ಮೂತ್ರ ವಿಸರ್ಜನೆ ಪ್ರಕರಣ: ಶಂಕರ್ ಮಿಶ್ರಾ ಬಂಧನ
ಬೆಂಗಳೂರು: ಏರ್​ ಇಂಡಿಯಾ ವಿಮಾನದಲ್ಲಿ 72 ವರ್ಷದ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬಯಿಮೂಲದ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ದೆಹಲಿ ಪೊಲೀಸರು ಪ್ರಕರಣ ದಾಖಲು ಮಾಡುತ್ತಿದ್ದಂತೆ ಶಂಕರ್ ಮಿಶ್ರಾ ತನ್ನ ಮೊಬೈಲ್​​ನ್ನೆಲ್ಲ ಸ್ವಿಚ್​ ಆಫ್ ಮಾಡಿಕೊಂಡು ಬೆಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಸಂಜಯ್​ನಗರದಲ್ಲಿರುವ ಒಂದು ಗೆಸ್ಟ್​ಹೌಸ್​​ನಲ್ಲಿ ಒಬ್ಬನೇ ತಂಗಿದ್ದ. ಮಧ್ಯಾಹ್ನದ ಹೊತ್ತಿಗೆ ಶಂಕರ್​ ಮಿಶ್ರಾನನ್ನು ಪೊಲೀಸರು ದೆಹಲಿ ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ.
ನವೆಂಬರ್​ 26ರಂದು ಈ ವ್ಯಕ್ತಿ ಕುಡಿದು ಅಮಲೇರಿದ ಸ್ಥಿತಿಯಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ. ಆದರೆ ಇತ್ತೀಚೆಗೆ ಮಹಿಳೆ ಏರ್​ ಇಂಡಿಯಾ ಅಧ್ಯಕ್ಷನಿಗೆ ಪತ್ರದ ಮೂಲಕ ದೂರು ಸಲ್ಲಿಸಿದಾಗಲೇ ವಿಷಯ ಬೆಳಕಿಗೆ ಬಂದಿತ್ತು.
ಘಟನೆ ನಡೆದ ಏರ್​ ಇಂಡಿಯಾ ವಿಮಾನದ ಪೈಲೆಟ್​, ಸಹ ಪೈಲೆಟ್​ಗೂ ಪೊಲೀಸರು ಸಮನ್ಸ್​ ನೀಡಿ, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ಅವರು ಪೊಲೀಸರ ಎದುರು ಬಂದಿರಲಿಲ್ಲ.
ಹೀಗಾಗಿ ಇಂದು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದೂ ಹೇಳಲಾಗಿದೆ.