ಮಾಜಿ ಸಿಎಂ ಒ.ಪನ್ನೀರ್‌ಸೆಲ್ವಂ ಪತ್ನಿ ನಿಧನ
ಚೆನ್ನೈ:ತಮಿಳುನಾಡು ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರ ಪತ್ನಿ ವಿಜಯಲಕ್ಷ್ಮಿ (66) ಹೃದಯಾಘಾತದಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
ವಿಜಯಲಕ್ಷ್ಮಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಜಿಇಎಂ ಆಸ್ಪತ್ರೆ ಹೇಳಿಕೆ ನೀಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಅವರು ಜಿಇಎಂ ಆಸ್ಪತ್ರೆಗೆ ದಾಖಲಾಗಿದ್ದರು. 10 ದಿನಗಳ ಚಿಕಿತ್ಸೆಯ ಬಳಿಕ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬೇಕಾಗಿತ್ತು. ಆದರೆ ಬೆಳಿಗ್ಗೆ ಹೃದಯಾಘಾತ ಕಾಣಿಸಿಕೊಂಡಿದೆ’ ಎಂದು ಆಸ್ಪತ್ರೆ ತಿಳಿಸಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಜಲಸಂಪನ್ಮೂಲ ಸಚಿವ ದೊರೈಮುರಗನ್, ಎಐಎಡಿಎಂಕೆ ಸಹ ಸಂಯೋಜಕ ಕೆ.ಪಳನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ, ಪನ್ನೀರ್‌ಸೆಲ್ವಂ ಮತ್ತು ಅವರ ಪುತ್ರ ಒ.ಪಿ.ರವೀಂದ್ರನಾಥ್‌ ಅವರಿಗೆ ಸಾಂತ್ವನ ಹೇಳಿದರು.