’ : ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯಲ್ಲಿ ಆಲ್ಝೈಮರ್ಸ್ ಕಾಯಿಲೆಯನ್ನು ತಡೆಗಟ್ಟುವುದು
ಡಾ.ಸುರಭಿ ಚತುರ್ವೇದಿ, ನರರೋಗ ಸಲಹಾ ತಜ್ಞರು ಮತ್ತು ಪಾರ್ಶ್ವವಾಯು ತಜ್ಞರು ಟ್ರೈಲೈಫ್ ಆಸ್ಪತ್ರೆ
ಭಾರತದ ಜನಸಂಖ್ಯೆಯ ವಯಸ್ಸು ಕ್ಷಿಪ್ರಗತಿಯಲ್ಲಿ ಹೆಚ್ಚಾಗುತ್ತಿರುವಂತೆ, ಈ ದೇಶವು ಅಲ್ಜೀರ‍್ಸ್ ರೋಗದ ಪ್ರಕರಣ ಗಳು ಹೆಚ್ಚಾಗುವ ಗಮನಾರ್ಹ ಸವಾಲನ್ನು ಎದುರಿಸಬೇಕಾಗಿದೆ. ಅಲ್ಜೀರ‍್ಸ್ ರೋಗವು ನರಗಳು ಕ್ಷೀಣಿಸುವ ತೊಂದರೆ ಯಾಗಿದ್ದು, ರೋಗ ಪ್ರಗತಿಯಾದಂತೆ ಗ್ರಹಿಕೆಯ ಇಳಿಕೆ ಕಂಡುಬರುವುದು ಇದರ ಗುಣಲಕ್ಷಣವಾಗಿದೆ.
2031ರ ಹೊತ್ತಿಗೆ ಭಾರತದಲ್ಲಿ ವಯಸ್ಸಾದವರ ಅಂದರೆ 60 ವರ್ಷಗಳಿಗೂ ಮೇಲ್ಪಟ್ಟ ಜನರ ಸಂಖ್ಯೆ 200 ದಶಲಕ್ಷ ವಾಗುವ ನಿರೀಕ್ಷೆ ಇದೆ. ಇವರಲ್ಲಿ ಶೇ.7.4ರಷ್ಟು ಜನರು ಅಲ್ಜೀರ‍್ಸ್ ರೋಗದಿಂದ ಬಳಲುವ ಸಾಧ್ಯತೆ ಇರುತ್ತದೆ. ಭಾರತದಲ್ಲಿ ಸುಮಾರು 8.8 ದಶಲಕ್ಷ ಜನರು ಬುದ್ಧಿಮಾಂದ್ಯತೆ ಅಂದರೆ ಡಿಮೆನ್ಷಿಯಾ ಹೊಂದಿದ್ದು, ಇದು 2036ರ ಹೊತ್ತಿಗೆ 17 ದಶಲಕ್ಷಕ್ಕೆ ಹೆಚ್ಚಾಗುವ ಹಾಗೂ 2050ರ ಹೊತ್ತಿಗೆ ಮೂರು ಪಟ್ಟು ಹೆಚ್ಚುವ ಸಾಧ್ಯತೆ ಇದೆ. ಅಲ್ಜೀರ‍್ಸ್ ರೋಗ ಭಾರತದ ಭವಿಷ್ಯದ ಮೇಲೆ ದೀರ್ಘವಾದ ನೆರಳಿನ ಕತ್ತಲನ್ನು ಕವಿಯುವ ಬೆದರಿಕೆವೊಡ್ಡಿದೆ.
ಆದರೆ, ಈ ಕಾಡುತ್ತಿರುವ ಬೆದರಿಕೆಯ ನಡುವೆ ಭರವಸೆಯ ದಾರಿದೀಪ ಹೊಂದಿದೆ. ಭಾರತದ ಅನನ್ಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ರಚನೆಗೆ ತಕ್ಕಂತೆ ಇದನ್ನು ತಡೆಯುವ ಕ್ರಮಗಳನ್ನು ಕೈಗೊಳ್ಳಬಹು ದಾಗಿದೆ. ಪ್ರಸ್ತುತ ಇದಕ್ಕೆ ಯಾವುದೇ ಗುಣಪಡಿಸುವ ಚಿಕಿತ್ಸೆ ಇರುವುದಿಲ್ಲ. ರೋಗ ಅಭಿವೃದ್ಧಿಯಾಗುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಮೆದುಳಿನ ಆರೋಗ್ಯಕ್ಕೆ ಆದ್ಯತೆ ನೀಡುವ ಸಕ್ರಿಯ ಮಾರ್ಗ ಅನುಸರಿಸಿ ರೋಗದೊಂದಿಗೆ ಬದುಕುವವರ ಜೀವನದ ಗುಣಮಟ್ಟ ಸುಧಾರಿಸಬಹುದಾಗಿದೆ. ಅಲ್ಜೀರ‍್ಸ್ ರೋಗದ ಅಂದಾಜಿನಲ್ಲಿ ಶೇ.40ರಷ್ಟು ರೋಗದ ಪ್ರಕರಣಗಳನ್ನು ವಿಳಂಬಗೊಳಿಸಬಹುದು ಅಥವ ತಪ್ಪಿಸಲೂ ಸಾಧ್ಯವಿರುತ್ತದೆ.
ಆಲ್ಝೈಮರ್ ರೋಗ ಸೇರಿದಂತೆ ಬುದ್ಧಿಮಾಂದ್ಯತೆ ಬೆಳೆಯುವ ಅಪಾಯ ವಯಸ್ಸಿನೊಂದಿಗೆ ಹೆಚ್ಚುತ್ತದೆ. ಇದರೊಂದಿಗೆ ರೋಗ ಕುರಿತಂತೆ ಜಾಗೃತಿ ಕಡಿಮೆ ಇರುವುದು ಮತ್ತು ಭಾರತೀಯ ಸಮಾಜ ವಿಭಕ್ತ ಕುಟುಂಬಗಳಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಈ ರೋಗ ಗುರುತಿಸಿ ರೋಗನಿರ್ಣಯ ಕೈಗೊಳ್ಳುವುದು ವಿಳಂಬವಾಗುತ್ತದೆ. ಜೊತೆಗೆ ಪೋಷಕರು ಸಾಮಾನ್ಯವಾಗಿ ತಮ್ಮ ಮಕ್ಕಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವುದರಿಂದ ಅಲ್ಜೀರ‍್ಸ್ ರೋಗದ ಆರಂಭ ಲಕ್ಷಣಗಳನ್ನು ಗುರುತಿಸದೆ ಇರಬಹುದು. ಇದರಿಂದ ಪ್ರಮುಖ ವೈದ್ಯಕೀಯ ಹಸ್ತಕ್ಷೇಪ ವಿಳಂಬವಾಗುವು ದಲ್ಲದೆ, ಕುಟುಂಬಗಳ ಮೇಲೆ ಗಮನಾರ್ಹ ಹೊರೆ ಬೀಳುತ್ತದೆ. ಬಹಳಷ್ಟು ಜನರಲ್ಲಿ ಇಂತಹ ತೊಂದರೆ ಹೊಂದಿರುವ ಜನರಿಗೆ ಆರೈಕೆ ನೀಡುವಲ್ಲಿ ಜ್ಞಾನ ಮತ್ತು ಸಂಪನ್ಮೂಲಗಳ ಕೊರತೆ ಕಾಡುತ್ತದೆ.
ಭಾರತದಲ್ಲಿ ಆಲ್ಝೈಮರ್ ರೋಗದ ಆರ್ಥಿಕ ಪ್ರಭಾವ ಸಮಾನ ಕಾಳಜಿಯ ವಿಷಯವಾಗಿದೆ. ಏಕೆಂದರೆ ಇದು ಪೀಡಿತ ಕುಟುಂಬಗಳ ಮೇಲೆ ಗಮನಾರ್ಹ ಆರ್ಥಿಕ ಹೊರೆ ಹೇರುತ್ತದೆ. ಬುದ್ದಿಮಾಂದ್ಯ ಅಥವಾ ಡಿಮೆನ್ಷಿಯಾ ಆರೈಕೆಯಲ್ಲಿ ವಾರ್ಷಿಕವಾಗಿ ಒಟ್ಟಾರೆ 1.9 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿರುವ ಅಂದಾಜು ಇದ್ದು, ಇದರಲ್ಲಿ ಅಲ್ಜೀರ‍್ಸ್ ರೋಗ ಪ್ರಮುಖ ಪಾಲು ಹೊಂದಿದೆ.
ಆಲ್ಝೈಮರ್ ರೋಗದ ಪ್ರಗತಿಯನ್ನು ತಡೆಯುವಲ್ಲಿ ಅಥವ ನಿಧಾನವಾಗಿಸುವಲ್ಲಿ ಸರಳ ಅಭ್ಯಾಸಗಳು ಅಪಾರ ಸಾಮರ್ಥ್ಯ ಹೊಂದಿವೆ. ಓದುವುದು, ಒಗಟು ಅಥವ ಸಮಸ್ಯೆಗಳನ್ನು ಬಿಡಿಸುವುದು, ನೂತನ ಕೌಶಲ್ಯಗಳನ್ನು ಕಲಿಯುವುದು ಅಥವ ಸಂಗೀತ ವಾದ್ಯಗಳನ್ನು ನುಡಿಸುವುದು ಮುಂತಾದ ಮೆದುಳಿಗೆ ಉತ್ತೇಜನ ನೀಡುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒಂದು ಪ್ರಮುಖ ಕಾರ್ಯತಂತ್ರವಾಗಿದೆ. ದೈಹಿಕ ಚಟುವಟಿಕೆಯು ಸಮಾನವಾದ ಪ್ರಮುಖ ಪಾತ್ರ ಹೊಂದಿರುತ್ತದೆ. ಬಿರುಸಿನ ನಡಿಗೆ ಮೆದುಳಿನ ಆರೋಗ್ಯವನ್ನು ಪ್ರೋತ್ಸಾಹಿಸುವಲ್ಲಿ ಶಕ್ತಿಶಾಲಿ ಉಪಕರಣವಾಗಬಹುದಾಗಿದೆ.
ಯೋಗಾಭ್ಯಾಸವು ಕೇವಲ ದೈಹಿಕ ಲಾಭಗಳಲ್ಲದೆ, ಮಾನಸಿಕ ಆರೋಗ್ಯವನ್ನು ಪ್ರೋತ್ಸಾಹಿಸಿ ಮತ್ತು ಒತ್ತಡ ಕಡಿಮೆ ಮಾಡುತ್ತದೆ. ಈ ಎರಡೂ ಅಂಶಗಳು ಗ್ರಹಿಕೆ ಅಥವ ಅರಿವಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಆಹಾರಕ್ರಮ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಸಾಂಪ್ರದಾಯಿಕ ಭಾರತೀಯ ಆಹಾರಕ್ರಮದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಮಸಾಲೆಗಳಾದ ಅರಿಶಿನ ಮುಂತಾದವುಗಳಿದ್ದು, ಇದು ಹಲವಾರು ರೀತಿಯಲ್ಲಿ ಮೆದುಳಿಗೆ ಚಾಲನೆ ನೀಡುವ ಗುಣಗಳಿಂದ ಕೂಡಿವೆ. ಸಾಮಾಜಿಕ ಸಂಪರ್ಕಗಳು ಮತ್ತೊಂದು ಪ್ರಮುಖ ಅಂಶವಾಗಿದೆ. ಸಮುದಾಯ ಕಾರ್ಯ ಕ್ರಮಗಳು, ಧಾರ್ಮಿಕ ಸಭೆಗಳು ಅಥವ ಸ್ವಯಂ ಸೇವಾ ಸಮೂಹಗಳ ರಚನೆ ಮುಂತಾದವುಗಳಲ್ಲಿ ಭಾಗವಹಿಸುವು ದನ್ನು ಪ್ರೋತ್ಸಾಹಿಸುವುದರಿಂದ ಅರ್ಥಪೂರ್ಣ ಸಾಮಾಜಿಕ ಸಂವಾದವನ್ನು ಪೋಷಿಸಿದಂತಾಗುತ್ತದೆಯಲ್ಲದೆ, ಇದು ಅರಿವಿನ ಸ್ಥಿರತೆಗೆ ಮುಖ್ಯವಾಗಿರುತ್ತದೆ.
ಮೆದುಳಿನ ಕಾರ್ಯಕ್ಕೆ ಗುಣಮಟ್ಟದ ನಿದ್ರೆ ಅವಶ್ಯಕವಾಗಿರುತ್ತದೆ. ಸತತವಾದ ನಿದ್ರಾ ದಿನಚರಿಯನ್ನು ಇಟ್ಟುಕೊಳ್ಳುವುದು ಮತ್ತು ಸಾಕಷ್ಟು ಹಾಗೂ ಅನುಕೂಲಕರ ನಿದ್ರೆಯ ವಾತಾವರಣದ ಖಾತ್ರಿ ಮಾಡಿಕೊಳ್ಳುವುದು ಪ್ರಮುಖ ಹೆಜ್ಜೆಗಳಾಗಿವೆ. ಧ್ಯಾನದಂತಹ ಅಭ್ಯಾಸಗಳು ವಿಶ್ರಾಂತಿಯನ್ನು ಪ್ರೋತ್ಸಾಹಿಸುವುದಲ್ಲದೆ, ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ.
ದೀರ್ಘಕಾಲದ ಒತ್ತಡವು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿರುವಂತಹ ಧ್ಯಾನ ಮತ್ತು ಆಳವಾಗಿ ಉಸಿರಾಡುವ ತಂತ್ರಗಳು ಒತ್ತಡ ನಿರ್ವಹಣೆ ಮತ್ತು ಅರಿವಿನ ಯೋಗಕ್ಷೇಮವನ್ನು ಪ್ರೋತ್ಸಾಹಿಸಲು ಶಕ್ತಿಶಾಲಿ ಉಪಕರಣಗಳಾಗಬಹುದು. ಹೆಚ್ಚುವರಿಯಾಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಾದ ಮಧುಮೇಹ ಮತ್ತು ಉನ್ನತ ರಕ್ತದೊತ್ತಡಗಳನ್ನು ನಿರ್ವಹಿಸುವುದು ಮುಖ್ಯವಾಗಿರುತ್ತದೆ. ನಿಯಮಿತವಾದ ವೈದ್ಯಕೀಯ ಪರೀಕ್ಷೆಗಳು ಮತ್ತು ಚಿಕಿತ್ಸೆಯ ಯೋಜನೆ ಯನ್ನು ಅನುಸರಿಸುವುದು ಅವಶ್ಯಕವಾಗಿರುತ್ತದೆ. ಈ ಅನುಸರಣೆ ಕೇವಲ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ, ಆಲ್ಝೈಮರ್ ರೋಗದ ಅಪಾಯ ಕಡಿಮೆ ಮಾಡಲು ಕೂಡ ಉತ್ತಮವಾಗಿರುತ್ತದೆ.
ಸಮಯಕ್ಕೆ ಸರಿಯಾಗಿ ವೈದ್ಯಕೀಯ ಹಸ್ತಕ್ಷೇಪ ಕೈಗೊಳ್ಳುವುದಕ್ಕಾಗಿ ಮತ್ತು ಜೀವನದ ಗುಣಮಟ್ಟ ಸುಧಾರಿಸಿ ಕೊಳ್ಳಲು ಶೀಘ್ರ ರೋಗನಿರ್ಣಯ ಮುಖ್ಯವಾಗಿರುತ್ತದೆ. ನೆನಪಿನ ತೊಂದರೆ, ಕೆಲಸಗಳನ್ನು ಮುಗಿಸುವಲ್ಲಿ ಕಷ್ಟವಾಗುವುದು ಮತ್ತು ಮನಸ್ಥಿತಿಯಲ್ಲಿ ಬದಲಾವಣೆಗಳಂತಹ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದರಿಂದ ತಕ್ಷಣ ವೈದ್ಯಕೀಯ ಮೌಲ್ಯೀಕರಣ ನಡೆಸಬಹುದಾಗಿದೆ. ಆಲ್ಝೈಮರ್ ರೋಗದ ಆರಂಭದ ಚಿಹ್ನೆಗಳನ್ನು ಕುರಿತು ಸಾರ್ವಜನಿಕರಿಗೆ ಶಿಕ್ಷಣ ನೀಡುವ ಸಾಂಸ್ಕೃತಿಕವಾಗಿ ಸಂವೇದನಾಶೀಲ ಜಾಗೃತಿ ಅಭಿಯಾನಗಳು ಅವಶ್ಯಕವಾಗಿವೆ. ಆಲ್ಝೈಮರ್ ರೋಗದ ಅಪಾಯ ಇಳಿಸುವುದು, ರೋಗ ಕುರಿತು ಶಿಕ್ಷಣ ಮತ್ತು ಬೆಂಬಲ ಸೇವೆಗಳ ಕಡೆಗೆ ಸರ್ಕಾರ ಗಮನಹರಿಸಬೇಕಲ್ಲದೆ, ಈ ಕ್ಷೇತ್ರಕ್ಕೆ ಆದ್ಯತೆಯಿಂದ ನಿಧಿ ನೀಡಿ ಸಂಶೋಧನೆ ನಡೆಸುವುದು ಕೂಡ ಮುಖ್ಯವಾಗಿದೆ.
ಈ ರೋಗ ತಡೆಯುವಂತಹ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳುವುದರಿಂದ ಭಾರತವು ತನ್ನ ಬೆಳೆಯುತ್ತಿರುವ ಹಿರಿಯ ವಯಸ್ಕರ ಜನಸಂಖ್ಯೆ ಉನ್ನತ ಗುಣಮಟ್ಟದ ಜೀವನವನ್ನು ಆನಂದಿಸುವ ಭವಿಷ್ಯವನ್ನು ನಿರ್ಮಿಸಬಹು ದಾಗಿದೆ. ಇದಕ್ಕಾಗಿ ವ್ಯಕ್ತಿಗಳಿಂದ ಸಂಘಟಿತ ಪ್ರಯತ್ನ ಅಗತ್ಯವಿದೆಯಲ್ಲದೆ, ಅವರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕಲ್ಲದೆ, ಆರೋಗ್ಯ ಸೇವಾ ವ್ಯವಸ್ಥೆ ಶೀಘ್ರ ರೋಗನಿರ್ಣಯ ಮತ್ತು ನಿರ್ವಹಣೆಯ ಕಡೆಗೆ ಆದ್ಯತೆ ನೀಡಬೇಕಿದೆ.
ಡಾ. ಸುರಭಿ ಚತುರ್ವೇದಿ, ನರರೋಗ ಸಲಹಾತಜ್ಞರು ಮತ್ತು ಪಾರ್ಶ್ವವಾಯು ತಜ್ಞರು ಟ್ರೈಲೈಫ್ ಆಸ್ಪತ್ರೆ