ಲಕ್ನೋನಲ್ಲಿ ಎರಡು ಕಪ್ಪಾ ರೂಪಾಂತರಿ ಪ್ರಕರಣ ಪತ್ತೆ
ಲಕ್ನೋ:ಉತ್ತರ ಪ್ರದೇಶದಲ್ಲಿ ಎರಡು ಕಪ್ಪಾ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಲಕ್ನೋನ ಕೆಜಿಎಂಯು ಆಸ್ಪತ್ರೆಗೆ ಒಟ್ಟು 109 ಮಾದರಿಗಳ ಪೈಕಿ 107 ಡೆಲ್ಟಾ ರೂಪಾಂತರಿ ಪ್ರಕರಣಗಳಾಗಿದ್ದು, ಎರಡು ಕಪ್ಪಾ ಪ್ರಕರಣಗಳಿವೆ.
ಈ ಎರಡು ರೂಪಾಂತರಿಗಳು ರಾಜ್ಯಕ್ಕೆ ಹೊಸದಾಗಿದ್ದು, ಆತಂಕ ಹೆಚ್ಚಿಸಿದೆ.  ಕಳೆದ 24 ಗಂಟೆಯಲ್ಲಿ 10 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 22,676 ಕ್ಕೆ ಏರಿದೆ, ಒಟ್ಟು 17,07,044 ಪ್ರಕರಣಗಳಿವೆ.
ಭಾರತದಲ್ಲಿ ಕಂಡುಬಂದ 2 ಸೋಂಕಿಗೆ ಡೆಲ್ಟಾ ಹಾಗೂ ಕಪ್ಪಾ ಎಂದು ಹೆಸರಿಡಲಾಗಿದೆ. ಇನ್ಮುಂದೆ ವೈದ್ಯಕೀಯ ಭಾಷೆಯಲ್ಲಿ ರೂಪಾಂತರಿ ಸೋಂಕನ್ನು ಹೆಸರಿಸಬೇಕು. ಭಾರತದಲ್ಲಿ ಮೊದಲು ಕಾಣಿಸಿಕೊಂಡ .1.617.1 ಸೋಂಕಿಗೆ ಕಪ್ಪಾ ಎಂದು, ನಂತರ ಕಾಣಿಸಿಕೊಂಡ B1.617.2 ವೈರಸನ್ನು ಡೆಲ್ಟಾ ಎಂದು ನಾಮಕರಣ ಮಾಡಲಾಗಿದೆ. ಎರಡೂ ಮಾದರಿಯ ವೈರಸ್​​ 2020ರ ಅಕ್ಟೋಬರ್​ನಲ್ಲಿ ಭಾರತದಲ್ಲಿ ಪತ್ತೆಯಾಗಿವೆ.
ಯಾವುದೇ ದೇಶಗಳ ಹೆಸರನ್ನು ಬಳಸದೆ ಇನ್ಮುಂದೆ ವೈದ್ಯಕೀಯ ಹೆಸರುಗಳ ಮೂಲಕವೇ ರೂಪಾಂತರಿ ವೈರಸನ್ನು ಗುರುತಿಸಲಾಗುವುದು. ಸೋಂಕು ಪತ್ತೆ, ಚಿಕಿತ್ಸೆ, ಅಧ್ಯಯನ ಎಲ್ಲವೂ ಇನ್ಮುಂದೆ ಗ್ರೀಕ್​​​ ಅಕ್ಷರಗಳುಳ್ಳ ಹೆಸರುಗಳ ಮೂಲಕವೇ ನಡೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​​-19 ಟೆಕ್ನಿಕಲ್​​ ಮುಖ್ಯಸ್ಥರಾದ ಡಾ.ಮಾರಿಯಾ ವೆನ್​ ಕೆರಕೋವ ಸ್ಪಷ್ಟನೆ ನೀಡಿದ್ದಾರೆ.