ವಿಚಾರಣೆಗೆ ಗೈರು: ಮಾಜಿ ಪೊಲೀಸ್ ಆಯುಕ್ತರಿಗೆ ₹25 ಸಾವಿರ ದಂಡ
ಮುಂಬೈ:ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್ ವಿರುದ್ಧ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ, ವಿಚಾರಣೆಗೆ ಹಾಜರಾಗದ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರಿಗೆ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಚಾರಣಾ ಆಯೋಗ ₹25 ಸಾವಿರ ದಂಡ ವಿಧಿಸಿದೆ.
ಮಾರ್ಚ್‌ ತಿಂಗಳಲ್ಲಿ ಅನಿಲ್‌ ದೇಶ್‌ಮುಖ್ ಅವರ ವಿರುದ್ಧ ಪರಮ್‌ಬೀರ್‌ ಸಿಂಗ್ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು. ಈ ಕುರಿತು ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೈಲಾಶ್ ಉತ್ತಮ್‌ಚಂದ್‌ ಚಾಂಡಿವಾಲ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗ ರಚಿಸಿತ್ತು.
ಬುಧವಾರ ಈ ಪ್ರಕರಣದ ವಿಚಾರಣೆ ನಿಗದಿಯಾಗಿದ್ದರೂ, ಹಾಜರಾಗಲು ವಿಫಲವಾದ ಕಾರಣ, ಆಯೋಗ ಅವರಿಗೆ ₹25 ಸಾವಿರ ದಂಡ ವಿಧಿಸಿದೆ ಎಂದು ಸರ್ಕಾರದ ಪರ ವಕೀಲರು ಗುರುವಾರ ತಿಳಿಸಿದ್ದಾರೆ.
ವಿಚಾರಣೆಗೆ ಗೈರಾದ ವೇಳೆಯಲ್ಲಿ ತನಿಖಾ ಆಯೋಗ ‘ನಿಮಗೆ ಇದು ಕೊನೆ ಅವಕಾಶ’ ಎಂದು ಎಚ್ಚರಿಕೆ ನೀಡಿತ್ತು.
