ಈಶಾದಲ್ಲಿ ಸಂಭ್ರಮದ ಶಿವರಾತ್ರಿ
‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ವಿದೇಶಾಂಗ ಸಚಿವೆ ಮೀನಾಕ್ಷಿ ಲೇಖಿ ಭಾಗಿ
ಲಕ್ಷಾಂತರ ಭಕ್ತರ ಸಡಗರ
ಕೊಯಮತ್ತೂರು:ಕೊಯಮತ್ತೂರಿನ ಈಶಾ ಯೋಗಕೇಂದ್ರದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ಶಿವರಾತ್ರಿ ಸಂಭ್ರಮ ಸಡಗರದಿಂದಜರುಗಿತು. ಧ್ಯಾನಲಿಂಗಕ್ಕೆ ಸದ್ಗುರು ಜಗ್ಗಿ ವಾಸುದೇವ್ ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ನಂತರ ರಾತ್ರಿ ಆದಿಯೋಗಿ ಶಿವ ಮೂರ್ತಿಯ ಮುಂಭಾಗದಲ್ಲಿ ಸಹಸ್ರಾರು ರುದ್ರಾಕ್ಷಿಗಳಿಗೆ ಬಿಲ್ವಪತ್ರೆಯ ಅರ್ಚನೆ ನೆರವೇರಿಸಿದ್ದು, ಈ ರುದ್ರಾಕ್ಷಿಗಳು ಭಕ್ತರ ಮನೆಗಳನ್ನು ತಲುಪಲಿವೆ. ಸಂಜೆ ಲಿಂಗ ಭೈರವಿ ಉತ್ಸವ ಆದಿಯೋಗಿಯ ಅಂಗಳ ತಲುಪುವದರೊಂದಿಗೆ ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಿದವು.
ಮಂಗಳವಾರ ಸಂಜೆ ೬ ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮಗಳು ಬುಧವಾರ ಮುಂಜಾನೆ ೬ ಗಂಟೆಯವರೆಗೆ ನಿರಂತರವಾಗಿ ನಡೆದವು. ತಮಿಳುನಾಡು, ಕರ್ನಾಟಕ, ಕೇರಳ, ಉತ್ತರ ಭಾರತವಲ್ಲದೇ, ದೇಶ ವಿದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಭಕ್ತರು ಗಾಯನ – ನೃತ್ಯ ರೂಪಕಗಳಿಗೆ ಸಾಕ್ಷಿಯಾದರು. ಭಕ್ತ ಸ್ತೋಮದ ನಡುವೆ ಸದ್ಗುರು ರ‍್ಯಾಂಪ್ ಮೇಲೆ ಕೈಮುಗಿದು ಹೆಜ್ಜೆ ಹಾಕುತ್ತಾ ದರ್ಶನ ನೀಡುತ್ತಿದ್ದರು. ಹಾಡಿಗೆ ಅವರು ಹೆಜ್ಜೆ ಹಾಕಿದಾಗ, ಅವರೊಂದಿಗೆ ಭಕ್ತರು ಚಪ್ಪಾಳೆ ತಟ್ಟುತ್ತಾ ಹೆಜ್ಜೆ ಹಾಕಿದರು. ಒಟ್ಟಿನಲ್ಲಿ ಆದಿಯೋಗಿಯ ಮುಂದಿನ ವಿಶಾಲ ಮೈದಾನವು ಕೈಲಾಸವನ್ನೇ ಧರೆಗಿಳಿಸಿದಂತೆ ಭಾಸವಾಗಿತ್ತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸದ್ಗುರು, ದೇಶದಲ್ಲಿ ವ್ಯಾಪಕವಾಗಿ ಹಬ್ಬಿ, ಅನೇಕ ಸಾವು ನೋವುಗಳಿಗೆ ಕಾರಣವಾದ ಕರೋನಾ ಮಹಾಮಾರಿಯಿಂದ ಎಲ್ಲರೂ ನೊಂದಿದ್ದೇವೆ. ಹತ್ತಿರ ದವರು, ಸ್ನೇಹಿತರು ಹಾಗೂ ಬಂಧು ಮಿತ್ರರೂ ಸೇರಿದಂತೆ ಅನೇಕರನ್ನು ಕಳೆದುಕೊಂಡಿದ್ದೇವೆ. ಇದನ್ನು ಮನಗಂಡು, ಉತ್ತಮ ಭವಿಷ್ಯದತ್ತ ನಾವೆಲ್ಲರೂ ಹೆಜ್ಜೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ದೃಢ ಸಂಕಲ್ಪ ಮಾಡಬೇಕಾಗಿದೆ ಎಂದರು.
ಕಾವೇರಿ ನೀರಿನ ಸಂರಕ್ಷಣೆ ವಿಚಾರದ ಬಗ್ಗೆ ಮಾತನಾಡುತ್ತ ಭಾವುಕರಾದ ಸದ್ಗುರು, ಎಲ್ಲರ ನಿರ್ಲಕ್ಷ್ಯದಿಂದಾಗಿ ಈ ಭೂಮಿ ವಿನಾಶ ದತ್ತ ಸಾಗುತ್ತಿದೆ. ಹೀಗೆ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ ತೀವ್ರವಾದ ಆಹಾರ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿ, ಮಣ್ಣು ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ,  ಕೇಂದ್ರ ವಿದೇಶಾಂಗ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ನಟಿ ಕಂಗನಾ ರಣಾವತ್ ಸೇರಿದಂತೆ ಹಲವು ಗಣ್ಯರು, ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಶಿವರಾತ್ರಿ ಅಂಗವಾಗಿ ಮಂಗಳವಾರ ರಾತ್ರಿಯಿಂದ ೭ ದಿನಗಳ ಕಾಲ ಫೌಂಡೇಶನ್ ವತಿಯಿಂದ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
‘ಮಣ್ಣು ಉಳಿಸಿ’- ಈ ಬಾರಿ ಶಿವರಾತ್ರಿ ಆಚರಣೆಯ ಘೋಷವಾಕ್ಯಮಣ್ಣಿನ ಸಂರಕ್ಷಣೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕುದಿನದ ಹತ್ತು ನಿಮಿಷವಾದರೂ ಮಣ್ಣಿನ ಸಂರಕ್ಷಣೆಗೆ ಆದ್ಯತೆ ನೀಡಬೇಕುಕಾರ್ಯಕ್ರಮದಲ್ಲಿ ಮಣ್ಣು ಉಳಿಸಿ ಜಾಗೃತಿ ಸ್ಟಿಕರ್ ವಿತರಣೆ
***
೨೦೩೫ರ ವೇಳೆಗೆ ದೇಶದಲ್ಲಿ ಆಹಾರದ ಸಮಸ್ಯೆ ಹೆಚ್ಚಾಗಲಿದೆ. ಈ ಕುರಿತು ಹೆಚ್ಚಿನ ಜನ ಜಾಗೃತಿ ಮೂಡಿಸಲು ಬೈಕ್‌ನಲ್ಲಿ ಪ್ರವಾಸ ಕೈಗೊಳ್ಳುತ್ತಿದ್ದೇನೆ.ಜಾಗೃತಿ ಅಭಿಯಾನಕ್ಕೆ ಮಾ.೨೧ರಂದು ಲಂಡನ್‌ನಲ್ಲಿ ಚಾಲನೆ ನೀಡಲಿದ್ದು, ೨೬ ದೇಶಗಳಿಗೆ ಭೇಟಿ ನೀಡಲಿದ್ದೇನೆ. ಸುಮಾರು ೧೦೦ ದಿನಗಳ ಕಾಲ, ೩೦ ಸಾವಿರ ಮೈಲಿ ಬೈಕ್‌ನಲ್ಲಿ ಪ್ರಯಾಣ ಮಾಡುವ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ವಿಚಾರದ ಕುರಿತು ಜನರು ತಮ್ಮ ಧ್ವನಿ ಎತ್ತುವ ಸಮಯ ಬಂದಿದೆ. ಸರಕಾರ ಮತ್ತು ಸಂಬಂಧಿಸಿದ ತಜ್ಞರು ಈ ಕುರಿತು ಹೆಚ್ಚಿನ ಗಮನ ಹರಿಸಿ, ಮಣ್ಣಿನ ಸಂರಕ್ಷಣೆಗೆ ನೀತಿ ರೂಪಿಸುವಂತೆಒತ್ತಾಯಿಸಬೇಕಿದೆ.– ಸದ್ಗುರು ಜಗ್ಗಿ ವಾಸುದೇವ್