ಬೃಹತ್ ಚುನಾವಣಾ ರ‍್ಯಾಲಿ, ರೋಡ್ ಶೋ ನಡೆಸುವುದು ಸೂಕ್ತವಲ್ಲ: ಡಾ.ವಿ.ಕೆ.ಪೌಲ್
ನವದೆಹಲಿ:ದೇಶದಲ್ಲಿನ ಕೋವಿಡ್ ಹೆಚ್ಚಳದ ಪರಿಸ್ಥಿತಿಯಲ್ಲಿ ಬೃಹತ್ ಚುನಾವಣಾ ರ‍್ಯಾಲಿ ಹಾಗೂ ರೋಡ್ ಶೋ ನಡೆಸುವುದು ಸೂಕ್ತವಲ್ಲ ಎಂದು ಭಾರತದ ಕೋವಿಡ್ ಟಾಸ್ಕ್ ಫೋರ್ಟ್ ಮುಖ್ಯಸ್ಥ ಡಾ.ವಿ.ಕೆ.ಪೌಲ್ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಬೃಹತ್ ರೋಡ್ ಶೋಗಳಿಗೆ ಚುನಾವಣಾ ಆಯೋಗ ಕಡಿವಾಣ ಹಾಕಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಪಂಜಾಬ್ ಮತ್ತು ಮಣಿಪುರ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಈ ಮೊದಲು ಚುನಾವಣಾ ಆಯೋಗ ಹೇಳಿಕೆ ನೀಡಿತ್ತು.
ಕೋವಿಡ್ ನ ನೂತನ ರೂಪಾಂತರ ತಳಿ ಒಮೈಕ್ರಾನ್ ಕ್ರಿಪ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಚುನಾವಣೆ ನಡೆಸುವುದು ಕಳವಳಕ್ಕೆ ಎಡೆಮಾಡಿ ಕೊಟ್ಟಿದೆ. ಆಯೋಗ ಸಿಬಂದಿಗಳ ಹೆಚ್ಚಳ, ಚುನಾವಣಾಧಿಕಾರಿಗಳಿಗೆ ಲಸಿಕೆ ನೀಡುವಿಕೆ ಹಾಗೂ ಮತಗಟ್ಟೆಗಳ ಹೆಚ್ಚಳ ಮಾಡುವ ಬಗ್ಗೆ ಆಯೋಗ ಚರ್ಚೆ ನಡೆಸಿತ್ತು.
ಉತ್ತರಪ್ರದೇಶ, ಪಂಜಾಬ್ ಮತ್ತು ಮಣಿಪುರದಲ್ಲಿ ಕೋವಿಡ್ ಮೊದಲ ಡೋಸ್ ನೀಡಿರುವ ಪ್ರಮಾಣ ಭಾರೀ ಕಡಿಮೆ ಸಂಖ್ಯೆಯಲ್ಲಿದೆ.