ಒಡಕಿನ ಮಾತೇಕೆ ? ಒಟ್ಟಾಗಿ ಇರೋಣ
ಚರ್ಚಾ ವೇದಿಕೆ
ವಿನಾಯಕ ವೆಂ. ಭಟ್ಟ
ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ‘ನನ್ನ ತೆರಿಗೆ, ನನ್ನ ಹಕ್ಕು’ ಆಗಲು ಸಾಧ್ಯವಿಲ್ಲ. ಹೀಗೆ ಹಿಂದೆಯೂ ನಡೆದಿರಲಿಲ್ಲ, ಮುಂದೆಯೂ ನಡೆಯುವು ದಿಲ್ಲ. ಹಾಗೆ ರಾಜ್ಯಗಳ ಆದಾಯವನ್ನು ರಾಜ್ಯಗಳೇ ಬಳಸುವಂತಾದರೆ ‘ಒಕ್ಕೂಟ ವ್ಯವಸ್ಥೆ’ ಎಂಬ ಪರಿಕಲ್ಪನೆಗೆ ಅರ್ಥವಿ ರುವುದಿಲ್ಲ.
ಘೋರಿ, ಘಜ್ನಿ, ಬಾಬರ್, ಮುಘಲರು, ನಂತರ ಆಂಗ್ಲರು, ಪೋರ್ಚುಗೀಸರಂಥ ಆಕ್ರಮಣಕಾರರು ಭಾರತವನ್ನು ಸತತವಾಗಿ ದೋಚಿದ್ದು ಯಾವಾಗ ಹೇಳಿ? ದೇಶದ ಬೇರೆ ಬೇರೆ ಪ್ರಾಂತ್ಯಗಳು ತಮ್ಮನ್ನು ಸಣ್ಣ ದೇಶಗಳೆಂದು ಗುರುತಿಸಿಕೊಂಡು ಒಬ್ಬೊಬ್ಬ ರಾಜನನ್ನು ಹೊಂದಿದ್ದಾಗಲ್ಲವೇ? ಇಂದು, ಪಕ್ಕದರಾಜನ ಮೇಲೆ ಯಾರೋ ಪರಕೀಯರು ದಾಳಿ ಮಾಡಿದರೆ ತನಗೇನು? ಎಂಬ ಧೋರಣೆಯಲ್ಲಿದ್ದ ರಾಜ, ನಾಳೆ ಅದೇ ಪರಕೀಯರು ತನ್ನ ರಾಜ್ಯದ ಮೇಲೂ ಎರಗಿದರೆ ಗತಿ ಯೇನು? ಎಂದು ಆಲೋಚಿಸಲಿಲ್ಲ. ಹೀಗಾಗಿ, ಇವನನ್ನು ಬಳಸಿಕೊಂಡು ಅವನನ್ನು, ಅವನನ್ನು ಬಳಸಿಕೊಂಡು ಇವನನ್ನು, ಅಂತೂ ಪರಕೀಯರು ಎಲ್ಲರನ್ನೂ ನಿಷ್ಕ್ರಿಯಗೊಳಿಸಿ ನಿರಾಯಾಸವಾಗಿ ತಮ್ಮ ಪ್ರಭುತ್ವ ಸ್ಥಾಪಿಸಿ, ಭಾರತವನ್ನು ಶತಮಾನಗಳ ಕಾಲ ಲೂಟಿ ಹೊಡೆದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮ ಒಂದು ತೂಕದ್ದಾಗಿದ್ದರೆ, ಅತ್ಯಂತ ಸಂಕೀರ್ಣವೂ ನಿರ್ಣಾಯಕವೂ ಆಗಿದ್ದ ದೇಶದ ಏಕೀಕರಣ ಇನ್ನೊಂದು ತೂಕದ್ದಾಗಿದ್ದು. ಹರಿದು ಹಂಚಿ ಹೋಗಿದ್ದ ಭಾರತಕ್ಕೆ ಹೊಲಿಗೆ ಹಾಕಿ, ಒಂದಾಗಿ ಕಾಣುವಂತೆ ಮಾಡಿದ್ದಕ್ಕಾಗಿಯೇ ಸರ್ದಾರ್ ಪಟೇಲ್ ಮತ್ತು ವಿ.ಪಿ.ಮೆನನ್ ಅವರುಗಳು ಭಾರತೀಯರ ಪಾಲಿಗೆ ಪ್ರಾತಃಸ್ಮರಣೀ ಯರಾಗಿದ್ದಾರೆ. ಬೇರೆ ಬೇರೆ ಆಗಿದ್ದಾಗ ಭಾರತ ಕಳೆದುಕೊಂಡಿದ್ದೆಷ್ಟು? ಈಗ ಒಟ್ಟಾಗಿರುವಾಗ ಕೇವಲ ೭ ದಶಕಗಳಲ್ಲಿ ಗಳಿಸಿದ್ದೆಷ್ಟು, ಬೆಳೆಸಿದ್ದೆಷ್ಟು, ಸಾಧಿಸಿದ್ದೆಷ್ಟು ಎನ್ನುವುದು ದೇಶವನ್ನು ಒಡೆಯುವ ಮಾತಾಡುವವರಿಗೆ ಅರಿವಿರಬೇಕು.
ಅಂತೂ, ದೇಶವಿಭಜನೆಯ ಹೇಳಿಕೆಗೆ ರಾಜ್ಯಾದ್ಯಂತ ಹೊಮ್ಮಿದ ತೀವ್ರ ಪ್ರತಿಕ್ರಿಯೆಯಿಂದಾಗಿ ಹಾಗೆ ಮಾತಾಡಿದವರು ಕೂಡಲೇ ತಣ್ಣಗಾಗುವಂತಾಗಿದ್ದು ಸಮಾಧಾನದ ಸಂಗತಿ. ನಮ್ಮ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶರಿಂದ ಹೊಮ್ಮಿದ ಅನಪೇಕ್ಷಿತ ಚಿಂತನೆಯ ಕುರಿತು ನಾನು ಹೇಳ ಹೊರಟಿರುವುದು. ಕೇಂದ್ರ ಆಯವ್ಯಯದ ಭಾಗವಾಗಿ ಲೇಖಾನುದಾನ ಮಂಡನೆಯಾದ ದಿನ ದೆಹಲಿಯಲ್ಲಿ ಅವರಾಡಿದ ಮಾತು, ಆಕಸ್ಮಿಕವಾಗಿ, ಆವೇಶಭರಿತರಾಗಿ ಆಡಿದಮಾತಾಗಿರಲಿಲ್ಲ; ಅವರು ಅಂದು ಹಾಗೇ ಮಾತಾಡಬೇಕು, ರಾಜ್ಯ ಮಟ್ಟದಲ್ಲಿ ಆ ಹೇಳಿಕೆಯನ್ನು ಸಮರ್ಥಿಸಬೇಕು ಮತ್ತು ಕಾಂಗ್ರೆಸ್‌ನ ರಾಷ್ಟ್ರಮಟ್ಟದ ನಾಯಕರು ಅದನ್ನು ಸೈದ್ಧಾಂತಿಕವಾಗಿ ವಿರೋಧಿಸಬೇಕು, ೨ ದಿನ ಬಿಟ್ಟು ಆಡಳಿತ ಪಕ್ಷದ ಎಲ್ಲ ಶಾಸಕರೂ ದಿಲ್ಲಿಯಲ್ಲಿ ಧರಣಿ ಹೂಡಿ ಅದುಪತ್ರಿಕೆಯ ‘ಹೆಡ್‌ಲೈನ್’ ಆಗಬೇಕು ಎಂದೆಲ್ಲಾ ವ್ಯವಸ್ಥಿತವಾಗಿ ಯೋಜಿಸಿ ನಡೆಸಿದ ಕಾರ್ಯಾಚರಣೆ ಅದಾಗಿತ್ತು.
ಇಲ್ಲವಾಗಿದ್ದರೆ ಸುರೇಶರು ಅಂದು ಇಡೀ ದಕ್ಷಿಣ ಭಾರತವನ್ನು ಪ್ರತಿನಿಧಿಸಿ ಮಾತಾಡುತ್ತಿರಲಿಲ್ಲ. ಮರುದಿನ, ತಮಿಳುನಾಡು, ಕೇರಳದ ರಾಜ್ಯ ಸರಕಾರ ಗಳು ದೆಹಲಿಗೆ ಅಕಸ್ಮಾತ್ತಾಗಿ ಹೋಗುತ್ತಿರಲಿಲ್ಲ, ಅಲ್ಲವೇ? ಉದ್ದೇಶ ಏನೇ ಇರಲಿ, ಅವರು ಅಂದು ಎತ್ತಿದ ವಿಷಯವನ್ನು ಕೊಂಚ ಅವಲೋಕಿ ಸೋಣ. ಮೊದಲನೆಯದಾಗಿ, ಕೇಂದ್ರ ಸರಕಾರವು ತೆರಿಗೆ ಹಂಚಿಕೆ ವಿಷಯದಲ್ಲಿ ದಕ್ಷಿಣ ಮತ್ತು ಉತ್ತರದ ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿದ್ದು, ಇದು ಹೀಗೇ ಮುಂದುವರಿದರೆ ದಕ್ಷಿಣದ ರಾಜ್ಯಗಳು ಒಟ್ಟಾಗಿ ಪ್ರತ್ಯೇಕ ದೇಶಕ್ಕಾಗಿ ಹೋರಾಡ ಬೇಕಾಗಬಹುದು ಎಂಬುದು ಸುರೇಶರ ಮೊದಲ ದೃಷ್ಟಿಕೋನ. ಕೇಂದ್ರವು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಯನ್ನು ಅನಗತ್ಯವಾಗಿ ಹೇರುತ್ತಿದೆ ಎಂಬುದು ಅವರ ಇನ್ನೊಂದು ದೃಷ್ಟಿಕೋನ. ದಕ್ಷಿಣದ ಯಾವುದೇ ಭಾಷೆಯನ್ನು ಉತ್ತರ ಭಾರತದಲ್ಲಿ ೩ನೇ ಭಾಷೆಯಾಗಿ ಕಲಿಯುವ/ಕಲಿಸುವ ಆಯ್ಕೆಯಿಲ್ಲದಿರುವಾಗ, ದಕ್ಷಿಣದವರ ಮೇಲೆ ಹಿಂದಿ ಹೇರಿಕೆಯೇಕೆ? ಎಂಬುದು ಅವರ ವಾದದ ಸಾರಾಂಶ.
ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ಉತ್ತರ ಭಾರತದಲ್ಲಷ್ಟೇ ಸಕ್ರಿಯವಾಗಿದ್ದ ಸ್ವಾತಂತ್ರ್ಯ ಹೋರಾಟವನ್ನು ದಕ್ಷಿಣಕ್ಕೂ ವಿಸ್ತರಿಸಲೆಂದು ಮತ್ತುಹೋರಾಟದ ವಸ್ತು-ವಿಷಯಗಳನ್ನು ದೇಶ ದೆಲ್ಲಾ ನಿವಾಸಿಗಳೊಂದಿಗೆ ಸಂವಹಿಸಲು ಅನುಕೂಲ ವಾಗಲೆಂದು ಒಂದು ಭಾಷೆಯಾಗಿ ಹಿಂದಿಯನ್ನು ಕಲಿಸಬೇಕು ಮತ್ತು ಹಿಂದಿ ಬಳಸದ ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯನ್ನು ಪ್ರಚಾರ ಮಾಡಿ ಕಲಿಸಬೇಕು ಎಂಬ ಏಕೈಕ ಉದ್ದೇಶದಿಂದ ೧೯೧೮ರಲ್ಲಿ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಮಹಾತ್ಮ ಗಾಂಧಿಯವರು ಇದರ ಸ್ಥಾಪಕರಾದರೆ, ಅವರ ಮಗ ದೇವದಾಸ್ ಮೊದಲ ಪ್ರಚಾರಕರಾಗಿದ್ದರು.
೧೯೨೭ರಿಂದ ಕೊನೆಯುಸಿರು ಇರುವವರೆಗೂ ಮಹಾತ್ಮರೇ ಇದರ ಅಧ್ಯಕ್ಷರಾಗಿದ್ದರು. ಪ್ರಚಾರ ಕಾರ್ಯವನ್ನು ದಕ್ಷಿಣದವರೇ ಮಾಡಿದರೆ ಉತ್ತಮ ಎಂದುಆಲೋಚಿಸಿ ೧೯೩೬ರಲ್ಲಿ ಮದ್ರಾಸಿನಲ್ಲಿ ಕಚೇರಿಯೊಂದನ್ನು ನಿರ್ಮಿಸಲಾಯಿತು. ಅಂದಿನ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಜವಾಹರಲಾಲ್ ನೆಹರು ಇದನ್ನು ಉದ್ಘಾಟಿಸಿದರು. ನಂತರ ಆಂಧ್ರಪ್ರದೇಶ ಮತ್ತು ಕರ್ನಾಟಕದ ಧಾರವಾಡದಲ್ಲೂ ಇದರ ಕಚೇರಿ ಸ್ಥಾಪಿಸಿ ಕೆಲಸ ಮುಂದುವರಿಸಲಾಯಿತು.‘ರಾಷ್ಟ್ರಭಾಷಾ ವಿಶಾರದ’ ಎಂಬ ಪದವಿಯನ್ನು ಸಭಾದಿಂದ ಕೊಡಲಾಗುತ್ತಿತ್ತು. ಮಹಾತ್ಮರ ನಂತರ ಕರ್ನಾಟಕದ ನ್ಯಾ. ವಿ.ಎಸ್.ಮಳೀಮಠ್, ಡಾ. ಬಿ.ಡಿ. ಜತ್ತಿಯವರು ಸೇರಿದಂತೆ ಅನೇಕ ಮಹಾನುಭಾವರು ಈ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.
ಇಷ್ಟೆಲ್ಲಾ ಹೇಳಲು ಕಾರಣ, ದಕ್ಷಿಣ ಭಾರತೀಯರ ಮೇಲೆ ಹಿಂದಿ ಕಲಿಕೆ/ಹೇರಿಕೆ (ಹೇರಿಕೆಯೆಂದು ಭಾವಿಸುವುದಾದರೆ) ಕಳೆದ ೧೦ ವರ್ಷಗಳಿಂದೀಚೆಗೆ ಶುರುವಾದದ್ದಲ್ಲ; ಅದು ಬಹಳ ಹಿಂದೆಯೇ ಶುರುವಾಗಿ ಈಗಲೂ ನಡೆಯುತ್ತಿದೆ, ಬಹುಪಾಲು ಕಾಂಗ್ರೆಸ್ ಆಡಳಿತಾವಧಿಯಲ್ಲೇ ಪ್ರವರ್ಧಮಾನಕ್ಕೆ ಬಂದಿದೆ ಎಂಬ ವಾಸ್ತವ. ಇನ್ನು ಶಾಲೆಗಳಲ್ಲಿ೩ನೇ ಭಾಷೆಯಾಗಿ ಹಿಂದಿಯ ಆಯ್ಕೆ ದೊರೆಯುವಂತಾಗಲು ನಮ್ಮ ಅಂದಿನ ರಾಜ್ಯ ಸರಕಾರಗಳೇ ಕಾರಣವಲ್ಲವೇ? ಅದರ ಒಪ್ಪಿಗೆಯಿಂದಲೇ ತಾನೆ ಸಂಸ್ಕೃತದ ಜತೆಗೆ ಹಿಂದಿಯೂ ಪಠ್ಯದಲ್ಲಿ ಸೇರಿಕೊಂಡಿದ್ದು? ಆ ಕಾಲಘಟ್ಟದಲ್ಲೇ ‘ನಮಗೆ ಹಿಂದಿ ಬೇಡ’ ಎಂದು ನಿರ್ಧರಿಸಬೇಕಿದ್ದ ಕಾಂಗ್ರೆಸಿಗರೇ ಈಗ ಹೋರಾಡುತ್ತೇವೆ ಎಂದರೆ ಅದು ಬಾಲಿಶವಲ್ಲವೇ? ಪ್ರಸ್ತುತ, ಅನ್ಯದೇಶಗಳ ಭಾಷೆಯನ್ನೇ ನಮ್ಮ ಮಕ್ಕಳು ಕಲಿಯುತ್ತಿರುವಾಗ, ಒಂದು ಭಾರತೀಯ ಭಾಷೆಯಾಗಿ ಹಿಂದಿ ಕಲಿಕೆ ತಪ್ಪಲ್ಲ; ಆದರೆ ಅದು ಒತ್ತಾಯಪೂರ್ವಕವಾಗಿರಬಾರದಷ್ಟೇ.
ಇನ್ನು, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎನ್ನುವ ಚಿಂತನೆ ಮತ್ತು ಅದಕ್ಕಾಗಿ ರಾಷ್ಟ್ರವನ್ನೇ ಹೋಳುಮಾಡುವ ಮಾತಿನ ಕಡೆ ನೋಡೋಣ. ಆಯವ್ಯಯದ ಅನುದಾನ ಕಳೆದ ೧೦ ವರ್ಷಗಳಿಂದಲೂ ಇದೇ ತೆರನಾಗಿದ್ದು, ಈ ಅವಧಿಯಲ್ಲಿ ಸುರೇಶರೇ ಸಂಸದರಾಗಿದರು. ಆದರೆ ತಾರತಮ್ಯ ಗಮನಕ್ಕೆ ಬಂದಿದ್ದು ಮಾತ್ರ ಈಗ ಎಂಬುದು ಏನನ್ನು ತೋರಿಸುತ್ತದೆ? ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ, ‘ನಮ್ಮ ತೆರಿಗೆ, ನಮ್ಮ ಹಕ್ಕು’ ಆಗಲು ತತ್ತ್ವಶಃ ಸಾಧ್ಯವಿಲ್ಲ.
ಹೀಗೆ ಹಿಂದೆಯೂ ನಡೆದಿರಲಿಲ್ಲ, ಮುಂದೆಯೂ ನಡೆಯು ವುದಿಲ್ಲ. ಹಾಗೆ ರಾಜ್ಯಗಳ ಆದಾಯವನ್ನು ರಾಜ್ಯಗಳೇ ಬಳಸುವಂತಾದರೆ ‘ಒಕ್ಕೂಟ ವ್ಯವಸ್ಥೆ’ ಎಂಬ ಪರಿಕಲ್ಪನೆಗೆ ಅರ್ಥ ವಿರುವುದಿಲ್ಲ. ‘ನನ್ನ ೧೦೦ ರುಪಾಯಿಗೆ ನನಗೆ ಸಿಗುವುದು ೧೩ ರು. ಮಾತ್ರ, ಇದು ನ್ಯಾಯವೇ?’ ಎಂದು ಕೇಳುವವರು, ಕಳೆದ ೭೦ ವರ್ಷಗಳಲ್ಲಿ ಅಂಥ ೧೦೦ ರುಪಾಯಿಗೆ ಎಷ್ಟು ಸಿಗುತ್ತಿತ್ತು ಎಂಬುದನ್ನೂ ಹೇಳಬೇಕಲ್ಲ! ಕೇಂದ್ರ ಆಳುಗರಾಗಿ ಬಿಜೆಪಿಯವರೂ ಈ ದಾಖಲೆಯನ್ನು ಜನರ ಮುಂದಿಡ ಬೇಕಲ್ಲ!
ಎರಡೂ ಇಲ್ಲ. ಏಕೆಂದರೆ, ಈ ದಾಖಲೆ ಈಚೆ ಬಂದರೆ ಬೀದಿರಂಪಕ್ಕೆ ಅವಕಾಶವೇ ಇರುವುದಿಲ್ಲ ನೋಡಿ! ಒಂದೋ ಆಚೆ, ಇಲ್ಲವೇ ಈಚೆ ಆಗಿಬಿಡುತ್ತದೆ. ಅದಕ್ಕಿಂತ ಹೆಚ್ಚಾಗಿ, ತೆರಿಗೆ ಪಾವತಿಸುವ ವ್ಯಕ್ತಿ ಅಥವಾ ಸಂಸ್ಥೆಗಳು ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎಂಬ ಬೇಡಿಕೆಯನ್ನು ರಾಜ್ಯ ಸರಕಾರಗಳ ಮುಂದಿಟ್ಟರೆ ಏನಾಗುತ್ತದೆ? ವಾಸ್ತವವಾಗಿ ‘ನಮ್ಮ ತೆರಿಗೆ, ನಮ್ಮ ಹಕ್ಕು’ ಎನ್ನುವವರು ಅವರು ತಾನೇ? ರಾಜ್ಯ ಸರಕಾರ ಗಳು ವ್ಯಕ್ತಿ ಅಥವಾ ಸಂಸ್ಥೆಗಳಿಂದ ಕಾನೂನು ರೀತ್ಯಾ ತೆರಿಗೆ ಸಂಗ್ರಹಿಸುತ್ತವೆಯಷ್ಟೇ.
ತೆರಿಗೆ ಸಂಗ್ರಹವನ್ನು ದಕ್ಷತೆಯಿಂದ ನಿರ್ವಹಿಸುತ್ತಿರುವ ಕರ್ನಾಟಕದಂಥ ರಾಜ್ಯಗಳನ್ನು ಪ್ರೋತ್ಸಾಹಿಸುವಲ್ಲಿ ಹಣಕಾಸು ಆಯೋಗದಲ್ಲಿ ಅಗತ್ಯ ಬದಲಾವಣೆಯಾಗಬೇಕು ಎಂಬ ಒತ್ತಾಯ ನನ್ನದೂ ಹೌದು. ಅದಕ್ಕಾಗಿ ಹೋರಾಟದ ಹಾದಿ ಹಿಡಿಯೋಣ, ಆಯೋಗದ ಶಿಫಾರಸಿನಂತೆ ಕೇಂದ್ರ ಅನುದಾನಿಸದಿದ್ದರೆ ಕೋರ್ಟ್ ಬಾಗಿಲು ಬಡಿಯೋಣ. ಅದು ಬಿಟ್ಟು ದೇಶವನ್ನು ಒಡೆಯುವ ಮಾತಾಡುವುದು ಸಲ್ಲ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)