ಪೋಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮೃತದೇಹ ಪತ್ತೆ
ಕಟಕ್:ಒಡಿಶಾದ ಕಟಕ್‌ನ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಭಾಷ್ ಕುಮಾರ್ ಬೆಹಾರಿ (49 ವರ್ಷ) ಅವರ ಮೃತದೇಹ ಅಧಿಕೃತ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರ ಮೃತದೇಹ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಕುತ್ತಿಗೆಯಲ್ಲಿ ಗಾಯದ ಗುರುತುಗಳಿವೆ ಎಂದು ಕಟಕ್ ನಗರ ವಲಯ 3ರ ಸಹಾಯಕ ಪೊಲೀಸ್ ಕಮಿಷನರ್ ತಪಸ್ ಪ್ರಧಾನ್ ಹೇಳಿದ್ದಾರೆ.
ಘಟನೆ ನಡೆದಾಗ ನ್ಯಾಯಾಧೀಶರ ಪತ್ನಿ ಮನೆಯಲ್ಲಿರಲಿಲ್ಲ. ಕಳೆದೆರಡು ದಿನಗಳಿಂದ ರಜೆಯಲ್ಲಿದ್ದ ನ್ಯಾಯಾಧೀಶರು ಶುಕ್ರವಾರ ಕೆಲಸಕ್ಕೆ ಹಾಜರಾಗಬೇಕಿತ್ತು ಎಂದು ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಟಕ್‌ನ ಎಸ್‌‍ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಾಥಮಿಕವಾಗಿ ಆತ್ಮಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ.