ಇಂಡಿಯಾ ಗೇಟ್‌ ಶಂಕುಸ್ಥಾಪನೆಗೆ ನೂರರ ಹರುಷ
ನವದೆಹಲಿ:ಇಂಡಿಯಾ ಗೇಟ್‌ಗೆ ಶಂಕುಸ್ಥಾಪನೆ ನೆರವೇರಿಸಿ ಇದೀಗ ನೂರು ವರ್ಷಗಳಾಗಿವೆ.
ಇಂಡಿಯಾ ಗೇಟ್‌ ಎಂದೇ ಕರೆಯಲಾಗುವ ಈ ಸ್ಮಾರಕಕ್ಕೆ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟಿಷ್‌ ‘ರಾಯಲ್‌ ಡ್ಯೂಕ್‌ ಆಫ್‌ ಕನೌಟ್‌’ ಪ್ರಿನ್ಸ್‌ ಅರ್ಥರ್‌ ಅವರು 1921ರ ಫೆಬ್ರುವರಿ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
42 ಮೀಟರ್‌ ಎತ್ತರದ ಈ ಸ್ಮಾರಕವನ್ನು ಮೊದಲ ಜಾಗತಿಕ ಯುದ್ಧ (1914-1918) ಮತ್ತು ಮೂರನೇ ಆಂಗ್ಲೋ-ಅಫ್ಗನ್‌ (1919) ಯುದ್ಧದಲ್ಲಿ ಹುತಾತ್ಮರಾದವರಿಗಾಗಿ ಗೌರವ ಸಲ್ಲಿಸಲು ಇಂಡಿಯಾ ಗೇಟ್‌ ನಿರ್ಮಿಸಲಾಯಿತು. ಈ ಐತಿಹಾಸಿಕ ಸ್ಮಾರಕವನ್ನು ಮೊದಲು ಅಖಿಲ ಭಾರತ ಯುದ್ಧ ಸ್ಮಾರಕ ಕಮಾನು ಎಂದು ಕರೆಯಲಾಗುತ್ತಿತ್ತು.
ಪ್ರಿನ್ಸ್‌ ಅರ್ಥರ್‌, ಐದನೇ ಜಾರ್ಜ್‌ ಅವರ ಚಿಕ್ಕಪ್ಪ. 1911ರಲ್ಲಿ ಅದ್ಧೂರಿ ದರ್ಬಾರ್‌ ನಡೆಸಿದ್ದ ಅವರು ಕಲ್ಕತ್ತದಿಂದ ದೆಹಲಿಗೆ ರಾಜಧಾನಿ ಸ್ಥಳಾಂತರಿಸುವ ನಿರ್ಧಾರ ಪ್ರಕಟಿಸಿದ್ದರು. ಬಳಿಕ ರೈಸಿನಾ ಹಿಲ್‌ ಪ್ರದೇಶದಲ್ಲಿ 1911ರಂದು ಡಿಸೆಂಬರ್‌ 15ರಂದು ಹೊಸ ರಾಜಧಾನಿ ನಿರ್ಮಾಣಕ್ಕೆ ಸಂಬಂಧಿಸಿದ ಕಟ್ಟಡಗಳಿಗೆ ಜಾರ್ಜ್‌ ಶಂಕುಸ್ಥಾಪನೆ ನೆರವೇರಿಸಿದ್ದರು.
ಸುಮಾರು 50 ಸಾವಿರಕ್ಕಿಂತ ಅಧಿಕ ಭಾರತದ ಯೋಧರು ಈ ಯುದ್ಧಗಳಲ್ಲಿ ಹುತಾತ್ಮರಾಗಿದ್ದಾರೆ. ಇಂಡಿಯಾ ಗೇಟ್‌ ಮೇಲೆ 13,516 ಮಂದಿಯ ಹೆಸರನ್ನು ಬರೆಯಲಾಗಿದೆ.