ರಾಷ್ಟ್ರೀಯ ಪ್ಯಾಂಥರ್ಸ್ ಪಾರ್ಟಿಯ ಸ್ಥಾಪಕ ಭೀಮ್‌ ಸಿಂಗ್‌ ನಿಧನ
ಜಮ್ಮು:ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಪ್ಯಾಂಥರ್ಸ್ ಪಾರ್ಟಿಯ ಸ್ಥಾಪಕ ಭೀಮ್‌ ಸಿಂಗ್‌(81 ವರ್ಷ) ಮಂಗಳವಾರ ನಿಧನರಾದರು.
ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇಲ್ಲಿನ ಜಿಎಂಸಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಉದಂಪುರ್ ಜಿಲ್ಲೆಯ ಬುಗ್ಟೇರಿ ಯನ್‌ ಗ್ರಾಮದ ಅವರಿಗೆ ಪತ್ನಿ ಜೈಮಾಲಾ ಮತ್ತು ಪುತ್ರ ಅಂಕಿತ್ ಲವ್‌ ಇದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ಸಿಂಗ್‌ ಲೇಖಕ, ಸುಪ್ರೀಂ ಕೋರ್ಟ್‌ನ ವಕೀಲರೂ ಆಗಿದ್ದರು. ಕೋರ್ಟ್‌ನ ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ಹಿರಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಅಕ್ಟೋಬರ್‌ 1982ರಲ್ಲಿ ತಮ್ಮದೇ ಪ್ಯಾಂಥರ್ಸ್‌ ಪಾರ್ಟಿ ಸ್ಥಾಪಿಸಿದ್ದರು. ಲಂಡನ್‌ ವಿ.ವಿ.ಯಲ್ಲಿ ಕಾನೂನು ಶಿಕ್ಷಣ ಪಡೆದಿದ್ದು, ಅಲ್ಲಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಯಾಗಿ ಆಯ್ಕೆಯಾಗಿದ್ದ ಮೊದಲ ಭಾರತೀಯರಾಗಿದ್ದರು. ಉದಂಪುರ್‌ ಕ್ಷೇತ್ರದಿಂದ ಲೋಕಸಭೆಗೆ 1988ರಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೋತಿದ್ದರು.
ದಶಕಗಳ ಕಾಲ ದೇಶದ ವಿವಿಧ ಜೈಲುಗಳಲ್ಲಿದ್ದ ಪಾಕಿಸ್ತಾನ, ಅಫ್ಗಾನಿಸ್ತಾನ, ಪಾಕ್ ಆಕ್ರಮಿಕ ಕಾಶ್ಮೀರದ ಸುಮಾರು 200 ಜನರಿಗೆ ಸಿಂಗ್‌ ಅವರು ಕಾನೂನು ನೆರವು ಒದಗಿಸಿದ್ದರು. ಬೈಕ್‌ನಲ್ಲಿಯೇ ಸುಮಾರು 130 ದೇಶಗಳಿಗೆ ಪ್ರವಾಸ ತೆರಳಿದ್ದರು.