ಸಂಸತ್ತಿನ ಬಜೆಟ್ ಅಧಿವೇಶನ: ನಾಳೆ ಕಾಂಗ್ರೆಸ್ ’ಕಾರ್ಯತಂತ್ರ’ ಸಭೆ
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ ಪಕ್ಷದ ನಿಲುವನ್ನು ಚರ್ಚಿಸಲು ಹಾಗೂ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ನಾಯಕರು ಶುಕ್ರವಾರ ಸಭೆ ಸೇರಲಿದ್ದಾರೆ.
ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದ್ದು, ಉಭಯ ಸದನಗಳ ನಾಯಕರು, ಮುಖ್ಯ ಸಚೇತಕರು ಮತ್ತು ಪಕ್ಷದ ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ. ಹೆಚ್ಚುತ್ತಿರುವ ನಿರುದ್ಯೋಗ, ತೈಲ ದರ, ಕೋವಿಡ್ ಪರಿಸ್ಥಿತಿ ಮತ್ತು ಅಮರ್ ಜವಾನ್ ಜ್ಯೋತಿಯ ಸ್ಥಳಾಂತರದ ಕುರಿತ ವಿಚಾರಗಳನ್ನು ಪಕ್ಷವು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಅಧಿವೇಶನದ ಮೊದಲಾರ್ಧವು ಜ.31 ರಿಂದ ಫೆಬ್ರುವರಿ 11ರ ವರೆಗೆ ನಡೆಯುತ್ತದೆ. ಮಾರ್ಚ್ 14 ರಂದು ಮತ್ತೆ ಆರಂಭವಾಗಲಿರುವ ಅಧಿವೇಶನ ಏಪ್ರಿಲ್ 8 ರವರೆಗೆ ನಡೆಯಲಿದೆ. ಫೆಬ್ರುವರಿ 1ರಂದು ಸರ್ಕಾರವು 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ.