ಕಾಂಗ್ರೆಸ್ ಮುಕ್ತ ಭಾರತದಿಂದ ಕಾಂಗ್ರೆಸ್ ಯುಕ್ತ ಬಿಜೆಪಿ ಕಡೆಗೆ
ರಾಜಮಾರ್ಗ
ರಾಜದೀಪ್ ಸರದೇಸಾಯಿ
ದಿಲ್ಲಿಯ ರಾಜಕೀಯ ಕಾರಿಡಾರ್‌ಗಳಲ್ಲೀಗ ದಿನಕ್ಕೊಂದು ಊಹಾಪುಂಕ ಹಬ್ಬುತ್ತಿದೆ. ‘ಕಾಂಗ್ರೆಸ್‌ಯುಕ್ತ ಬಿಜೆಪಿ’ಯನ್ನು ಸೇರಿಕೊಳ್ಳಲು ಉತ್ಸುಕರಾಗಿ ಕಾಂಗ್ರೆಸ್ ತೊರೆಯಲು ಕಾದಿರುವ ಮುಂದಿನ ನಾಯಕ ಯಾರು? ಇದು ಪ್ರಶ್ನೆ. ಬಿಜೆಪಿ ನಾಯಕರು ೨೦೨೪ರ ಲೋಕಸಭೆ ಚುನಾವಣೆಯಲ್ಲಿ ೪೦೦ ಸ್ಥಾನಗಳ ಗಡಿ ದಾಟುತ್ತೇವೆಂದು ಟಾಂಟಾಂ ಹೊಡೆಯುತ್ತಿದ್ದಾರೆ. ದೇಶದ ಪುರಾತನ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ನಾಯಕರು, ಈ ಬಾರಿ ತಾವು ಲೋಕಸಭೆಯಲ್ಲಿ ಅಧಿಕೃತ ವಿಪಕ್ಷ ಸ್ಥಾನ ಪಡೆಯಲು ಬೇಕಾದ ೫೪ ಸೀಟುಗಳನ್ನಾದರೂ ಗೆಲ್ಲುತ್ತೇವೆಯೋ ಇಲ್ಲವೋ ಎಂಬ ಚಿಂತೆಯಲ್ಲಿ ಮುಳುಗಿ ದ್ದಾರೆ.
೨೦೧೪ರ ಲೋಕಸಭೆ ಚುನಾವಣೆಯನ್ನೊಮ್ಮೆ ನೆನಪು ಮಾಡಿಕೊಳ್ಳಿ. ಆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ಅತ್ಯಂತ ಕಡಿಮೆ ೪೪ ಸೀಟು ಗಳನ್ನು ಗೆದ್ದಿತ್ತು. ೨೦೧೯ರಲ್ಲಿ  ಕೊಂಚ ಸುಧಾರಣೆ ಮಾಡಿಕೊಂಡು ೫೨ ಸೀಟುಗಳನ್ನು ಪಡೆಯಿತು. ದಕ್ಷಿಣದ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದಲ್ಲಿ ಪಕ್ಷಕ್ಕೆ ಕೆಲ ಸೀಟುಗಳು ಬಂದಿದ್ದರಿಂದ ಹಿಂದಿನ ಅವಧಿಗಿಂತ ಫಲಿತಾಂಶ ಸ್ವಲ್ಪ ಸುಧಾರಣೆಯಾಗಿತ್ತು. ಈಗ ೨೦೨೪ರಲ್ಲಿ ಕೂಡ ಬಹುತೇಕ ಎಲ್ಲ ಚುನಾವಣಾ ಪೂರ್ವ ಸಮೀಕ್ಷೆಗಳೂ ಕಾಂಗ್ರೆಸ್, ಯಾವುದೇ ರಾಜ್ಯದಲ್ಲಿ ಎರಡಂಕಿಯ ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿಲ್ಲ ಎಂದೇ ಹೇಳುತ್ತಿವೆ. ಕೇರಳ ಮತ್ತು ತೆಲಂಗಾಣ ಮಾತ್ರ ಇದಕ್ಕೆ ಅಪವಾದವಾಗಬಹುದು.
ಹಿಂದಿನ ಎರಡೂ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ದ ‘ವಾಯವ್ಯ ಮಾರುತ’ ಈ ಬಾರಿಯೂ ಅದನ್ನೇ ಮಾಡಬಹುದು ಎಂದು ಊಹಿಸಲಾಗುತ್ತಿದೆ. ಪಶ್ಚಿಮದ ಸಮುದ್ರ ದಂಡೆಯಿಂದ ಆರಂಭಿಸಿ ಉತ್ತರದ ಹಿಂದಿ ಹೃದಯ ರಾಜ್ಯಗಳವರೆಗೆ ಬಿಜೆಪಿಗೆ ಮತಗಳ ಸುರಿಮಳೆ ಸುರಿಸುವವಾಯವ್ಯ ಬೆಲ್ಟ್ ಹರಡಿಕೊಂಡಿದೆ. ಈ ಬೆಲ್ಟ್ ಕಾಂಗ್ರೆಸ್‌ಗೆ ದುಸ್ವಪ್ನದಂತೆ ಕಾಡುತ್ತಿದೆ. ಉದಾಹರಣೆಗೆ, ೨೦೧೯ರ ಚುನಾವಣೆಯಲ್ಲಿ ೨೪೩ ಸೀಟುಗಳಿರುವ ಈ ವಾಯವ್ಯ ಬೆಲ್ಟ್‌ನ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಕೇವಲ ೧೦ ಸೀಟುಗಳನ್ನು ಗೆದ್ದಿತ್ತು.
ಹಾಗೆ ನೋಡಿದರೆ ಕಾಂಗ್ರೆಸ್‌ನ ಅವಸಾನ ಆರಂಭವಾಗಿದ್ದು ೨೦೧೪ರಲ್ಲಿ ನರೇಂದ್ರ ಮೋದಿ ಪ್ರವರ್ಧಮಾನಕ್ಕೆ ಬಂದ ನಂತರ ಅಲ್ಲ. ಇಂದಿರಾ ಗಾಂಽಯ ಹತ್ಯೆ ನಂತರ ನಡೆದ ೧೯೮೪ರ ಚುನಾವಣೆಯಲ್ಲಿ ಕಾಂಗ್ರೆಸ್ ಅದ್ಭುತ ಬಹುಮತ ಗಳಿಸಿದ್ದೇ ಕೊನೆ, ನಂತರ ನಡೆದ ಯಾವುದೇ ಚುನಾವಣೆಯಲ್ಲಿ ಸರಳಬಹುಮತವನ್ನು ಕೂಡ ಗಳಿಸಿಲ್ಲ. ಚುನಾವಣೆಗಳಲ್ಲಿ ನೀರಸ ಪ್ರದರ್ಶನ ನೀಡುವ ಕಾಂಗ್ರೆಸ್‌ನ ಈ ಸಮಸ್ಯೆಯ ಹೊರತಾಗಿ ಇನ್ನೂ ಒಂದು ಪ್ರಶ್ನೆಯಿಲ್ಲಿ ಉದ್ಭವಿಸುತ್ತದೆ: ರಾಜಕೀಯ ಅವಸಾನ ಆರಂಭವಾದ ನಂತರ ಮತದಾರರ ಮನ ಗೆಲ್ಲಲು ಈ ಪಕ್ಷ ಏನು ಬದಲಾವಣೆ ಮಾಡಿಕೊಂಡಿದೆ? ಕಾಂಗ್ರೆಸ್ ನಾಯಕರು (ಅನೇಕ ಮಾಧ್ಯಮಗಳು ಕೂಡ) ಬಿಜೆಪಿ ಸರಕಾರ ತನಿಖಾ ಸಂಸ್ಥೆಗಳೂ ಸೇರಿದಂತೆ ಪ್ರಮುಖ ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿರುವುದರಿಂದ ‘ಲೆವೆಲ್ ಪ್ಲೇಯಿಂಗ್’ ಫೀಲ್ಡೇ ಇಲ್ಲ ಎಂದು ಆರೋಪಿಸುತ್ತಾರೆ.
ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮಾಡಿದ ಉಪದ್ವ್ಯಾಪದಿಂದ ಹಿಡಿದು ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗರು ನಡೆಸಿದ ಆಪರೇಷನ್ ಕಮಲಗಳು ಇದಕ್ಕೆ ಪುಷ್ಟಿ ನೀಡುತ್ತವೆ. ಈ ರೀತಿಯ ಹಿಂಬಾಗಿಲ ಪ್ರಯತ್ನಗಳು ಬಿಜೆಪಿಗೆ ನಿಸ್ಸಂಶಯವಾಗಿ ದೇಶದಲ್ಲಿ ಅಧಿಕಾರ ಹಿಡಿಯಲು ತನ್ನ ರಾಜಕೀಯ ವಿರೋಧಿಗಳಿಗೆ ಇರುವುದಕ್ಕಿಂತ ಹೆಚ್ಚಿನ ಅನುಕೂಲ ಒದಗಿಸಿಕೊಟ್ಟಿವೆ. ಆದರೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಬಲಿಷ್ಠ ಪರ್ಯಾಯ ರಾಜಕೀಯ ಪಕ್ಷವಾಗಿ ತನ್ನನ್ನು ಮರುರೂಪಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಕಾಂಗ್ರೆಸ್ ಪಕ್ಷ ಈ ನೆಪವನ್ನೇ ಹೇಳುತ್ತಾ ಕುಳಿತುಕೊಳ್ಳುವಂತಿಲ್ಲ. ಕಳೆದೊಂದು ದಶಕದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಕಾಂಗ್ರೆಸ್ ಪಕ್ಷ ವಿಫಲಗೊಂಡಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ಮತದಾರರ ಜೊತೆಗೆ ಕಳೆದುಕೊಂಡಿದ್ದ ಸಂಪರ್ಕವನ್ನು ಮರುಸ್ಥಾಪನೆ ಮಾಡಿಕೊಳ್ಳುವಲ್ಲಿ ರಾಹುಲ್ ಗಾಂಧಿಯವರ ಯಾತ್ರೆಗಳು ತಕ್ಕಮಟ್ಟಿಗೆ ಅನುಕೂಲವನ್ನೇನೋ ಮಾಡಿಕೊಡುತ್ತಿವೆ. ಆದರೆ ಹತ್ತಾರು ವರ್ಷಗಳ ಕಾಲ ಸಾಂಸ್ಥಿಕ ನಿರ್ಲಕ್ಷ್ಯದಿಂದ ಕಳೆದುಕೊಂಡ ಮನ್ನಣೆಯನ್ನು ಮತ್ತೆ ಗಳಿಸಿಕೊಳ್ಳಲು ಇಂತಹ ಯಾತ್ರೆಗಳು ನೆರವಿಗೆ ಬರಲಾರವು. ಒಮ್ಮೊಮ್ಮೆ ರಾಹುಲ್ ಗಾಂಧಿಯವರು ಬಿರುಗಾಳಿಯಿಂದ ವ್ಯಗ್ರಗೊಂಡ ಸಮುದ್ರದಲ್ಲಿ ಸೋರುತ್ತಿರುವ ಹಡಗನ್ನು ರಕ್ಷಿಸಲು ಯತ್ನಿಸುವ ಧೈರ್ಯಶಾಲಿ, ಆದರೆ ಗೊಂದಲಗೊಂಡ, ಕ್ಯಾಪ್ಟನ್‌ನಂತೆ ಕಾಣಿಸುತ್ತಾರೆ. ಏನೇ ಆದರೂ ಹಡಗನ್ನು ದಡ ಮುಟ್ಟಿಸುತ್ತೇನೆ ಎಂಬ ಕೆಚ್ಚಿನಿಂದ ಕ್ಯಾಪ್ಟನ್ ಪ್ರಯತ್ನ ಮಾಡುತ್ತಿರುವುದು ಆತನ ಧೈರ್ಯವನ್ನು ತೋರಿಸಿದರೂ, ಮುರಿದು ಬೀಳುತ್ತಿರುವ ಹಡಗು ನಿಜವಾಗಿಯೂ ದಡ ಸೇರುತ್ತದೆ ಎಂದು ನಂಬುವುದು ಮೂರ್ಖತನವಾಗುತ್ತದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಕಷ್ಟು ಪ್ರಯತ್ನ ಮಾಡಿ ಪಕ್ಷ ಕಟ್ಟುತ್ತಿದ್ದಾರೆ. ಬ್ಲಾಕ್ ಮಟ್ಟದ ಕಾರ್ಯಕರ್ತರಿಗೂ ಅವರು ಕೈಗೆ ಸಿಗುತ್ತಾರೆ. ಆದರೆ ಅವರಿಗೆ ಸುದೀರ್ಘ ಹೋರಾಟವೊಂದನ್ನು ಮುನ್ನಡೆಸುವ ಶಕ್ತಿಯಾಗಲೀ, ಅಧಿಕಾರವಾಗಲೀ ಇಲ್ಲ. ಚೋದ್ಯವೆಂದರೆ, ದೇಶದಲ್ಲಿಂದು ಅಽಕಾರ ನಡೆಸುತ್ತಿರುವ ಕನಿಷ್ಠ ಎಂಟು ಹಾಲಿ ಮುಖ್ಯಮಂತ್ರಿಗಳು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದವರಾಗಿದ್ದಾರೆ. ಕಳೆದ ಒಂದೇ ದಶಕದಲ್ಲಿ ಕಾಂಗ್ರೆಸ್‌ನ೧೩ ಮಾಜಿ ಮುಖ್ಯಮಂತ್ರಿಗಳು ಪಕ್ಷ ತೊರೆದಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಇದಕ್ಕೆ ಕಾರಣ ‘ಉದಯಿಸುವ ಸೂರ್ಯನ’ ಜೊತೆಗಿರುವ ಮನಸ್ಥಿತಿ. ಅಧಿಕಾರ ಸಿಗಬೇಕೆಂದರೆ ಗೆಲ್ಲುವವರ ಜೊತೆಗಿರಬೇಕು ಎಂಬ ಜನಪ್ರಿಯ ನಂಬಿಕೆಯಿದೆಯಲ್ಲವೇ? ಕೆಲ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳ ಭೀತಿ ಕೂಡ ಪಕ್ಷಾಂತರಕ್ಕೆ ಕಾರಣವಾಗಿರಬಹುದು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಯಾವತ್ತೂ ಬದಲಾಗದ ಕೇಂದ್ರೀಯ ನಾಯಕತ್ವ ಹಾಗೂ ವಿಶ್ರಾಂತಿ ಯಲ್ಲಿರುವ ರಾಜ್ಯ ಘಟಕಗಳ ನಡುವಿನ ಹೊಂದಾಣಿಕೆಯ ಕೊರತೆ ಕೂಡ ಕಾಲಕಾಲಕ್ಕೆ ನಾಯಕರು ಬಂಡೆದ್ದು ಪಕ್ಷ ತೊರೆಯಲು ಪ್ರಮುಖ ಕಾರಣ.
ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ರಾಜ್ಯದಲ್ಲಿ ಯುವಕರಿಗೆ ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ ಹಿರಿತಲೆಗಳ ಕಾರಣದಿಂದ ಪಕ್ಷ ತೊರೆದರು. ಒಂದು ಕಾಲದಲ್ಲಿ ಎಲ್ಲರನ್ನೂ ಒಳಗೊಳ್ಳುವ ದೊಡ್ಡ ಛತ್ರ ದಂತಿದ್ದ ಕಾಂಗ್ರೆಸ್ ಪಕ್ಷ ಇಂದು ಕೆಲವೇ ನಾಯಕರ ಸಂಕುಚಿತ ಮನಸ್ಥಿತಿಯಿಂದಾಗಿ ಪಕ್ಷದೊಳಗೆ ‘ಅವರು’ ವರ್ಸಸ್ ‘ನಾವು’ ಎಂಬ ಮೇಲಾಟದಲ್ಲಿ ತೊಡಗಿರುವ ನಾಯಕರನ್ನು ಸೃಷ್ಟಿಸುವ ರಾಜಕೀಯ ಪಡಸಾಲೆಯಾಗಿ ಮಾರ್ಪಟ್ಟಿದೆ. ಸಂಕುಚಿತ ಮನಸ್ಥಿತಿಯ ಈ ಸಣ್ಣ ಗುಂಪೇ ಯಾವಾಗಲೂ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
೨೦೧೩ರಲ್ಲಿ ಜೈಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ರಾಹುಲ್ ಗಾಂಧಿಯವರು ‘ಅಧಿಕಾರವೆಂಬುದು ವಿಷ’ ಎಂದು ಭಾಷಣ ಮಾಡಿದ್ದರು. ತಮಾಷೆಯೆಂದರೆ ತಾನು ಯಾರನ್ನುದ್ದೇಶಿಸಿ ಈ ಭಾಷಣ ಮಾಡುತ್ತಿದ್ದೇನೋ ಅವರೆಲ್ಲರ ಮೂಲಭೂತ ರಾಜಕೀಯ ಸಿದ್ಧಾಂತವೂ ಅಧಿಕಾರ ಗಳಿಸುವುದೇ ಆಗಿದೆ ಎಂಬುದನ್ನು ಅವರು ಬಹುಶಃ ಮರೆತುಬಿಟ್ಟಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಗೆ ಹಿಂದುತ್ವ ಮತ್ತು ಸಂಘ ಪರಿವಾರದಬಲವಾದ ಸೈದ್ಧಾಂತಿಕ ಹಿನ್ನೆಲೆಯಿದೆ. ಈ ಕೇಡರ್ ಆಧಾರಿತ ಭ್ರಾತೃತ್ವವೇ ಒಳ್ಳೆಯ ಹಾಗೂ ಕೆಟ್ಟ ಸಮಯದಲ್ಲಿ ಪಕ್ಷದ ಒಗ್ಗಟ್ಟನ್ನು ಕಾಪಾಡುತ್ತದೆ. ಉದಾಹರಣೆಗೆ, ೧೯೮೪ರಲ್ಲಿ ಭಾರತೀಯ ಜನತಾ ಪಕ್ಷ ಕೇವಲ ಎರಡು ಲೋಕಸಭೆ ಸ್ಥಾನಗಳನ್ನು ಗೆದ್ದಾಗಲೂ ಯಾವುದೇ ಹಂತದಲ್ಲಿ ಸಾಮೂಹಿಕ ವಲಸೆ ಕಂಡುಬರಲಿಲ್ಲ. ಈಗಂತೂ ನರೇಂದ್ರ ಮೋದಿಯವರ ಬಲವಾದ ವ್ಯಕ್ತಿತ್ವ ಎಲ್ಲರ ಮೇಲೂ ಪ್ರಭಾವ ಬೀರಿದೆ. ಹೈಕಮಾಂಡ್‌ನಲ್ಲಿ ಅತಿಯಾಗಿ ಅಽಕಾರ ಕೇಂದ್ರೀಕೃತವಾಗಿದೆ ಎಂದು ಪಕ್ಷದಲ್ಲಿ ಅಲ್ಲಿ-ಇಲ್ಲಿ ಗೊಣಗಾಟ ಕೇಳಿಬಂದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಅಥವಾ ಪಕ್ಷದ ನಾಯಕತ್ವದ ವಿರುದ್ಧ ಬಂಡೇಳುವ ಧೈರ್ಯವನ್ನು ಯಾರೂ ತೋರುವುದಿಲ್ಲ.
ಹಾಗಿದ್ದರೆ ಕಾಂಗ್ರೆಸ್‌ನ ಪುನರುತ್ಥಾನಕ್ಕೆ ದಾರಿ ಯಾವುದು? ‘ಹೊಸ’ ಬಿಜೆಪಿಯಂತೆ ಸರ್ವಾಧಿಕಾರಿತನವನ್ನು ಅಳವಡಿಸಿಕೊಳ್ಳುವುದಲ್ಲ, ಬದಲಿಗೆ ‘ಹಳೆಯ’ ಕಾಂಗ್ರೆಸ್‌ನಂತೆ ಎಲ್ಲರನ್ನೂ ಒಳಗೊಳ್ಳುವುದು. ಅಂದರೆ ಪಕ್ಷದಲ್ಲಿರುವ ಪ್ರತಿಭಾವಂತ ಯುವಕರಿಗೆ ಹೆಚ್ಚೆಚ್ಚು ಅವಕಾಶಗಳನ್ನು ನೀಡಬೇಕು. ರಾಜ್ಯಗಳಲ್ಲಿ ತುಕ್ಕು ಹಿಡಿದು ಕುಳಿತಿರುವ ಹಳೆಯ ತಲೆಮಾರಿನ ಬದಲು ಕಠಿಣ ಸ್ಪರ್ಧೆಯೊಡ್ಡಿ ಬೆಳೆಯುವ ಹಸಿವಿರುವ ಹೊಸ ತಲೆಮಾರಿಗೆ ಹೆಚ್ಚು ಅಧಿಕಾರ ನೀಡಬೇಕು. ಮುಂದೆ ನಿಂತು ಪಕ್ಷವನ್ನು ಗೆಲುವಿನ ದಡಕ್ಕೆ ಸೇರಿಸುವ ಛಾತಿ ಪ್ರದರ್ಶಿಸಿದ ೫೪ ವರ್ಷದ ತೆಲಂಗಾಣದ ಮುಖ್ಯಮಂತ್ರಿರೇವಂತ್ ರೆಡ್ಡಿ ಇದಕ್ಕೆ ಒಳ್ಳೆಯ ಉದಾಹರಣೆ. ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅಥವಾ ಕೇರಳದಲ್ಲಿ ಶಶಿ ತರೂರ್‌ರನ್ನು ಹೀಗೆ ಬಿಂಬಿಸಿದರೆ ಬೇಡ ಎನ್ನುವವರು ಯಾರಿದ್ದಾರೆ? ಮಹಾರಾಷ್ಟ್ರದಲ್ಲಿ ಅಥವಾ ಮಧ್ಯಪ್ರದೇಶದಲ್ಲಿ ಯುವ ನಾಯಕತ್ವಕ್ಕೆ ಮಣೆ ಹಾಕಿದರೆ ಭವಿಷ್ಯದಲ್ಲಿ ಒಳ್ಳೆಯ ಫಲಿತಾಂಶ ಬರುವುದಿಲ್ಲ ಎನ್ನುವುದಕ್ಕೆ ಏನು ಆಧಾರವಿದೆ? ರಾಹುಲ್ ಗಾಂಧಿ ಅಥವಾ ಗಾಂಧಿ ಪರಿವಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಗಾಂಧಿ ಪರಿವಾರಕ್ಕೆ ನಿಷ್ಠರಾಗಿರುವ ಸಾಂಪ್ರದಾಯಿಕ ಹಿರಿಯ ತಲೆಮಾರನ್ನು ಹೊರತುಪಡಿಸಿದರೆ ಪಕ್ಷದ ಇನ್ನೆಲ್ಲಾ ಹಂತದಲ್ಲೂ ಈ ಸರ್‌ನೇಮ್‌ನ ಪ್ರಭಾವ ಕ್ಷೀಣಿಸುತ್ತಿದೆ. ಲೋಕಸಭೆ ಚುನಾವಣೆಯಲ್ಲಿನ ಮೂರನೇ ಸೋಲು ಪಕ್ಷಕ್ಕೆ ಬಹುದೊಡ್ಡ ಆಘಾತ ನೀಡಬಹುದು.
ಪಕ್ಷವನ್ನು ಹಿಡಿದಿಡುವ ಏಕೈಕ ಅಂಟು ಗಾಂಽ ಕುಟುಂಬ ಎಂಬ ನಂಬಿಕೆಯು ಕಳೆದೊಂದು ದಶಕದಲ್ಲಿ ದೊಡ್ಡ ದೊಡ್ಡ ನಾಯಕರ ನಿರ್ಗಮನ ದೊಂದಿಗೆ ಹುಸಿಯಾಗಿದೆ. ಇಂದಲ್ಲಾ ನಾಳೆ ಪಕ್ಷ ಕಠಿಣ ನಿರ್ಧಾರ ಕೈಗೊಳ್ಳಲೇಬೇಕು: ಮತ ಸೆಳೆಯುವ ಶಕ್ತಿ ಕಳೆದುಕೊಂಡಿರುವ ಗಾಂಧಿ ಪರಿವಾರದ ಮೇಲೇ ಇನ್ನೂ ಅವಲಂಬಿತವಾಗಿರಬೇಕೋ ಅಥವಾ ಆ ಹೊಕ್ಕಳು ಬಳ್ಳಿಯನ್ನು ಕೊನೆಗೂ ಕಡಿದುಕೊಳ್ಳಬೇಕೋ? ಕಾಂಗ್ರೆಸ್ ಪಕ್ಷದ ತಕ್ಷಣದ ಭವಿಷ್ಯ ವನ್ನು ರೂಪಿಸುವುದಕ್ಕೆ ೨೦೨೪ರ ಲೋಕಸಭೆ ಚುನಾವಣೆಯೇ ಲಿಟ್ಮಸ್ ಟೆಸ್ಟ್ ಇದ್ದಂತೆ.
ಕೊನೆಯ ಮಾತು:ಇತ್ತೀಚೆಗೆ ನಡೆದ ಔತಣಕೂಟದಲ್ಲಿ ಹಿರಿಯ ಕಾಂಗ್ರೆಸಿಗರೆಲ್ಲ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಸುತ್ತುವರೆದು ನಿಂತಿದ್ದರು. ಮಾತಿನ ನಡುವೆ ಒಬ್ಬರು ಅಲ್ಲಿಂದ ತೆರಳಲು ಅನುಮತಿ ಕೇಳಿದರು. ಆಗ ಪತ್ರಕರ್ತರೊಬ್ಬರು, ‘ನೀವು ಔತಣಕೂಟದಿಂದ ಮಾತ್ರ ಹೋಗು ತ್ತಿದ್ದೀರಿ ತಾನೇ? ಪಕ್ಷದಿಂದ ಅಲ್ಲವಲ್ಲ’ ಎಂದು ಚಟಾಕಿ ಹಾರಿಸಿದರು!
(ಹಿರಿಯ ಪತ್ರಕರ್ತ)