ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೈದ್ಯ ಸೇರಿ ಮಕ್ಕಳ ಸಜೀವದಹನ
ತಿರುಪತಿ:ಆಂಧ್ರಪ್ರದೇಶದ ತಿರುಪತಿಯ ರೇಣಿಗುಂಟಾದಲ್ಲಿ ಹೊಸದಾಗಿ ನಿರ್ಮಿಸಲಾದ ಕಾರ್ತಿಕೇಯ ಖಾಸಗಿ ಆಸ್ಪತ್ರೆಯಲ್ಲಿ ಭಾರಿ ಬೆಂಕಿ ಕಾಣಿಸಿ ಕೊಂಡಿದ್ದು, ವೈದ್ಯ ಸೇರಿ ಆತನ ಇಬ್ಬರು ಮಕ್ಕಳು ಸಜೀವ ದಹನಗೊಂಡಿ ದ್ದಾರೆ.
ಕಟ್ಟಡದ ಮೊದಲ ಮಹಡಿಯಲ್ಲಿ ವೈದ್ಯರ ಕುಟುಂಬ ವಾಸವಿದ್ದರು. ಬೆಂಕಿಯಲ್ಲಿ ಸಿಲುಕಿದ್ದ ತನ್ನ ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗ ರವಿಶಂಕರ ರೆಡ್ಡಿ ಎಂದು ಗುರುತಿಸಲಾದ ವೈದ್ಯರು ಸಜೀವ ದಹನವಾಗಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತರನ್ನು ಡಾ.ರವಿಶಂಕರ್ ರೆಡ್ಡಿ (45), ಅವರ ಪುತ್ರ ಭರತ್ (ಸಿದ್ದು) (12) ಮತ್ತು ಪತ್ರಿ ಕಾರ್ತಿಕಾ (6) ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರವಿಶಂಕರ್ ರೆಡ್ಡಿ ಅವರ ತಾಯಿ ಮತ್ತು ಪತ್ನಿಯನ್ನು ರಕ್ಷಿಸಿದ್ದಾರೆ. ತಿರುಪತಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.