ವಿರೋಧ ಪಕ್ಷಗಳ ನಾಯಕರ ತೀವ್ರ ಗದ್ದಲ: ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ
ನವದೆಹಲಿ:ಸಂಸತ್‌ ಮುಂಗಾರು ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಆರಂಭದಲ್ಲೇ ವಿರೋಧ ಪಕ್ಷಗಳ ನಾಯಕರು ತೀವ್ರ ಗದ್ದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಲೋಕಸಭೆ, ರಾಜ್ಯಸಭೆ ಕಲಾಪವನ್ನು ಮುಂದೂಡಲಾಯಿತು. ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸಂಸತ್ತಿನಲ್ಲಿ ವೈಎಸ್‌ಆರ್ ಸಿಪಿ ಮದ್ದಿಲ ಗುರುಮೂರ್ತಿ, ಬಿಜೆಪಿ ಮಂಗಳಾ ಸುರೇಶ್, ಐಯುಎಂಎಲ್ ಅಬ್ದುಸಮ್ಮಾದ್ ಸಮದಾನ್ ಮತ್ತು ಕಾಂಗ್ರೆಸ್ಸಿನ ವಿಜಯ್ ವಸಂತ್ ಲೋಕಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.
ನೂತನ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು, ಮಹಿಳೆಯರು, ದಲಿತರು, ಬುಡಕಟ್ಟು ಜನಾಂಗದವರು ಸಚಿವರಾದ ಹಿನ್ನೆಲೆ ಸಂಸತ್ತಿನಲ್ಲಿ ಉತ್ಸಾಹ ಹೆಚ್ಚಾಗಿರು ತ್ತದೆ ಎಂದು ಭಾವಿಸಿ ದ್ದೇನೆ.
ಮಹಿಳೆಯರು, ಒಬಿಸಿಗಳು, ರೈತರ ಪುತ್ರರು ಮಂತ್ರಿಗಳಾಗಿದ್ದರೆ ಬಹುಶಃ ಕೆಲವರು ಸಂತೋಷವಾಗಿರುವು ದಿಲ್ಲ. ಈ ಬಾರಿ ಕೃಷಿ ಮತ್ತು ಗ್ರಾಮೀಣ ಹಿನ್ನೆಲೆಯ ಒಬಿಸಿ ಸಮುದಾಯದ ನಮ್ಮ ಸಹೋದ್ಯೋಗಿಗಳಿಗೆ  ಮಂತ್ರಿ ಸ್ಥಾನ ನೀಡಲಾಗಿದೆ. ಪ್ರಧಾನಿ ಮೋದಿಯವರು ನೂತನ ಸಚಿವರ ಕುರಿತು ಮಾತನಾಡು ತ್ತಿದ್ದಂತೆಯೇ ವಿರೋಧ ಪಕ್ಷಗಳ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು.
ವಿರೋಧ ಪಕ್ಷಗಳ ಈ ನಡೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜನಾಥ್ ಅವರು ಮಾತನಾಡುತ್ತಿದ್ದಂತೆಯೇ ವಿಪಕ್ಷಗಳು ತೀವ್ರ ಗದ್ದಲವನ್ನುಂಟು ಮಾಡಿದರು. ಬಳಿಕ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ರಾಜ್ಯ ಸಭೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಅಬ್ದುಲ್ ವಹಾಬ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ಹಿರಿಯ ನಟ ದಿಲೀಪ್ ಕುಮಾರ್ ಸೇರಿದಂತೆ ಈ ವರ್ಷ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಮಧ್ಯಾಹ್ನ 12.24ಕ್ಕೆ ಮರಳಿ ರಾಜ್ಯ ಸಭಾ ಕಲಾಪ ಆರಂಭವಾದ ಬಳಿಕ ವಿರೋಧ ಪಕ್ಷದ ನಾಯಕರು ತೀವ್ರ ಗದ್ದಲವನ್ನುಂಟು ಮಾಡಿದರು.
