತಿಭೆಯನ್ನು ಸಾಬೀತು ಮಾಡುವುದಕ್ಕೆ ಅನುವು ಮಾಡಿಕೊಡುವ ಉತ್ತಮ ಅವಕಾಶಗಳುಸೇನೆಯಲ್ಲಿವೆ. ಕೋಚಿಂಗ್ ಕೇಂದ್ರಗಳ ಮೂಲಕ ಸೂಕ್ತ ತರಬೇತಿ ನೀಡುವ ವ್ಯವಸ್ಥೆಯನ್ನು ಅಲ್ಲಿ ಕಲ್ಪಿಸಿರುವುದರ ಜತೆಗೆ, ಆಟಗಾರರಿಗೆ ಬೇಕಾದ ಕ್ರೀಡೋಪಕರಣಗಳನ್ನೂ ಒದಗಿಸಲಾಗುತ್ತದೆ.
ಬೆಟಾಲಿಯನ್ ಸ್ತರದಿಂದ ಮೊದಲ್ಗೊಂಡು ವಿವಿಧ ವ್ಯೂಹರಚನೆಗಳ ಸ್ತರಗಳವರೆಗೆ ಕ್ರೀಡಾಸ್ಪರ್ಧೆಗಳು ನಡೆಯುತ್ತಿರುತ್ತವೆ. ಪ್ರತಿಭೆಯ ಆಧಾರದಲ್ಲಿ ಹೆಚ್ಚಿನ ತರಬೇತಿಗೆ ಸೇನೆಯು ಅವಕಾಶ ಮಾಡಿಕೊಡುತ್ತದೆ. ಸೇನೆಯಲ್ಲಿ ದೊರಕುವ ಬಗೆಬಗೆಯ ಸೌಲಭ್ಯಗಳು, ಮೂಲಸೌಕರ್ಯ ಗಳು ಕ್ರೀಡಾಳುಗಳಿಗೆ ಉತ್ತಮ ವಾತಾವರಣವನ್ನು ಕಟ್ಟಿ ಕೊಡುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಕ್ರೀಡಾಳುಗಳಲ್ಲಿ ಇರಬೇಕಾದ ದೈಹಿಕ ಕ್ಷಮತೆ, ನಾಯಕತ್ವ, ಮುನ್ನುಗ್ಗುವಎದೆಗಾರಿಕೆ ಇವೇ ಮೊದಲಾದ ಗುಣ-ವೈಶಿಷ್ಟ್ಯಗಳೆಲ್ಲವೂ ಸೈನಿಕರಲ್ಲೂ ಇರಬೇಕಾದ್ದು ಅತ್ಯಗತ್ಯ. ಒಟ್ಟಾರೆ ಹೇಳುವುದಾದರೆ, ಸೇನೆಯ ವೃತ್ತಿಪರ ಚಟುವಟಿಕೆ ಮತ್ತು ಕ್ರೀಡಾಸೂರ್ತಿ ಒಂದಕ್ಕೊಂದು ಪೂರಕ.
‘ಹಾರುವ ಸಿಖ್’ ಎಂದೇ ಹೆಸರಾಗಿರುವ ಮಿಲ್ಖಾ ಸಿಂಗ್ ಅವರು ೧೯೫೮ ಮತ್ತು ೧೯೬೨ರ ಏಷ್ಯನ್ ಗೇಮ್ಸ್‌ನಲ್ಲಿ ೪೦೦ ಮೀ. ಓಟದಲ್ಲಿ ಚಿನ್ನದ ಪದಕಗೆದ್ದು ಭಾರತೀಯರ ಮನ ವನ್ನೂ ಗೆದ್ದರು. ಅವರು ಒಲಿಂಪಿಕ್ಸ್‌ನಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು. ದೇಶ ವಿಭಜನೆಯ ಸಮಯದಲ್ಲಿ ಈಗಿನ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಅವರು, ಸೇನೆಯಲ್ಲಿ ‘ಕುಕ್’ ಆಗಿ ಸೇರ್ಪಡೆಗೊಂಡಿದ್ದರು. ದೇಶ ವಿಭಜನೆಯ ಸಮಯದ ಕೋಮುಗಲಭೆಯಲ್ಲಿ ತಂದೆ-ತಾಯಿ, ಸೋದರ- ಸೋದರಿಯರನ್ನು ಕಳೆದುಕೊಂಡು ಅಪಾರ ನೋವುಂಡ ಅವರು ಹಲವು ದಿನ ದೆಹಲಿಯ ಫುಟ್‌ಪಾತ್ ಮೇಲೆ ಮಲಗಿ ದಿನಕಳೆದಿದ್ದರು. ಸೇನೆ ಸೇರದೆ ಇದ್ದಿದ್ದರೆ ಪ್ರಾಯಶಃ ಅವರ ಪ್ರತಿಭೆ ಬೆಳಕಿಗೆ ಬರುತ್ತಿರಲಿಲ್ಲವೋ ಏನೋ? ತಮ್ಮ ಅಪೂರ್ವ ಕ್ರೀಡಾಸಾಧನೆಯಿಂದ ದೇಶವನ್ನು ನಿಬ್ಬೆರಗಾಗಿಸಿದ್ದ ಅವರು ಭಾರತೀಯರ ಪಾಲಿಗೆ ಸ್ಪೂರ್ತಿಯ ಸೆಲೆ.
ಸೇನೆಯಲ್ಲಿ ಸಿಪಾಯಿ ಆಗಿದ್ದ ಅವರು ಜೂನಿಯರ್ ಕಮಿಷನ್ಡ್ ಅಧಿಕಾರಿಯಾಗಿ ಪದೋನ್ನತಿ ಪಡೆದರು. ಸೇನೆಯಿಂದ ನಿವೃತ್ತರಾದ ನಂತರ ಪಂಜಾಬ್ ಸ್ಕೂಲ್ ಎಜುಕೇಷನ್‌ನ ಸ್ಪೋರ್ಟ್ಸ್ ಡೈರೆಕ್ಟರ್ ಹುದ್ದೆಗೇರಿದರು. ೧೯೦೫ರಲ್ಲಿ ಜನಿಸಿದ ಧ್ಯಾನ್ ಚಂದ್, ‘ಹಾಕಿ ಮಾಂತ್ರಿಕ’ ಎಂದೇ ಹೆಸರಾಗಿದ್ದವರು. ೧೬ನೇ ವಯಸ್ಸಿನಲ್ಲಿ ಇವರು ಭಾರತೀಯ ಸೇನೆಗೆ ಸಿಪಾಯಿಯಾಗಿ ಸೇರಿಕೊಂಡರು. ೧೯೨೨-೨೬ರ ಅವಽಯಲ್ಲಿ ಸೇನೆಯ ವಿವಿಧ ಸ್ತರಗಳಲ್ಲಿದ್ದು ಕೊಂಡು ಆಟವಾಡಿದ ಅವರು, ೧೯೨೮ರ ಆಮ್‌ಸ್ಟರ್‌ಡ್ಯಾಂ ಒಲಿಂಪಿಕ್ಸ್, ೧೯೩೨ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ೧೯೩೬ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಹಾಕಿ ತಂಡದೊಂದಿಗೆ ಭಾಗವಹಿಸಿ ದೇಶಕ್ಕೆ ಹ್ಯಾಟ್ರಿಕ್ ಚಿನ್ನದ ಪದಕವನ್ನು ತಂದು ಕೊಟ್ಟರು.
ಸಿಪಾಯಿಯಿಂದ ಮೇಜರ್ ರ‍್ಯಾಂಕಿನವರೆಗೆ ಏರಿದ ಅವರ ಜನ್ಮದಿನವನ್ನು ಈಗ ರಾಷ್ಟ್ರೀಯ ಕ್ರೀಡಾದಿನ ವಾಗಿ ಆಚರಿಸಲಾಗುತ್ತದೆ. ಭಾರತ ಸರಕಾರವು ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದೆ. ಮುಂದಿನ ಒಲಿಂಪಿಕ್ಸ್ ಹೊತ್ತಿಗೆ ಸೇನೆಯ ಮೂಲಕ ಕ್ರೀಡೆ ಗಳಲ್ಲಿನ ನಮ್ಮ ಸಾಧನೆಯನ್ನು ಇನ್ನಷ್ಟು ಉತ್ತಮವಾಗಿಸಲು ಸರಕಾರವು ಸಾಕಷ್ಟು ಕ್ರಮ ಕೈಗೊಂಡಿದೆ. ಪ್ರತಿಭಾವಂತ ಆಟಗಾರರನ್ನು ಗುರುತಿಸುವ, ಅವರಿಗೆ ಅಗತ್ಯ ಸೌಕರ್ಯನೀಡುವ ಮತ್ತು ಈಗಾಗಲೇ ಇರುವ ವ್ಯವಸ್ಥೆಯನ್ನು ಇನ್ನಷ್ಟು ಆಕರ್ಷಕವಾಗಿಸುವ ಕೆಲಸವನ್ನು ಸೇನೆ ಮಾಡುತ್ತಿದೆ.
ಕ್ರೀಡಾಸಾಧನೆಯ ಜತೆಯಲ್ಲಿ ದೇಶಸೇವೆ ಮಾಡುವ ಅವಕಾಶಕ್ಕೆ ಯುವಜನರು ಒಡ್ಡಿಕೊಳ್ಳುವಂತಾಗಲಿ. ಸೇನೆಯಲ್ಲಿ ಕ್ರೀಡಾಳುಗಳಿಗೆ ದೊರೆಯುವ ಸೌಲಭ್ಯಗಳ ಕುರಿತು ಅವರು ಮಾಹಿತಿವಂತರಾಗಲಿ.
(ಲೇಖಕರು ಮಾಜಿ ಸೈನಿಕರು)