ಗಾಂಧಿವಾದಿ, ಚಿಂತಕ ಎಸ್‌.ಎನ್.ಸುಬ್ಬರಾವ್‌ ನಿಧನ
ಜೈಪುರ:ಗಾಂಧಿವಾದಿ, ಚಿಂತಕ ಎಸ್‌.ಎನ್.ಸುಬ್ಬರಾವ್‌ (92) ಅವರು ಹೃದಯಾಘಾತ ದಿಂದ ಬುಧವಾರ ನಿಧನರಾದರು.
ಅನಾರೋಗ್ಯದ ಕಾರಣದಿಂದ ಅವರನ್ನು ಇಲ್ಲಿನ ಸವಾಯಿ ಮಾನ್‌ಸಿಂಗ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು.
ಪಾರ್ಥಿವ ಶರೀರವನ್ನು ಬಾಪುನಗರದಲ್ಲಿರುವ ವಿನೋಬಾ ಜ್ಞಾನಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಮುಖ್ಯಮಂತ್ರಿ ಅಶೋಕ್ ಗೆಹಲೋತ್‌, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್‌ ಸಿಂಗ್‌ ಡೋಟಾಸರಾ ಹಾಗೂ ಇತರ ಮುಖಂಡರು ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಗೆಹಲೋತ್‌, ನಾನು 10-12 ವರ್ಷದವನಾಗಿದ್ದಾಗ ಸುಬ್ಬರಾವ್‌ ಅವರ ಸಂಪರ್ಕಕ್ಕೆ ಬಂದೆ. ಜೋಧಪುರದಲ್ಲಿ ಅವರು ನಡೆಸುತ್ತಿದ್ದ ಹಲವಾರು ಶಿಬಿರಗಳಲ್ಲಿ ಭಾಗಿಯಾಗಿದ್ದೆ. ಶಿಬಿರಗಳು ಹಾಗೂ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಅವರು ದೇಶದ ಯುವ ಪೀಳಿಗೆಗೆ ಸ್ಫೂರ್ತಿಯಾಗಿದ್ದರು’ ಎಂದು ಹೇಳಿದರು.
‘ಸುಬ್ಬರಾವ್‌ ಅವರ ವಿಚಾರ- ಸಂದೇಶಗಳನ್ನು ಯುವ ಜನರಿಗೆ ತಲುಪಿಸಲು ವೇದಿಕೆಯೊಂದನ್ನು ಸ್ಥಾಪಿಸಲಾಗುವುದು’ ಎಂದೂ ಮುಖ್ಯಮಂತ್ರಿ ಗೆಹಲೋತ್‌ ಹೇಳಿದರು.
ರಾಜಸ್ಥಾನ ರಾಜ್ಯಪಾಲ ಕಲ್‌ರಾಜ್ ಮಿಶ್ರಾ ಅವರು ಕೂಡ ಸುಬ್ಬರಾವ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.