ರಾಜ್ಯದಲ್ಲಿ ನೀಗದ ಬಾಲ್ಯವಿವಾಹದ ಆತಂಕ
ಸಾಮಾಜಿಕ ಜಾಗೃತಿ
ಡಾ.ಅಮ್ಮಸಂದ್ರ ಸುರೇಶ್
@.
ಕಳೆದ ಐದು ವರ್ಷಗಳ ಅವಽಯಲ್ಲಿ ಭಾರತದಲ್ಲಿ ಬಾಲ್ಯ ವಿವಾಹಗಳು ಹೆಚ್ಚು ನಡೆದಿರುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು ಎಂಬುದು ಕಳವಳ ಕಾರಿ ಸಂಗತಿ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ ಎಫ್ ಎಚ್‌ಎಸ್-೫) ಹಾಗೂ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ – ಅಂಶಗಳ ಪ್ರಕಾರ ೨೦೨೩ರಲ್ಲಿ ಕರ್ನಾಟಕದಲ್ಲಿ ೧,೦೪೨ ಬಾಲ್ಯ ವಿವಾಹಗಳು ನಡೆದಿವೆ.
೨೦೧೮ರಿಂದ ೨೦೨೨ರ ಅವಽಯಲ್ಲಿ ಭಾರತದಲ್ಲಿ ಒಟ್ಟು ೩,೫೨೪ ಬಾಲ್ಯ ವಿವಾಹಗಳು ನಡೆದಿವೆ. ದೇಶದಲ್ಲಿನ ಪ್ರತಿ ಕುಟುಂಬದ ಸ್ಥಿತಿಗತಿ ಪರಿಶೀಲಿಸಲುಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿ ಐದು ವರ್ಷಕ್ಕೊಮ್ಮೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನಡೆಸುತ್ತದೆ. ಕುಟುಂಬದ ಪ್ರತಿ ಸದಸ್ಯರ ಆರೋಗ್ಯ, ವೈವಾಹಿಕ ಸ್ಥಿತಿಗತಿ, ವಿವಾಹವಾದ ವಯಸ್ಸು ಸೇರಿ ಹಲವು ಮಾಹಿತಿಗಳನ್ನು ಕಲೆಹಾಕಲಾಗುತ್ತದೆ. ಇಂತಹ ಐದನೇ ಸುತ್ತಿನ ಸಮೀಕ್ಷೆಯನ್ನು(ಎನ್‌ಎ-ಎಚ್‌ಎಸ್-೫) ೨೦೨೦-೨೧ರಲ್ಲಿ ನಡೆಸಲಾಗಿತ್ತು. ೨೦೨೨ರಲ್ಲಿ ವರದಿಯನ್ನು ಬಿಡುಗಡೆ ಮಾಡಲಾಗಿತ್ತು.
ಇತ್ತೀಚೆಗೆ ವಿಧಾನಪರಿಷತ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ ೯೦೬ ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಮೂರು ವರ್ಷಗಳಲ್ಲಿ ೯೮೬ ಬಾಲಕಿಯರು ಗರ್ಭಿಣಿ ಹಾಗೂ ತಾಯಂದಿರಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರ ದಲ್ಲಿ ಉಲ್ಲೇಖಿಸಿದ್ದಾರೆ. ಈ ಅಂಕಿ-ಅಂಶಗಳ ಮೇಲೆ ಸದನದಲ್ಲಿ ಚರ್ಚೆಯೂ ಆಗಿದೆ.
೧೮ವರ್ಷದ ಒಳಗಿನ ಬಾಲಕಿ ಮತ್ತು ೨೧ ವರ್ಷದ ಒಳಗಿನ ಹುಡುಗರ ನಡುವೆ ನಡೆಯುವ ವಿವಾಹವು ‘ಬಾಲ್ಯವಿವಾಹ’ ಎನಿಸಿಕೊಳ್ಳುತ್ತದೆ. ಇಂತಹ ದಂಪತಿಯಲ್ಲಿ ಯಾರಾದರೊಬ್ಬರು ನಿಗದಿತ ವಯಸ್ಸಿಗಿಂತ ಚಿಕ್ಕವರಾಗಿದ್ದರೂ ಅಂಥ ಮದುವೆಯನ್ನು ’ಬಾಲ್ಯವಿವಾಹ’ ಎಂದೇ ಪರಿಗಣಿಸಲಾಗುತ್ತದೆ. ಅಂಕಿಅಂಶಗಳ ಪ್ರಕಾರ ೨೦೧೮ರಿಂದ ೨೦೨೨ರ ಅವಽಯಲ್ಲಿ ಕರ್ನಾಟಕದಲ್ಲಿ ೭೦೬, ಅಸ್ಸಾಂನಲ್ಲಿ ೫೫೪, ತಮಿಳುನಾಡಿನಲ್ಲಿ ೪೧೪, ಪಶ್ಚಿಮ ಬಂಗಾಳ ದಲ್ಲಿ ೩೯೦, ಮಹಾರಾಷ್ಟ್ರದಲ್ಲಿ ೧೮೫ ಬಾಲ್ಯ ವಿವಾಹಗಳು ನಡೆದಿವೆ.
೨೦೩೦ರೊಳಗೆ ಭಾರತವನ್ನು ‘ಬಾಲ್ಯವಿವಾಹ ಮುಕ್ತ ದೇಶ’ವಾಗಿ ರೂಪಿಸುವ ಗುರಿಯೊಂದಿಗೆ ಬಾಲ್ಯ ವಿವಾಹ ನಿಷೇಧ ಕಾಯಿದೆ-೨೦೦೬ ಜಾರಿಗೊಳಿಸ ಲಾಯಿತು. ಆದರೆ ಅಸ್ಸಾಂನಲ್ಲಿ ಇದೀಗ ತುಸು ಕಠಿಣ ಕ್ರಮಕ್ಕೆ ಸರಕಾರ ಮುಂದಾಗಿದೆಯಾದರೂ, ಬೇರೆಡೆಗಳಲ್ಲಿ ಕಾಯಿದೆ ಜಾರಿಯಾಗಿ ೧೬ ವರ್ಷ ಗಳು ಕಳೆದರೂ ಅಂತಹ ಯಶಸ್ಸನ್ನು ಇನ್ನೂ ಸಾಧಿಸಲಾಗಿಲ್ಲ. ಅಸ್ಸಾಂ ಸೇರಿ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾಲ್ಯ ವಿವಾಹವು ದೊಡ್ಡ ಪ್ರಮಾಣದಲ್ಲಿ ನಡೆದಿರುವುದನ್ನು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತವೆ. ಇಂತಹ ಬಾಲ್ಯವಿವಾಹಗಳ ವಿರುದ್ಧ ಎಷ್ಟೋ ಸಂದರ್ಭದಲ್ಲಿ ಪ್ರಕರಣಗಳೇ ದಾಖಲಾಗುತ್ತಿಲ್ಲ ಎಂಬುದನ್ನು ಸಹ ಸರಕಾರದ ದಾಖಲೆಗಳು ತೋರಿಸುತ್ತವೆ.
ಉದಾಹರಣೆಗೆ, ೨೦೨೧ರಲ್ಲಿ ದೇಶದಾದ್ಯಂತ ಬಾಲ್ಯವಿವಾಹ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ ೧೦೫೦ ಮಾತ್ರ. ಕಾನೂನಿನಂತೆ ೧೮ ವರ್ಷ ಮೀರದ ಬಾಲಕಿಯನ್ನು ಮದುವೆ ಮಾಡಿಕೊಂಡ ವರ, ಎರಡೂ ಕಡೆಯ ಪೋಷಕರು, ಮದುವೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ದೂರುದಾಖಲಿಸಬೇಕು. ಆದರೆ ಹೆಚ್ಚಿನ ಘಟನೆಗಳಲ್ಲಿ ಪ್ರಕರಣ ದಾಖಲಿಸದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪೋಷಕರೊಂದಿಗೆ ಶಾಮೀಲಾಗಿ ಹೆಸರಿಗೆ ಮಾತ್ರ ಒಂದೆರಡು ದಿನಗಳ ಕಾಲ ಬಾಲಕಿಯನ್ನು ಸಾಂತ್ವನ ಕೇಂದ್ರದಲ್ಲಿಟ್ಟುಕೊಂಡು ಬಳಿಕ ಬಿಟ್ಟು ಕಳುಹಿಸುತ್ತಿದ್ದಾರೆ.
ಎಷ್ಟೋ ಘಟನೆಗಳಲ್ಲಿ ಹೀಗೆ ಸಾಂತ್ವನ ಕೇಂದ್ರದಿಂದ ಹೊರ ಹೋದ ಮಗು ನಂತರ ಎಲ್ಲಿ ಹೋಗಿದೆ, ಏನಾಗಿದೆ ಎಂಬುದನ್ನು ಪರಿಶೀಲಿಸುವ ಕಾರ್ಯ ಕ್ಕೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಬಹುತೇಕ ಪ್ರಕರಣಗಳಲ್ಲಿ ಪೋಷಕರು ಪುನಃ ಮಗುವನ್ನು ಪತಿಯ ಮನೆಗೇ ಕಳುಹಿಸುತ್ತಿದ್ದಾರೆ ಎಂಬುದು ವೇದ್ಯ. ಕಾಯಿದೆ ಪ್ರಕಾರ ಶಿಕ್ಷಣ, ಕಂದಾಯ, ಪಂಚಾಯತ್ ರಾಜ್, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘದ ಸದಸ್ಯರನ್ನೊಳಗೊಂಡ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯನ್ನು ಸರಕಾರ ಈಗಾಗಲೆ ರಚಿಸಿದೆ. ಈ ಸಮಿತಿಯು ಬಾಲ್ಯ ವಿವಾಹ ತಡೆಯುವ ಉದ್ದೇಶದಿಂದ ಅವುಗಳನ್ನು ಗುರುತಿಸುವುದು, ಕಂಡುಬಂದರೆ ತಕ್ಷಣ ನಿಲ್ಲಿಸುವುದು, ಮಕ್ಕಳ ರಕ್ಷಣೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ, ಮಕ್ಕಳ ಪುನರ್ವಸತಿ ಹಾಗೂ ಅನುಸರಣಾ ಕ್ರಮಗಳನ್ನು ಕೈಗೊಳ್ಳಲು ಕ್ರಮಬದ್ಧ ಕಾರ್ಯ ವಿಧಾನವನ್ನು ಕೂಡ ಜಾರಿಗೆ ತಂದಿದೆ.
ಪ್ರತಿ ಪೊಲೀಸ್ ಅಧಿಕಾರಿ ತನ್ನ ವ್ಯಾಪಿಯಲ್ಲಿ ಬಾಲ್ಯ ವಿವಾಹ ಕಂಡುಬಂದರೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಅವಕಾಶ ಇದೆ. ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ ೨ ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಲು ಅವಕಾಶವಿದೆ. ಬಾಲ್ಯವಿವಾಹಗಳ ಪ್ರಮಾಣ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ಗ್ರಾಮೀಣ ಭಾರತದ ಅನೇಕ ಭಾಗಗಳಲ್ಲಿ ಆಚರಣೆಯಲ್ಲಿರುವ ವರದಕ್ಷಿಣೆ ವ್ಯವಸ್ಥೆ, ಜಾತಿ ಪರಿಗಣನೆಗಳು ಮತ್ತು ಕುಟುಂಬದ ಗೌರವವನ್ನು ಕಾಪಾಡುವ ನೆಪದಲ್ಲಿ ಆಳವಾಗಿ ಬೇರೂರಿರುವ ಸಾಂಸ್ಕೃತಿಕ ರೂಢಿಗಳು ಮತ್ತು ಸಂಪ್ರದಾಯ ಗಳು ಬಾಲ್ಯ ವಿವಾಹದ ನಿರಂತರತೆಗೆ ಪ್ರಮುಖ ಕಾರಣಗಳಾಗಿವೆ. ಬಡತನ, ಶಿಕ್ಷಣದ ಕೊರತೆ ಮತ್ತು ಸೀಮಿತ ಆರ್ಥಿಕ ಅವಕಾಶಗಳು ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಲು ಪ್ರೇರೇಪಿಸುತ್ತವೆ.
ಇದು ಹದಿಹರೆಯದ ಗರ್ಭಧಾರಣೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಯುವತಿಯರು ಮತ್ತು ಮಹಿಳೆಯರಿಗೆ ಸೀಮಿತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಸೇರಿದಂತೆ ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಲಿಂಗ ಅಸಮಾನತೆಗಳು ಈ ಅಪಾಯವನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿವೆ. ೧೦ ರಿಂದ ೧೯ ವರ್ಷ ವಯಸ್ಸಿನ ಹುಡುಗಿಯರಲ್ಲಿ ಸಂಭವಿಸುವ ಗರ್ಭಧಾರಣೆಯನ್ನು ‘ಹದಿಹರೆಯದ ಗರ್ಭಧಾರಣೆ’ ಎಂದು ವ್ಯಾಖ್ಯಾನಿಸಲಾಗಿದೆ, ಹುಡುಗಿ ಯರಿಗೆ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿದಾಗ ಅವರು ಬೇಗನೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮತ್ತು ಆರಂಭಿಕ ಗರ್ಭಧಾರಣೆಯ ಹೆಚ್ಚಿನ ಅಪಾಯವನ್ನು ಎದುರಿಸುವ ಸಾಧ್ಯತೆಗಳು ಹೆಚ್ಚುತ್ತಿವೆ. ಬಾಲ್ಯವಿವಾಹಗಳು ಹೆಣ್ಣು ಮಕ್ಕಳ ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಹಲವು ಅಂಶಗಳ ಮೇಲೆ ದುಷ್ಪರಿಣಾಮಗಳನ್ನು ಬೀರತ್ತವೆ. ಆರಂಭಿಕ ವಿವಾಹವು ಹದಿಹರೆಯದ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಇದು ತಾಯಿ ಮತ್ತು ಮಗುವಿಗೆ ಗಮನಾರ್ಹವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ. ಇದಕ್ಕೆ ಪ್ರಮುಖ ಕಾರಣ ಯುವತಿಯರ ದೇಹವು ಸಾಮಾನ್ಯವಾಗಿ ಸಂಪೂರ್ಣವಾಗಿ ಅಭಿವೃದ್ಧಿಯಾಗುವುದಿಲ್ಲ.
ಹದಿಹರೆಯದ ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಹಲವು ಹೆಣ್ಣು ಮಕ್ಕಳಲ್ಲಿ ಹಲವು ಸಮಸ್ಯೆಗಳನ್ನು ಉಂಟಾಗುತ್ತವೆ. ಅನೇಕ ಸಂದರ್ಭಗಳಲ್ಲಿ ಶಿಶು ಮರಣದ ಪ್ರಮಾಣವನ್ನು ಹೆಚ್ಚಿಸುವ ಜತೆಗೆ ತಾಯಿಯ ಪ್ರಾಣಹಾನಿ ಕೂಡ ಸಂಭವಿಸಬಹುದು. ಯುವ ತಾಯಂದಿರು ಮತ್ತುಅವರ ಮಕ್ಕಳ ಯೋಗಕ್ಷೇಮ ಮತ್ತು ಅಭಿವೃದ್ಧಿಗೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳು ತಮ್ಮ ದೈಹಿಕ, ಭಾವನಾತ್ಮಕ ಮತ್ತು ಅರಿವಿನ ಬೆಳವಣಿಗೆಯಲ್ಲಿ ಸವಾಲುಗಳನ್ನು ಎದುರಿಸಬಹುದು. ಬಾಲ್ಯವಿವಾಹಕ್ಕೆ ಒಳಪಡುವ ಯುವ ವಧುಗಳುತಮ್ಮ ವೈವಾಹಿಕ ಸಂಬಂಧಗಳಲ್ಲಿ ದುರ್ಬಲತೆ, ಪ್ರತ್ಯೇಕತೆ ಮತ್ತು ಸೀಮಿತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಹೆಚ್ಚಾಗಿ ಅನುಭವಿಸುತ್ತಾರೆ. ಇದು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಜನರಲ್ಲಿ ಜಾಗೃತಿ ಮತ್ತು ಜವಾಬ್ದಾರಿಗಳು ಉಂಟಾಗದೇ ಕೇವಲ ಸರಕಾರಿ ಯೋಜನೆಗಳಿಂದ ಮಾತ್ರ ಇಂತಹ ಸಾಮಾಜಿಕ ಸಮಸ್ಯೆಯನ್ನು ಸಂಪೂರ್ಣ ವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ನಾಗರಿಕರು, ಅಧಿಕಾರಿಗಳು, ವಿಶೇಷವಾಗಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಜನಪ್ರತಿನಿಧಿಗಳು, ಮಹಿಳಾ ಸ್ವ-ಸಹಾಯ ಗುಂಪುಗಳು, ಮಹಿಳಾ ಸಂಘಟನೆಗಳು ಶ್ರಮಿಸಿದರೆ ಬಾಲ್ಯವಿವಾಹ ಪ್ರಕರಣಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಶಿಕ್ಷಕರು ಅದರಲ್ಲೂ ವಿಶೇಷವಾಗಿ ಶಿಕ್ಷಕಿಯರು ಶಾಲೆಗಳಲ್ಲಿ ಸಮಗ್ರ ಮತ್ತು ವಯಸ್ಸಿಗೆ ಸೂಕ್ತವಾದ ಲೈಂಗಿಕ ಶಿಕ್ಷಣವನ್ನು ಹೆಣ್ಣು ಮಕ್ಕಳಿಗೆ ನೀಡಬೇಕು. ಇದು ಹದಿಹರೆಯದವರಿಗೆ ಸಂತಾನೋತ್ಪತ್ತಿ ಆರೋಗ್ಯ, ಗರ್ಭನಿರೋಧಕ ಮತ್ತು ಜವಾಬ್ದಾರಿಯುತ ಲೈಂಗಿಕ ನಡವಳಿಕೆಯ ಬಗ್ಗೆ ಜ್ಞಾನವನ್ನು ನೀಡುತ್ತದೆ.
ಜಾಗತಿಕವಾಗಿ ಬಾಲ್ಯವಿವಾಹ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಅಲ್ಪ ಪ್ರಮಾಣದ ಪ್ರಗತಿ ಸಾಧಿಸಲಾಗಿದೆ. ಭಾರತದಲ್ಲಿ ಕೂಡ ಬಾಲ್ಯವಿವಾಹಗಳ ಪ್ರಮಾಣದಲ್ಲಿ ಇದೇ ಪ್ರವೃತ್ತಿ ಇದೆ. ೨೦೦೫ರಲ್ಲಿ ಶೇ.೪೭.೪ರಷ್ಟಿದ್ದ ಬಾಲ್ಯವಿವಾಹ ಪ್ರಕರಣಗಳು ೨೦೨೧ರ ವೇಳೆಗೆ ಶೇ.೨೩.೩ಕ್ಕೆ ಇಳಿದಿದೆ. ಇದುಗಮನಾರ್ಹ ಸಂಗತಿ ಕೂಡ. ಈ ಸಂಕೀರ್ಣ ಸಮಸ್ಯೆ ಪರಿಹರಿಸುವಲ್ಲಿ ಭಾರತವು ಇನ್ನೂ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿದೆ.
(ಲೇಖಕರು ಸಾಮಾಜಿಕ ತಜ್ಞರು)