ಪಂಡಿತ ರತ್ನ ನರಸಿಂಹರಾವ್ ಈಗ ಭಾರತ ರತ್ನ
ಸಾಧಕರ ವೇದಿಕೆ
ವಿನಾಯಕ ಎಂ. ಭಟ್ಟ
ಭಾರತದ ೯ನೇ ಪ್ರಧಾನ ಮಂತ್ರಿ ಪಿ.ವಿ.ನರಸಿಂಹರಾವ್ ಅವರಿಗೆ, ದೇಶಕ್ಕೆ ಅವರು ನೀಡಿದ ಸ್ಮರಣೀಯ ಕೊಡುಗೆಗಳನ್ನು ಗುರುತಿಸಿ ಮರಣೋತ್ತರವಾಗಿ ದೇಶದ ಸರ್ವೋಚ್ಚ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ವನ್ನು ಘೋಷಿಸಲಾಗಿದೆ.
ಎಲ್.ಕೆ. ಆಡ್ವಾಣಿಯವರಿಗೆ ಅವರ ಜೀವಿತದಲ್ಲೇ ‘ಭಾರತ ರತ್ನ’ ಪ್ರದಾನಿಸುವ ನಿರ್ಧಾರ ಮಾಡಿದ್ದು ಎಷ್ಟು ಸಮಂಜಸವೋ ಹಾಗೆಯೇ ಈ ದೇಶ ವನ್ನು ಜಗತ್ತಿನೆದುರು ಧೈರ್ಯದಿಂದ ತೆರೆದಿಟ್ಟು ಆರ್ಥಿಕ ಅಭಿವೃದ್ಧಿಯ ನಿಜ ಹರಿಕಾರ ಎನಿಸಿಕೊಂಡ ನರಸಿಂಹರಾಯರಿಗೆ ಮರಣೋತ್ತರ ವಾಗಿಯಾದರೂ ನೀಡುತ್ತಿರು ವುದು ದೇಶವೇ ಮೆಚ್ಚುವ ಸಂಗತಿಯಾಗಿದೆ.
‘ಪಿವಿಎನ್’ ಎಂದೇ ಖ್ಯಾತರಾಗಿದ್ದ ರಾಯರದ್ದು ತೆಳ್ಳನೆಯ ಸಾಮಾನ್ಯ ಎತ್ತರದ ದೇಹ. ಮಿತಭಾಷಿಯಾಗಿದ್ದ ಅವರು ಸರಳತೆಯ ಪ್ರತಿರೂಪ. ಪಂಚೆ ಮತ್ತು ಜುಬ್ಬಾ, ಕೊರಳ ಸುತ್ತ ಒಂದು ಗಿಡ್ಡನೆಯ ಶಾಲು- ಇಷ್ಟೇ ಅವರ ‘ಟ್ರೇಡ್‌ಮಾರ್ಕ್’ ವೇಷಭೂಷಣ. ವಿದೇಶ ಪ್ರವಾಸಗಳಿಗೆ ತೆರಳಿದಾಗ ಮಾತ್ರ ಅಲ್ಲಿಗೆ ತಕ್ಕುದಾದ ಉಡುಪು. ಒಟ್ಟಾರೆ, ಆಡಂಬರವಿಲ್ಲದ ಜೀವನಚರ್ಯೆ, ನಮ್ಮದೇ ಮನೆಯ ಹಿರಿಯರನ್ನು ನೋಡಿದ ಅನುಭವ. ‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ ಎನ್ನುವಂತೆ ಸೌಮ್ಯ ಸ್ವಭಾವದವರಾದರೂ ಕಠಿಣ ನಿರ್ಧಾರಗಳನ್ನು ಮುಲಾಜಿಲ್ಲದೆ ಕೈಗೊಳ್ಳಬಲ್ಲ ಸಾಮರ್ಥ್ಯ ಅವರಲ್ಲಿ ಕೆನೆಗಟ್ಟಿತ್ತು.
ಪ್ರಚಾರಕ್ಕಾಗಿ ಯಾವತ್ತೂ ಹಾತೊರೆದವರಲ್ಲ, ನಾಟಕೀಯತೆಯಂತೂ ಇಲ್ಲವೇ ಇಲ್ಲ. ಅನೇಕ ಸಲ ಅವರ ವಿಳಂಬದ ನಿರ್ಧಾರಗಳಿಗೆ ಅಥವಾ ನಿರ್ಧಾರಗಳೇ ಇಲ್ಲದಿ ರುವುದಕ್ಕೂ ಜನ ಸಾಕ್ಷಿಯಾಗಿದ್ದಿದೆ. ಎಂಥದೇ ಕಠಿಣ ಸಂದರ್ಭದಲ್ಲೂ ದಿಗಿಲುಗೊಳ್ಳದ ಆತ್ಮಸ್ಥೈರ್ಯ ಅವರದ್ದು. ೧೯೨೧ರಲ್ಲಿ, ಈಗಿನ ತೆಲಂಗಾಣ ಪ್ರದೇಶದಲ್ಲಿ ಜನಿಸಿದ ರಾಯರು ಅನೇಕ ಯುವಕರ ಜತೆಯಲ್ಲಿ ಸ್ವಾತಂತ್ರ್ಯದ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಆಂಧ್ರಪ್ರದೇಶದ ರಾಜಕಾರಣದಲ್ಲಿ ಸಕ್ರಿಯ ರಾದರು. ನಂತರದ ದಿನಗಳಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿ, ರಾಜ್ಯದ ಮುಖ್ಯಮಂತ್ರಿ ಯೂ ಆಗಿ ಭೂ ಸುಧಾರಣಾ ಕಾಯ್ದೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದು ಹೆಸರು ಗಳಿಸಿದರು. ೧೯೭೭ರಿಂದ ಸತತವಾಗಿ ಸಂಸದರಾಗಿದ್ದರಾಯರು, ಮಹಾರಾಷ್ಟ್ರದ ರಾಮ್‌ಟೆಕ್‌ನಿಂದ ಮತ್ತು ಒಡಿಶಾದ ಬೆಹ್ರಾಂಪುರದಿಂದಲೂ ಆಯ್ಕೆಯಾಗಿದ್ದಾರೆ ಎಂಬುದು ವಿಶೇಷ.
ಪ್ರಧಾನಮಂತ್ರಿಗಳಾದ ಮೇಲೆ ನಂದ್ಯಾಲ ಕ್ಷೇತ್ರದಿಂದ ೫ ಲಕ್ಷಕ್ಕೂ ಅಽಕ ಮತಗಳ ಅಂತರ ದಿಂದ ಗೆದ್ದು ಗಿನ್ನಿಸ್ ವಿಶ್ವದಾಖಲೆ ಪುಸ್ತಕ ಸೇರಿದ ಖ್ಯಾತಿರಾಯರದು. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸಂಪುಟಗಳಲ್ಲಿ ವಿದೇಶಾಂಗ ವ್ಯವಹಾರ, ರಕ್ಷಣೆ, ರೈಲ್ವೆ ಮತ್ತು ಮಾನವ ಸಂಪನ್ಮೂಲಗಳಂಥ ಪ್ರಮುಖ ಖಾತೆಗಳನ್ನು ರಾಯರು ದಕ್ಷತೆಯಿಂದ ನಿರ್ವಹಿಸಿದ್ದಾರೆ. ರಾಯರ ಬಹು ಮುಖಿ ವ್ಯಕ್ತಿತ್ವ ನಮಗೆಲ್ಲ ಗೊತ್ತಾಗಿದ್ದು ಅವರು ಪ್ರಧಾನ ಮಂತ್ರಿ ಆದ ಮೇಲೆಯೇ. ರಾಜೀವ್ ಗಾಂಧಿಯವರ ಮರಣಾನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು ಮತ್ತು ರಾಯರು ಭಾರತದ ಚುಕ್ಕಾಣಿಯನ್ನು ಹಿಡಿಯುವಂತಾಯಿತು.
ವಯಸ್ಸಿನ ಕಾರಣದಿಂದಾಗಿ ರಾಜಕೀಯದಿಂದ ಹೆಚ್ಚು ಕಡಿಮೆ ನಿವೃತ್ತಿಯಾಗಲು ಆಶಿಸುತ್ತಿದ್ದ ರಾಯರು, ಅಂದು ಪ್ರಣಬ್ ಮುಖರ್ಜಿ, ಅರ್ಜುನ್ಸಿಂಗ್, ಶರದ್ ಪವಾರ್ ಮತ್ತು ಎನ್.ಡಿ.ತಿವಾರಿಯವರಂಥ ಸ್ಪರ್ಧಿಗಳನ್ನು ಹಿಂದಿಕ್ಕಿ, ತಮ್ಮ ಅನುಭವ ಮತ್ತು ಹಿರಿತನದ ಆಧಾರದ ಮೇಲೆ ಪ್ರಧಾನಿಗಿರಿ ಯನ್ನು ವಹಿಸಿಕೊಳ್ಳುವಂತಾಯಿತು. ಇನ್ನೊಂದು ವಿಶೇಷವೆಂದರೆ, ನೆಹರು-ಗಾಂಧಿ ಕುಟುಂಬ ವನ್ನು ಹೊರತುಪಡಿಸಿ ಕಾಂಗ್ರೆಸ್‌ನಲ್ಲಿ ೫ ವರ್ಷದ ಪೂರ್ಣಾವಧಿ ಸರಕಾರದ ನೇತೃತ್ವವನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ರಾಯರು ಮಾತ್ರ (ರಾಯರಿಗಿಂತ ಮೊದಲು ‘ನೆಹರು-ಗಾಂಧಿ’ ಕುಟುಂಬಿಕ ರಲ್ಲದ ಲಾಲ್ ಬಹಾದುರ್ ಶಾಸ್ತ್ರಿ, ನಂತರ ಗುಲ್ಜಾರಿಲಾಲ್ ನಂದಾ ಅವರು ಪ್ರಧಾನಿಯಾಗಿ ಆಡಳಿತ ನಡೆಸಿದ್ದಿದೆ; ಆದರೆ ಅದು ಅಲ್ಪಾವಧಿಗೆ ಮಾತ್ರ). ನೆಹರು-ಗಾಂಧಿ ಕುಟುಂಬಕ್ಕೆ ನಿಕಟವಾಗಿ ಕೆಲಸ ಮಾಡಿದ್ದರೂ ರಾಯರು ಅದೇಕೋ ತಮ್ಮ ಅಧಿಕಾರಾವಧಿಯಲ್ಲಿ ಆ ಕುಟುಂಬವನ್ನು ದೂರವಿಟ್ಟು ಸ್ವತಂತ್ರರಾಗಿಯೇ ಕಾರ್ಯನಿರ್ವಹಿಸಿದರು.
ಈ ಅವಧಿಯಲ್ಲಿ ಮತ್ತು ನಂತರದಲ್ಲಿ ಅನೇಕ ಪ್ರಕರಣಗಳಲ್ಲಿ ರಾಯರ ಹೆಸರು ಕೇಳಿ ಬಂದಿತ್ತು. ಕೆಳಗಿನ ನ್ಯಾಯಾಲಯ ಗಳಲ್ಲಿ ಅನೇಕ ಸಲ ರಾಯರ ವಿರುದ್ಧ ತೀರ್ಪುಗಳು ಬಂದಿದ್ದರೂ, ನಂತರದಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲ ಪ್ರಕರಣಗಳಲ್ಲೂ ರಾಯರು ನಿರಪರಾಧಿಗಳೆಂದು ತೀರ್ಪು ನೀಡಿತು. ಕೆಲವು ಪ್ರಕರಣಗಳು ರಾಯರ ಜೀವಿತ ಕಾಲದಲ್ಲೂ, ಮತ್ತೆ ಕೆಲವು ಮರಣನಂತರದಲ್ಲೂ ಇತ್ಯರ್ಥವಾದವು. ರಾಯರು ವಿಪಕ್ಷಗಳಲ್ಲೂ ಅನೇಕ ಸಮಾನಮನಸ್ಕ ಸ್ನೇಹಿತರನ್ನು ಹೊಂದಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ, ಅವರ ಮತ್ತು ಬಿಜೆಪಿಯ ವಾಜಪೇಯಿ ಯವರನಡುವೆ ಆತ್ಮೀಯ ಸ್ನೇಹವಿತ್ತು, ಪರಸ್ಪರ ಗೌರವವಿತ್ತು.
ಹಾಗಾಗಿಯೇ, ‘ವಾಜಪೇಯಿಯವರೇ ನನ್ನ ರಾಜಕೀಯ ಗುರುಗಳು, ಅವರೇ ನನ್ನ ಆದರ್ಶ’ ಎಂದು ರಾಯರು ಹೇಳಿದಾಗ, ‘ಇಲ್ಲ ಇಲ್ಲ, ನಾನು ಖಂಡಿತ ರಾಯರ ರಾಜಕೀಯ ಗುರುವೂ ಅಲ್ಲ, ಅವರು ನನ್ನ ಶಿಷ್ಯರೂ ಅಲ್ಲ; ಇಬ್ಬರೂ ಬೇರೆಯದೇ ಆದ ಸಿದ್ಧಾಂತ ದಲ್ಲಿ ನಂಬಿಕೆಯಿಟ್ಟು ನಮ್ಮ ನಮ್ಮ ರಾಜಕೀಯ ಜೀವನ ದಲ್ಲಿ ಬಹುದೂರ ಸಾಗಿ ಬಂದಿದ್ದೇವೆ. ಹೀಗಾಗಿ ಗುರು- ಶಿಷ್ಯ ಸಂಬಂಧ ಒಪ್ಪಿತವಲ್ಲ’ ಎಂದು ಒಮ್ಮೆ ವಾಜಪೇಯಿ ನೇರವಾಗಿ ಹೇಳಿದ್ದರು. ಆದರೆ, ದೇಶಹಿತದ ವಿಷಯದಲ್ಲಿ ಇಬ್ಬರ ಬದ್ಧತೆಯೂ ಪ್ರಶ್ನಾತೀತ ವಾಗಿತ್ತು. ಸ್ವತಃ ವಿದೇಶಾಂಗ ವ್ಯವಹಾರದಲ್ಲಿ ನಿಪುಣರಾಗಿದ್ದ ರಾಯರು ಪ್ರಧಾನಿಯಾಗಿದ್ದಾಗ ಸಲ್ಮಾನ್ ಖುರ್ಷಿದ್ ವಿದೇಶಾಂಗ ವ್ಯವಹಾರಗಳ ಖಾತೆಯ ರಾಜ್ಯ ಸಚಿವರಾಗಿದ್ದರು.
ಯಾವುದೋ ನಿರ್ಣಾಯಕ ಮಾತುಕತೆಗಾಗಿ ಭಾರತದ ನಿಯೋಗವನ್ನು ಬೇರೊಂದು ದೇಶಕ್ಕೆ ಕಳುಹಿಸಿ ಕೊಡ ಬೇಕಾಗಿತ್ತು. ರಾಯರು ವಾಜಪೇಯಿಯವ ರಲ್ಲಿ, ‘ನೀವು ಈ ನಿಯೋಗದಲ್ಲಿದ್ದು ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ನೀವಲ್ಲದೆ ಮತ್ತಾರೂ ಈ ಕಾರ್ಯ ಮಾಡಲಾರರು’ ಎಂದು ಕೇಳಿಕೊಂಡಾಗ ವಾಜಪೇಯಿ ಯವರು ಸ್ವಲ್ಪವೂ ವಿಳಂಬವಿಲ್ಲದೆ ಒಪ್ಪಿಕೊಂಡರಂತೆ. ಸಲ್ಮಾನ್ ಖುರ್ಷಿದ್ ಅವರು ವಾಜಪೇಯಿಯವರಿಗಿಂತ ವಯಸ್ಸಿನಲ್ಲೂ ಅನುಭವದಲ್ಲೂ ಕಿರಿಯರಾಗಿದ್ದರೂ ಶಿಷ್ಟಾ ಚಾರದ ಪ್ರಕಾರ ಅವರೇ ಈ ನಿಯೋಗದ ಮುಖ್ಯಸ್ಥರಾಗಬೇಕಿತ್ತು ಮತ್ತು ವಾಜಪೇಯಿ ಯವರು ಅವರ ಕೈಕೆಳಗೆ ಕೆಲಸ ಮಾಡಬೇಕಾದ ಸಂದರ್ಭವಿತ್ತು.
ಆಗ ವಾಜಪೇಯಿ ಯವರು, ‘ದೇಶಸೇವೆಯ ಮುಂದೆ ಇದ್ಯಾವುದೂ ನನಗೆ ಮುಖ್ಯವಾಗುವುದಿಲ್ಲ. ನನ್ನ ಸೇವೆಯನ್ನು ಬಯಸಿದವರು ಅತ್ಯಂತ  ಭಾರತದ ಪ್ರಧಾನಿಯವರು. ಹೀಗಾಗಿ ನನ್ನ ಕರ್ತವ್ಯವನ್ನು ಮಾಡೇ ಮಾಡುತ್ತೇನೆ’ ಎಂದಿದ್ದರು. ‘ರಾಯರು ಮೊದಲೇ ರಾಜಕೀಯ ಚಾಣಕ್ಯ ಅಂತ ಪ್ರಸಿದ್ಧರಾದ ವರು; ಮಾತುಕತೆ -ಲಪ್ರದವಾಗದಿದ್ದರೆ ಆ ವೈಫಲ್ಯ ನಿಮ್ಮ ಹೆಗಲೇರುತ್ತದೆ ಎಂಬುದು ರಾಯರ ಆಲೋಚನೆ ಇದ್ದಿರಲೂಬಹುದು. ಹೀಗಾಗಿ ಈ ಪ್ರಸ್ತಾವವನ್ನು ನೀವು ಒಪ್ಪಿಕೊಳ್ಳಬೇಡಿ’ ಎಂದು ವಾಜಪೇಯಿಯವರ ಹಿತೈಷಿಗಳು ಈ ವೇಳೆ ಎಚ್ಚರಿಸಿದ್ದೂ ಉಂಟಂತೆ. ಆದರೆ ವಾಜಪೇಯಿಯವರು ಯಾವುದಕ್ಕೂ ಜಗ್ಗದೆ ರಾಯರ ಅಪೇಕ್ಷೆಯಂತೆ ಯಶಸ್ವಿ ಯಾಗಿ ಮಾತುಕತೆ ನಡೆಸಿ ಬಂದರು.
ಇದೇ ರೀತಿ ರಾಯರು ಒಮ್ಮೆ, ವಿಪಕ್ಷದಲ್ಲಿದ್ದ ಸುಬ್ರಮಣಿಯನ್ ಸ್ವಾಮಿಯವರಿಗೆ ಸರಕಾರದ ಜವಾಬ್ದಾರಿ ಯೊಂದನ್ನು ನೀಡಿ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕಲ್ಪಿಸಿ, ಎಲ್ಲರೂ ಅಚ್ಚರಿಪಡುವಂತೆ ಮಾಡಿದ್ದರು. ಭಾರತದ ಆರ್ಥಿಕ ಸುಧಾರಣೆಯ ಹರಿಕಾರ ಎಂದೇ ರಾಯರು ಖ್ಯಾತರು. ಅಂದು ಅವರು ಹಾಕಿದ ನೆಲಗಟ್ಟಿನ ಮೇಲೆಯೇ ಇಂದು ಪ್ರಧಾನಿ ನರೇಂದ್ರ ಮೋದಿಯವರು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸೌಧವನ್ನು ಕಟ್ಟುವಮಾತನ್ನಾಡುತ್ತಿರುವುದು. ರಾಯರು ಪ್ರಧಾನಿಯಾಗಿ ದ್ದಾಗ ಭಾರತ ಸರಕಾರವು ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು, ದಿವಾಳಿಯ ಹಂತಕ್ಕೆ ಹತ್ತಿರದಲ್ಲಿತ್ತು. ಕೆಲವೇ ದಿನಗಳಿಗೆ ಸಾಕಾಗುವಷ್ಟು ವಿದೇಶಿ ವಿನಿಮಯ ನಮ್ಮ ಬಳಿಯಿತ್ತು.
ಚಂದ್ರಶೇಖರ್ ಪ್ರಧಾನಿಯಾಗಿದ್ದ ಕಾಲಕ್ಕೇ ಭಾರತದ ಬಂಗಾರದ ಭಂಡಾರ ಖಾಲಿಯಾಗಿ ಹೋಗಿತ್ತು. ಈ ಆರ್ಥಿಕ ದಿವಾಳಿತನದಿಂದ ದೇಶವನ್ನು ಬಚಾವ್ ಮಾಡು ವುದು ಸುಲಭದ ಮಾತಾಗಿರಲಿಲ್ಲ. ಅಂದು ದೇಶದ ನಾಯಕತ್ವವು ಸಾಂಪ್ರದಾಯಿಕತೆಯನ್ನೂ ಮೀರಿದ ಒಂದು ಕ್ರಾಂತಿಕಾರಕ ನಿರ್ಧಾರವನ್ನು ಕೈಗೊಳ್ಳಬೇಕಾದ ಅಗತ್ಯವಿತ್ತು. ವಿಭಿನ್ನ ಚಿಂತನೆಯ ರಾಯರು ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್‌ರನ್ನು ಸಂಪರ್ಕಿಸಿ, ‘ನಿಮ್ಮನ್ನು ದೇಶದ ಹಣಕಾಸು ಸಚಿವನನ್ನಾಗಿ ಮಾಡಬಯಸುತ್ತೇನೆ; ಈ ಸಂಕಷ್ಟದಿಂದ ಭಾರತವನ್ನು ಪಾರುಮಾಡಲು ನನ್ನೊಂದಿಗೆ ಕೈಜೋಡಿಸುವಿರೇನು? ನೀವು ಬಯಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನೀಡಲು ಸಿದ್ಧನಿದ್ದೇನೆ; ನಿಮ್ಮ ಎಲ್ಲ ಸಲಹೆಗಳೂ ಅನುಷ್ಠಾನಕ್ಕೆ ಬರುತ್ತವೆ.
ಒಟ್ಟಿನಲ್ಲಿ, ಭಾರತವು ಆರ್ಥಿಕವಾಗಿ ಮೇಲೆದ್ದು ಬರುವಂತೆ ಮಾಡಬೇಕಿದೆ’ ಎಂದರಂತೆ. ಆಗ ತಾನೇ ಕೇಂದ್ರ ಬ್ಯಾಂಕಿನ ಗವರ್ನರ್ ಹುದ್ದೆಯಿಂದ ನಿವೃತ್ತರಾಗಿದ್ದ ಡಾ.ಸಿಂಗ್ ಅವರಿಗೆ ಅಚ್ಚರಿಯಾದರೂ ಈ ಸವಾಲನ್ನು ಸ್ವೀಕರಿಸಿದರು. ಅಲ್ಲಿಯವರೆಗೆ ಪಕ್ಷದ ಹಿರಿಯ ರಾಜಕಾರಣಿಗಳ ಪಾಲಾಗುತ್ತಿದ್ದ ಹಣಕಾಸು ಸಚಿವ ಸ್ಥಾನವು ರಾಯರಿಂದಾಗಿ ಮೊದಲ ಬಾರಿಗೆ ಒಬ್ಬ ಆರ್ಥಿಕ ತಜ್ಞನಿಗೆ ನೀಡಲ್ಪಟ್ಟಿತು. ಜತೆಗೆ ಮಾಂಟೆಕ್ ಸಿಂಗ್ ಅಹ್ಲುವಾಲಿಯಾರನ್ನು ವಿತ್ತ ಕಾರ್ಯದರ್ಶಿ ಸ್ಥಾನಕ್ಕೆ ನೇಮಿಸಿದ ರಾಯರು, ಆರ್ಥಿಕ ಉದಾರೀಕರಣದ ನೀತಿ ಗಳನ್ನು ಪರಿಚಯಿಸಿದರು ಮತ್ತು ಭಾರತದ ಔದ್ಯೋಗಿಕ ವಲಯ ವನ್ನು ಜಾಗತೀಕರಣಗೊಳಿಸಿದರು. ಅವರ ಈ ಎಲ್ಲಾ ಆರ್ಥಿಕ ಸುಧಾರಣಾ ಉಪಕ್ರಮಗಳನ್ನು ವಿರೋಧಿಸಿದ ಬಹಳ ಜನ ಆ ಕಾಲದಲ್ಲೂ ಇದ್ದರೂ ಎಂಬುದು ಬೇರೆ ಮಾತು.
ನೋಡನೋಡುತ್ತಿದ್ದಂತೆಯೇ ಚೇತರಿಸಿಕೊಳ್ಳಲಾ ರಂಭಿಸಿದ ಭಾರತೀಯ ಆರ್ಥಿಕ ವ್ಯವಸ್ಥೆ, ಸತತವಾಗಿ ಏರುಮುಖ ಕಾಣಲಾರಂಭಿಸಿತು. ಹೀಗೆ ರಾಯರು ಅಂದು ತಮ್ಮ ಅನುಭವವನ್ನು ಆಧರಿಸಿ ದೂರದರ್ಶಿತ್ವದ ನಿರ್ಧಾರ ವನ್ನುತೆಗೆದುಕೊಳ್ಳದೆ ಇದ್ದಿದ್ದರೆ, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಮುಂತಾದ ದೇಶಗಳು ಇಂದು ತಲುಪಿರುವ ಸ್ಥಿತಿಯನ್ನು ಭಾರತವು ಅಂದೇ ತಲುಪಿರುತ್ತಿತ್ತು. ಡಾ.ಸಿಂಗ್‌ರವರಿಗೆ ತಮ್ಮ ಅಧಿಕಾರಾವಧಿಯಲ್ಲಿರಾಯರಿಗೆ ‘ಭಾರತ ರತ್ನ’ ಪುರಸ್ಕಾರ ನೀಡುವಮನಸ್ಸಿತ್ತಾದರೂ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.
ಈಗ ಪ್ರಧಾನಿ ಮೋದಿಯವರು ಕೈಗೊಂಡ ನಿರ್ಧಾರದಿಂದಾಗಿ ಡಾ.ಸಿಂಗ್ ಅವರಿಗೆ ಸಂತೋಷ ಆಗಿರಲಿಕ್ಕೂ ಸಾಕು. ದೇಶದ ಘನತೆ-ಗೌರವ ಹೆಚ್ಚಿಸಿದಸಮರ್ಥರಿಗೆ ಇಂಥ ಪ್ರತಿಷ್ಠಿತ ಪುರಸ್ಕಾರಗಳನ್ನು ಕೊಡಮಾಡಿದಾಗ, ಆಯಾ ಪುರಸ್ಕಾರದ ಗೌರವವೇ ಹೆಚ್ಚುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)