ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋನಾಲ್‌ ಶುಕ್ಲಾ ನಿಧನ
ಮುಂಬೈ:ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೋನಾಲ್‌ ಶುಕ್ಲಾ(80) ಅವರು ಮುಂಬೈನಲ್ಲಿ ಗುರುವಾರ ಹೃದಯಾಘಾತದಿಂದ ನಿಧನರಾದರು.
ಶುಕ್ಲಾ ಅವರು ‘ವಾಚಾ ಚಾರಿಟೇಬಲ್‌ ಟ್ರಸ್ಟ್‌’ನ ಸಂಸ್ಥಾಪಕಿ ಮತ್ತು ಮ್ಯಾನೇಜಿಂಗ್‌ ಟ್ರಸ್ಟಿಯೂ ಆಗಿದ್ದರು. ಕಳೆದ ನಾಲ್ಕು ದಶಕಗಳಿಂದ ಬಾಲಕಿಯರು ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸಿದ್ದರು.
1987ರಲ್ಲಿ ಗ್ರಂಥಾಲಯ ಮತ್ತು ಮಹಿಳೆಯರ ಸಂಪನ್ಮೂಲ ಕೇಂದ್ರವನ್ನಾಗಿ ‘ವಾಚಾ’ ಆರಂಭಿಸಲಾಗಿತ್ತು. ಇದು ಮಹಿಳೆಯರ ಮೊದಲ ಗ್ರಂಥಾಲಯವಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹಿಳೆಯರ ಬಗ್ಗೆ ಎರಡು ಸಂಗೀತ ಅಲ್ಬಮ್‌ಗಳು ಮತ್ತು ಎರಡು ಸಾಕ್ಷ್ಯಚಿತ್ರಗಳನ್ನು ‘ವಾಚಾ’ ಸಂಸ್ಥೆಯು 1991ರಲ್ಲಿ ನಿರ್ಮಿಸಿತ್ತು.
ಶಿಕ್ಷಕಿಯಾಗಿದ್ದ ಸೋನಾಲ್‌ ಶುಕ್ಲಾ ಅವರು, ಮುಂಬೈನ ಸ್ವಚ್ಛತಾ ಕಾರ್ಮಿಕರು ಮತ್ತು ಮೀನುಗಾರರಿಗೆ ಸಂಬಂಧಿಸಿದ ಯೋಜನೆಗಳ ಉಸ್ತುವಾರಿ   ವಹಿಸಿಕೊಂಡಿದ್ದರು.