ಎತ್ತ ನೋಡಿದರತ್ತ ಬರಗಾಲದ ಛಾಯೆ
ಚರ್ಚಾ ವೇದಿಕೆ
ಡಾ.ಜಗದೀಶ ಮಾನೆ
ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳ ಪೈಕಿ ಕಲಬುರ್ಗಿ ಜಿಲ್ಲೆಯಿಂದಲೇ ಅತಿಹೆಚ್ಚು ವಲಸೆಗಾರಿಕೆ ಕಂಡುಬರುತ್ತಿದೆ. ಜಿಲೆಯಲ್ಲಿ ಖನಿಜ ಸಂಪನ್ಮೂಲಗಳು,ಫಲವತ್ತಾದ ಭೂಮಿ ಹಾಗೂ ನದಿಗಳಿವೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆಂದೇ ಪ್ರತ್ಯೇಕ ಅಭಿವೃದ್ಧಿ ಮಂಡಳಿಯಿದೆ. ಆದರೂ ಇಲ್ಲಿನ ಜನರಿಗೆ ಬಡತನ ತಪ್ಪುತ್ತಿಲ್ಲ.
ಕರ್ನಾಟಕದ ಬಹುತೇಕ ಕಡೆ ಬರಗಾಲದ ಪರಿಸ್ಥಿತಿ ತಾಂಡವವಾಡುತ್ತಿದ್ದು, ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಬಡತನ ಮುಂದು ವರಿದಿದೆ. ರಾಜ್ಯದ ಅನೇಕ ಜಿಲ್ಲೆಗಳ ಜನರು ತುತ್ತು ಅನ್ನಕ್ಕಾಗಿ ಉದ್ಯೋಗ ಅರಸಿಕೊಂಡು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಹೆಗಲಿಗೆ ಪಾಟಿಚೀಲ ಏರಿಸಿ ಶಾಲೆಯೆಡೆಗೆ ಸಾಗಬೇಕಿದ್ದ ಮಕ್ಕಳು ಬದುಕಿನ ಭಾರ ಹೊತ್ತು ಊರೂರು ಅಲೆಯುವಂತಾಗಿದೆ. ಹೀಗಾದಲ್ಲಿ ಶೈಕ್ಷಣಿಕ ಪ್ರಗತಿಯಾದರೂ ಹೇಗೆ ಕೈಗೂಡೀತು? ಜನಪ್ರತಿನಿಧಿಗಳು ಎನಿಸಿಕೊಂಡವರಿಗೆ ಚುನಾವಣೆ ಬಂದರಷ್ಟೇ ಬಡವರ ಜೋಪಡಿಗಳು ನೆನಪಾಗುವುದು ವಿಷಾದನೀಯ ಸಂಗತಿ.
ವಲಸೆ ಕಾರ್ಮಿಕರು ಪ್ರತಿವರ್ಷ ದುಡಿಯಲಿಕ್ಕಾಗಿ ಬೇರೊಂದು ಊರಿಗೆ ಹೋಗುವುದು ಸಾಮಾನ್ಯ. ಆದರೆ ಈ ವರ್ಷ ಈ ಪ್ರಮಾಣದಲ್ಲಿ ಅಗಾಧ ಹೆಚ್ಚಳ ವಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕಾಣಬರುವ ಕಹಿವಾಸ್ತವದ ಚಿತ್ರಣವಿದು. ಉದಾಹರಣೆಯಾಗಿ ಪರಿಗಣಿಸುವುದಾದರೆ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನಲ್ಲಿ ಬರುವ ಲಿಂಗಾಪುರ ಎಂಬ ಗ್ರಾಮದಲ್ಲಿ ಜನರು ಮಳೆ-ಬೆಳೆ ಇಲ್ಲದೆ ಕಂಗಾಲಾಗಿದ್ದಾರೆ (ಸುತ್ತಮುತ್ತಲ ಅನೇಕ ಹಳ್ಳಿಗಳಲ್ಲೂ ಇದೇ ಪರಿಸ್ಥಿತಿಯಿದೆ). ತಿನ್ನಲು ಮೇವು, ಕುಡಿಯಲು ನೀರಿಲ್ಲದೆ ಜಾನುವಾರುಗಳು ಸತ್ತುಹೋಗುತ್ತಿವೆ.
ನೀರಿಲ್ಲದೆ ಕಾದ ಭೂಮಿ ಬಾಯಿಬಿಡುತ್ತಿದೆ. ೫೦೦ ಅಡಿಗಳವರೆಗೆ ಕೊಳವೆ ಬಾವಿ ತೋಡಿಸಿದರೂ ನೀರು ಬೀಳುತ್ತಿಲ್ಲ, ಇರೋ ಬರೋ ಕೊಳವೆಬಾವಿ ಗಳೂ ಬತ್ತಿಹೋಗಿವೆ. ಹೀಗಾಗಿ ಒಕ್ಕಲುತನ ದುಸ್ತರವಾಗಿದೆ. ಹೀಗಾಗಿ ಈ ಗ್ರಾಮದಲ್ಲಿ ಬಾಗಿಲು ತೆರೆದ ಮನೆಗಳಿಗಿಂತ, ಬೀಗ ಜಡಿಸಿಕೊಂಡ ಮನೆಗಳ ಸಂಖ್ಯೆಯೇ ಹೆಚ್ಚಾಗಿ ಕಾಣಸಿಗುತ್ತದೆ. ಸುಮಾರು ೪೦೦ ಮನೆಗಳಿರುವ ಈ ಗ್ರಾಮದಲ್ಲಿ ಶೇ.೭೫ರಷ್ಟು ಜನರಿಗೆ ದುಡಿಯಲು ಕೆಲಸಗಳಿಲ್ಲದ ಕಾರಣ, ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲಿಕ್ಕಾಗಿ ಬೆಂಗಳೂರು, ಗೋವಾ, ಮಂಗಳೂರು, ಉಡುಪಿ, ಕಾಸರಗೋಡು ಮುಂತಾದ ಪ್ರದೇಶಗಳಿಗೆ ಉದ್ಯೋಗ ಅರಸಿ ಗುಳೆ ಹೋಗುತ್ತಿದ್ದಾರೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪೈಕಿ ಕಲಬುರ್ಗಿ ಜಿಲ್ಲೆಯಿಂದಲೇ ಅತಿಹೆಚ್ಚು ಪ್ರಮಾಣದಲ್ಲಿ ಜನರ ವಲಸೆಗಾರಿಕೆ ಕಂಡುಬರುತ್ತಿದೆ. ‘ಶರಣರ ನಾಡು, ಸೂಫಿ ಸಂತರ ಬೀಡು’ ಅಂತ ಹೆಸರಾಗಿದ್ದ ಈ ಜಿಲೆಯಲ್ಲಿ ಖನಿಜ ಸಂಪನ್ಮೂಲಗಳು, ಫಲವತ್ತಾದ ಭೂಮಿ ಹಾಗೂ ನದಿಗಳಿವೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆಂದೇ ಪ್ರತ್ಯೇಕ ಅಭಿವೃದ್ಧಿ ಮಂಡಳಿಯಿದೆ. ೩೭೧ನೇ ಕಲಂ ಮಾಡಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೂ ಇಲ್ಲಿನ ಜನರಿಗೆ ಬಡತನ ತಪ್ಪುತ್ತಿಲ್ಲ. ಈ ಪ್ರದೇಶದಲ್ಲೂ ಈ ವರ್ಷ ಗುಳೆ ಹೋಗುವವರ ಪ್ರಮಾಣ ದುಪ್ಪಟ್ಟಾಗಿದೆ.
ಆಳಂದ ತಾಲೂಕಿನ ಕುಡುಕಿ ಎಂಬ ಗ್ರಾಮದಲ್ಲಿ ಸುಮಾರು ೨೫೦೦ ಜನಸಂಖ್ಯೆಯಿದ್ದು, ಇದರ ಪೈಕಿ ಶೇ.೮೦ರಷ್ಟು ಜನ ಇದೀಗ ವಲಸೆಗೆ ತೆರಳಿರುವುದು ಇಲ್ಲಿನ ಕಟುವಾಸ್ತವಕ್ಕೆ ಹಿಡಿದ ಕೈಗನ್ನಡಿ. ಮುಂಬೈ, ಪೂನಾ, ಚೆನ್ನೈನಂಥ ಮಹಾನಗರಗಳಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವುದು ಮತ್ತು ಸಾಂಗ್ಲಿ, ಸೊಲ್ಲಾಪುರ ಮುಂತಾದ ಪ್ರದೇಶಗಳಲ್ಲಿ ಇಟ್ಟಿಗೆ ತಯಾರಿ ಕಾರ್ಯದಲ್ಲಿ ತೊಡಗುವುದು ಇಂಥ ವಲಸಿಗರ ವಾಡಿಕೆಯ ಕ್ರಮವಾಗಿದೆ.
ರಾಯಚೂರು, ದೇವದುರ್ಗ, ಲಿಂಗಸುಗೂರು ಮತ್ತು ಮಾನ್ವಿ ತಾಲೂಕುಗಳ ಸಾಕಷ್ಟು ಸಂಖ್ಯೆಯ ಗ್ರಾಮಗಳಲ್ಲಿ ಬಡತನ ತಾಂಡವವಾಡುತ್ತಿದೆ. ಹೀಗಾಗಿ ಈ ಪ್ರದೇಶಗಳ ಜನರೂ ಹೊಟ್ಟೆಪಾಡಿಗಾಗಿ ಹೈದರಾಬಾದ್ ಮತ್ತು ಮುಂಬೈನತ್ತ ವಲಸೆ ತೆರಳುತ್ತಿದ್ದಾರೆ. ಹುಟ್ಟಿದ ಊರು, ಬೆಳೆದ ವಾತಾವರಣ, ಸುತ್ತಮುತ್ತಲಿನ ಸಂಬಂಧಿಕರು ಹೀಗೆ ಎಲ್ಲವನ್ನೂ-ಎಲ್ಲರನ್ನೂ ತೊರೆದು ದೂರದ ಊರುಗಳಿಗೆ ತೆರಳುವುದು ಅಂದುಕೊಂಡಷ್ಟು ಸುಲಭದ ಕೆಲಸ ವಲ್ಲ; ಆದರೆ ಹಸಿದ ಹೊಟ್ಟೆ ತುಂಬಿಸಿಕೊಳ್ಳಲು, ಮಕ್ಕಳನ್ನು ಸಾಕಲು ಜನರು ವಿಧಿಯಿಲ್ಲದೆ ಹುಟ್ಟೂರುಗಳಿಂದಲೇ ವಿಮುಖವಾಗುವ ಪರಿಸ್ಥಿತಿ ಎದುರಾಗಿದೆ.
ಲಿಂಗಸುಗೂರಿನ ಪರಂಪೂರ ತಾಂಡಾ ಒಂದರಲ್ಲೇ ಸುಮಾರು ೩೦೦ ಮನೆಗಳು, ೯೦೦ರಷ್ಟು ಜನರಿದ್ದಾರೆ. ಇಲ್ಲಿ ಕೂಡ ಇನ್ನೂರಕ್ಕೂ ಹೆಚ್ಚು ಮನೆಗಳಿಗೆ ಬೀಗ ಬಿದ್ದಿದೆ, ೭೦೦ಕ್ಕೂ ಹೆಚ್ಚು ಜನ ಗುಳೆ ಹೋಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲೂ ಇಂಥದೇ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಜಲಾಶಯ ವಿದ್ದರೂ ಈ ಭಾಗದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಸಮಸ್ಯೆ ತಾರಕಕ್ಕೇರಿದೆ. ಈ ಪ್ರದೇಶದ ಜನರೂ ಕಬ್ಬು ಕಟಾವು ಮಾಡ ಲೆಂದು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ, ಕಾಫಿಬೀಜ ಕೀಳುವ ಕೆಲಸಕ್ಕೆಂದು ಮಂಗಳೂರಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರಳುತ್ತಿದ್ದಾರೆ.
ಕೊಪ್ಪಳದ ಕುಡಕೇರಿ ತಾಂಡಾ ಒಂದರಲ್ಲೇ ೫೦೦ಕ್ಕೂ ಹೆಚ್ಚು ಜನರು ಹೊಟ್ಟೆಪಾಡಿಗಾಗಿ ಮೈಸೂರು, ಮಂಡ್ಯ, ಚೆನ್ನೈ ಮತ್ತು ಕೇರಳದತ್ತ ಮುಖ ಮಾಡಿದ್ದಾರೆ. ಇವ್ಯಾವುದೂ ತಳ್ಳಿಹಾಕುವಂಥ ವಿಷಯಗಳಲ್ಲ. ರಾಜಕೀಯ ನಾಯಕರು ಇಂಥ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರೋ ಪಾಯಗಳನ್ನು ಕಟ್ಟಿಕೊಡಲು ಕೆಲಸ ಮಾಡಬೇಕಿದೆ. ಇದು ಒಂದೆರಡು ವರ್ಷ ಮಾತ್ರವೇ ಕಾಣಿಸಿಕೊಳ್ಳುವಂಥ ಸಮಸ್ಯೆಯಲ್ಲವಾದ್ದರಿಂದ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉದ್ಯೋಗಾವಕಾಶವನ್ನು ಕಲ್ಪಿಸುವ ಯೋಜನೆಗಳನ್ನು ರೂಪಿಸಬೇಕು.
ಕಾರಣ, ಜನರಿಗೆ ಉಚಿತ ಯೋಜನೆಗಳನ್ನು ನೀಡುವುದಕ್ಕಿಂತ ದುಡಿಯುವ ಕೈಗಳಿಗೆ ಕೆಲಸವನ್ನು ನೀಡಬೇಕಿದೆ. ರೈತರು ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ ಸಿಗಬೇಕಿದೆ. ಬಡವರಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ದೊರೆತಾಗ ಮಾತ್ರ ಅವರ ಸಬಲೀಕರಣವಾಗುತ್ತದೆ ಹಾಗೂ ಆ ಮೂಲಕರಾಷ್ಟ್ರದ ಮರುನಿರ್ಮಾಣವಾಗುತ್ತದೆ. ಇದನ್ನು ನಮ್ಮ ಆಳುಗರು ಮನವರಿಕೆ ಮಾಡಿಕೊಂಡರೆ ಒಳಿತು.
(ಲೇಖಕರು ರಾಜ್ಯಶಾಸ್ತ್ರ ಅಧ್ಯಾಪಕರು)