ಕರ್ನಾಟಕಕ್ಕೆ ಹೆಚ್ಚುವರಿ 25,000 ರೆಮ್ಡೆಸಿವಿರ್ ವೈಯಲ್ಸ್: ಸದಾನಂದ ಗೌಡ
ಮೈಲಾನ್ ಫಾರ್ಮಾ ಕಂಪನಿಗೆ ಇಂದು ಕೇಂದ್ರ ಸಚಿವರ ಭೇಟಿ
ರಾಜ್ಯಕ್ಕೆ ಹೆಚ್ಚು ಆಮ್ಲಜನಕ ಒದಗಿಸುವಂತೆ ಡಾ ಹರ್ಷವರ್ಧನ್ ಗೆ ಪತ್ರ
ನವದೆಹಲಿ:ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಅವರ ಮಧ್ಯಪ್ರವೇಶದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿಯಾಗಿ 25000 ವೈಯಲ್ಸ್ ರೆಮ್ಡೆಸಿವಿರ್ ಪೂರೈಕೆಯಾಗಲಿದೆ.
ಇಂದು ರಾತ್ರಿ ಬೆಂಗಳೂರಿಗೆ ತೆರಳುತ್ತಿರುವ ಸದಾನಂದ ಗೌಡರು ನಾಳೆ ಬೊಬ್ಬಸಂದ್ರದಲ್ಲಿರುವ ಮೈಲಾನ್ ಫಾರ್ಮಾ ಕಂಪನಿಗೆ ಭೇಟಿ ನೀಡಿ ರೆಮ್ಡೆಸಿವರ್ ಉತ್ಪಾದನೆ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲಿದ್ದಾರೆ. ರಾಜ್ಯಕ್ಕೆ ಹೆಚ್ಚುವರಿಯಾಗಿ ನಿಗದಿ ಯಾಗಿರುವ ರೆಮ್ಡೆಸಿವಿರ್ ಔಷಧವನ್ನು ಮೈಲಾನ್ ಕಂಪನಿಯೇ ಪೂರೈಸಲಿದೆ.
ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮನ್ವಯ ಸಮಿತಿಯು ಬುಧವಾರ ವಿವಿಧ ರಾಜ್ಯಗಳಿಗೆ ಈ ತಿಂಗಳ ಕೊನೆತನಕ ಎಷ್ಟು ರೆಮ್ಡೆಸಿವಿರ್ ಔಷಧ ಅಗತ್ಯವಾಗುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿತ್ತು. ಆ ಪ್ರಕಾರ ಕರ್ನಾಟಕಕ್ಕೆ 25,352 ರೆಮ್ಡೆಸಿವಿರ್ ವೈಯಲ್ಸ್ ನ್ನು ನಿಗದಿಪಡಿಸಲಾಗಿತ್ತು. ಆದರೆ ಇಂದು ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದ ರಾಜ್ಯ ಸರ್ಕಾರವು (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೆಮ್ಡೆಸಿವಿರ್ ಬೇಕು ಎಂಬ ಬೇಡಿಕೆ ಇಟ್ಟಿತ್ತು.
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ ಕೆ ಸುಧಾಕರ, ರಾಜ್ಯದ ಕೆಲ ಸಂಸದರು ಮತ್ತು ಅಧಿಕಾರಿ ಗಳು ಫಾರ್ಮಾಸ್ಯುಟಿಕಲ್ (ಔಷಧ) ಇಲಾಖೆಯನ್ನು ಹೊಂದಿರುವ ಸದಾನಂದಗೌಡ ಅವರನ್ನು ಸಂಪರ್ಕಿಸಿ ರಾಜ್ಯಕ್ಕೆ ಹೆಚ್ಚುವರಿ ರೆಮ್ಡೆಸಿವಿರ್ ಒದಗಿಸುವಂತೆ ಕೋರಿದ್ದರು.
ತಕ್ಷಣವೇ ಇದಕ್ಕೆ ಸ್ಪಂದಿಸಿದ ಸಚಿವ ಸದಾನಂದ ಗೌಡರು ಇಲಾಖಾ ಅಧಿಕಾರಿಗಳಿಗೆ (ಸಮನ್ವಯ ಸಮಿತಿಯ ಸದಸ್ಯರೂ ಹೌದು) ರಾಜ್ಯದ ಬೇಡಿಕೆ ಇಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತದನಂತರ ರಾಜ್ಯಕ್ಕೆ ಹೆಚ್ಚುವರಿ ರೆಮ್ಡೆಸಿವಿರ್ ಪೂರೈಕೆ ಆದೇಶ ಹೊರಬಿದ್ದಿದೆ.
ಆಮ್ಲಜನಕಕ್ಕೆ ಬೇಡಿಕೆ:ಈ ಮಧ್ಯೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೆಚ್ಚುವರಿ ಆಮ್ಲಜನಕ ಪೂರೈಕೆಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹಾಗೂ ರೇಲ್ವೆ ಸಚಿವ ಪಿಯುಷ್ ಗೋಯಲ್ ಅವರಿಗೆ ಬರೆದಿರುವ ಪತ್ರಕ್ಕೆ ಸದಾನಂದ ಗೌಡರೂ ಧ್ವನಿಗೂಡಿಸಿದ್ದಾರೆ.
ರಾಜ್ಯದಲ್ಲಿ ದಿನವೊಂದಕ್ಕೆ ಸ‍್ಥಾಪಿತ ಆಮ್ಲಜನಕ ಉತ್ಪಾದನೆ 812 ಮೆಟ್ರಿಕ್ ಟನ್ ಮಾತ್ರ. ಆದರೆ ದಿನದಿಂದ ದಿನಕ್ಕೆ ಆಮ್ಲಜನಕ ಬಳಕೆ ಏರಿಕೆಯಾಗುತ್ತಿದೆ. ಏಪ್ರಿಲ್ 25ರಿಂದ ರಾಜ್ಯಕ್ಕೆ ಪ್ರತಿದಿನ 1142 ಮೆಟ್ರಿಕ್ ಟನ್ ಆಮ್ಲಜನಕ ಬೇಕು. ಹಾಗೆಯೇ ಏಪ್ರಿಲ್ 30 ರಿಂದ ಪ್ರತಿದಿನ 1471 ಮೆಟ್ರಿಕ್ ಟನ್ ಆಮ್ಲಜನಕ ಬೇಕು ಎಂದು ಲೆಕ್ಕಹಾಕಲಾಗಿದೆ. ಇದರ ಪೂರೈಕೆ ಹಾಗೂ ಸಾಗಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಅವರು ಕೇಂದ್ರ ಸಚಿವರನ್ನು ಕೇಳಿಕೊಂಡಿದ್ದರು. ರಾಜ್ಯದ ಬೇಡಿಕೆಯನ್ನು ಆದ್ಯತೆ ಮೇರೆಗೆ ಈಡೇರಿಸುವಂತೆ ಸದಾನಂದ ಗೌಡರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಇಂದು ಪತ್ರ ಬರೆದಿದ್ದಾರೆ. ಹಾಗೆಯೇ ಸಚಿವದ್ವಯರೊಂದಿಗೆ ಈ ಬಗ್ಗೆ ದೂರವಾಣಿಯಲ್ಲಿಯೂ ಚರ್ಚಿಸಿದ್ದಾರೆ.
