ಗಡಿ ಬಿಕ್ಕಟ್ಟು: ಜ.12 ರಂದು ಭಾರತ – ಚೀನಾ 14 ನೇ ಸುತ್ತಿನ ಮಾತುಕತೆ
ನವದೆಹಲಿ:ಗಡಿ ಬಿಕ್ಕಟ್ಟಿನ ಕುರಿತು ಭಾರತ ಮತ್ತು ಚೀನಾ ಜನವರಿ 12 ರಂದು 14 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಾತುಕತೆಗಳನ್ನು ನಡೆಸುವ ಸಾಧ್ಯತೆ ಯಿದೆ.
ಉಭಯ ದೇಶಗಳ ನಡುವಿನ ಘರ್ಷಣೆ ಬಿಂದುವಾಗಿರುವ ಹಾಟ್ ಸ್ಪ್ರಿಂಗ್ಸ್ ಪ್ರದೇಶದ ವಿವಾದ ಪರಿಹರಿಸಲು 14 ನೇ ಸುತ್ತಿನ ಭಾರತ-ಚೀನಾ ಮಾತುಕತೆಗಳು ಜ.12 ರಂದು ನಡೆಯುವ ಸಾಧ್ಯತೆಯಿದೆ. ಪೂರ್ವ ಲಡಾಖ್ ಪ್ರದೇಶದಲ್ಲಿನ ವಿವಾದಿತ ಪ್ರದೇಶ ಕುರಿತು ಇಲ್ಲಿಯವರೆಗೂ ಉಭಯ ದೇಶಗಳ ನಡುವೆ 13 ಸುತ್ತಿನ ಮಾತುಕತೆ ನಡೆಸಲಾಗಿದೆ.
ಕಳೆದ ವರ್ಷ ಚೀನಾದ ಆಕ್ರಮಣ ನಂತರ ಹೊರಹೊಮ್ಮಿದ ಹಾಟ್ ಸ್ಪ್ರಿಂಗ್ಸ್ ಘರ್ಷಣೆ ಕುರಿತ ನಿರ್ಣಯವನ್ನು ಉಭಯ ದೇಶಗಳು ಎದುರು ನೋಡುತ್ತಿವೆ. ಪ್ಯಾಂಗೊಂಗ್ ಸರೋವರ ಮತ್ತು ಗೋಗ್ರಾ ಎತ್ತರದ ದಡದಲ್ಲಿನ ಘರ್ಷಣೆ ಬಿಂದುಗಳನ್ನು ಪರಿಹರಿಸಲಾಗಿದೆ.
ಭಾರತೀಯ ಸೇನೆಯ ನೂತನ 14 ‘ಫೈರ್ ಅಂಡ್ ಫ್ಯೂರಿ’ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಗಿ ಅನಿಂಧ್ಯಾ ಸೇನ್‌ಗುಪ್ತಾ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ಮಾತು ಕತೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಅವರು ಮಂಗಳವಾರವಷ್ಟೇ ಔಪಚಾರಿಕವಾಗಿ ಅಧಿಕಾರ ವಹಿಸಿ ಕೊಂಡರು.
ಗಾಲ್ವಾನ್ ಕಣಿವೆಯಲ್ಲಿ ಉಂಟಾಗಿದ್ದ ಸಂಘರ್ಷದ ನಂತರ ಎರಡೂ ದೇಶಗಳ ನಡುವೆ 13 ಸುತ್ತಿನ ಮಿಲಿಟರಿ ಮಾತುಕತೆ ನಡೆದಿದೆ. ಕಳೆದ ಬಾರಿ ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯ ಚೀನಾದ ಬದಿಯ ಚುಶುರ್-ವೊಲ್ಡೊ ಗಡಿಯಲ್ಲಿ 13ನೇ ಸುತ್ತಿನ ಮಾತುಕತೆ ನಡೆದಿತ್ತು. ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆದ ಸಭೆ ಅಂತಿಮವಾಗಿ ವಿಫಲವಾಗಿತ್ತು.
ಗಡಿ ಸಂಘರ್ಷ ಕೊನೆಗಾಣಿಸಬಹುದಾದ ಯಾವುದೇ ರಚನಾತ್ಮಕ ಸಲಹೆಗಳನ್ನು ಸ್ವೀಕರಿಸಲು, ಚೀನಿ ಸೇನೆ ಸುತಾರಂ ತಯಾರಿಲ್ಲ ಎಂದು ಭಾರತೀಯ ಸೇನೆಯ ವಕ್ತಾರರು ತಿಳಿಸಿದ್ದಾರೆ. ಸೈನ್ಯ ಜಮಾವಣೆಯ ತನ್ನ ಪಟ್ಟನ್ನು ಚೀನಾ ಸಡಿಲಿಸದಿರುವುದೇ ಸಮಸ್ಯೆ ಮತ್ತು ಕಗ್ಗಂಟಾಗಲು ಕಾರಣ ಎನ್ನಲಾಗಿದೆ.
ಕೋರ್ ಕಮಾಂಡರ್‌ಗಳ 13ನೇ ಸುತ್ತಿನ ಮಾತುಕತೆ ವೇಳೆ ಗಡಿ ಬಿಕ್ಕಟ್ಟು ಶಮನಗೊಳಿಸಲು, ಭಾರತೀಯ ಸೇನೆ ನೀಡಿದ ಎಲ್ಲಾ ರಚನಾತ್ಮಕ ಸಲಹೆಗಳನ್ನು ಚೀನಿ ಸೇನೆ ತಿರಸ್ಕರಿತ್ತು.
ಪರಸ್ಪರ ಸಂವಹನ ಪ್ರಕ್ರಿಯೆ ಮತ್ತಷ್ಟು ಗಟ್ಟಿಗೊಳಿಸಲು ಮತ್ತು ಗಡಿ ಪರಿಸ್ಥಿತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಉಭಯ ಸೇನೆ ಸಮ್ಮತಿ ಸೂಚಿಸಿವೆ. ಆದರೆ ಸಮಸ್ಯೆ ಪರಿಹಾರಕ್ಕೆ ಭಿನ್ನ ನಿಲುವುಗಳನ್ನು ಪ್ರದರ್ಶಿಸಿವೆ ಎಂಬ ಮಾಹಿತಿ ಬಂದಿದೆ. ಚೀನಿ ಸೇನೆ ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಭರವಸೆ ಇರುವುದಾಗಿ ಭಾರತೀಯ ಸೇನೆ ಹೇಳಿದೆ.