ವಿನಾಯಕ್ ದಾಮೋದರ್ ಸಾವರ್ಕರ್ ಜಯಂತಿ: ಗಣ್ಯರಿಂದ ಸ್ಮರಣೆ
ನವದೆಹಲಿ/ಬೆಂಗಳೂರು:ಭಾರತದ ಸ್ವಾತಂತ್ರ್ಯ ಸೇನಾನಿ, ಕವಿ, ಕ್ರಾಂತಿಕಾರಿಗಳ ಕಮಾಂಡರ್, ಹಿಂದೂ ರಾಷ್ಟ್ರೀಯವಾದಿ ಮತ್ತು ಸಕ್ರಿಯ ಸುಧಾರಣಾವಾದಿ ವಿನಾಯಕ್ ದಾಮೋದರ್ ಸಾವರ್ಕರ್ ಜಯಂತಿ ಸಂದರ್ಭದಲ್ಲಿ ಶುಕ್ರವಾರ ಅನೇಕ ರಾಜಕೀಯ ನಾಯಕರು ಸ್ಮರಿಸಿಕೊಂಡಿದ್ದಾರೆ.
ಅವರ ದೇಶಪ್ರೇಮಕ್ಕಾಗಿ ಅವರು ಪ್ರತಿಯೊಬ್ಬ ರಾಷ್ಟ್ರೀಯವಾದಿಗಳ ಹೃದಯ ಮತ್ತು ಮನಸ್ಸಿನಲ್ಲಿ ವೀರ ಸಾವರ್ಕರ್ ಸ್ಥಾನ ಪಡೆದಿದ್ದಾರೆ.
1883ರ ಮೇ 28ರಂದು ಇಂದಿನ ಮಹಾರಾಷ್ಟ್ರ ಅಂದಿನ ಬ್ರಿಟಿಷ್ ಇಂಡಿಯಾದ ಮುಂಬೈ ರಾಜ್ಯದ ನಾಶಿಕ್ ಜಿಲ್ಲೆಯಲ್ಲಿ ಹುಟ್ಟಿದ ವಿ.ಡಿ.ಸಾವರ್ಕರ್ ಸ್ವಾತಂತ್ರ್ಯವೀರ ಸಾವರ್ಕರ್ ಅಥವಾ ಸಾವರ್ಕರ್ ಎಂದೇ ಭಾರತದಾದ್ಯಂತ ಜನಪ್ರಿಯ. ಹಿಂದೂ ಮಹಾಸಭಾವನ್ನು ಮುನ್ನಡೆಸಿಕೊಂಡು ಹೋಗಿ ಹಿಂದುತ್ವವನ್ನು ಜನಪ್ರಿಯಗೊಳಿಸಿದರು. 1966ರ ಫೆಬ್ರವರಿ 26ರಂದು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.
ಅಪ್ರತಿಮ ದೇಶಭಕ್ತ, ಹೋರಾಟಗಾರ, ಪ್ರಖರ ವಾಗ್ಮಿ, ಲೇಖಕ, ಸ್ವಾತಂತ್ರ್ಯವೀರ, ದಿವಂಗತ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜಯಂತಿಯಂದು ಅವರಿಗೆ ಅನಂತ ಪ್ರಣಾಮಗಳು. ಸಾವರ್ಕರ್ ಅವರ ಜೀವನ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಹೋರಾಟ ಭಾರತೀಯರಿಗೆ ನಿರಂತರ ಸ್ಪೂರ್ತಿಯ ಸೆಲೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.