ಚಾಲಕುಡಿ ನದಿಗೆ ನೀರಿನ ಹರಿವು ಹೆಚ್ಚಳ: ಹೈ ಅಲರ್ಟ್‌
ತಿರುವನಂತಪುರಂ:ಕೇರಳದ ಪರಂಬಿಕುಲಂ ಡ್ಯಾಂನ ಮೂರು ಶಟರ್‌ಗಳ ಪೈಕಿ ಒಂದು ಗೇಟ್‌ಗೆ ಹಾನಿಯಾದ ಹಿನ್ನೆಲೆಯಲ್ಲಿ ಚಾಲಕುಡಿ ನದಿಗೆ ನೀರಿನ ಹರಿವು ಹೆಚ್ಚಾ ಗಿದೆ.
ಚಲಕುಡಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಅಪಾಯಕಾರಿ ಏರಿಕೆಯಾಗಿದ್ದು, ಹೈ ಅಲರ್ಟ್‌ ಘೋಷಿಸಲಾಗಿದೆ.
ಸೋರಿಕೆ ಮುಚ್ಚಲು ತೀವ್ರ ಪ್ರಯತ್ನಗಳು ನಡೆಯುತ್ತಿದ್ದು, ಅಣೆಕಟ್ಟಿನ ಬಳಿ ನದಿಗಳ ದಡದಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವವರನ್ನು ಸ್ಥಳಾಂತರಿಸಲಾಗಿದೆ.
ರಾಜ್ಯ ಸರ್ಕಾರವು ಎಲ್ಲಾ ಸ್ಲೂಸ್ ಗೇಟ್‌ಗಳನ್ನು ತೆರೆಯುವಂತೆ ನೆರೆಯ ತಮಿಳುನಾಡಿಗೆ ಮನವಿ ಮಾಡಿದೆ.
ಸಾಮಾನ್ಯವಾಗಿ ಒಂದೇ ಬಾರಿಗೆ 10 ಸೆಂಟಿಮೀಟರ್‌ಗಳಷ್ಟು ಎತ್ತರಕ್ಕೆ ಏರುವ ಶೆಟರ್ ಬುಧವಾರ ಬೆಳಗಿನ ವೇಳೆಗೆ 25 ಅಡಿ ಎತ್ತರಕ್ಕೆ ಸ್ವಯಂಚಾಲಿತವಾಗಿ ತೆರೆದುಕೊಂಡಿದೆ.
ಅನಿರೀಕ್ಷಿತ ಘಟನೆಯಿಂದ ಪಾಲಕ್ಕಾಡ್ ಮತ್ತು ತ್ರಿಶೂರ್‌ನ ಎರಡು ಜಿಲ್ಲೆಗಳಲ್ಲಿ ಎಲ್ಲಾ ನದಿಗಳಲ್ಲಿ ಮೀನುಗಾರಿಕೆ ಮತ್ತು ಪ್ರವಾಸ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.