ದೇವರ ನಾಡಿನಲ್ಲಿ ಹೃದಯಕ್ಕೆ ಕೊಳ್ಳಿ ಇಟ್ಟಾಗ
ವೈದ್ಯ ವಿದ್ಯಾರ್ಥಿಗಳಾದ ಜಾನಕಿ, ನವೀನ್ ನೃತ್ಯದ ವಿಡಿಯೊ ವೈರಲ್
ಲವ್ ಜೆಹಾದ್ ದ್ವೇಷಕ್ಕೆ ಡಾನ್ಸ್ ಚಾಲೆಂಜ್
ತಿರುವನಂತಪುರಂ:ಕೇರಳದಲ್ಲಿ ಲವ್ ಜಿಹಾದ್, ಕೋಮು ಗಲಭೆ ಹೊಸ ವಿಷಯವೇನಲ್ಲ. ವಿಧಾನಸಭೆ ಚುನಾವಣೆಯ ಈ ಸಮಯದಲ್ಲಿ ಅದಕ್ಕೆೆ ಮತ್ತಷ್ಟು ತುಪ್ಪ ಸುರಿಯಲಾಗುತ್ತಿದೆ. ಆದರೆ ಅಂಥದೊಂದು ದ್ವೇಷದ ಕಿಡಿಗೆ ಅಲ್ಲಿನ ಯುವ ಸಮುದಾಯ ನೃತ್ಯದ ಮೂಲಕ ಸವಾಲು ಹಾಕಿದ್ದು. ಇದೀಗ ದೊಡ್ಡ ಆಂದೋಲನವಾಗಿ ಮಾರ್ಪಟ್ಟಿದೆ.
ಜಾನಕಿ ಓಂ ಕುಮಾರ್ ಹಾಗು ಆಕೆಯ ಸೀನಿಯರ್ ನವೀನ್ ರಜಾಕ್ ಅವರು ಕೇರಳದ ತ್ರಿಸ್ಸೂರು ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು. ಎರಡು ವಾರದ ಹಿಂದಷ್ಟೇ ಅವರು ತಾವಾಯಿತು ತಮ್ಮ ಓದು ಬರಹ, ಪರೀಕ್ಷೆ ಆಯಿತು ಎಂಬಂತಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ಅವರ ಬದುಕಿನಲ್ಲಿ ಭಾರಿ ತಿರುವು ಕಾಣಿಸಿಕೊಂಡಿದೆ. ಫೋನುಗಳಿಗೆ ಬಿಡುವೇ ಇಲ್ಲ. ಮೆಚ್ಚುಗೆ, ಬೆಂಬಲದ ಸಂದೇಶಗಳು ಮತ್ತು ಕರೆಗಳು ಹರಿದುಬರುತ್ತಿವೆ.
ಏಕೆಂದರೆ ಅವರೀಗ ರಾಜ್ಯದ ಕೋಮು ಸೌಹಾರ್ದದ ಪ್ರತೀಕವಾಗಿದ್ದಾರೆ. ಇಷ್ಟಕ್ಕೆಲ್ಲ ಕಾರಣ ಒಂದು ಡಾನ್ಸ್‌ ಎಂದರೆ ಯಾರೂ ನಂಬಲಿಕ್ಕಿಲ್ಲ. ಆದರೆ ಇದು ಸತ್ಯ. ಜಾನಕಿ ಮತ್ತು ನವೀನ್ ಅವರು ತಮ್ಮ 30 ಸೆಕೆಂಡಿನ ನೃತ್ಯದ ವಿಡಿಯೊವನ್ನು ಜಾಲತಾಣ ಗಳಲ್ಲಿ ಹಾಕಿದ್ದರು. ಜನಪ್ರಿಯ ಆಲ್ಬಮ್ ಬೋನಿ ಎಂ ನ ರಾಸ್ಪುಟಿನ್ ಡಾನ್ಸ್ ಅದಾಗಿತ್ತು. ತಮ್ಮ ಕಾಲೇಜಿನ ಹಜಾರದಲ್ಲಿ ಮಾಡಿದ ನೃತ್ಯದ ಆ ವಿಡಿಯೊ ವೈರಲ್ ಆಯಿತು.
ವಕೀಲರ ಕಮೆಂಟ್:ಈ ವಾರ ವಕೀಲರೊಬ್ಬರು ಫೇಸ್‌ಬುಕ್‌ನಲ್ಲಿ ಅದಕ್ಕೆ ಹಾಕಿದ ಕಾಮೆಂಟ್ ಇಡೀ ನೃತ್ಯದ ಆಯಾಮವನ್ನೇ ಬದಲಾಯಿಸಿತು. ಇವರಿಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿ, ಅದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಜಾನಕಿಯ ಪೋಷಕರಿಗೆ ಈ ವಕೀಲ ಸಲಹೆ ಮಾಡಿದ್ದರು. ಆದರೆ ಇದು ಸಾರ್ವಜನಿಕ ವಲಯದಲ್ಲಿ ಬೇರೆಯದೇ ಆದ ಪ್ರತಿಕ್ರಿಯೆಯನ್ನು ಹುಟ್ಟು ಹಾಕಿತು.
’ರಾಸ್ಪುಟಿನ್ ಚಾಲೆಂಜ್’ ಎಂದು ಕರೆಯಲಾದ ಈ ಸ್ಪರ್ಧೆಯನ್ನು ಇಂಡಿಯನ್ ಮೆಡಿಕಲ್ ಅಸೋಷಿಯೇಶನ್‌ನ ವಿದ್ಯಾರ್ಥಿ ಘಟಕ ಹಾಗೂ ಮಿಲ್ಮಾ ಎಂಬ ಹಾಲು ಒಕ್ಕೂಟವು ಏರ್ಪಡಿಸಿತು. ನೃತ್ಯವನ್ನು ಫೇಸ್‌ಬುಕ್‌ನಲ್ಲಿ ಕಳಿಸುವಂತೆ ಆಹ್ವಾನವಿತ್ತವು. ಜಾನಕಿ ಮತ್ತು ನವೀನ್ ಅವರ ಡಾನ್ಸ್‌ ಅನ್ನು ಹಾಕಿ, ಅದಕ್ಕೆ ’ಹೃದಯಕ್ಕೆ ಕೊಳ್ಳಿ ಇಟ್ಟಾಗ’ ಎಂಬ ಶೀರ್ಷಿಕೆ ನೀಡಲಾಯಿತು.
ವಯಸ್ಸಿನ ಭೇದವಿಲ್ಲದೆ ಯಾರು ಬೆಕಾದರೂ ವಿಡಿಯೊ ಕಳಿಸಬಹುದು. ಜಾನಕಿ ಮತ್ತು ನವೀನ್ ಅವರು ಆಯ್ಕೆ ಮಾಡುವ ಬಹುಮಾನಿತ ವಿಡಿಯೋಗೆ 10 ಸಾವಿರ ರು. ನಗದು ಬಹುಮಾನ ಎಂದು ಘೋಷಿಸಲಾಗಿತ್ತು. ಇದಕ್ಕೆ ಬಂದ ಪ್ರತಿಕ್ರಿಯೆ ಅದ್ಭುತ ವಾಗಿತ್ತು. ಜಾನಕಿಗಂತೂ ಅದನ್ನು ನಂಬಲೇ ಆಗಲಿಲ್ಲ. ಕರೆಗಳ ಮೇಲೆ ಕರೆಗಳು.. ಸೆಲ್ಫಿ ಆಹ್ವಾನಗಳು. ಒಂದೇ ಎರಡೇ. ’ನಾನಿದನ್ನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ’ ಎನ್ನುತ್ತಾರೆ ಜಾನಕಿ.
ಜಾನಕಿ ಹೇಳೋದೇನು?:ಇಷ್ಟಕ್ಕು ಈ ವಿಡಿಯೊ ಬಹಳ ಪ್ಲಾನ್ ಮಾಡಿ ಮಾಡಿದ್ದೆನಲ್ಲ. ಹಾಗೇ ಸುಮ್ಮನೆ, ತಮಾಷೆಗಾಗಿ ನಾವಿಬ್ಬರೂ ಮಾಡಿದ್ದಷ್ಟೆ. ನಾವಿಬ್ಬರೂ ಎರಡು ಗಂಟೆ ಪ್ರಾಕ್ಟೀಸ್ ಮಾಡಿ ಅನಂತರ ಕಾಲೆಜಿನ ಮೇಲಂತಿಸ್ತನಲ್ಲಿ ನೃತ್ಯದವಿಡಿಯೊ ಮಾಡಿದೆವು. ಆಗಷ್ಟೇ ಕ್ಲಾಸ್ ಮುಗಿದಿದ್ದರಿಂದ, ಅದೇ ಡ್ರೆಸ್‌ನಲ್ಲೇ ಡಾನ್ಸ್‌ ಮಾಡಿದ್ದೆವು.
ಬ್ರಟ್ ಇಂಡಿಯಾ ಇದನ್ನು ಪ್ರಸಾರ ಮಾಡಿದಾಗ ಇದು ಎಷ್ಟೊಂದು ವೈರಲ್ ಆಗಿದೆ ಎಂಬುದು ಅರಿವಾಯಿತು. ನಮ್ಮ ಪರೀಕ್ಷೆಗಳು ನಡೆಯುತ್ತಿದ್ದಾಗ ಈ ವಕೀಲರ ಕಾಮೆಂಟ್ ಅನ್ನು ನೋಡಿದೆನಾದರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಬಲುಬೇಗ ಅದು ದೊಡ್ಡ ವಿವಾದವಾಗಿ ಪರಿಣಮಿಸಿತು. ಆದರೆ ನಾನು ಮೊದಲಿನಿಂದಲೂ ಕೂಲ್ ಆಗಿಯೇ ಇದ್ದೆ.ಇದು ಆ ಲಾಯರ್‌ನ ಯೋಚನಾಲಹರಿಯನ್ನು ತೋರಿಸುತ್ತದೆ. ಮೊದಲಿಗೆ ನನ್ನ ತಂದೆಯ ಹೆಸರು ಪ್ರಸ್ತಾಪಿಸಿದ್ದಕ್ಕೆ ಬೇಜಾ ರಾಗಿತ್ತು. ಆದರೆ ಅನೇಕಾನೇಕ ಸಕಾರಾತ್ಮಕ ಕಾಮೆಂಟುಗಳ ಮಧ್ಯೆ ಇದೊಂದು ನೆಗೆಟಿವ್ ಕಾಮೆಂಟ್ ಬಂದಿದ್ದರಿಂದ ಅದನ್ನು ಅಲ್ಲೇ ಮರೆತು ಬಿಟ್ಟೆ.
ಇಷ್ಟಕ್ಕೂ ಈ ವಿಡಿಯೊ ಕುರಿತು ಕೃಷ್ಣರಾಜ್ ಎಂಬ ಆ ಲಾಯರ್ ಬರೆದಿದ್ದೇನು ಗೊತ್ತೆ, ’ಇಲ್ಲಿ ಏನೋ ಎಡವಟ್ಟಿದೆ. ಜಾನಕಿಯ ತಂದೆ ತಾಯಿ ಹುಷಾರಾಗಿರಬೇಕು. ನಿಮಿಷಾಳ ತಾಯಿಗೆ ಅದಂತೆ ಅನಂತರ ಅವರು ವಿಷಾದ ಮತ್ತು ಪಶ್ಚಾತ್ತಾಪ ಪಡುವುದು ಬೇಡ. ಅಂದಹಾಗೆ, ತಿರುವನಂತಪುರದ ನಿಮಿಷಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಅನಂತರ 2016ರಲ್ಲಿ ಗಂಡನ ಜತೆ ಐಸಿಸ್ ಉಗ್ರ ಸಂಘಟನೆ ಸೇರಿದ್ದು ದೊಡ್ಡ ಸುದ್ದಿಯಾಗಿತ್ತು.