ಬಿಜೆಪಿಯ ಕವಿತಾ ಚೌಧರಿ ‘ತಲೆಮರೆಸಿಕೊಂಡ ಆರೋಪಿ: ನ್ಯಾಯಾಲಯ ಘೋಷಣೆ
ಬಿಜ್ನೋರ್:ಮಾಜಿ ಸಚಿವ ಅಶೋಕ್ ಕಟಾರಿಯಾ, ಬಿಜೆಪಿ ನಾಯಕಿ ಕವಿತಾ ಚೌಧರಿ ಹಾಗೂ ಶಿವಸೇನೆಯ ರಾಜ್ಯಾಧ್ಯಕ್ಷವೀರ್ ಸಿಂಗ್ ಅವರನ್ನು ತಲೆಮರೆಸಿಕೊಂಡಿರುವ ಆರೋಪಿಗಳು ಎಂದು ಬಿಜ್ನೋರ್‌ನ ನ್ಯಾಯಾಲಯ ಘೋಷಿಸಿದ್ದು, 2012ರ ದ್ವೇಷ ಭಾಷಣ ಪ್ರಕರಣದ ವಿಚಾರಣೆಗೆ ಹಾಜರಾಗದ ಅವರೆಲ್ಲರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿ ಮಾಡಿದೆ.
ಇದಕ್ಕೂ ಮುನ್ನ ವಕೀಲರಾದ ಡಿ.ಕೆ‌.ಸಿಂಗ್, ಆರೋಪಿಗಳಿಗೆ ಹಲವು ಬಾರಿ ವಾರೆಂಟ್ ಜಾರಿಗೊಳಿಸಿದರೂ ಅವರು ನ್ಯಾಯಾ ಲಯಕ್ಕೆ ಹಾಜರಾಗಿಲ್ಲ ಎಂಬ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಇದರ ಬೆನ್ನಿಗೇ ಆರೋಪಿಗಳನ್ನು ‘ತಲೆಮರೆಸಿಕೊಂಡಿದ್ದಾರೆ’ ಎಂದು ಘೋಷಿಸಿದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಭಿನವ್ ಯಾದವ್, ಅವರೆಲ್ಲರ ವಿರುದ್ಧ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿ, ಮುಂದಿನ ವಿಚಾರಣೆ ಯನ್ನು ಜನವರಿ 19ರಂದು ನಿಗದಿ ಗೊಳಿಸಿದ್ದಾರೆ.
ಸೆಪ್ಟೆಂಬರ್ 3, 2012ರಂದು ಬಿಜ್ನೋರ್ ಜಿಲ್ಲೆಯ ಬಸ್ತಾ ಪ್ರದೇಶದಲ್ಲಿನ ಅಢಾಯ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಚಾಯಿತಿ ಸಭೆಯಲ್ಲಿ ಆರೋಪಿಗಳು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಸಬ್ ಇನ್ಸ್‌ಪೆಕ್ಟರ್ ಇಶೇಂದ್ರ ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದರು.