ಪತ್ರಕರ್ತೆಯ ಭಾವಚಿತ್ರ ಅಪ್‌ಲೋಡ್‌ ಮಾಡಿ ಅವಹೇಳನ: ಎಫ್‌ಐಆರ್‌ ದಾಖಲು
ನವದೆಹಲಿ:ವೆಬ್‌ಸೈಟ್‌ಗೆ ಪತ್ರಕರ್ತೆಯ ಭಾವಚಿತ್ರ ಅಪ್‌ಲೋಡ್‌ ಮಾಡಿ ಅವಹೇಳನ ಮಾಡಿರುವ ಆರೋಪ ದಲ್ಲಿ ದೆಹಲಿಯ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
ಆನ್‌ಲೈನ್ ನ್ಯೂಸ್ ಪೋರ್ಟಲ್‌ನಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತೆ ಆನ್‌ಲೈನ್‌ ಮುಖಾಂತರ ದೂರು ಸಲ್ಲಿಸಿದ್ದು, ಅದರ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
‘ಬುಲ್ಲಿ ಬಾಯಿ’ ಹೆಸರಿನ ವೆಬ್‌ಸೈಟ್‌ನಲ್ಲಿ ಅಪರಿಚಿತ ಗುಂಪೊಂದು ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿ ಪತ್ರಕರ್ತೆ ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಮತ್ತು ಕಿರುಕುಳ ನೀಡುವ ಗುಂಪೊಂದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.
ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದಲೇ ‘ಬುಲ್ಲಿ ಬಾಯಿ’ ವೆಬ್‌ಸೈಟ್‌ ಅನ್ನು ರಚಿಸಲಾಗಿದೆ ಎಂದೂ ಆರೋಪಿಸಿದ್ದಾರೆ.