 : ಕೇಜ್ರಿವಾಲ್‌ ಭೇಟಿಗೆ ಅವಕಾಶ ಕೋರಿ ಅರ್ಜಿ; ಆಪ್‌ ಮುಖಂಡನ ಮನವಿ ತಿರಸ್ಕರಿಸಿದ ದಿಲ್ಲಿ ಹೈಕೋರ್ಟ್‌
ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ (   ) ತಿಹಾರ್ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ( )‌ ಅವರ ಭೇಟಿಗೆ ಅವಕಾಶ ಕೋರಿ ಆಪ್‌ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌(  ) ತಿರಸ್ಕರಿಸಿದೆ. ಆಪ್‌ ನಾಯಕ ಸಂದೀಪ್‌ ಪಾಠಕ್‌ ಅವರು ಕೇಜ್ರಿವಾಲ್‌ ಅವರ ಭೇಟಿಗೆ ಅವಕಾಶ ನೀಡದಿರುವ ತಿಹಾರ್‌ ಜೈಲಿನ ಮೇಲ್ವಿಚಾರಣಾ ಅಧಿಕಾರಿಯ ನಿರ್ಧಾರವನ್ನು ಕೋರ್ಟ್‌ ಎತ್ತಿ ಹಿಡಿದಿದೆ.
ಸಂದೀಪ್‌ ಪಾಠಕ್‌ ಅವರು ಪಕ್ಷಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ತರವಾದ ಚರ್ಚೆ ನಡೆಸುವ ಸಲುವಾಗಿ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಲು ಅವಕಾಶ ಕೋರಿದ್ದರು. ಆದರೆ ಜೈಲು ನಿಯಮಗಳನ್ನು ಉಲ್ಲಂಘಿಸಿ ಜೈಲು ಆಡಳಿತದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಜೈಲು ಅಧಿಕಾರಿಗಳು ಪಾಠಕ್ ಅವರ ಮನವಿಯನ್ನು ತಿರಸ್ಕರಿಸಿದರು, ಇದು ಕೈದಿ ಮತ್ತು ಸಂದರ್ಶಕರ ನಡುವಿನ ಸಂಭಾಷಣೆಯು ಖಾಸಗಿ ಮತ್ತು ಮನೆಯ ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಈ ವಿಚಾರವಾಗಿ ಪಾಠಕ್‌ ಹೈಕೋರ್ಟ್‌ ಮೆಟ್ಟಿಲೇರಿ, ಕೇಜ್ರಿವಾಲ್‌ ಭೇಟಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದೀಗ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ  ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠವು ತಿರಸ್ಕರಿಸಿದ್ದು, ಜೈಲಿನ ಆಡಳಿತಮಂಡಳಿ ನಿರ್ಧಾರವನ್ನು ಪುರಸ್ಕರಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ಕೇಜ್ರಿವಾಲ್‌ ಜಾಮೀನು ಅರ್ಜಿ ವಿಚಾರಣೆ
ಇನ್ನು ಇಂದು ಸುಪ್ರೀಂಕೋರ್ಟ್‌ನಲ್ಲಿ ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಸಿಬಿಐ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ, ಹಿರಿಯ ವಕೀಲ ಎ ಎಂ ಸಿಂಘ್ವಿ ಕೇಜ್ರಿವಾಲ್ ಪರವಾಗಿ ವಾದಿಸುತ್ತಿದ್ದರೆ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಸಿಬಿಐ ಅನ್ನು ಪ್ರತಿನಿಧಿಸುತ್ತಿದ್ದಾರೆ.
ಕೇಜ್ರಿವಾಲ್‌ ವಿರುದ್ಧ ಪ್ರಕರಣ ಏನು?
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ
ಅಬಕಾರಿ ನೀತಿ ಹಗರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ತಂಡವು ಮಾರ್ಚ್ 21ರ ರಾತ್ರಿ 9 ಗಂಟೆ ವೇಳೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಸಿಬಿಐ ಮತ್ತು ಇಡಿ ಪ್ರಕಾರ, ಅಬಕಾರಿ ನೀತಿಯನ್ನು ಬದಲಾಯಿಸಿದಾಗ ಅಕ್ರಮಗಳು ನಡೆದಿವೆ ಮತ್ತು ಪರವಾನಗಿ ಹೊಂದಿರುವವರಿಗೆ ಅನಗತ್ಯ ಅನುಕೂಲಗಳನ್ನು ವಿಸ್ತರಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಕೇಜ್ರಿವಾಲ್ ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇದೆ ಎಂದು ಆಪ್‌ ಆತಂಕ ವ್ಯಕ್ತಪಡಿಸಿದೆ. ತಿಹಾರ್‌ನಲ್ಲಿ ಕೇಜ್ರಿವಾಲ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡದೇ ಅವರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದೂ ಪಕ್ಷ ಗಂಭೀರ ಆರೋಪ ಮಾಡುತ್ತಲೇ ಇದೆ. ಕೆಲವು ದಿನಗಳ ಹಿಂದೆ ಮಾಧ್ಯಮಗೋಷ್ಠಿ ನಡೆಸಿದ ದಿಲ್ಲಿ ಸಚಿವೆ ಆತಿಷಿ, ʼʼಕೇಜ್ರಿವಾಲ್‌ ಅವರನ್ನು ಜೈಲಿಗೆ ತಳ್ಳುವುದು ಮಾತ್ರವಲ್ಲ, ಅವರನ್ನು ಅನಾರೋಗ್ಯಕ್ಕೀಡು ಮಾಡಿ ಕೊಲೆಗೈಯುವ ಸಂಚು ಬಿಜೆಪಿಗಿದೆ. ಸರ್ವಾಧಿಕಾರಿ ತಮ್ಮ ವಿರೋಧಿಗಳನ್ನು ಜೈಲಿಗೆ ತಳ್ಳಿ ಅವರ ಆರೋಗ್ಯ ಹದಗೆಡುವಂತೆ ಮಾಡುತ್ತಿದ್ದಾರೆ. ಕೇಜ್ರಿವಾಲ್‌ಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ಬಿಜೆಪಿಯೇ ನೇರ ಜವಾಬ್ದಾರಿʼʼ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ:ಕೇಜ್ರಿವಾಲ್‌ಗೆ ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್‌’ನಿಂದ ತಡೆಯಾಜ್ಞೆ