ತೆಲಂಗಾಣದ ಟಿಆರ್‌ಎಸ್‌ ಶಾಸಕ ನಿಧನ
ಹೈದರಾಬಾದ್‌:ತೆಲಂಗಾಣದ ಟಿಆರ್‌ಎಸ್‌ ಶಾಸಕ ನೋಮುಲಾ ನರಸಿಂಹಯ್ಯ ಅವರು( 64) ವಯೋ ಸಂಬಂಧಿ ಕಾಯಿಲೆ ಯಿಂದಾಗಿ ಮಂಗಳವಾರ ನಿಧನರಾದರು.
ನಲ್ಗೊಂಡ ಜಿಲ್ಲೆಯ ನಾಗಾರ್ಜುನ ಸಾಗರ್ ಕ್ಷೇತ್ರದ ಶಾಸಕ ನರಸಿಂಹಯ್ಯ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ  ಬಳಲುತ್ತಿದ್ದರು. ಮಂಗಳವಾರ ಬೆಳಿಗ್ಗೆ ಕೊನೆ ಉಸಿರೆಳೆದರು ಎಂದು ಮೂಲಗಳು ಹೇಳಿವೆ.
ನರಸಿಂಹಯ್ಯ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಟಿಆರ್‌ಎಸ್‌ಗೆ ಸೇರುವ ಮುನ್ನ ಸಿಪಿಐ(ಎಂ) ಪಕ್ಷದಲ್ಲಿದ್ದರು.
‘ ನರಸಿಂಹಯ್ಯ ತಮ್ಮ ಜೀವನ ಪೂರ್ತಿ ಜನರ ಸೇವೆಗಾಗಿ ದುಡಿದರು. ಅವರ ಸೇವೆಯನ್ನು ಸದಾ ಸ್ಮರಿಸಲಾಗುವುದು’ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಟ್ವೀಟ್‌ ಮಾಡಿದ್ದಾರೆ.
ಕಾಂಗ್ರೆಸ್‌ ಸಂಸದ ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ, ಸಿಪಿಐ ನಾಯಕ ನಾರಾಯಣ್‌ ಸೇರಿದಂತೆ ಟಿಆರ್‌ಎಸ್‌ ಮತ್ತು ರಾಜ್ಯದ ಹಲವು ಸಚಿವರು ಸಂತಾಪ ಸೂಚಿಸಿದರು.