13 ದೇಶಗಳಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆ ಸ್ಥಗಿತಕ್ಕೆ ಸಿಟಿಗ್ರೂಪ್ ನಿರ್ಧಾರ
ನವದೆಹಲಿ:ಭಾರತ ಹಾಗೂ ಚೀನಾ ಸೇರಿದಂತೆ 13 ದೇಶಗಳಲ್ಲಿನ ತನ್ನ ಗ್ರಾಹಕ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದಾಗಿ ಸಿಟಿಗ್ರೂಪ್ ಪ್ರಕಟಿಸಿದೆ.
ಅಮೆರಿಕದ ಬ್ಯಾಂಕಿಂಗ್ ಸಮೂಹವು ಸಂಪತ್ತು ನಿರ್ವಹಣೆ ಕ್ಷೇತ್ರದತ್ತ ಗಮನ ಹರಿಸಲು ಉದ್ದೇಶಿಸಿದ್ದು, ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಚಿಲ್ಲರೆ ಬ್ಯಾಂಕಿಂಗ್ ವಲಯವನ್ನು ತ್ಯಜಿಸುತ್ತಿರುವುದಾಗಿ ತಿಳಿಸಿದೆ.
ಅಮೆರಿಕದಲ್ಲಿನ ಮೂರನೇ ದೊಡ್ಡ ಬ್ಯಾಂಕಿಂಗ್ ಸಮೂಹವಾಗಿರುವ ಸಿಟಿ ಗ್ರೂಪ್, ಭಾರತ, ಚೀನಾ, ಆಸ್ಟ್ರೇಲಿಯಾ, ಮಲೇಷ್ಯಾ, ಬಹ್ರೇನ್, ಕೊರಿಯಾ, ಇಂಡೋನೇಷ್ಯಾ, ರಷ್ಯಾ, ವಿಯೆಟ್ನಾಂ, ಫಿಲಿಪ್ಪೀನ್ಸ್, ಥೈಲ್ಯಾಂಡ್, ಪೊಲ್ಯಾಂಡ್ ಮತ್ತು ತೈವಾನ್‌ಗಳಲ್ಲಿನ ತನ್ನ ಗ್ರಾಹಕ ಬ್ಯಾಂಕಿಂಗ್ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಿದೆ.
ಆದರೆ ಸಿಂಗಾಪುರ, ಹಾಂಕಾಂಗ್, ಲಂಡನ್ ಮತ್ತು ಯುಎಇಯಲ್ಲಿನ ಉದ್ಯಮಗಳ ಮೇಲೆ ಗಮನ ಹರಿಸುವುದನ್ನು ಮುಂದುವರಿಸಲಿದೆ ಎಂದು ಸಿಟಿಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಫ್ರೇಸರ್ ತಿಳಿಸಿದ್ದಾರೆ. ಮಾರ್ಚ್ ತಿಂಗಳಲ್ಲಿ ಸಿಇಒ ಹುದ್ದೆಗೆ ಏರಿದ್ದ ಫ್ರೇಸರ್, ವೆಲ್ತ್ ಮ್ಯಾನೇಜ್ಮೆಂಟ್‌ನಲ್ಲಿನ ಬೆಳವಣಿಗೆ ಅವಕಾಶಗಳು ಉತ್ತಮವಾಗಿರುವುದರಿಂದ ಅದರ ಕಡೆಗಿನ ಗಮನವನ್ನು ದುಪ್ಪಟ್ಟು ಮಾಡುವ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಸಿಟಿಗ್ರೂಪ್ ಸಮೂಹವು ತನ್ನ ಮೊದಲ ತ್ರೈಮಾಸಿಕ ಅವಧಿಯಲ್ಲಿ 7.9 ಬಿಲಿಯನ್ ಡಾಲರ್ ಲಾಭವನ್ನು ಪ್ರಕಟಿಸಿತ್ತು.