ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಕಿರಿಯ ಶಾಸಕ-ಕಿರಿಯ ಮೇಯರ್‌
ತಿರುವನಂತಪುರಂ:ಕೇರಳ ರಾಜ್ಯದ ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್ 21 ವರ್ಷದ ಯುವ ನಾಯಕಿ ಆರ್ಯ ರಾಜೇಂದ್ರನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಆರ್ಯ ರಾಜೇಂದ್ರನ್ ಅವರು, ಕೇರಳದ ಬಾಲುಶ್ಶೇರಿ ಶಾಸಕ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಕೆ.ಎಂ.ಸಚಿನ್ ದೇವ್ ಅವರನ್ನು ವರಿಸಲಿದ್ದಾರೆ. ಆರ್ಯ ರಾಜೇಂದ್ರನ್ ಅವರು ದೇಶದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಮೇಯರ್ ಆಗಿದ್ದರೆ, ಸಚಿನ್ ದೇವ್ ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕರಾಗಿದ್ದಾರೆ.
ಒಂದು ತಿಂಗಳೊಳಗೆ ಮದುವೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆರ್ಯ ಅವರು 21 ನೇ ವಯಸ್ಸಿನಲ್ಲಿ ತಿರುವನಂತಪುರದ ಮೇಯರ್ ಆಗಿದ್ದಾರೆ. ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ವಿದ್ಯಾರ್ಥಿನಿಯಾಗಿದ್ದಾಗ ಆರ್ಯ ಮೇಯರ್ ಆದ ವಿಷಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು.
ಸಚಿನ್ ದೇವ್ ಕೋಝಿಕ್ಕೋಡ್‌ ನ ನೆಲ್ಲಿಕೋಡ್ ಮೂಲದವರು. ಕೋಝಿಕ್ಕೋಡ್‌ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.