ಉಸಿರುಗಟ್ಟಿ ಸಾವು: ನರೇಂದ್ರ ಗಿರಿ ಮರಣೋತ್ತರ ವರದಿ
ನವದೆಹಲಿ:ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ನರೇಂದ್ರ ಗಿರಿ ಅವರು ಉಸಿರುಗಟ್ಟಿ ಮೃತಪಟ್ಟಿರುವ ಸಾಧ್ಯತೆ ಕುರಿತು ಮರಣೋತ್ತರ ಪರೀಕ್ಷಾವರದಿಯಿಂದ ತಿಳಿದುಬಂದಿದೆ.
ಅವರ ಕುತ್ತಿಗೆಯಲ್ಲಿ ವಿ ಆಕಾರದ ಗುರುತು ಕಂಡುಬಂದಿರುವುದು, ಉಸಿರುಗಟ್ಟಿ ಮೃತಪಟ್ಟಿರುವುದು ಸೂಚಿಸುತ್ತದೆ ಎಂದು ವರದಿ ಹೇಳಿದೆ. ನರೇಂದ್ರಿಗಿರಿ ಅವರ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರುಗಳು ಅವರ ದೇಹದ ಒಳಾಂಗಗಳನ್ನು ಸಂರಕ್ಷಿಸಿದ್ದಾರೆ. ವರದಿಯನ್ನು ಆಧರಿಸಿ ವಿಶೇಷ ತನಿಖಾ ತಂಡವು ತನ್ನ ತನಿಖೆ ಮುಂದುವರಿಸ ಲಿದೆ.
ಬುಧವಾರ ಐದು ಮಂದಿ ವೈದ್ಯರ ತಂಡವು ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿತು. ವರದಿಯನ್ನು ಮೊಹರು ಡಿದ ಲಕೋಟೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಸೋಮವಾರ ಸಂಜೆ ಮಹಂತ ನರೇಂದ್ರ ಗಿರಿ ಅವರು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಅವರ ಆಶ್ರಮದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ಮೃತಪ ಟ್ಟಿರುವುದು ಕಂಡುಬಂದಿತ್ತು. ಅವರು ತನ್ನ ಶಿಷ್ಯ ಆನಂದಗಿರಿ, ಬಡೆ ಹನುಮಾನ್ ಮಂದಿರದ ಮುಖ್ಯ ಅರ್ಚಕ ಆದ್ಯ ಪ್ರಸಾದ್‌ತಿವಾರಿ ಹಾಗೂ ಸಂದೀಪ್ ತಿವಾರಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾಗಿರುವುದಾಗಿ ಡೆತ್‌ನೋಟ್‌ನಲ್ಲಿ ಅವರು ಬರೆದಿದ್ದರು ಎನ್ನಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಟ್ ಅಧಿಕಾರಿಗಳು ಸ್ವಾಮಿ ಆನಂದಂಗಿರಿ ಹಾಗೂ ಆದ್ಯ ತಿವಾರಿ ಅವರನ್ನು ಬಂಧಿಸಿದೆ.