ಚುನಾವಣೆಯು ಪ್ರಯೋಗಾಲಯವಾಗದಿರಲಿ
ಕಳಕಳಿ
ನಿತ್ಯಾನಂದ ಹೆಗಡೆ ಮೂರೂರು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಹೀನಾಯ ಸೋಲು ಕಾಣುವಂತಾಗಿದ್ದಕ್ಕೆ ಕಾಂಗ್ರೆಸ್ ಪಕ್ಷದ ‘ಗ್ಯಾರಂಟಿ’ಗಳು ಮಾತ್ರವೇ ಕಾರಣವಲ್ಲ;ಕೇಂದ್ರದ ಬಿ.ಎಲ್. ಸಂತೋಷ್ ಅವರ ಹೊಸ ಪ್ರಯೋಗದ ಪಾಲೂ ಇದರಲ್ಲಿತ್ತು ಎಂಬುದು ಸುಳ್ಳಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿ ಯಾಗಿದ್ದ ಕಾಲಘಟ್ಟದಲ್ಲಿ, ಅವರ ಅಧಿಕಾರಾವಧಿ ಬೆರಳೆಣಿಕೆಯಷ್ಟು ತಿಂಗಳಲ್ಲಿರುವಾಗ ಬಲವಂತವಾಗಿ ಇಳಿಸಿದ್ದು, ಬಸವರಾಜ ಬೊಮ್ಮಾಯಿ ಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು, ಯಡಿಯೂರಪ್ಪನವರ ಯಾವುದೇ ಹಿತನುಡಿಯನ್ನು ಬೇಕಂತಲೇ ಉಪೇಕ್ಷಿಸಿ ಮೂಲೆ ಗುಂಪು ಮಾಡಿದ್ದು ಇವೆಲ್ಲ ಬಿಜೆಪಿ ಪಾಳಯದಲ್ಲಿ ನಡೆಯಿತು.
ಹೀಗಾಗಿ ನಿರ್ಣಾಯಕ ಲಿಂಗಾಯತ ಮತಗಳನ್ನು ಅನಾಯಾಸವಾಗಿ ಕಳೆದುಕೊಳ್ಳಬೇಕಾಗಿ ಬಂತು. ಸಾಲದೆಂಬಂತೆ, ಗೆಲ್ಲುವ ಅಭ್ಯರ್ಥಿಗಳನ್ನು ಬಿಟ್ಟು ಕೆಲವೊಂದು ಹೊಸ ಮುಖಗಳನ್ನು ಅಖಾಡಕ್ಕೆ ಇಳಿಸಲು ಹೊರಟಿದ್ದು ಮೊದಲಾಗಿ ಹಲವು ಪ್ರಯೋಗ ಮಾಡಿ ‘ಹಡಗು ಕೆಟ್ಟಿತು’ ಎಂಬಂತಾಯಿತು. ಇವೆಲ್ಲದರ ಪರಿಣಾಮವಾಗಿ ತಳಮಟ್ಟದ ಕಾರ್ಯ ಕರ್ತರು ಕಾರ್ಯಭಾರವನ್ನು ಉಪೇಕ್ಷಿಸುವಂತಾಗಿ, ಬಿಜೆಪಿಯು ಕೇವಲ ೬೬ ಸ್ಥಾನಗಳನ್ನು ಪಡೆದು ಹೀನಾಯವಾಗಿ ಸೋತು ಮಕಾಡೆ ಮಲಗುವಂತಾಯಿತು.
ವಿಧಾನ ಸಭಾ ಚುನಾವಣೆಯ ನಂತರ ಪ್ರತಿಪಕ್ಷ ನಾಯಕನನ್ನೇ ಆರಿಸಲಾಗದೆ ಸದನದ ಕಲಾಪ ನಡೆಸಬೇಕಾಗಿ ಬಂದ ನಿಷ್ಕ್ರಿಯತೆ ಇವೆಲ್ಲವೂ ಈ ಹಿಂದೆ ಪ್ರಯೋಗ ಮಾಡಲಿಕ್ಕೆ ಹೊರಟಿದ್ದರ ಪಾರ್ಶ್ವ ಪರಿಣಾಮಗಳೇ! ಹೀಗೆ ಧರಾಶಾಯಿಯಾಗಿರುವ ಬಿಜೆಪಿಗೆ ಪುನಃ ಶಕ್ತಿ ತುಂಬುವುದು ಸುಲಭಸಾಧ್ಯದ ಮಾತಲ್ಲ. ಈ ನಡುವೆ ಜಗದೀಶ್ ಶೆಟ್ಟರ್‌ರ ‘ಸಂಕ್ರಮಣ’ ಪರ್ವ ಹಾಗೂ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಹೆಬ್ಬಾರ್ ಇವರೆಲ್ಲಾ ಅದ್ಯಾವುದೋ ಹಳೆಯ ಗಾಳಕ್ಕೇ ಸಿಲುಕಿ ಒದ್ದಾಡಿದ್ದು, ಅನಾರೋಗ್ಯದ ಕಾರಣ ನೀಡಿ ರಾಜ್ಯಸಭಾ ಚುನಾವಣೆಯ ಮತದಾನಕ್ಕೆ ಹೋಗದೆ ಕುಳಿತುದು, ಅಡ್ಡ ಮತದಾನಮಾಡಿದವರ ಮೇಲೂ ಯಾವುದೇ ಕ್ರಮ ಕೈಗೊಳ್ಳದ ದಿಗಿಲು ಹೀಗೆ ಒಟ್ಟಾರೆಯಾಗಿ ಬಿಜೆಪಿಗೆ ಹಲವು ಘಟನೆಗಳು ನುಂಗಲಾರದ ತುತ್ತಾಗಿ ಪರಿಣಮಿಸಿದವು.
ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮತ್ತೆ ಪ್ರಯೋಗ ನಡೆಸುವ ಹುನ್ನಾರ ಕಂಡುಬರುತ್ತಿದೆ. ಮೈಸೂರು – ಕೊಡಗು ಲೋಕಸಭಾ ಕ್ಷೇತ್ರವನ್ನು  ಪ್ರತಿನಿಧಿಸುವ ಪ್ರತಾಪ ಸಿಂಹರಂಥ ಒಬ್ಬ ಸಂಸದರು ಪ್ರಾಯಶಃ ಇಡೀ ರಾಜ್ಯದಲ್ಲಿ ಕಾಣುವುದು ದುರ್ಲಭ. ಅವರ ದಶಪಥ ಯೋಜನೆಯಿರಲಿ,ಚಾಮುಂಡಿ ಬೆಟ್ಟದೆಡೆಗಿನ ಶ್ಲಾಘನೀಯ ಕಾರ್ಯವಿರಲಿ, ನೀರು-ನಗರ ನೈರ್ಮಲ್ಯದ ಕೆಲಸವಿರಲಿ, ಯಾವನೂ ಯಾಕೆ ವೈರಿಯೂ ಹೊಗಳಬಹುದಾದ ಕಾಯಕ ಮಾಡುತ್ತ ಬಂದ ವರು ಪ್ರತಾಪ್. ಹೀಗೆ ಕಳಂಕರಹಿತರಾಗಿ ಕಾರ್ಯನಿರ್ವಹಿಸುತ್ತಿರುವ, ಕೈಶುದ್ಧವಿರುವ ವ್ಯಕ್ತಿಯೊಬ್ಬರನ್ನು ಚುನಾವಣೆಯ ಅಖಾಡದಲ್ಲಿ ಕೈಬಿಡಲು ಹೊರಟಿರುವುದು ಅದೇ ದುಷ್ಪ್ರಯೋಗವೇ ವಿನಾ ಮತ್ತೇನಲ್ಲ.
ಯದುವೀರ ರಾಜರ ಹೆಸರನ್ನು ಈ ಕ್ಷೇತ್ರಕ್ಕೆಂದು ದಿಢೀರನೆ ತರುವ ಜರೂರತ್ತು ಏನಿತ್ತು? ಮತ್ತು ರಾಜ ಮನೆತನದವರನ್ನು ತರುವ ಏಕಮಾತ್ರ ಕಾರಣ ಬಿಟ್ಟರೆ, ನಿಜವಾಗಿಯೂ ಜನಸಾಮಾನ್ಯರ ಪ್ರತಿ ಸಣ್ಣ ವಿಚಾರಕ್ಕೂ ಸ್ಪಂದಿಸುವ ಪ್ರತಾಪ ಸಿಂಹರನ್ನು ಬಿಟ್ಟು ಇವರು ಹೇಗೆ ಗುರುತಿಸಲ್ಪಟ್ಟರು ಎಂಬುದು ತಿಳಿಯದು. ಯದುವೀರರು ಪಕ್ಷಾತೀತರಾಗಿ ಉಳಿಯಬೇಕಾದವರೇ ವಿನಾ ಪಕ್ಷದಲ್ಲಿ ಗುರುತಿಸಲ್ಪಡಬೇಕಾದವರಲ್ಲ. ಈ ಹಿಂದೆ ಶ್ರೀಕಂಠದತ್ತರು ಚುನಾವಣಾ ರಾಜಕೀಯಕ್ಕೆ ಬಂದು ಅಸಮಾಧಾನಿತ ರಾದುದು ಈಗಾಗಲೇ ಜಗಜ್ಜಾಹೀರು.
ಹೀಗಾಗಿ ಯದುವೀರರನ್ನು ಎಳೆತರುವ ಯತ್ನ ಮತ್ತೆ ಬೇಡದಂಥದ್ದು. ಪ್ರತಾಪಸಿಂಹರು ಯಶಸ್ವಿ ಸಂಸದ ಎಂಬುದು ನಿರ್ವಿವಾದ; ಹೀಗಾಗಿ ಅವರೇ ನಮಗೆ ಸರಿಯಾದ ಅಭ್ಯರ್ಥಿ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ತೇಜಸ್ವಿ ಸೂರ್ಯರಂಥ ಪ್ರತಿಭಾವಂತರ ಬಗ್ಗೆಯೂ ಖಚಿತ ನಿಲುವು ಇಲ್ಲದಿರುವುದು ಅಚ್ಚರಿದಾಯಕ. ಅತ್ಯಂತ ನಿಸ್ಪೃಹರೂ, ಮಾಹಿತಿವಂತರೂ, ಕನ್ನಡ-ಹಿಂದಿ-ಇಂಗ್ಲಿಷ್ -ಸಂಸ್ಕೃತ ಮೊದಲಾದ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರೂ, ಸಂಸತ್ತಿನಲ್ಲಿ ತಮ್ಮ ವಾಗ್ಝರಿಯಿಂದ ವಿಪಕ್ಷಗಳ ಬಾಯಿಮುಚ್ಚಿಸಬಲ್ಲ ಸಮರ್ಥರೂ ಆಗಿರುವಂಥ ವರು ತೇಜಸ್ವಿ ಸೂರ್ಯ.
ಇಂಥ ಕರ್ಮನಿಷ್ಠರ ನಿಸ್ವಾರ್ಥ ಸೇವೆ, ನಡತೆ ಇವೆಲ್ಲವನ್ನು ಕಂಡೂ, ಇನ್ನೊಬ್ಬರ ಹೆಸರನ್ನು ಮುನ್ನೆಲೆಗೆ ತರಲು ಅದ್ಯಾವ ದುಷ್ಟ ರಾಜಕಾರಣ ಕಾರಣವಿದ್ದೀತೋ ತಿಳಿಯದು. ಹಾಗೆಯೇ ಶೋಭಾ ಕರಂದ್ಲಾಜೆಯವರನ್ನು ಚಿಕ್ಕಮಗಳೂರಿನಲ್ಲಿ ‘ಗೋಬ್ಯಾಕ್’ ಮಾಡಿಸಿದ್ದು ಸುಖಾಸುಮ್ಮನೆ ಅಲ್ಲ, ಅದರ ಹಿಂದಿರುವುದು ಬಿಜೆಪಿಯ ಪ್ರಭಾವಿ ವ್ಯಕ್ತಿಯ ಅದ್ಯಾವುದೋ ಸೇಡಿನ ರಾಜಕೀಯ. ಈ ನಡುವೆ, ಗೆಲ್ಲುವ ಅಭ್ಯರ್ಥಿಯನ್ನು ಹುಡುಕಲು ಮುಂದಾಗಬೇಕೇ ವಿನಾ, ‘ತತ್ವ-ಸಿದ್ಧಾಂತ’ ಎನ್ನುತ್ತ ಮತ್ತೆ ಎಡವಲು ಇದು ಸಮಯವಲ್ಲ. ಆ ಹಿನ್ನೆಲೆಯಲ್ಲಿ ಅನಂತ್ ಕುಮಾರ್ ಹೆಗಡೆಯವರಾಗಲೀ, ಯತ್ನಾಳರಾಗಲೀ,ಶೋಭಾ ಕರಂದ್ಲಾಜೆಯವರಾಗಲೀ ಯಾರನ್ನೂ ಉಪೇಕ್ಷಿಸುವ ಸಮಯವಿದಲ್ಲ. ಪ್ರಯೋಗವನ್ನು ಚುನಾವಣೆಯ ನಂತರ ಮಾಡಬೇಕಿದೆ.
ರಾಮನಿಗಿಂತ ‘ರಾಮನಾಮ’ ಶ್ರೇಷ್ಠ ವಾದುದು. ಹಾಗೆಯೇ ಮೋದಿಯವರ ವಿಚಾರಕ್ಕೆ ಬಂದರೆ, ಮೋದಿಗಿಂತ ‘ಮೋದಿ’ ಎಂಬ ನಾಮದ ಪ್ರಭಾವವೇ ಜಾಸ್ತಿ. ಅವರೊಬ್ಬ ‘ಕಾರ್ಯಕರ್ತರು’ ಅನ್ನುವುದಕ್ಕಿಂತ ಹೆಚ್ಚಾಗಿ ‘ಕಾರಣಕರ್ತರು’. ಅವರ ಪ್ರಭಾವಲಯ ಅಗಾಧವಾದುದು. ಈ ಹಿನ್ನೆಲೆಯಲ್ಲಿ ಉಳಿದ ಮುಂದಾಳುಗಳು ಸ್ವಯಂ ಕಾರ್ಯಪ್ರವೃತ್ತರಾಗಬೇಕಾದ ಕಾಲವಿದು. ರೇಣುಕಾಚಾರ್ಯ, ಸಿ.ಟಿ.ರವಿ, ಕಾಗೇರಿ ಮೊದಲಾದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು, ಈಶ್ವರಪ್ಪನವರ ಬೇಡಿಕೆ ಈಡೇರಿಸುವುದು ಇವೇ ಮೊದಲಾದ ಹೆಜ್ಜೆಗಳನ್ನು ಇಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮನ್ನು ತಾವಾಗಿ ಹೊಂದಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದು ತಲೆದೋರಿದೆ.
ಕೇಂದ್ರದ ಬಿಜೆಪಿ ನಾಯಕರು ಸ್ವತಃ ಕರ್ನಾಟಕದ ಪರಿಸ್ಥಿತಿ ಅರಿಯಲು ಸಾಕಷ್ಟು ಪರಿಶ್ರಮ ಪಡಬೇಕಿದೆ. ಜೆ.ಪಿ.ನಡ್ಡಾ, ಅಮಿತ್ ಶಾ, ರಾಜನಾಥ್ ಸಿಂಗ್ಮೊದಲಾದ ಹಿರಿಯ ಮುತ್ಸದ್ದಿಗಳು ಒಂದಿಷ್ಟು ಪ್ರಯಾಸ ಪಟ್ಟರೆ, ಕರ್ನಾಟಕದಲ್ಲಿ ೨೫ಕ್ಕೂ ಮೇಲ್ಪಟ್ಟು ಸೀಟು ಗೆಲ್ಲಿಸುವುದು ಕಷ್ಟವೇನಲ್ಲ. ಯಡಿಯೂರಪ್ಪನವರ ಅಹವಾಲನ್ನು ಸಂಯಮದಿಂದ ಕೇಳಿ, ಅವರ ಸಲಹೆಗೂ ತಮ್ಮ ವಿಚಾರಕ್ಕೂ ಎಲ್ಲಿಯೂ ಘರ್ಷಣೆಯಾಗದಂತೆ ನೋಡಿ ಕೊಂಡು ಲೋಕ ಸಭಾ ಚುನಾವಣೆಯ ಅಖಾಡಕ್ಕೆ ಬಿಜೆಪಿಯವರು ಧುಮುಕ ಬೇಕು. ಅದನ್ನು ಬಿಟ್ಟು ಈಗ ಪ್ರಯೋಗಕ್ಕೆ ಇಳಿದಲ್ಲಿ, ಬಿಜೆಪಿಯು ಅದರ ವ್ಯತಿರಿಕ್ತ ಪರಿಣಾಮವನ್ನು ಎದುರಿಸಲು ಸಜ್ಜಾಗಿರಬೇಕಾಗುತ್ತದೆ, ಶ್ರುತವಿರಲಿ.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)