ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್​ ಎದೆಗೆ ಗುಂಡು
ನೊಯ್ಡಾ:ನೊಯ್ಡಾದಲ್ಲಿ ಒಬ್ಬ ವ್ಯಕ್ತಿ ಕೆಲಸ ಕಳೆದುಕೊಂಡು 6 ತಿಂಗಳ ಬಳಿಕ, ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್​ ಎದೆಗೆ ಗುಂಡು ಹಾರಿಸಿದ್ದಾನೆ.
ಆ ಮ್ಯಾನೇಜರ್​ ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೊಯ್ಡಾದ ಹೊರಗುತ್ತಿಗೆ ಕಂಪನಿಯೊಂದರಲ್ಲಿ ಡಾಟಾ ಎಂಟ್ರಿ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದ ಅನೂಪ್​ ಸಿಂಗ್​ ಆರೋಪಿ. ಈತ ದೆಹಲಿಯ ಅಶೋಕ್​ ನಗರದ ನಿವಾಸಿ. ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಆತನ ಮ್ಯಾನೇಜರ್​ ಆಗಿದ್ದ ಶಾರ್ದೂಲ್​​ ಇಸ್ಲಾಮ್​ ಅವರು ಕೆಲಸದಿಂದ ವಜಾಗೊಳಿಸಿದ್ದರು.
ಕಳೆದ ಒಂದು ತಿಂಗಳ ಹಿಂದೆ ಮತ್ತು ಶಾರ್ದೂಲ್ ಇಸ್ಲಾಮ್​​ನನ್ನು ಸಂಪರ್ಕಿಸಿ ಅನೂಪ್​ ಸಿಂಗ್​, ತನ್ನನ್ನು ಕೆಲಸಕ್ಕೆ ವಾಪಸ್​ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ. ಆದರೆ ಇಸ್ಲಾಮ್​​ ಒಪ್ಪಿರಲಿಲ್ಲ.
ಇಸ್ಲಾಮ್​ನ ಆಫೀಸಿಗೆ ನುಗ್ಗಿದ ಅನೂಪ್​ ಜಗಳ ಮಾಡಿದ್ದಾನೆ. ಇವರಿಬ್ಬರ ನಡುವೆ ಸಿಕ್ಕಾಪಟೆ ಗಲಾಟೆಯೂ ಆಯಿತು. ಆಗ ಏಕಾಏಕಿ ಅನೂಪ್ ದೇಶೀಯ ರಿವಾಲ್ವರ್​​ನ್ನು ತೆಗೆದು, ಇಸ್ಲಾಮ್​​ಗೆ ಗುಂಡು ಹಾರಿಸಿ ದ್ದಾನೆ.
‘ಇಸ್ಲಾಮ್​ ಎದೆಗೇ ಗುಂಡು ಹಾರಿದೆ. ಪರಿಸ್ಥಿತಿ ಗಂಭೀರವಾಗಿದೆ. ಕೈಲಾಶ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ. ಅನೂಪ್ ಸಿಂಗ್ ನಾಪತ್ತೆ ಯಾಗಿದ್ದು ಆತನಿಗಾಗಿ ಹುಡುಕಾಟ ನಡೆದಿದೆ.