ರಸ್ತೆ ಇಲ್ಲದಿರುವ ಬಗ್ಗೆ ಗಮನ ಸೆಳೆಯಲು ರೈತನ ವಿಶೇಷ ಪ್ರಯತ್ನ..!
ಧರ್ಮಪುರಿ:ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಮನೆಯ ಮುಂದೆ ಹೆಲಿ ಕಾಪ್ಟರ್​ ಲ್ಯಾಂಡ್​ ಮಾಡಲು ಅನುಮತಿ ನೀಡುವಂತೆ ತಮಿಳುನಾಡಿನ ರೈತನೊಬ್ಬ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದಾನೆ.
ಗಣೇಶನ್​ (57) ರೈತನ ಹೆಸರು. ತಮಿಳುನಾಡಿನ ಧರ್ಮಪುರಿ ಮೂಲದ ರೈತ​ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿಯ ಜೊತೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಮಾಡಿದ್ದಾರೆ.
ಅಂದಹಾಗೆ ಗಣೇಶನ್​ ಕಿರಿಯ ಮಗಳು ಆಟಿಕೆ ಹೆಲಿಕಾಪ್ಟರ್​ ಹೊಂದಿದ್ದರೆ, ಹಿರಿಯ ಮಗಳು ಹೆಲಿಕಾಪ್ಟರ್​ ಫೋಟೋವನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು, ತನ್ನ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಗಣೇಶನ್​ ಅವರು ಈ ವಿಭಿನ್ನ ಪ್ರಯತ್ನ ಮಾಡಿ ದ್ದಾರೆ.
ರಸ್ತೆ ಇಲ್ಲದಿರುವುದರಿಂದ ನಮ್ಮ ಮನೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಳೆದ 4 ತಿಂಗಳಿಂದ ಸಂಬಂಧಿಕರ ಮನೆಯಲ್ಲೇ ಉಳಿದಿದ್ದೇವೆ.
ರಸ್ತೆ ಇಲ್ಲದಿರುವ ಬಗ್ಗೆ ಪೊಲೀಸ್​ ಮತ್ತು ಕಂದಾಯ ಇಲಾಖೆಗೆ ದೂರು ದಾಖಲಿಸಿದರೂ ಯಾವುದೇ ಕ್ರಮ ವಹಿಸಿಲ್ಲ. ಹಾಗಾಗಿ ಎಲ್ಲರ ಗಮನ ಸೆಳೆಯಲು ಈ ರೀತಿಯ ವಿಶೇಷ ಪ್ರಯತ್ನ ಮಾಡಿದೆ ಎಂದು ತಿಳಿಸಿದ್ದಾರೆ