ಇಂದಿನಿಂದ ಎರಡು ದಿನ ಜಿಎಸ್‌ಟಿ ಸಭೆ
ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸ ಲಿದ್ದಾರೆ. ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಚಾಲ್ತಿಯಲ್ಲಿರುವ ಜಿಎಸ್​ಟಿ‌ ಸ್ಲ್ಯಾಬ್​ಗಳಲ್ಲಿ ಅಗತ್ಯ ಬದಲಾವಣೆ ತರುವುದು, ಹೊಸ ಸರಕು ಸೇವೆಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವುದೂ ಸೇರಿದಂತೆ ಹಲವು ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಜಿಎಸ್​ಟಿ ಪರಿಹಾರ ನೀಡಿಕೆಯನ್ನು 5 ವರ್ಷದ ನಂತರವೂ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರಗಳು ಆಗ್ರಹಿಸಲಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ಸೇರಿಸಬೇಕೆ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ. ಪೆಟ್ರೋಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ಸೇರಿಸಿದರೆ ಪೆಟ್ರೋಲ್ ದರವು ಲೀಟರ್​ಗೆ 33 ರೂಪಾಯಿ ಕಡಿಮೆಯಾಗಬಹುದು. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಬಹುದು ಎಂದು ವಿಶ್ಲೇಷಿಸ ಲಾಗುತ್ತಿದೆ.
ಆದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದರೆ ರಾಜ್ಯ ಸರ್ಕಾರಗಳಿಗೆ ಪೆಟ್ರೊಲ್, ಡೀಸೆಲ್ ಮೇಲೆ ವ್ಯಾಟ್ ವಿಧಿಸಲು ಅವಕಾಶ ಸಿಗುವುದಿಲ್ಲ. ಪರ್ಯಾಯ ಆದಾಯ ಮೂಲಗಳನ್ನು ತೋರಿಸಿ ಕೊಡದಿದ್ದರೆ ರಾಜ್ಯ ಸರ್ಕಾರಗಳು ಈ ಪ್ರಸ್ತಾವ ವಿರೋಧಿಸುವ ಸಾಧ್ಯತೆಯಿದೆ.
ಜಿಎಸ್​ಟಿ ಜಾರಿಯಾದ ನಂತರ ರಾಜ್ಯ ಸರ್ಕಾರಗಳು ಈ ಹಿಂದೆ ಅಸ್ತಿತ್ವದಲ್ಲಿದ್ದ ಹಲವು ರೀತಿಯ ತೆರಿಗೆಗಳ ಆದಾಯ ಮೂಲ ಗಳನ್ನು ಕಳೆದುಕೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರದ ಸೂಚನೆ ಒಪ್ಪಿಕೊಂಡು, ವ್ಯಾಟ್ ಆದಾಯ ಕಳೆದುಕೊಳ್ಳಲು ರಾಜ್ಯ ಸರ್ಕಾರಗಳು ಸಹಮತ ಸೂಚಿಸುತ್ತಿಲ್ಲ.