ಏಪ್ರಿಲ್ 1ರಿಂದಲೇ ನರೇಗಾ ಕೂಲಿ ಹೆಚ್ಚಳ
ನವದೆಹಲಿ:ಏಪ್ರಿಲ್ 1ರಿಂದಲೇ ಜಾರಿಗೆ ಬರುವಂತೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕೂಲಿಯನ್ನು ಹೆಚ್ಚಳ ಮಾಡಲಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ 21 ರಾಜ್ಯಗಳು ಮತ್ತು ಕೇಂದ್ರಾ ಡಳಿತ ಪ್ರದೇಶಗಳಲ್ಲಿ ಜಾರಿಗೆ ಬರುವಂತೆ ನರೇಗಾ ಯೋಜನೆ ಕೂಲಿಯನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ  289 ರೂ. ಕೂಲಿ ಪಡೆಯುತ್ತಿದ್ದ ವರು ಏಪ್ರಿಲ್ 1ರಿಂದ 309 ರೂ. ಪಡೆಯಲಿದ್ದಾರೆ.
2022-23ರ ಹಣಕಾಸು ವರ್ಷದಿಂದ 21 ರಾಜ್ಯಗಳಲ್ಲಿ ನರೇಗಾ ಯೋಜನೆ ಕೂಲಿ 4 ರಿಂದ 21 ರೂ. ತನಕ ಏರಿಕೆಯಾಗಿದೆ. ಆದರೆ ಮಿಜೋರಾಂ, ಮಣಿಪು ಮತ್ತು ತ್ರಿಪುರ ರಾಜ್ಯಗಳಲ್ಲಿ ಯೋಜನೆಯ ಕೂಲಿ ಏರಿಕೆಯಾಗಿಲ್ಲ.
ಗೋವಾ ರಾಜ್ಯದಲ್ಲಿ ಶೇ 7.14ರಷ್ಟು ಏರಿಕೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ದಿನಕ್ಕೆ 294 ರೂ. ಪಡೆಯುತ್ತಿದ್ದವರು ಏಪ್ರಿಲ್ 1ರಿಂದ 315 ರೂ. ಪಡೆಯಲಿದ್ದಾರೆ. ಮೇಘಾಲಯ ರಾಜ್ಯದಲ್ಲಿ ಶೇ 1.77ರಷ್ಟು ಏರಿಕೆಯಾಗಿದೆ. 226 ರೂ. ಪಡೆಯುತ್ತಿದ್ದವರು ಇನ್ನು ಮುಂದೆ ದಿನಕ್ಕೆ 230 ರೂ. ಪಡೆಯಲಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಗ್ರಾಹಕ, ಕೃಷಿ ಕಾರ್ಮಿಕರ ವೇತನ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನರೇಗಾ ಯೋಜನೆಯಡಿ ಕೂಲಿ ಪರಿಷ್ಕರಣೆ ಮಾಡಲಾಗುತ್ತದೆ.
ಗ್ರಾಮೀಣ ಭಾಗದ ಜನರ ಜೀವನಕ್ಕೆ ಭದ್ರತೆ ಹೆಚ್ಚಿಸಲು ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವ ಗುರಿಯನ್ನು ನರೇಗಾ ಯೋಜನೆ ಹೊಂದಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (ನರೇಗಾ) ದಡಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷ ವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತದೆ.