ದ್ವೇಷವನ್ನು ಬಿತ್ತಿದರೆ, ದ್ವೇಷವೇ ಬೆಳೆ !
ನೆರೆಹೊರೆ
ಅನುಪಮಾ ಬೆಟ್ಟದಪುರ
ಹಿಂದೂ ದ್ವೇಷದ ಕಾರಣದಿಂದಲೇ ನಿರ್ಮಾಣವಾಗಿದ್ದು ಪಾಕಿಸ್ತಾನವೆಂಬ ದೇಶ. ಆದರೆ, ಹುಟ್ಟಿದಾರಭ್ಯ ಅಲ್ಲಿ ಆದ ಅಪಸವ್ಯಗಳು ಒಂದೆರಡಲ್ಲ. ವಿಭಜನೆಯ ನೆಪದಲ್ಲಿ ಎಗ್ಗಿಲ್ಲದೆ ನಡೆದ ಸುಲಿಗೆ, ಸಾವು-ನೋವು, ಅತ್ಯಾಚಾರ, ಮತಾಂತರಗಳನ್ನು ಇತಿಹಾಸ ದಾಖಲಿಸಿದೆ. ಅಲ್ಲಿ ನಡೆದ ದಂಗೆಗೆ ಅಗಾಧ ಸಂಖ್ಯೆಯ ಜನ ಬಲಿಯಾದರು. ಅಧಿಕಾರ ಸ್ಥಿತ್ಯಂತರಗಳು, ನಾಗರಿಕ ದಂಗೆಗಳು, ಸೇನಾ ಕ್ಷಿಪ್ರಕ್ರಾಂತಿಗಳು ಅಲ್ಲಿ ನಡೆಯುತ್ತಲೇ ಹೋದವು.
ಈ ಪರಿಸ್ಥಿತಿ ಮುಂದುವರಿದು, ಅಸೂಯೆಯ ದಳ್ಳುರಿ ಯಲ್ಲಿ ಮಿಂದ ಪಾಕಿಸ್ತಾನ ಈಗ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಮುಟ್ಟಿದೆ. ಧರ್ಮದ ಬೇರನ್ನು ತೊಡೆದುಹಾಕಿ ಸ್ವಯಂಭುವಾಗಿ ಬೆಳೆಯುವೆನೆಂಬ ಅಹಂ ಪಾಕಿಸ್ತಾನದ ಪತನಕ್ಕೆ ಕಾರಣವಾಯಿತಾ? ಸನಾತನ ಧರ್ಮ-ಸಂಸ್ಕೃತಿಗಳು ಸರಿದಾರಿ-ತಪ್ಪುದಾರಿ ಯಾವುದೆಂದು ಮನುಷ್ಯನಿಗೆ ತಿಳಿಹೇಳಿ ತಿದ್ದುತ್ತವೆ. ಅದನ್ನು ಎಡಗಾಲಿನಿಂದ ಒದ್ದುಹೋದವರು ಬೆಂಕಿಗೆ ಬೀಳುವ ಪತಂಗದಂತಾಗಿದ್ದಾರೆ. ಪಾಕ್ ತಾನು ಮಾಡಿದ ಪಾಪದ ಫಲವನ್ನೀಗ ಅನುಭವಿಸುತ್ತಿದೆ.
ಗಟ್ಟಿಯಾದ ಯೋಜನೆಯಿಲ್ಲದೆ ಪಾಕಿಸ್ತಾನದ ಸ್ಥಾಪನೆ ಯಾಯಿತಷ್ಟೇ? ಹೇಗೆ ದೇಶವನ್ನಾಳಬೇಕು ಎಂಬ ದೂರದೃಷ್ಟಿ ಇಲ್ಲದ ಕಾರಣ ಅಲ್ಲಿನ ಸೇನೆಯು ಎಲ್ಲವನ್ನೂ ನಿಯಂತ್ರಿಸುತ್ತದೆ. ಒಂದೆಡೆ ಉಗ್ರಗಾಮಿಗಳನ್ನು ಪೋಷಿಸುವುದು ಹಾಗೂ ವಿದೇಶಿ ವ್ಯವಹಾರ ನೋಡಿಕೊಳ್ಳಲಿಕ್ಕಾಗಿಯಾದರೂ ಕೀಲು ಗೊಂಬೆಯಂಥ ಪ್ರಧಾನಿಯೊಬ್ಬನನ್ನು ಒಳಗೊಳ್ಳುವುದು ಅಲ್ಲಿನ ಆಳುಗ ವ್ಯವಸ್ಥೆಯ ಶೈಲಿ. ಸೇನೆಯೇ ವ್ಯಕ್ತಿಯೊಬ್ಬನನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸಿ, ನಂತರ ಆತನನ್ನು ದೇಶದ್ರೋಹದ ಆಪಾದನೆಯ ಮೇಲೆ ಸೆರೆಮನೆಗೆ ತಳ್ಳುವುದು, ನಂತರ ಬಂದ ಪ್ರಧಾನಿಯು ಸೇನೆಯ ಮುಖ್ಯಸ್ಥನನ್ನು ಜೈಲಿಗೆ ತಳ್ಳುವುದು ಪಾಕಿಸ್ತಾನದಲ್ಲಿ ಹೊಸದೇನಲ್ಲ.
ಇದು ಪಾಕಿಸ್ತಾನಕ್ಕೆ ವ್ಯಸನವಾಗಿ ಪರಿಣಮಿಸಿ ತೆಂಬಂತೆ ಅಲ್ಲಿ ಹಲವು ಬಾರಿ ಇಂಥ ಬೆಳವಣಿಗೆಗಳು ನಡೆದಿವೆ. ಹಾಗಾಗಿ ಆಪಾದಿತ ರಾಜಕಾರಣಿಯು ವಿದೇಶಕ್ಕೆ ಪಲಾಯನಗೈಯದೆ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ೧೦ ವರ್ಷಗಳ ಕಾಲ ಸೆರೆಮನೆಗೆ ತಳ್ಳಲಾಯಿತು. ಪರಾರಿಯಾಗಲು ಅವಕಾಶವಿದ್ದರೂ, ‘ಚುನಾವಣೆಯಲ್ಲಿ ಮತ್ತೊಮ್ಮೆ ಗೆದ್ದು ಬಂದರೆ ಎಲ್ಲವೂ ಸರಿಹೋಗುತ್ತದೆ’ ಎಂದು ಅವರು ಭಾವಿಸಿದ್ದು ತಪ್ಪಾಗಿ ಇಮ್ರಾನ್ ಬೇಸ್ತುಬಿದ್ದಿದ್ದಾರೆ. ಪ್ರಸ್ತುತ ಆಸಿಮ್ ಮುನೀರ್ ಪಾಕಿಸ್ತಾನವನ್ನು ಮತ್ತಷ್ಟು ಹಾಳುಗೈಯುವ ನಾಯಕನಾಗಿ ಉದಿಸಿ ಬಂದಿದ್ದಾನೆ; ಆದರೆ ಇವನು ಕೂಡ ಈಗಾಗಲೇ ಅಮೆರಿಕದಲ್ಲಿ ಬಂಗಲೆ ಖರೀದಿಸಿ ನೆಲೆಸಲು ಸಿದ್ಧತೆ ಮಾಡಿಕೊಂಡಿದ್ದಾನೆ. ಇದು ಪಾಕಿಸ್ತಾನದ ಆಡಳಿತವೈಖರಿ!
ದಿನ ಬೆಳಗಾದರೆ ಜನರು ಸಾಯುವುದು ಪಾಕಿಸ್ತಾನದಲ್ಲಿ ವಿಶೇಷ ಸುದ್ದಿಯೇನಲ್ಲ. ಜನಸಾಮಾನ್ಯರು ಹಸಿವಿನಿಂದ ಸಾಯುವುದು ಒಂದೆಡೆಯಾದರೆ, ಮತ್ತೊಂದೆಡೆ ಅಪರಿಚಿತ ಬಂದೂಕುಧಾರಿಗಳಿಂದ ಗಲಭೆಗಳಾಗುವುದು, ಸಾವು ಸಂಭವಿಸುವುದು ಅಲ್ಲಿ ವಾಡಿಕೆಯಾಗಿಬಿಟ್ಟಿದೆ. ವಿಚಿತ್ರವೆಂದರೆ, ಪೊಲೀಸ್ ಠಾಣೆಯ ಮೇಲಾಗುವ ಬಾಂಬ್ ದಾಳಿಯಿಂದಲೂ ಜನ ಸಾಯುತ್ತಿದ್ದಾರೆ. ಅಂದರೆ ಪೊಲೀಸ್ ವ್ಯವಸ್ಥೆ ಕೂಡ ಅಲ್ಲಿ ಸಮಾಧಿಯಾಗಿದೆ. ಒಟ್ಟಿನಲ್ಲಿ ಪಾಕಿಸ್ತಾನ ಹಲವಾರು ಕಡೆಗಳಿಂದ ದಾಳಿಗೊಳಗಾಗುತ್ತಲೇ ಇದೆ, ಅಲ್ಲಿ ಮಾನವ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ.
ದೇಶ ಹುಟ್ಟಿದಾಗಿನಿಂದಲೂ ಪಾಕಿಸ್ತಾನಿ ನಾಯಕರಿಗೆ ಗೊತ್ತಿರುವ ಕಸುಬು ಎಂದರೆ ಸುಳ್ಳು ಹೇಳಿ ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟುವುದು, ಹಣಕ್ಕಾಗಿ ಬಲಿಷ್ಠ ರಾಷ್ಟ್ರಗಳನ್ನು ಅವಲಂಬಿಸುವುದು. ಹೀಗಾಗಿ ಚೀನಾ, ಅಮೆರಿಕ, ಕೊಲ್ಲಿ ದೇಶಗಳು ಪಾಕಿಸ್ತಾನಕ್ಕೆ ದುಡ್ಡು ಸುರಿಯುತ್ತಿದ್ದವು. ಈ ಕಾರಣದಿಂದಾಗಿ ಪಾಕಿಸ್ತಾನ ಆಡಬಾರದ ಆಟಗಳನ್ನೇ ಆಡುತ್ತಿತ್ತು. ಅದರ ಎಲ್ಲಾ ಹುಚ್ಚಾಟ ಗಳಿಗೆ ಭಾರತ ಬಲಿಪಶುವಾಗುತ್ತಿತ್ತು. ಭಾರತಕ್ಕೆ ಉಗ್ರಗಾಮಿ ಗಳನ್ನು ನುಸುಳಿಸಿ ಬಾಂಬ್ ಸೋಟಿಸುವುದು, ವಿಧ್ವಂಸಕ ಕೃತ್ಯಗಳನ್ನು ನಡೆಸುವುದು ಪಾಕಿಸ್ತಾನಕ್ಕೆ ದಿನಚರಿಯೇ ಆಗಿಬಿಟ್ಟಿತ್ತು. ಅಂಥ ಪಾಕಿಸ್ತಾನಕ್ಕೆ ಇಂದು ತನ್ನ ಗಾಯಗಳನ್ನು ನೆಕ್ಕಿಕೊಳ್ಳುವುದು ಬಿಟ್ಟು ಮತ್ತೇನೂ ಉಳಿದಿಲ್ಲ.
ಏಕೆಂದರೆ, ಭಾರತದಲ್ಲಾದ ಅಪನಗದೀಕರಣದಿಂದಾಗಿ ಪಾಕಿಸ್ತಾನಕ್ಕೆ ಚಾಟಿಯೇಟು ಬಿದ್ದು ಅಲ್ಲಿನ ಆರ್ಥಿಕತೆ ನೆಲಕಚ್ಚಿತು. ಬೇಕೆಂದಾಗೆಲ್ಲ ಹಣ ನೀಡುತ್ತಿದ್ದ ಅಮೆರಿಕ ಕೂಡ ಈಗ ಪಾಕಿಸ್ತಾನವನ್ನು ಎಲ್ಲಿಡಬೇಕೋ ಅಲ್ಲಿಟ್ಟಿದೆ. ಈಗ ಪಾಕ್‌ಗೆ ಆಸರೆಯಾಗಿ ಉಳಿದಿರುವುದು ಚೀನಾ ಒಂದೇ; ಅದಕ್ಕಾಗಿಭಾರತವನ್ನು ಪಾಕ್ ಇನ್ನಿಲ್ಲದಂತೆ ಬೈಯಲೇಬೇಕಿದೆ. ಒಟ್ಟಿನಲ್ಲಿ, ಬದು ಕಲೂ ಆಗದೆ, ಸಾಯಲೂ ಆಗದೆ ಒದ್ದಾಡುತ್ತಿದೆ ಪಾಕಿಸ್ತಾನ.
ವಿಶ್ವದ ಬಹುತೇಕ ದೇಶಗಳ ಸೇನೆಗಳ ಬಗ್ಗೆ ಗಡಿಗಳನ್ನೂ ಮೀರಿ ಸಂವೇದನಾಶೀಲರು ಗೌರವ ಭಾವನೆ ತೋರುವುದಿದೆ. ಆದರೆ ಪಾಕಿಸ್ತಾನದ ಸೇನೆಯ ಬಗ್ಗೆ ಯಾರಿಗೂ ಸದಭಿಪ್ರಾಯ ಮೂಡದು. ತನ್ನ ನಡತೆಯನ್ನು ಮೂರಾಬಟ್ಟೆ ಮಾಡಿಕೊಂಡು ಕ್ರೌರ್ಯ ಮೆರೆಯುವುದರಲ್ಲಿ ಪಾಕ್ ಸೇನೆ ಎತ್ತಿದ ಕೈ. ತಮಗಾಗುತ್ತಿರುವ ತೊಂದರೆಯನ್ನು ನಿವಾರಿಸಿ ಎಂದು ಕೋರಿಕೊಂಡು ಬಲೂಚ್‌ನ ಸೋದರಿಯರು ಪಾಕಿಸ್ತಾನದ ಸೇನೆಯ ಮೊರೆಹೋದರೆ, ಅದು ಮರ್ಯಾದೆ ಬಿಟ್ಟು ಅತ್ಯಾಚಾರ ಮಾಡುವುದಾಗಿ ಬೆದರಿಸಿತ್ತು. ಅದಾದ ೪೮ ಗಂಟೆಗಳಲ್ಲಿ ಬಲೂಚ್ ಜನರು ಪಾಕ್‌ನ ಆಯಕಟ್ಟಿನ ನೆಲೆಗಳ ಮೇಲೆ ದಾಳಿಮಾಡಿದರು. ಇಂಥ ಹಲವಾರು ದಾಳಿಗಳಿಗೆ ಪಾಕ್ ಸೇನೆಯ ಇಂಥ ವಿಕ್ಷಿಪ್ತ ವರ್ತನೆಯೇ ಕಾರಣ.
ಅದು ಸುಖಾಸುಮ್ಮನೆ ಇರಾನ್ ಮೇಲೆ ದಾಳಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹೀಗೆ ಭಾರತ ಮಾತ್ರವಲ್ಲದೆ, ತಾಲಿಬಾನ್, ಇರಾನ್, ಆ-ನ್, ಬಲೂಚ್, ಸಿಂಧಿ, ಪಠಾಣ್ ಈ ಎಲ್ಲ ಪ್ರಾಂತೀಯರೊಂದಿಗೂ ಪಾಕಿಸ್ತಾನ ಶತ್ರುತ್ವವನ್ನು ಕಟ್ಟಿಕೊಂಡಿದೆ. ಇಷ್ಟು ಸಾಲದೆಂಬಂತೆ, ಸಾರ್ವತ್ರಿಕ ಚುನಾವಣೆ ನಡೆದು ೨೦ ದಿನ ಕಳೆದರೂ ಪ್ರಧಾನಿ ಯಾರಾಗುತ್ತಾರೆ ಎಂಬುದು ನಿಕ್ಕಿಯಾಗದೆ ಅನಿಶ್ಚಿತತೆಯಲ್ಲೇ ಪಾಕಿಸ್ತಾನ ದಿನದೂಡಿದ್ದಕ್ಕೆ ಜಗತ್ತೇ ಸಾಕ್ಷಿಯಾಗಿದೆ. ಹೋಗಲಿ, ಈ ಚುನಾವಣೆಯಾದರೂ ಪ್ರಾಮಾಣಿಕ ರೀತಿಯಲ್ಲಿ ನಡೆಯಿತೇ ಎಂದರೆ, ಅದೂ ಇಲ್ಲ!
ನಮ್ಮಲ್ಲಿರುವಂತೆ ‘ಇವಿಎಂ’ ಇಲ್ಲದೆ ಅಜ್ಜನ ಕಾಲದ ಮತಪತ್ರದಲ್ಲಿ ಅಲ್ಲಿ ಮತದಾನವನ್ನು ನಡೆಸಲಾಯಿತು; ಅವನ್ನು ಸುಲಿಗೆ ಮಾಡಿ, ಯಾರಿಗೆ ಬೇಕೋ ಹೆದರಿಸಿ ಮತ ಹಾಕಿಸಿಕೊಂಡು ಆಡಿದ ಬೀದಿನಾಟಕವನ್ನು ಜಗತ್ತೇ ಬೆರಗುಗಣ್ಣಿಂದ ನೋಡಿದ್ದಾಯಿತು. ಅಲ್ಲಿನ ಚುನಾವಣಾಧಿಕಾರಿಯೇ ಖುದ್ದಾಗಿ, ‘ನನ್ನಿಂದ ಪ್ರಾಮಾಣಿಕವಾಗಿ ಚುನಾವಣೆ ನಡೆಸಲಾಗಿಲ್ಲ; ನನ್ನನ್ನು ಸೆರೆಮನೆಗಾದರೂ ನೂಕಿ, ಗಲ್ಲಿಗಾದರೂ ಹಾಕಿ’ ಎಂದು ಹೇಳಿ ರಾಜೀನಾಮೆ ಕೊಟ್ಟು ಪಾಕಿಸ್ತಾನದ ಮುಖವಾಡವನ್ನು ಜಗಜ್ಜಾಹೀರು ಮಾಡಿದ!
ಹೀಗಾಗಿ, ಯಾವ ಪಕ್ಷಕ್ಕೂ ಬಹುಮತ ಬಾರದಂತೆ ಸೇನೆಯೇ ಕರಾಮತ್ತು ಮಾಡಿದೆಯಾ ಎಂಬ ಗುಮಾನಿಯೂ ಇದೆ. ಜಗತ್ತಿನ ಯಾವುದೇ ದೇಶದಲ್ಲಿ ಪ್ರಧಾನಿಗೆ ಉನ್ನತ ಸ್ಥಾನವಿರುತ್ತದೆ; ಆದರೆ ಪಾಕಿಸ್ತಾನದಲ್ಲಿ ಪ್ರಧಾನಿಯಾಗುವು ದೆಂದರೆ, ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಿಕ್ಷೆ ಬೇಡು ವವನಾಗುವುದು! ಆತ ಪಾಕಿಗಳ ಹೊಟ್ಟೆಯನ್ನು ತುಂಬಿಸು ವುದರ ಜತೆಗೆ ಸೇನೆ ಹೇಳಿದಂತೆ ಕುಣಿಯಬೇಕಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ, ಪಾಕಿಸ್ತಾನದಲ್ಲೀಗ ಜನರಿಗೆ ಹೊಟ್ಟೆಗೆ ಹಿಟ್ಟಿಲ್ಲ. ಅಮೆರಿಕ, ಚೀನಾ, ಐಎಂಎಫ್ ನಿಂದ ಕೋಟಿಗಟ್ಟಲೆ ಸಾಲ ಮಾಡಿದ್ದರೂ ನಯಾ ಪೈಸೆಯಷ್ಟನ್ನೂಮರಳಿಸದೆ,-ನಃಭಿಕ್ಷೆಗೆ ಕೈಚಾಚುತ್ತಿರುವ ದೇಶವದು. ಇನ್ನು ಅಲ್ಲಿನ ಆಯಕಟ್ಟಿನ ಸ್ಥಾನಗಳಲ್ಲಿರುವವರಂತೂ ಮಹಾ ಫಟಿಂಗರು. ಪಾಕ್ ರಾಯಭಾರಿ ಯೊಬ್ಬ ಅಲ್ಲಿನ ಎಂಬೆಸಿ ಕಚೇರಿಯನ್ನೇ ಮಾರಿಕೊಂಡ ಭೂಪ; ‘ಪಿಐಎ’ಯ ಹಿರಿಯ ಅಧಿಕಾರಿಯೊಬ್ಬ ಸೇನಾ ವಿಮಾನವನ್ನು ಯುರೋಪಿಗೆ ಕದ್ದೊಯ್ದು ಮಾರಿಕೊಂಡ ನಿಸ್ಸೀಮ.
ಪಾಕಿಸ್ತಾನದಲ್ಲಿ ಒಂದು ಕೆ.ಜಿ. ಆಲೂಗಡ್ಡೆಯನ್ನು ಕೊಳ್ಳಲು ಜನಸಾಮಾನ್ಯರು ೩೦೦ ರುಪಾಯಿ ಪೀಕಬೇಕು. ಅಲ್ಲಿನ ಸಾವಿರಾರು ಮಕ್ಕಳು ಶಾಲೆಗೆ ಹೋಗುತ್ತಿಲ್ಲ, ಹೋದವರಲ್ಲಿ ಹಲವರು ಅನುತ್ತೀರ್ಣರಾಗುತ್ತಿದ್ದಾರೆ. ಅಲ್ಲಿನ ಶಿಕ್ಷಣ ವ್ಯವಸ್ಥೆಯ ಕುರಿತು ಮಾತನಾಡದಿರುವುದೇ ಒಳ್ಳೆಯದು. ಕಳೆದ ೭೫ ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಮುತ್ಸದ್ದಿಯೊಬ್ಬ ಹುಟ್ಟಿ ದೇಶವನ್ನಾಳಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ, ಅಲ್ಲಿನ ಸಮಾಜದಲ್ಲಿ ಗುಪ್ತಗಾಮಿನಿ ಯಾಗಿರುವ ದ್ವೇಷಭಾವ. ಹುಟ್ಟಿನಿಂದಲೂ ದ್ವೇಷವನ್ನೇ ಬಿತ್ತುತ್ತಾ ಬಂದಿರುವ ಪಾಕಿಸ್ತಾನದಲ್ಲಿ ದ್ವೇಷವನ್ನು ಬಿಟ್ಟು ಮತ್ತೇನನ್ನು ಬೆಳೆಯಲು ಸಾಧ್ಯ?ಪಾಕಿಸ್ತಾನ ಇನ್ನಾದರೂ ಎಚ್ಚೆತ್ತುಕೊಂಡು ಸರಿದಾರಿಯಲ್ಲಿ ನಡೆಯದಿದ್ದರೆ, ಕೆಲವೇ ವರ್ಷಗಳಲ್ಲಿ ತನ್ನ ಅಸ್ತಿತ್ವಕ್ಕೇ ಸಂಚಕಾರ ತಂದುಕೊಳ್ಳುವುದರಲ್ಲಿ ಸಂದೇಹವಿಲ್ಲ.
(ಲೇಖಕಿ ಹವ್ಯಾಸಿ ಬರಹಗಾರ್ತಿ)